
ತಿರುವನಂತಪುರ (ಆ.31): ಓಣಂ ಹಬ್ಬದ ಮೊದಲ ಒಂಬತ್ತು ದಿನಗಳಲ್ಲಿ ಕೇರಳ ರಾಜ್ಯದಾದ್ಯಂತ 665 ಕೋಟಿ ರೂಪಾಯಿ ಮೌಲ್ಯದ ಮದ್ಯದ ದಾಖಲೆ ಮಾರಾಟ ಮಾಡಿದೆ. ಆಗಸ್ಟ್ 28 ರ ಸೋಮವಾರದವರೆಗಿನ ಹಬ್ಬದ ಅವಧಿಯ ಮೊದಲ 9 ದಿನಗಳಲ್ಲಿ ಈ ವರ್ಷದ ಒಟ್ಟು ಮದ್ಯ ಮಾರಾಟವು ಕಳೆದ ವರ್ಷ ಇದೇ ಅವಧಿಯಲ್ಲಿ ವರದಿಯಾದ 624 ಕೋಟಿ ರೂಪಾಯಿಗಳಿಗೆ ಹೋಲಿಸಿದರೆ 41 ಕೋಟಿ ರೂಪಾಯಿ ಹೆಚ್ಚಾಗಿದೆ. ಕೇರಳ ಸ್ಟೇಟ್ ಬೆವರೇಜಸ್ ಕಾರ್ಪೊರೇಷನ್ (ಬೆವ್ಕೊ) ಮಳಿಗೆಗಳಲ್ಲಿ ಉತ್ರಾದಂ ದಿನದಂದು ಮದ್ಯದ ಒಟ್ಟು ಮಾರಾಟವು ಕಳೆದ ವರ್ಷಕ್ಕಿಂತ ಕೊಂಚ ಪ್ರಮಾಣದಲ್ಲಿ ಹೆಚ್ಚಾಗಿದೆ. ಕಳೆದ ವರ್ಷದ ಉತ್ರಾದಂ ದಿನದಂದು ಒಂದೇ ದಿನ 112 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದ್ದರೆ, ಈ ವರ್ಷ ಅದು 116.1 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದೆ. ಇದಲ್ಲದೇ, ತ್ರಿಶೂರ್ ಜಿಲ್ಲೆಯ ಇರಿಂಜಲಕುಡದಲ್ಲಿರುವ ಬೆವ್ಕೋ ಮಳಿಗೆಯು ಸೋಮವಾರವೇ ಅತಿ ಹೆಚ್ಚು 1.06 ಕೋಟಿ ರೂ.ಗಳ ಮದ್ಯ ಮಾರಾಟವನ್ನು ದಾಖಲಿಸಿದೆ. ಮತ್ತೊಂದೆಡೆ, ಕೊಲ್ಲಂನಲ್ಲಿರುವ ಆಶ್ರಮಮ್ ಬೆವ್ಕೋ ಔಟ್ಲೆಟ್ ಕೂಡ 1.01 ಕೋಟಿ ರೂಪಾಯಿಗಳ ಮದ್ಯ ಮಾರಾಟವನ್ನು ದಾಖಲಿಸಿದೆ.
ಅದಲ್ಲದೇ, ಚಂಗನಾಶ್ಶೇರಿಯ ಮಳಿಗೆಯಲ್ಲಿ 95.7 ಲಕ್ಷ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿವೆ. ಇನ್ನು 90 ಲಕ್ಷ ರೂಪಾಯಿಗೂ ಅಧಿಕ ಮದ್ಯ ಮಾರಾಟ ದಾಖಲು ಮಾಡಿದ ಇನ್ನೆರಡು ಮಳಿಗೆಗಳೆಂದರೆ, ಕೋರ್ಟ್ ಜಂಕ್ಷನ್ ಚೇರ್ತಲ ಸ್ಟೋರ್ ( 93.7ಲಕ್ಷ), ಹಾಗೂ ಪಯ್ಯನೂರು ಔಟ್‌ಲೆಟ್ (91.6 ಲಕ್ಷ) ಎಂದು ತಿಳಿಸಿದೆ.
