ಕೊರೋನಾಗೆ ಫೈಲು ಕಾರಣವಂತೆ; ಮಂತ್ರಿಗಳ ಪರದಾಟ!

By Kannadaprabha NewsFirst Published May 1, 2020, 2:51 PM IST
Highlights

ಸರ್ಕಾರಿ ಕಛೇರಿಗೆ ಬಂದ ಫೈಲೊಂದು ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಒಂದು ಫೈಲ್ 100 ಕ್ಕೂ ಹೆಚ್ಚು ಜನರಿಗೆ ಸೋಂಕು ಹರಡಿಸಿದೆಯಂತೆ!

ಆರೋಗ್ಯ ಇಲಾಖೆ ಕಾರ್ಯಾಲಯಕ್ಕೆ ಬಂದ ಸರ್ಕಾರಿ ಫೈಲ್ ಒಂದು ಮಧ್ಯಪ್ರದೇಶದಲ್ಲಿ ಅವಾಂತರ ಸೃಷ್ಟಿಸಿದ್ದು, ಪ್ರಿನ್ಸಿಪಲ್  ಸೆಕ್ರೆಟರಿಯಿಂದ ಹಿಡಿದು ಪ್ಯೂನ್‌ವರೆಗೆ 100ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ. ಕೊರೋನಾ ನಿಯಂತ್ರಿಸುವ ಜವಾಬ್ದಾರಿ ಹೊತ್ತ ಅಧಿಕಾರಿಗಳೇ ಅಸ್ಪತ್ರೆಯಲ್ಲಿದ್ದಾರೆ.

ಇಂದೋರ್‌ ವಿಮಾನ ನಿಲ್ದಾಣಕ್ಕೆ ದುಬೈಯಿಂದ 2 ಅಂತಾರಾಷ್ಟ್ರೀಯ ವಿಮಾನಗಳು ಓಡಾಡಿದ್ದು, ಮಧ್ಯಪ್ರದೇಶದಲ್ಲಿ ಸೋಂಕು ಹರಡಲು ಇದೇ ಮುಖ್ಯ ಕಾರಣವಂತೆ. ದುಬೈಯಿಂದ ಅಲ್ಲಿನ ಭಾರತೀಯ ರಾಜದೂತರು ವಿಮಾನಗಳನ್ನು ನಿಲ್ಲಿಸಿ ಎಂದು ಫೆಬ್ರವರಿಯಲ್ಲಿಯೇ ಸಂದೇಶ ಕಳಿಸಿದ್ದರೂ ಚೀನಾದಿಂದ ಮಾತ್ರ ವಿಮಾನ ಹಾರಾಟ ಬಂದ್‌ ಮಾಡಿ, ದುಬೈಯಿಂದ ಪ್ರವೇಶಕ್ಕೆ ಅನುಮತಿಸಿದ್ದು ಸಮಸ್ಯೆಗೆ ಮೂಲ ಕಾರಣ. ಆದರೆ ಮುಲಾಜಿಗೆ ಬಿದ್ದು ಬಸಿರಾಗುವುದು ನಮ್ಮ ಇತಿಹಾಸದ ಪುಟಗಳಲ್ಲಿ ತುಂಬಿ ಹೋಗಿದೆ ಅಲ್ಲವೇ.. ಈಗ ಅನುಭವಿಸಬೇಕು ಅಷ್ಟೇ.

ಉದ್ಧವ್‌ ಮಾತೇ ಕೇಳೋರಿಲ್ಲ; ಮುಖ್ಯಮಂತ್ರಿ ಹುದ್ದೆ ಕಳೆದುಕೊಳ್ಳುವ ಭೀತಿಯಲ್ಲಿ ಠಾಕ್ರೆ?

ಮಂತ್ರಿಗಳ ಪರದಾಟ

ಲಾಕ್‌ಡೌನ್‌ನಲ್ಲಿ ಬಹುತೇಕರು ತಮ್ಮ ತಮ್ಮ ಕುಟುಂಬಗಳ ಜೊತೆಗೆ ಲಾಕ್‌ ಆಗಿದ್ದರೆ ಕೇಂದ್ರ ಸಚಿವ ಸದಾನಂದ ಗೌಡರಿಗೆ ಆ ಭಾಗ್ಯವಿಲ್ಲ. ಪತ್ನಿ, ಮಗ, ಸೊಸೆ, ಮೊಮ್ಮಗು ಬೆಂಗಳೂರಿನಲ್ಲಿದ್ದರೆ, 40 ದಿನಗಳಿಂದ ಪ್ರಧಾನಿ ಆದೇಶದ ಹಿನ್ನೆಲೆಯಲ್ಲಿ ದಿಲ್ಲಿಯಲ್ಲೇ ಇದ್ದಾರೆ. ಮೊದಲನೇ ಲಾಕ್‌ಡೌನ್‌ನಲ್ಲಿ ದಿಲ್ಲಿ ಮನೆಯಲ್ಲಿ ಕುಟುಂಬ ಇಲ್ಲದೆ, ಸಿಬ್ಬಂದಿಗಳೂ ಇಲ್ಲದೇ ಒದ್ದಾಡಿದ್ದ ಸದಾ ಈಗ ಕಚೇರಿಗೆ ಹೋಗತೊಡಗಿದ್ದಾರೆ. ಆದರೆ ಪ್ರಹ್ಲಾದ್‌ ಜೋಶಿಗೆ ಆ ಸಮಸ್ಯೆ ಇಲ್ಲ.

