ಕೇಂದ್ರದಿಂದ ಮತ್ತೊಂದು ಕೊರೋನಾ ಪ್ಯಾಕೇಜ್ ಘೋಷಣೆ ಸಾಧ್ಯತೆ..?

By Kannadaprabha NewsFirst Published Apr 17, 2020, 7:39 AM IST
Highlights

ಕೊರೋನಾ ವೈರಸ್‌ ಹೊಡೆತಕ್ಕೆ ನಲುಗಿರುವ ಆರ್ಥಿಕತೆಯನ್ನು ಸರಿದಾರಿಗೆ ತರಲು ಕೇಂದ್ರ ಮತ್ತೊಂದು ಪರಿಹಾರ ಪ್ಯಾಕೇಜ್ ಘೋ‍ಷಿಸುವ ಸಾಧ್ಯತೆಯಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಪ್ರಧಾನಿ ಮೋದಿಯನ್ನು ಭೇಟಿಯಾಗಿರುವುದು ಹೊಸ ಆಶಾವಾದ ಹುಟ್ಟುಹಾಕಿದೆ.

ನವದೆಹಲಿ(ಏ.17): ಮಾರಕ ಕೊರೋನಾ ವೈರಸ್‌ನಿಂದ ದೇಶದ ಆರ್ಥಿಕತೆ ಮೇಲಾಗುವ ಪರಿಣಾಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪರಾಮರ್ಶೆ ನಡೆಸಿದ್ದಾರೆ. ವೈರಸ್‌ ದಾಳಿಯಿಂದಾಗಿ ತೀವ್ರ ಹೊಡೆತ ಅನುಭವಿಸಿರುವ ಉದ್ದಿಮೆಗಳಿಗೆ ಉತ್ತೇಜನೆ ನೀಡಲು ಮತ್ತೊಂದು ಪ್ಯಾಕೇಜ್‌ ನೀಡುವ ಸಾಧ್ಯತೆಯ ಕುರಿತಂತೆಯೂ ಸಮಾಲೋಚನೆ ನಡೆಸಿದರು ಎಂದು ಹೇಳಲಾಗಿದೆ.

ವಿತ್ತ ಸಚಿವೆ ನಿರ್ಮಲಾ ಜಾಗಕ್ಕೆ ಬರ್ತಾರಾ ಆರ್‌ಬಿಐ ಗೌರ್ನರ್?

ಕೊರೋನಾ ವೈರಸ್‌ ಸೋಂಕು ವ್ಯಾಪಕವಾಗಿ ಹಬ್ಬಿದ್ದರಿಂದ ಹಾಗೂ ಅದನ್ನು ನಿಗ್ರಹಿಸಲು ಕೇಂದ್ರ ಸರ್ಕಾರ 40 ದಿನಗಳ ಲಾಕ್‌ಡೌನ್‌ ಘೋಷಣೆ ಮಾಡಿರುವುದರಿಂದ ಸಣ್ಣ ಉದ್ದಿಮೆಗಳಿಂದ ಹಿಡಿದು ವೈಮಾನಿಕ ಕ್ಷೇತ್ರದವರೆಗೆ ಸಾಕಷ್ಟು ಪರಿಣಾಮವಾಗಿದ್ದು, ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಳ್ಳುವ ಭೀತಿ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೋನಾದಿಂದ ದೇಶದ ಆರ್ಥಿಕತೆ ಮೇಲಾಗುವ ಪರಿಣಾಮಗಳ ಕುರಿತಂತೆ ಮೋದಿ ಅವರು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಜತೆಗೆ ಮಾತುಕತೆ ನಡೆಸಿದರು ಎಂದು ವರದಿಗಳು ತಿಳಿಸಿವೆ.

ತಲೆಕೆಳಗಾದ ಪ್ರಧಾನಿ ನರೇಂದ್ರ ಮೋದಿ ದಿನಚರಿ..!

ಲಾಕ್‌ಡೌನ್‌ನಿಂದ ಆಗುವ ಪರಿಣಾಮಗಳನ್ನು ಎದುರಿಸಲು ಕೇಂದ್ರ ಸರ್ಕಾರ ಕಳೆದ ತಿಂಗಳು ಹಣಕಾಸು ಪ್ಯಾಕೇಜ್‌ ಪ್ರಕಟಿಸಿತ್ತು. ಆದರೆ ಈ ಲಾಕ್‌ಡೌನ್‌ನಿಂದ ದೇಶದ ಆರ್ಥಿಕತೆ ಮೇಲೆ ಗಂಭೀರ ಪರಿಣಾಮಗಳಾಗಿದ್ದು, ದೇಶದ ಜಿಡಿಪಿ ದರ ಶೇ.1.5ರಿಂದ ಶೇ.2.8ಕ್ಕೆ ಇಳಿಕೆ ಕಾಣಲಿದೆ ಎಂದು ಜಾಗತಿಕ ಸಂಸ್ಥೆಗಳು ಭವಿಷ್ಯ ನುಡಿದಿವೆ. ಹೀಗಾಗಿ ಮೋದಿ ಅವರು ನಡೆಸಿದ ಮಾತುಕತೆ ಮಹತ್ವ ಪಡೆದುಕೊಂಡಿದೆ.

click me!