ಹತ್ತು ದಿನಗಳ ಕಾಲ ನಡೆಯುವ ಓಣಂ ಹಬ್ಬದ ಒಂಬತ್ತನೇ ದಿನವಾದ ಉತ್ರಾದಂ ಅನ್ನು ಪ್ರಮುಖ ದಿನವೆಂದು ಪರಿಗಣಿಸಲಾಗಿದೆ ಮತ್ತು ಕೇರಳದ ಕೆಲವು ಭಾಗಗಳಲ್ಲಿ ಓಣಂ ಹಬ್ಬಗಳು ಈ ದಿನದಂದು ಪ್ರಾರಂಭವಾಗುತ್ತವೆ. ಉತ್ರಾದಂ ದಿನದಂದು, ರಾಜ ಮಹಾಬಲಿಯ ಆಗಮನವನ್ನು ಗೌರವಿಸಲು ಜನರು ಉತ್ತಮ ಸಿದ್ಧತೆಗಳೊಂದಿಗೆ ಹಬ್ಬವನ್ನು ಆಚರಿಸುತ್ತಾರೆ. ಹಬ್ಬವನ್ನು ಆಚರಿಸಲು ಇತ್ತೀಚೆಗೆ ಕೊಯ್ಲು ಮಾಡಿದ ತಾಜಾ ಹಣ್ಣುಗಳು ಮತ್ತು ತರಕಾರಿಗಳಿಂದ ಅನೇಕ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. 2022 ರಲ್ಲಿ ಓಣಂನ ಮೊದಲ ದಿನದ ಹಿಂದಿನ ವಾರದಲ್ಲಿ ಒಟ್ಟು ಮದ್ಯ ಮಾರಾಟವು 624 ಕೋಟಿ ರೂಪಾಯಿಗೆ ಏರಿದ್ದರೆ, 2021ರ ಇದೇ ಅವಧಿಯಲ್ಲಿ ಈ ಮೊತ್ತ 529 ಕೋಟಿ ರೂ.ಗೆ ತಲುಪಿತ್ತು.
ತೆರಿಗೆ ಏರಿಕೆಯಿಂದ ಮದ್ಯ ಮಾರಾಟ ತೀವ್ರ ಇಳಿಕೆ: ಅಬಕಾರಿ ಇಲಾಖೆಯ ಆದಾಯ ಗಣನೀಯ ಕುಸಿತ
ರಾಜ್ಯದಲ್ಲಿ ಹೆಚ್ಚಿನ ಮದ್ಯ ಮಾರಾಟದ ನಿರೀಕ್ಷೆಯಲ್ಲಿರುವಾಗ, ಬೆವ್ಕೋ ತನ್ನ ಎಲ್ಲಾ ಮಳಿಗೆಗಳಿಗೆ ಅಧಿಕೃತ ಸೂಚನೆಯನ್ನು ಹೊರಡಿಸಿದ್ದು, ಮತ್ತು ಸಿಬ್ಬಂದಿಗೆ ಸಹಕಾರಿ ಮತ್ತು ಗ್ರಾಹಕರಿಗೆ ಅನುಕೂಲವಾಗುವಂತೆ ಸೂಚಿಸಿತು. ಪೀಕ್ ಸೀಸನ್‌ನಲ್ಲಿ ಯಾವುದೇ ರಜೆ ನೀಡದಂತೆ ಸಿಬ್ಬಂದಿಗೆ ನೋಟಿಸ್‌ನಲ್ಲಿ ವಿನಂತಿಸಲಾಗಿದೆ. ಹೆಚ್ಚುವರಿಯಾಗಿ, ಗ್ರಾಹಕರಿಗೆ ಆನ್‌ಲೈನ್ ಪಾವತಿಯ ಆಯ್ಕೆಯು ಲಭ್ಯವಿರಬೇಕು ಎಂದು ತಿಳಿಸಿತ್ತು.
ಮದ್ಯ ಮಾರಾಟ ಲಾಭ 20% ಹೆಚ್ಚಳಕ್ಕೆ ಸಿಎಂ ಸಿದ್ದರಾಮಯ್ಯಗೆ ಮನವಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