ನೌಕಾಪಡೆಯ ದಿನದಂದು, ಭಾರತೀಯ ನೌಕಾಪಡೆಯ ಪುರುಷ ಮತ್ತು ಮಹಿಳಾ ಸಿಬ್ಬಂದಿಗಳಿಗೆ ದೇಶ ನಮನ ಸಲ್ಲಿಸುತ್ತದೆ. ಅವರ ಸೇವೆ, ಶ್ರದ್ಧೆ ಮತ್ತು ನಿಷ್ಠೆ ಭಾರತದ ಸುರಕ್ಷತೆ ಮತ್ತು ಶಕ್ತಿಯ ಪ್ರತೀಕವಾಗಿವೆ.
ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಬೆಂಗಳೂರು(ಡಿ.04): ಭಾರತ ಇಂದು 2024ರ ರಾಷ್ಟ್ರೀಯ ನೌಕಾ ದಿನವನ್ನು ಆಚರಿಸುತ್ತಿದೆ. ಈ ಹೊತ್ತಿನಲ್ಲಿ, ಸಮುದ್ರಗಳಲ್ಲಿ ಭಾರತದ ಮಹತ್ವಾಕಾಂಕ್ಷೆಗಳಿಗೆ ಭಾರತೀಯ ನೌಕಾ ಸೇನೆ ತಳಹದಿಯಾಗಿ ನಿಂತಿದೆ. ಇತ್ತೀಚಿನ ವರ್ಷಗಳಲ್ಲಿ, ಭಾರತೀಯ ನೌಕಾಪಡೆ ತನ್ನ ನೌಕಾ ಬಳಗವನ್ನು ಆಧುನೀಕರಿಸುವುದು, ತನ್ನ ಮೂಲಭೂತ ವ್ಯವಸ್ಥೆಗಳನ್ನು ಅಪಾರ ಪ್ರಮಾಣದಲ್ಲಿ ವಿಸ್ತರಿಸುವುದು, ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದು ಸೇರಿದಂತೆ, ಅಸಾಧಾರಣ ಬದಲಾವಣೆಗೆ ಸಾಕ್ಷಿಯಾಗಿದೆ. ಭೌಗೋಳಿಕ ರಾಜಕಾರಣದ ಚಿತ್ರಣ ದಿನೇ ದಿನೇ ಸಂಕೀರ್ಣವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಭಾರತೀಯ ನೌಕಾಪಡೆ ಸಾಧಿಸಿರುವ ಪ್ರಗತಿ ಅದು ರಾಷ್ಟ್ರೀಯ ಭದ್ರತೆ ಮತ್ತು ಜಾಗತಿಕ ಸಾಗರ ಸ್ಥಿರತೆಗೆ ಎಷ್ಟು ಬದ್ಧವಾಗಿದೆ ಎಂದು ತೋರಿಸಿದೆ.
ನೌಕಾ ಸೇನೆಯ ಪ್ರಗತಿಗೆ ಭವಿಷ್ಯದ ಹಾದಿ
ಭಾರತೀಯ ನೌಕಾಪಡೆ ಸದ್ಯದ ಮಟ್ಟಿಗೆ 130 ಮಧ್ಯಮ ಗಾತ್ರದಿಂದ ದೊಡ್ಡ ಗಾತ್ರದ ಯುದ್ಧ ನೌಕೆಗಳನ್ನು ಹೊಂದಿದೆ. ಆದರೆ, 2035ರ ವೇಳೆಗೆ 175 ಯುದ್ಧ ನೌಕೆಗಳನ್ನು ಹೊಂದಬೇಕು ಎನ್ನುವ ತನ್ನ ಗುರಿಯತ್ತ ನೌಕಾಪಡೆ ದೃಢವಾಗಿ ಹೆಜ್ಜೆ ಇಡುತ್ತಿದೆ. ಅದರೊಡನೆ ಭಾರತವೂ ಈಗ ಅತ್ಯುತ್ತಮ ದೇಶೀಯ ನೌಕಾ ನಿರ್ಮಾಣ ವ್ಯವಸ್ಥೆಗಳನ್ನು ಹೊಂದಿರುವುದೂ ಈ ಗುರಿಯ ಸಾಧನೆಗೆ ಪೂರಕವಾಗಿದೆ. ಈಗ ಭಾರತ ನಿರ್ಮಿಸುತ್ತಿರುವ 50 ನೌಕೆಗಳ ಪೈಕಿ, 48 ಯುದ್ಧ ನೌಕೆಗಳು ಭಾರತೀಯ ಹಡಗು ನಿರ್ಮಾಣ ಕೇಂದ್ರಗಳಲ್ಲಿ (ಶಿಪ್‌ಯಾರ್ಡ್) ನಿರ್ಮಾಣವಾಗುತ್ತಿದ್ದು, ಕೇವಲ ಎರಡು ನೌಕೆಗಳು ಮಾತ್ರವೇ ವಿದೇಶಗಳಲ್ಲಿ ಸಿದ್ಧವಾಗುತ್ತಿವೆ. ಇದು ರಕ್ಷಣಾ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸುತ್ತಿರುವುದನ್ನು ಸಾರುತ್ತಿದೆ.