ಪತ್ನಿ ಜ್ಯೋತಿ ಮತ್ತು ಕಿರಿ ಮಗಳು ದಿಲ್ಲಿಯಲ್ಲೇ ಇದ್ದು, ಗಂಡನಿಗೆ ಬೇಕಾದ ಅಡುಗೆ ಎಲ್ಲಾ ಸ್ವತಃ ಮಾಡುತ್ತಾ ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಸುರೇಶ್‌ ಅಂಗಡಿ ಬೆಳಗಾವಿಗೆ ಹೋಗಿದ್ದು, ದಿಲ್ಲಿಗೆ ಬರುವುದು ಲಾಕ್‌ಡೌನ್‌ ಮುಕ್ತಾಯದ ಬಳಿಕವೇ. ಇನ್ನು ದುಷ್ಯಂತ್‌ ಸಿಂಗ್‌ ಜೊತೆಗಿದ್ದ ತಪ್ಪಿಗೆ ಕ್ವಾರಂಟೈನ್‌ನಲ್ಲಿದ್ದ ಸಂಸದ ಶಿವಕುಮಾರ ಉದಾಸಿ ಏಪ್ರಿಲ್ 20ರಂದು 3 ದಿನಗಳ ಕಾಲ ಪ್ರವಾಸ ಮಾಡಿ ಕಾರ್‌ ಮೂಲಕ ಊರು ತಲುಪಿದ್ದಾರೆ. ಅಂದಹಾಗೆ, ಲಾಕ್‌ಡೌನ್‌ ಕಾಲದಲ್ಲಿ ಅದೇ ಊಟ ಮಾಡಿ ಮಾಡಿ, ಬಾಯಿ ಕೆಟ್ಟು ಕರ್ನಾಟಕದ ಸಂಸದರೊಬ್ಬರು ಸಿಬ್ಬಂದಿಗಳಿಗೆ ಮ್ಯಾಗ್ಗಿ ತೆಗೆದುಕೊಂಡು ಬರಲು ಹೇಳಿ ತಾವೇ ತಯಾರಿಸಿ ಚಪ್ಪರಿಸಿದರಂತೆ. ಸಂಸದರು ಆದರೇನು ಅವರು ನಮ್ಮ ಹಾಗೆಯೇ ಮನುಷ್ಯರೇ ಅಲ್ಲವೇ?

ಗೂಡ್ಸ್‌ ಟ್ರೈನ್‌ನ ಕಾಲ

ಭಾರತೀಯ ರೈಲ್ವೆಯಲ್ಲಿ ಲಾಭ ಗೂಡ್ಸ್‌ ರೈಲ್ವೆಯಿಂದ ಜಾಸ್ತಿ ಬಂದರೂ ಪ್ರಯಾಣಿಕರ ರೈಲುಗಳಿಗೆ ಪ್ರಾತಿನಿಧ್ಯ ಜಾಸ್ತಿ. ಆದರೆ ಈಗ ಕೊರೋನಾ ಕಾಲದಲ್ಲಿ ಪ್ರಯಾಣಿಕರ ಟ್ರೈನ್‌ಗಳು ಓಡಾಡದೇ ಇರುವಾಗ ಧಿಡೀರನೆ ಗೂಡ್ಸ್‌ ಟ್ರೈನ್‌ಗಳು ಬಹು ಬೇಗನೆ ತಮ್ಮ ಗಂತವ್ಯ (ಸೇರಬೇಕಾದ ಸ್ಥಳ)ವನ್ನು ತಲುಪುತ್ತಿದ್ದು, ಟ್ರಕ್‌ ಸಂಚಾರ ಕೂಡ ಕಡಿಮೆ ಆಗಿರುವುದರಿಂದ ಗೂಡ್ಸ್‌ ಬುಕಿಂಗ್‌ಗೆ ಎಲ್ಲಿಲ್ಲದ ಬೇಡಿಕೆ ಬಂದಿದೆ ಅಂತೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

click me!