
ಮುಂಬೈ: ಪರಿವಾಳದ ಜೀವ ಉಳಿಸಲು ಹೋಗಿ ಅಗ್ನಿ ಶಾಮಕ ಸಿಬ್ಬಂದಿಯೋರ್ವ ಪ್ರಾಣ ಬಿಟ್ಟಂತಹ ಮನಕಲುಕುವ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದ್ದು, ಘಟನೆಯಲ್ಲಿ ಇನ್ನೋರ್ವ ವ್ಯಕ್ತಿ ಕರೆಂಟ್ ಶಾಕ್ ತಗುಲಿ ಗಾಯಗೊಂಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ 28 ವರ್ಷದ ಉತ್ಸವ್ ಪಾಟೀಲ್ ಮೃತಪಟ್ಟ ಯುವಕ. ಆಕ್ಟೋಬರ್ 12 ರಂದು ಥಾಣೆಯ ದಿವಾ ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ.
ಘಟನೆ ಸಂಭವಿಸಿದ್ದು ಹೇಗೆ?
ಥಾಣೆಯ ಕರ್ಡಿಗಾವ್‌ನ ದಿವಾ-ಸಾಹಿಲ್ ರಸ್ತೆಯ ಸುದಾಮ್ ರೆಸಿಡೆನ್ಸಿ ಬಳಿ ಪಾರಿವಾಳವೊಂದು ಹೈ ವೋಲ್ಟೇಜ್ ಕರೆಂಟ್ ವೈರ್‌ಗೆ ಸಿಲುಕಿಕೊಂಡಿತ್ತು. ಈ ವಿಚಾರ ತಿಳಿದ ಅಲ್ಲಿನ ಸ್ಥಳೀಯ ಸಾಮಾಜಿಕ ಕಾರ್ಯಕರ್ತರು ಹಾಗೂ ಪ್ರಾಣಿಪ್ರಿಯರು ಥಾಣೆಯ ಅಗ್ನಿ ಶಾಮಕ ಸಿಬ್ಬಂದಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಪಾರಿವಾಳವನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ವಿಚಾರ ತಿಳಿದ ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಬಂದು ಈ ಪರಿವಾಳವನ್ನು ಕರೆಂಟ್ ವೈರ್‌ನಿಂದ ಬಿಡಿಸಲು ಯತ್ನಿಸಿದಾಗ ಈ ಘಟನೆ ನಡೆದಿದೆ.
ಪಾರಿವಾಳವನ್ನು ರಕ್ಷಿಸಲು ಅಗ್ನಿಶಾಮಕದಳದ ಉತ್ಸವ್ ಪಾಟೀಲ್ ಹಾಗೂ ಅಜಾದ್ ಪಾಟೀಲ್ ಅವರು ಸ್ಥಳಕ್ಕೆ ಬಂದು ಪಾರಿವಾಳವನ್ನು ರಕ್ಷಿಸುವುದಕ್ಕೆ ಯತ್ನಿಸಿದಾಗ ಹೈಟೆನ್ಷನ್ ಕರೆಂಟ್ ವಯರ್ ಈ ಇಬ್ಬರಿಗೆ ಟಚ್ ಆಗಿದ್ದು, ಕರೆಂಟ್ ಶಾಕ್ ಹೊಡೆದಿದೆ. ಕೂಡಲೇ ಅವರನ್ನು ಕಲ್ವಾದ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಗೆ ಕರೆತರಲಾಯ್ತು. ಆದರೆ ಘಟನೆಯಲ್ಲಿ ಉತ್ಸವ್ ಪಾಟೀಲ್ ಪ್ರಾಣ ಬಿಟ್ಟರೆ, ಅಜಾದ್ ಪಾಟೀಲ್ ಅವರಿಗೆ ಗಂಭೀರ ಗಾಯಗಳಾಗಿವೆ.