100 ಕೃತಕ ಸೂರ್ಯಗ್ರಹಣ ಸೃಷ್ಟಿಗೆ ಸಾಹಸ, ನಾಳೆ ಇಸ್ರೋದಿಂದ ಉಡಾವಣೆ: ಗಿರೀಶ್ ಲಿಂಗಣ್ಣ
2024ರ ಕೊನೆಯ ವೇಳೆಗೆ, ಭಾರತೀಯ ನೌಕಾಪಡೆ ಇನ್ನೂ ಹನ್ನೆರಡು ನೂತನ ಯುದ್ಧ ನೌಕೆಗಳನ್ನು ತನ್ನ ಬಳಗಕ್ಕೆ ಸೇರ್ಪಡೆಗೊಳಿಸುವ ನಿರೀಕ್ಷೆಗಳಿವೆ. ಇದರಲ್ಲಿ, ಕಾವೇರಿ ವರ್ಗದ ಅಂತಿಮ ಸಬ್‌ಮರೀನ್ ಆದ ಐಎನ್ಎಸ್ ವಾಗ್‌ಶೀರ್ ಮತ್ತು ಇತರ ಯುದ್ಧ ನೌಕೆಗಳು ಸೇರಿವೆ. ಈ ನೌಕೆಗಳ ಸೇರ್ಪಡೆ, 2047ರ ವೇಳೆಗೆ ಸಂಪೂರ್ಣ ಭಾರತೀಯ ನಿರ್ಮಾಣದ ನೌಕೆಗಳನ್ನು ಹೊಂದಿರುವ ನೌಕಾಪಡೆಯಾಗಬೇಕು ಎಂಬ ಭಾರತದ ಹೆಬ್ಬಯಕೆಗೆ ಪೂರಕವಾಗಿದೆ. ಈ ಸಾಧನೆಯ ಸಂದರ್ಭದಲ್ಲಿ, ಭಾರತ ತನ್ನ ಸ್ವಾತಂತ್ರ್ಯದ ಶತಮಾನೋತ್ಸವದ ಸಂಭ್ರಮದಲ್ಲಿರಲಿದೆ.
ಭಾರತೀಯ ನೌಕಾಪಡೆ ತನ್ನ ಕಾರ್ಯಾಚರಣೆಗಳ ಎಲ್ಲ ಅಂಗಗಳಲ್ಲೂ ದಾಪುಗಾಲಿಟ್ಟು ಸಾಗುತ್ತಿದ್ದು, ಸಾಂಪ್ರದಾಯಿಕ ಮತ್ತು ನೂತನ ಅಪಾಯಗಳನ್ನು ಎದುರಿಸಲು ಸರ್ವ ಸನ್ನದ್ಧವಾಗಿದೆ.
