ಕುಂಭಮೇಳದಲ್ಲಿ ಕೊರೋನಾಗೆ ಮೊದಲ ಬಲಿ : 1,700ಕ್ಕೂ ಹೆಚ್ಚು ಕೇಸ್

By Kannadaprabha NewsFirst Published Apr 16, 2021, 9:32 AM IST
Highlights

ಕೊರೋನಾ ನಿಯಮಗಳ ತೀವ್ರ ಉಲ್ಲಂಘನೆ ವರದಿಯಾಗುತ್ತಿರುವ ಹರಿದ್ವಾರ ಕುಂಭಮೇಳದಲ್ಲಿ ಕೋವಿಡ್‌ ಸೋಂಕಿಗೆ ಸಾಧುವೊಬ್ಬರು ಬಲಿಯಾಗಿದ್ದಾರೆ. ಇದು ಕುಂಭಮೇಳದಲ್ಲಿ ಸಂಭವಿಸಿದ ಮೊದಲ ಕೊರೋನಾ ಸಂಬಂಧಿ ಸಾವಾಗಿದೆ.

ಡೆಹ್ರಾಡೂನ್‌ (ಏ.16): ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೊರೋನಾ ನಿಯಮಗಳ ತೀವ್ರ ಉಲ್ಲಂಘನೆ ವರದಿಯಾಗುತ್ತಿರುವ ಹರಿದ್ವಾರ ಕುಂಭಮೇಳದಲ್ಲಿ ಕೋವಿಡ್‌ ಸೋಂಕಿಗೆ ಸಾಧುವೊಬ್ಬರು ಬಲಿಯಾಗಿದ್ದಾರೆ. ಇದು ಕುಂಭಮೇಳದಲ್ಲಿ ಸಂಭವಿಸಿದ ಮೊದಲ ಕೊರೋನಾ ಸಂಬಂಧಿ ಸಾವಿನ ಪ್ರಕರಣವಾಗಿದೆ. ಇನ್ನೊಂದೆಡೆ ಹರಿದ್ವಾರ ಕುಂಭಮೇಳದಲ್ಲಿ ಏ.10ರಿಂದ 14ರವರೆಗೆ 1,700 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ನಿರ್ವಾಣಿ ಅಖಾಡಾದ ಕಪಿಲದೇವ ಎಂಬ ಸಾಧುವೇ ಸೋಂಕಿಗೆ ಬಲಿಯಾದವರು. ಕುಂಭದಲ್ಲಿ ಕೋವಿಡ್‌ ದೃಢಪಟ್ಟಕಾರಣ ಇತ್ತೀಚೆಗೆ ಅವರನ್ನು ಡೆಹ್ರಾಡೂನ್‌ನ ಕೈಲಾಶ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಅವರು ಅಸುನೀಗಿದರು ಎಂದು ತಿಳಿಸಲಾಗಿದೆ.

ಅಮೆರಿಕಾ ಮೀರಿಸಿದ ಭಾರತ : ಒಂದೇ ದಿನ ದಾಖಲೆಯಷ್ಟು ಕೇಸ್

ಇದೇ ವೇಳೆ, 2,36,751 ಕೊರೋನಾ ಟೆಸ್ಟ್‌ಗಳನ್ನು ಇಲ್ಲಿ ನಡೆಸಲಾಗಿದೆ. ಸೋಂಕಿನ ಪರೀಕ್ಷೆಗೆ ಒಳಪಟ್ಟಆರ್‌ಟಿಪಿಸಿಆರ್‌ ಪರೀಕ್ಷೆಯ ವರದಿಗಳು ಬಾಕಿ ಉಳಿದಿದ್ದು, ಸೋಂಕಿತರ ಸಂಖ್ಯೆ 2000 ಗಡಿ ದಾಟುವ ಸಾಧ್ಯತೆ ಇದೆ.

ಹರಿದ್ವಾರದ 670 ಎಕರೆ ಪ್ರದೇಶದಲ್ಲಿ ಕುಂಭಮೇಳ ನಡೆಯುತ್ತಿದ್ದು, ಕಳೆದ ಎರಡು ಪವಿತ್ರ ಸ್ನಾನದಲ್ಲಿ 48.51 ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದಾರೆ. ವಿಶ್ವದಲ್ಲೇ ಅತಿ ಹೆಚ್ಚು ಜನರು ಸೇರುವ ಈ ಧಾರ್ಮಿಕ ಕಾರ್ಯಕ್ರಮ ಉತ್ತರಾಖಂಡದಲ್ಲಿ ವೇಗವಾಗಿ ಸೋಂಕು ಏರಿಕೆಗೆ ಕಾರಣವಾಗುವ ಅಪಾಯ ಎದುರಾಗಿದೆ.

click me!