ಮೃತ ಉತ್ಸವ್ ಪಾಟೀಲ್ ಅವರು ದಿವಾದ ದತ್ತಿವಾಲಿ ಪ್ರದೇಶದ ನಿವಾಸಿಯಾಗಿದ್ದಾರೆ. ಹಾಗೆಯೇ ಗಾಯಗೊಂಡ ಅಜಾದ್ ಅವರಿಗೆ 29 ವರ್ಷ ವಯಸ್ಸಾಗಿದ್ದು, ಅವರು ಪಾಲ್ಗರ್‌ನ ವಾಡಾ ನಿವಾಸಿಯಾಗಿದ್ದಾರೆ. ಅವರ ಕೈ ಹಾಗೂ ಎದೆಯ ಭಾಗದಲ್ಲಿ ಸುಟ್ಟಗಾಯಗಳಾಗಿವೆ. ಆದರೆ ಈಗ ಹೀಗೆ ಪಾರಿವಾಳವನ್ನು ರಕ್ಷಿಸಲು ಬಂದ ಯುವಕರು ಸುರಕ್ಷತಾ ಕ್ರಮಗಳನ್ನು ಫಾಲೋ ಮಾಡಿರಲಿಲ್ಲವೇ ಎಂಬ ಬಗ್ಗೆ ಸ್ಥಳೀಯರು ಸಾಮಾಜಿಕ ಕಾರ್ಯಕರ್ತರು ಚರ್ಚಿಸುತ್ತಿದ್ದಾರೆ. ಇವರು ವಿದ್ಯುತ್ ಇಲಾಖೆಗೆ ಈ ವಿಚಾರ ತಿಳಿಸಿರಲಿಲ್ವಾ ಎಂಬ ಬಗ್ಗೆ ಈಗ ತನಿಖೆ ನಡೆಯುತ್ತಿದೆ.
ಇಂತಹ ಕಾರ್ಯಗಳಲ್ಲಿ ಭಾಗಿಯಾಗುವ ಮೊದಲು ಸುರಕ್ಷತಾ ಕ್ರಮಗಳನ್ನು ಫಾಲೋ ಮಾಡಬೇಕು. ಸ್ಥಳೀಯ ವಿದ್ಯುತ್ ಇಲಾಖೆಗೆ ವಿಚಾರ ತಿಳಿಸಿ ಪವರ್ ಕಟ್ ಮಾಡಿಸಬೇಕು ಆದರೆ ಇವು ಯಾವುದನ್ನು ಮಾಡದೇ ಇವರು ಸೀದಾ ಬಂದು ಪಾರಿವಾಳವನ್ನು ರಕ್ಷಿಸುವ ಭರದಲ್ಲಿ ವಿದ್ಯುತ್ ಹರಿಯುತ್ತಿದ್ದ ವೈರ್‌ನ್ನು ಮುಟ್ಟಿದ್ದರಿಂದ ದುರಂತ ಸಂಭವಿಸಿದೆ ಎಂದು ಸ್ಥಳೀಯರು ಬೇಸರಿಸಿದ್ದಾರೆ. ಮೃತ ಉತ್ಸವ್ ಪಾಟೀಲ್ ಕೆಲಸದಲ್ಲಿ ಬಹಳ ನಿಷ್ಠ ವ್ಯಕ್ತಿಯಾಗಿದ್ದು, ಅವರ ಹಠಾತ್ ಸಾವು ಸಹೋದ್ಯೋಗಿಗಳು, ಕುಟುಂಬದವರು ಹಾಗೂ ಸ್ನೇಹಿತರಿಗೆ ಆಘಾತ ನೀಡಿದೆ. ಇವರಿಬ್ಬರೂ ಗುತ್ತಿಗೆ ಆಧಾರದಲ್ಲಿ ಅಗ್ನಿ ಶಾಮಕ ದಳದಲ್ಲಿ ಕೆಲಸ ಮಾಡುತ್ತಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದನ್ನೂ ಓದಿ: ಗ್ರಾಜುಯೇಷನ್‌ಡೇ ಇಷ್ಟೊಂದು ದುಬಾರಿ ನಾ: ಡಿಸ್ಟಿಂಕ್ಷನ್ ಗಳಿಸಿದರೂ ವೆಚ್ಚ ಭರಿಸಲಾಗದೇ ಅತಿಥಿಯಂತೆ ಭಾಗಿಯಾದ ಯುವತಿ
ಇದನ್ನೂ ಓದಿ: ಡಿಜಿಟಲ್ ಅರೆಸ್ಟ್‌ಗಾಗಿಯೇ ನಕಲಿ ಬಿಪಿಒ ಸ್ಥಾಪನೆ: HSR ಲೇಔಟ್ ಪೊಲೀಸರ ದಾಳಿ: 16 ಉತ್ತರ ಭಾರತೀಯರ ಬಂಧನ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