ಸಬ್‌ಮರೀನ್ ಬಳಗ: ಸಾಗರದಾಳದಲ್ಲಿ ಹೆಚ್ಚುತ್ತಿದೆ ಭಾರತದ ಪಾರಮ್ಯ
ಆಗಸ್ಟ್ 2024ರಲ್ಲಿ, ಐಎನ್ಎಸ್ ಅರಿಘಾತ್ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡು, ಭಾರತದ ಪರಮಾಣು ಶಸ್ತ್ರಾಸ್ತ್ರ ಸಾಮರ್ಥ್ಯವನ್ನು ವೃದ್ಧಿಸಿತು. ಈ ಬ್ಯಾಲಿಸ್ಟಿಕ್ ಕ್ಷಿಪಣಿ ಸಬ್‌ಮರೀನ್ (ಎಸ್ಎಸ್‌ಬಿಎನ್) ತನ್ನ ಹಿಂದಿನ ಸಬ್‌ಮರೀನ್, ಐಎನ್ಎಸ್ ಅರಿಘಾತ್‌ಗೆ ಹೋಲಿಸಿದರೆ ಇನ್ನಷ್ಟು ಮೇಲ್ದರ್ಜೆ ಸಾಧಿಸಿ, ಭಾರತದ ಕಾರ್ಯತಂತ್ರದ ಸಾಮರ್ಥ್ಯಕ್ಕೆ ಶಕ್ತಿ ತುಂಬಿತ್ತು. 2025ರಲ್ಲಿ, ಇನ್ನೂ ಎರಡು ಅರಿಹಂತ್ ವರ್ಗದ ಜಲಾಂತರ್ಗಾಮಿಗಳು ನೌಕಾಪಡೆಗೆ ಸೇರಲು ಸಿದ್ಧವಾಗುತ್ತಿವೆ. ಮುಂದಿನ ತಲೆಮಾರಿನ ಎಸ್-5 ವರ್ಗದ ಕ್ಷಿಪಣಿಗಳಂತೂ ಇನ್ನಷ್ಟು ಹೆಚ್ಚಿನ ಕ್ಷಿಪಣಿಗಳನ್ನು ಒಯ್ಯುವ ಸಾಮರ್ಥ್ಯ ಹೊಂದಿರಲಿವೆ.
ಇದರೊಂದಿಗೆ, ಭಾರತದ ಸಾಂಪ್ರದಾಯಿಕ ಸಬ್‌ಮರೀನ್ ಬಳಗವೂ ಪ್ರಗತಿ ಸಾಧಿಸುತ್ತಿದೆ. ಪ್ರಾಜೆಕ್ಟ್ - 75 ಯೋಜನೆಯಡಿ ನಿರ್ಮಿಸುತ್ತಿರುವ ಕಾವೇರಿ ವರ್ಗದ ಡೀಸಲ್ ಇಲೆಕ್ಟ್ರಿಕ್ ಜಲಾಂತರ್ಗಾಮಿಗಳು ಭಾರತೀಯ ನೌಕಾಪಡೆಯ ಅತ್ಯಾಧುನಿಕ ಸಬ್‌ಮರೀನ್‌ಗಳಾಗಿದ್ದು, ಈಗಾಗಲೇ ಈ ವರ್ಗದ ಐದು ಜಲಾಂತರ್ಗಾಮಿಗಳು ಕಾರ್ಯಾಚರಿಸುತ್ತಿವೆ. ಇನ್ನೂ ಮೂರು ಕಾವೇರಿ ವರ್ಗದ ಜಲಾಂತರ್ಗಾಮಿಗಳನ್ನು ಹೆಚ್ಚು ಹೆಚ್ಚು ಭಾರತೀಯ ಬಿಡಿಭಾಗಗಳನ್ನು ಬಳಸಿ ನಿರ್ಮಿಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ಇದೇ ವೇಳೆ, ಪ್ರಾಜೆಕ್ಟ್ 75ಐ ಅಡಿಯಲ್ಲಿ, ಭಾರತೀಯ ನೌಕಾಪಡೆಗೆ ಆರು ನೂತನ ಏರ್ ಇಂಡಿಪೆಂಡೆಂಟ್ ಪ್ರೊಪಲ್ಷನ್ (ಎಐಪಿ) ವ್ಯವಸ್ಥೆ ಅಳವಡಿತ ಸಬ್‌ಮರೀನ್‌ಗಳು ಸೇರ್ಪಡೆಯಾಗಲಿವೆ. ಎಐಪಿ ವ್ಯವಸ್ಥೆ ಸುದೀರ್ಘ ಅವಧಿಯ ನೀರಿನಾಳದ ಕಾರ್ಯಾಚರಣೆಗಳಿಗೆ ಅತ್ಯಂತ ಮುಖ್ಯವಾಗಿವೆ.
ನೀರಿನ ಮೇಲ್ಮೈ ಬಳಗ: ನೀಲಿ ಸಮುದ್ರ ಬಲವರ್ಧನೆ
ಭಾರತೀಯ ನೌಕಾಪಡೆ ಆಧುನಿಕ ಡೆಸ್ಟ್ರಾಯರ್‌ಗಳು, ಫ್ರಿಗೇಟ್‌ಗಳು, ಹಾಗೂ ಕಾರ್ವೆಟ್‌ಗಳಂತಹ ನೂತನ ನೌಕೆಗಳನ್ನು ನಿಯೋಜಿಸಿದ್ದು, ಭಾರತದ ಸಮುದ್ರ ಮೇಲ್ಮೈ ಕಾರ್ಯಾಚರಣಾ ಸಾಮರ್ಥ್ಯವೂ ಅಪಾರವಾಗಿ ಹೆಚ್ಚಿದೆ. ಪ್ರಾಜೆಕ್ಟ್ 15ಬಿ ವಿಶಾಖಪಟ್ಟಣಂ ವರ್ಗದ ಡೆಸ್ಟ್ರಾಯರ್‌ಗಳು ಮತ್ತು ಪ್ರಾಜೆಕ್ಟ್ 17 ಎ ನೀಲಗಿರಿ ವರ್ಗದ ಫ್ರಿಗೇಟ್‌ಗಳು ಸ್ಟೆಲ್ತ್ ಸಾಮರ್ಥ್ಯ, ಉತ್ತಮ ಶಸ್ತ್ರಾಗಾರ, ಮತ್ತು ಹೆಚ್ಚಿನ ಬಾಳಿಕೆಯ ಸಾಧ್ಯತೆಗಳನ್ನು ಹೊಂದಿವೆ.
ಭಾರತದ ಮೊದಲ ಸ್ವದೇಶೀ ನಿರ್ಮಿತ ವಿಮಾನವಾಹಕ ನೌಕೆಯಾದ ಐಎನ್ಎಸ್ ವಿಕ್ರಾಂತ್ ನೌಕಾಪಡೆಗೆ ಸೇರ್ಪಡೆಯಾಗಿದ್ದು, ಭಾರತದ ಸಾಗರ ಪಾರಮ್ಯವನ್ನು ವೃದ್ಧಿಸಿದೆ. ಐಎನ್ಎಸ್ ವಿಕ್ರಮಾದಿತ್ಯ ಮತ್ತು ಐಎನ್ಎಸ್ ವಿಕ್ರಾಂತ್ ಭಾರತದ ಶಕ್ತಿಯನ್ನು ಪ್ರದರ್ಶಿಸಿವೆ. ಇನ್ನೂ ದೊಡ್ಡದಾದ ಐಎನ್ಎಸ್ ವಿಶಾಲ್ ವಿಮಾನವಾಹಕ ನೌಕೆಯ ಯೋಜನೆಗಳು ನಡೆಯುತ್ತಿದ್ದು, ಇದು ಕ್ಯಾಟೋಬಾರ್ ಕಾನ್ಫಿಗರೇಶನ್ ಹೊಂದಿರಲಿದೆ. ಈ ವಿಮಾನವಾಹಕ ನೌಕೆ 65,000 ಟನ್ ತೂಕ ಹೊಂದಿರಲಿದ್ದು, ಟ್ವಿನ್ ಇಂಜಿನ್ ಡೆಕ್ ಬೇಸ್ಡ್ ಫೈಟರ್‌ನಂತಹ (ಟಿಇಡಿಬಿಎಫ್) ಆಧುನಿಕ ಸ್ವದೇಶೀ ನಿರ್ಮಿತ ಯುದ್ಧ ವಿಮಾನದ ಕಾರ್ಯಾಚರಣೆಗೂ ಸೂಕ್ತವಾಗಿರಲಿದೆ.
ವಾಯು ಬಲ: ಸಮುದ್ರ ಕಣ್ಗಾವಲು ಸಾಮರ್ಥ್ಯ ಹೆಚ್ಚಳ
ಭಾರತೀಯ ನೌಕಾಪಡೆಗೆ ಸಮುದ್ರ ಕಣ್ಗಾವಲಿಗೆ ಬೋಯಿಂಗ್ ಪಿ-8ಐ ಪೊಸೇಡನ್ ಮತ್ತು ಆ್ಯಂಟಿ ಸಬ್‌ಮರೀನ್ ಯುದ್ಧಕ್ಕೆ ಸಿಕೋರ್ಸ್‌ಕಿ ಎಂಎಚ್-60ಆರ್ ಹೆಲಿಕಾಪ್ಟರ್‌ಗಳು ಸೇರ್ಪಡೆಯಾಗಿದ್ದು, ಭಾರತೀಯ ನೌಕಾಪಡೆಯ ವೈಮಾನಿಕ ಸಾಮರ್ಥ್ಯವೂ ವೃದ್ಧಿಸಿದೆ. ಇನ್ನು ಮುಂದಿನ ದಿನಗಳಲ್ಲಿ ನೌಕಾ ಸೇನೆ 31 ಶಸ್ತ್ರಸಜ್ಜಿತ ಎಂಕ್ಯು-9ಬಿ ಡ್ರೋನ್‌ಗಳನ್ನು ಪಡೆಯಲಿದ್ದು, ಅವುಗಳು ಹಿಂದೂ ಮಹಾಸಾಗರ ಪ್ರಾಂತ್ಯದಲ್ಲಿ ಕಣ್ಗಾವಲನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲಿವೆ.
ಕಾರ್ಯತಂತ್ರದ ಮೂಲಭೂತ ವ್ಯವಸ್ಥೆ ಮತ್ತು ತಾಂತ್ರಿಕ ಅಳವಡಿಕೆ
ಭಾರತೀಯ ನೌಕಾಪಡೆಯ ಯುದ್ಧ ನೌಕೆಗಳ ಸಂಖ್ಯೆ ಹೆಚ್ಚಿದಂತೆಲ್ಲ ಅದರ ಮೂಲಭೂತ ವ್ಯವಸ್ಥೆಗಳೂ ಸಾಕಷ್ಟು ಹೆಚ್ಚಳ ಕಾಣುತ್ತಿವೆ. ಅರಿಹಂತ್ ವರ್ಗದ ಸಬ್‌ಮರೀನ್‌ಗಳಿಗಾಗಿಯೇ ಐಎನ್ಎಸ್ ವರ್ಷಾ ಎಂಬ ನೌಕಾ ನೆಲೆಯ ಸ್ಥಾಪನೆ ಮತ್ತು ಲಕ್ಷದ್ವೀಪದಲ್ಲಿ ಐಎನ್ಎಸ್ ಜಟಾಯುವಿನ ಕಾರ್ಯಾರಂಭ ಭಾರತೀಯ ನೌಕಾ ಸೇನೆಯ ಕಾರ್ಯಾಚರಣಾ ವ್ಯಾಪ್ತಿಯನ್ನು ಹೆಚ್ಚಿಸಿವೆ. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿನ ಮೂಲಭೂತ ವ್ಯವಸ್ಥೆಗಳ ಅಭಿವೃದ್ಧಿ ಸಾಗರ ಪ್ರದೇಶಗಳ ಕಣ್ಗಾವಲು ನಡೆಸುವ ಭಾರತದ ಸಾಮರ್ಥ್ಯಕ್ಕೆ ಹೊಸ ಆಯಾಮ ನೀಡಿದೆ.
ನೌಕಾಪಡೆಯ ವಿಕಾಸಕ್ಕೆ ತಾಂತ್ರಿಕ ಆಧುನೀಕತೆ ಅತ್ಯಂತ ಮುಖ್ಯವಾಗಿದೆ. ಭಾರತೀಯ ನೌಕಾಪಡೆ ತನ್ನ ನಿರ್ಧಾರ ಕೈಗೊಳ್ಳುವಿಕೆ ಮತ್ತು ಕಾರ್ಯಾಚರಣಾ ಪರಿಣಾಮಕಾರಿತ್ವವನ್ನು ಹೆಚ್ಚಿಸಲು 30ಕ್ಕೂ ಹೆಚ್ಚು ಕೃತಕ ಬುದ್ಧಿಮತ್ತೆಯ (ಆರ್ಟಿಫಿಶಿಯಲ್ ಇಂಟಲಿಜೆನ್ಸ್ - ಎಐ) ಯೋಜನೆಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಸ್ವಾಯತ್ತ ಪ್ಲಾಟ್‌ಫಾರಂಗಳ ಪರಿಚಯಿಸುವಿಕೆ, ನೀರಾಕ್ಷಿ ನೀರಿನಾಳದ ಡ್ರೋನ್‌ಗಳ ಸೇರ್ಪಡೆ, ಮತ್ತು ಸ್ವಯಂಚಾಲಿತ ಹಾಗೂ ವೇಗವಾಗಿ ಚಲಿಸುವ ಇಂಟರ್‌ಸೆಪ್ಟರ್ ಬೋಟ್‌ಗಳ ಬಳಕೆ ಭವಿಷ್ಯದ ಸಾಮರ್ಥ್ಯಗಳನ್ನು ಅಳವಡಿಸಿಕೊಳ್ಳಲು ಭಾರತೀಯ ನೌಕಾಪಡೆ ಸಿದ್ಧವಾಗಿದೆ ಎಂಬುದನ್ನು ತೋರಿದೆ.
ಜಾಗತಿಕ ಸಹಯೋಗ ಮತ್ತು ಪ್ರಾದೇಶಿಕ ನಾಯಕತ್ವ
ಭಾರತೀಯ ನೌಕಾಪಡೆ ಪ್ರಾದೇಶಿಕ ಮತ್ತು ಜಾಗತಿಕ ಸಾಗರ ರಕ್ಷಣೆಯಲ್ಲಿ ಒಂದು ಪ್ರಮುಖ ಶಕ್ತಿಯಾಗಿ ಹೊರಹೊಮ್ಮಿದೆ. ಅಮೆರಿಕಾ, ಜಪಾನ್ ಮತ್ತು ಆಸ್ಟ್ರೇಲಿಯಾಗಳೊಡನೆ ಮಲಬಾರ್‌ನಂತಹ ಬಹುರಾಷ್ಟ್ರೀಯ ಅಭ್ಯಾಸದಲ್ಲಿ ಪಾಲ್ಗೊಳ್ಳುವುದು, ಕ್ವಾಡ್ ಸಂಘಟನೆಯ ಉದ್ದೇಶವಾದ ಮುಕ್ತ ಮತ್ತು ಸ್ವತಂತ್ರ ಇಂಡೋ - ಪೆಸಿಫಿಕ್ ನೀತಿಗೆ ಬದ್ಧವಾಗಿರುವುದು ಭಾರತದ ವಿಶಾಲ ದೃಷ್ಟಿಕೋನವನ್ನು ಪ್ರದರ್ಶಿಸಿದೆ. ಇನ್ನು ಇಟಲಿ, ಯುಕೆ, ಹಾಗೂ ಫ್ರಾನ್ಸ್‌ಗಳ ನೌಕಾ ಸೇನೆಗಳೊಡನೆ ದ್ವಿಪಕ್ಷೀಯ ಅಭ್ಯಾಸದಲ್ಲಿ ಪಾಲ್ಗೊಂಡಿರುವುದು ಭಾರತದ ಬೆಳೆಯುತ್ತಿರುವ ರಕ್ಷಣಾ ರಾಜತಂತ್ರಕ್ಕೆ ಸಾಕ್ಷಿಯಾಗಿದೆ.
ನವೆಂಬರ್ 2023ರಲ್ಲಿ, ಭಾರತ 38 ರಾಷ್ಟ್ರಗಳ ಸಾಗರ ಸಹಯೋಗವಾದ ಕಂಬೈನ್ಡ್ ಮಾರಿಟೈಮ್ ಫೋರ್ಸಸ್‌ಗೆ (ಸಿಎಂಎಫ್) ಭಾರತ ಸೇರ್ಪಡೆಯಾಯಿತು. ಅದಾದ ಕೆಲವು ತಿಂಗಳುಗಳಲ್ಲಿ, ಸಿಎಂಎಫ್‌ನ ಮೊದಲ ಮಾದಕ ದ್ರವ್ಯ ವಿರೋಧಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಐಎನ್ಎಸ್ ತಲ್ವಾರ್, ಅರಬ್ಬೀ ಸಮುದ್ರದಲ್ಲಿ 940 ಕೆಜಿಗಳಷ್ಟು ತೂಕದ ಮಾದಕ ದ್ರವ್ಯಗಳನ್ನು ವಶಪಡಿಸಿತು. ಇತ್ತೀಚೆಗೆ, ಭಾರತೀಯ ನೌಕಾಪಡೆ ಶ್ರೀಲಂಕಾದ ನೌಕಾ ಸೇನೆಯ ಸಹಯೋಗದಲ್ಲಿ 500 ಕೆಜಿಗಳಷ್ಟು ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿತ್ತು.
ಭಾರತೀಯ ನೌಕಾಪಡೆಯ ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಗಳು ಅತ್ಯಂತ ಫಲಪ್ರದವಾಗಿವೆ. 2008ರ ಬಳಿಕ, ಭಾರತೀಯ ಯುದ್ಧ ನೌಕೆಗಳು ಸಾವಿರಾರು ಹಡಗುಗಳನ್ನು ಸುರಕ್ಷಿತವಾಗಿ ಆಡೆನ್ ಕೊಲ್ಲಿ ಮತ್ತು ಸೀಶೆಲ್ಸ್‌ಗಳಾಚೆಗೆ ಕಳುಹಿಸಿ ಕೊಟ್ಟಿವೆ. ಕಳೆದ ಒಂದು ವರ್ಷದ ಅವಧಿಯಲ್ಲೇ, ಭಾರತೀಯ ನೌಕಾಪಡೆ 18 ಕಡಲ್ಗಳ್ಳತನದ ಪ್ರಕರಣಗಳಿಗೆ ಸ್ಪಂದಿಸಿ, 21 ನೌಕೆಗಳನ್ನು ನಿಯೋಜಿಸಿ, ಸಾವಿರಕ್ಕೂ ಹೆಚ್ಚು ಹಡಗುಗಳ ವಿಚಾರಣೆ ನಡೆಸಿದೆ.
ಸಾಗರ ಭದ್ರತೆಯ ಕುರಿತು ಭಾರತದ ದೃಷ್ಟಿಕೋನ
ಭಾರತದ ಸಮುದ್ರ ಭದ್ರತಾ ಪ್ರಯತ್ನಗಳು ಕೇವಲ ಮಿಲಿಟರಿ ಶಕ್ತಿಗೆ ಮಾತ್ರವೇ ಸೀಮಿತವಾಗಿರದೆ, ಮಾನವೀಯ ಸ್ಪಂದನೆ ಮತ್ತು ವಿಪತ್ತು ಪರಿಹಾರ (ಎಚ್ಎಡಿಆರ್) ಸೇವೆಗಳನ್ನೂ ಒಳಗೊಂಡಿದೆ. ಬಿಕ್ಕಟ್ಟುಗಳ ಸಂದರ್ಭದಲ್ಲಿ ಜನರನ್ನು ಸ್ಥಳಾಂತರಗೊಳಿಸುವುದರಿಂದ, ನೈಸರ್ಗಿಕ ವಿಕೋಪಗಳ ಸಮಯದಲ್ಲಿ ನೆರವು ನೀಡುವ ತನಕ ಭಾರತೀಯ ನೌಕಾಪಡೆ ಹಿಂದೂ ಮಹಾಸಾಗರ ಪ್ರದೇಶದ ಸಮಸ್ಯೆ, ಸವಾಲುಗಳಿಗೆ ಮೊದಲ ಸ್ಪಂದನೆಗಾರ ಎಂಬ ತನ್ನ ಪಾತ್ರವನ್ನು ಯಶಸ್ವಿಯಾಗಿ ನಿಭಾಯಿಸಿದೆ.
ಇಂತಹ ವಿಭಿನ್ನ ಕಾರ್ಯಾಚರಣಾ ಸಾಮರ್ಥ್ಯ ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ರಕ್ಷಣೆ ಒದಗಿಸುವ ಭಾರತದ ಸ್ಥಾನವನ್ನು ಭದ್ರಪಡಿಸಿದ್ದು, ಹೆಚ್ಚುತ್ತಿರುವ ಚೀನಾದ ಉಪಸ್ಥಿತಿಯ ಸವಾಲುಗಳನ್ನು ನಿಭಾಯಿಸುತ್ತಿದೆ. ನೌಕಾ ಸೇನೆಯ ಸಕ್ರಿಯ ನಿಲುವು ತನ್ನ ಸಾಗರ ಸಂಬಂಧಿ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಮತ್ತು ಪ್ರಾದೇಶಿಕ ಸ್ಥರತೆಯನ್ನು ರಕ್ಷಿಸಲು ತಾನು ಸದಾ ಸಿದ್ಧ ಎಂಬ ಸಂದೇಶವನ್ನು ಸ್ಪಷ್ಟವಾಗಿ ರವಾನಿಸಿದೆ.
ಸಾರ್ವಜನಿಕರ ಬಳಕೆಗೆ ಸಿದ್ಧವಾದ ಭಾರತದ ಸ್ವಂತ ಜಿಪಿಎಸ್: ನಾವಿಕ್ ಯೋಜನೆಯ ಪ್ರಯೋಜನಗಳು
ನೌಕಾಪಡೆಯ ಭವಿಷ್ಯ
ಭಾರತೀಯ ನೌಕಾ ಸೇನೆಯ ಆಮೂಲಾಗ್ರ ಅಭಿವೃದ್ಧಿ ಭಾರತದ ಕಾರ್ಯತಂತ್ರದ ದೂರದೃಷ್ಟಿ ಮತ್ತು ಸಾಮರ್ಥ್ಯಕ್ಕೆ ಕೈಗನ್ನಡಿಯಾಗಿದೆ. ಸ್ವದೇಶೀ ನಿರ್ಮಾಣಕ್ಕೆ ಆದ್ಯತೆ ನೀಡಿ, ಅತ್ಯಾಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು, ಜಾಗತಿಕ ಸಹಭಾಗಿತ್ವಗಳಿಗೆ ಮುಕ್ತವಾಗಿರುವ ಮೂಲಕ ಭಾರತೀಯ ನೌಕಾ ಸೇನೆ ಆಧುನಿಕ ಸಮುದ್ರ ಯುದ್ಧಗಳ ಸವಾಲುಗಳನ್ನು ಎದುರಿಸಲು ಸಿದ್ಧವಾಗಿದೆ.
ಭಾರತ 2047ರ ವೇಳೆಗೆ ಸಂಪೂರ್ಣ ಸ್ವದೇಶೀ ನಿರ್ಮಿತ ನೌಕಾ ಸೇನೆಯನ್ನು ನಿರ್ಮಿಸುವತ್ತ ಹೆಜ್ಜೆ ಇಡುತ್ತಿದೆ. ಭಾರತದ ಬೆಳೆಯುತ್ತಿರುವ ನೌಕಾ ಬಳಗ ಮತ್ತು ಅದರ ಸಾಮರ್ಥ್ಯ ಭಾರತ ತನ್ನ ಸಮುದ್ರಗಳ ಭವಿಷ್ಯವನ್ನು ರಕ್ಷಿಸಲು ಕಟಿಬದ್ಧವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಈ ನೌಕಾಪಡೆಯ ದಿನದಂದು, ಭಾರತೀಯ ನೌಕಾಪಡೆಯ ಪುರುಷ ಮತ್ತು ಮಹಿಳಾ ಸಿಬ್ಬಂದಿಗಳಿಗೆ ದೇಶ ನಮನ ಸಲ್ಲಿಸುತ್ತದೆ. ಅವರ ಸೇವೆ, ಶ್ರದ್ಧೆ ಮತ್ತು ನಿಷ್ಠೆ ಭಾರತದ ಸುರಕ್ಷತೆ ಮತ್ತು ಶಕ್ತಿಯ ಪ್ರತೀಕವಾಗಿವೆ.