11 ಗಂಟೆಗಳ ಕಾಲ ಬಿರುಸಿನ ಚರ್ಚೆ ಬಳಿಕ ವಕ್ಫ್ ಬಿಲ್ ಪಾಸ್; ಇಂದೇ ರಾಜ್ಯಸಭೇಲಿ ಅಂಗೀಕಾರ?

ಲೋಕಸಭೆಯಲ್ಲಿ ವಕ್ಫ್‌ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು. ವಿಧೇಯಕದ ಕುರಿತು ಸುದೀರ್ಘ ಚರ್ಚೆ ನಡೆಯಿತು, ವಿಪಕ್ಷಗಳು ವಿರೋಧಿಸಿದರೆ, ಆಡಳಿತ ಪಕ್ಷವು ಸಮರ್ಥಿಸಿಕೊಂಡಿತು.


ನವದೆಹಲಿ (ಏ.3): ಭಾರತೀಯ ಸೇನೆ, ರೈಲ್ವೆ ಹೊರತುಪಡಿಸಿದರೆ ದೇಶದಲ್ಲೇ ಅತಿ ಹೆಚ್ಚು ಭೂಮಿಯ ಮಾಲೀಕತ್ವ ಹೊಂದಿರುವ ವಕ್ಫ್‌ ಮಂಡಳಿಯ ಆಡಳಿತದಲ್ಲಿ ಪಾರದರ್ಶಕತೆ ತರುವ, ಮಂಡಳಿಯ ಪರಮಾಧಿಕಾರ ಕಟ್‌ ಮಾಡುವ, ಮಹಿಳೆಯರಿಗೆ ಮತ್ತು ಮುಸ್ಲಿಂ ಸಮುದಾಯದಲ್ಲಿನ ಎಲ್ಲಾ ವರ್ಗಗಳಿಗೂ ಮಂಡಳಿಯಲ್ಲಿ ಅವಕಾಶ ಕೊಡುವ ಐತಿಹಾಸಿಕ ವಕ್ಫ್‌ ತಿದ್ದುಪಡಿ ವಿಧೇಯಕವನ್ನು ಬುಧವಾರ ಲೋಕಸಭೆಯಲ್ಲಿ ಮಂಡಿಸಲಾಯಿತು.

ಸಂಸದೀಯ ಖಾತೆ ಸಚಿವ ಕಿರಣ್‌ ರಿಜಿಜು ಅವರಿಂದ ಬುಧವಾರ ಮಂಡಿಸಲ್ಪಟ್ಟ ವಕ್ಫ್‌ ತಿದ್ದುಪಡಿ ವಿಧೇಯಕದ ಕುರಿತು ಸುದೀರ್ಘ 11 ಗಂಟೆಗೂ ಹೆಚ್ಚು ಕಾಲ ಸುದೀರ್ಘ ಚರ್ಚೆ ನಡೆಯಿತು. ಇಂಡಿಯಾ ಮೈತ್ರಿಕೂಟದ ಸದಸ್ಯರು ವಿಧೇಯಕವನ್ನು ಬಲವಾಗಿ ವಿರೋಧಿಸಿ ಇದು ಮುಸ್ಲಿಮರ ಹಕ್ಕುಗಳ ಮೊಟಕು ಮಾಡುವ ಯತ್ನ ಎಂದು ಆರೋಪಿಸಿದರೆ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ನೇತೃತ್ವದಲ್ಲಿ ಎನ್‌ಡಿಎ ಮೈತ್ರಿಕೂಟದ ಸದಸ್ಯರು ವಿಧೇಯಕವನ್ನು ಬಲವಾಗಿ ಸಮರ್ಥಿಸಿಕೊಂಡರು. ಲೋಕಸಭೆಯಲ್ಲಿ ವಿಧೇಯಕ ಮಂಡಿಸಿ ಮಾತನಾಡಿದ ಸಂಸದೀಯ ಖಾತೆ ಸಚಿವ ಕಿರಣ್‌ ರಿಜಿಜು, ‘ಇದು ಯಾವುದೇ ಧರ್ಮದ ವಿರೋಧಿಯೂ ಅಲ್ಲ, ಯಾರ ಆಸ್ತಿಯನ್ನು ಕಿತ್ತುಕೊಳ್ಳುವುದೂ ಇಲ್ಲ. ಒಂದು ವೇಳೆ ಈ ಕಾಯ್ದೆಗೆ ತಿದ್ದುಪಡಿ ಮಾಡದೆ ಹೋದರೆ ಮುಂದೆ ಸಂಸತ್‌ ಕಟ್ಟಡವನ್ನೂ ವಕ್ಫ್ ತನ್ನದೆಂದು ಹೇಳಿಕೊಳ್ಳಬಹುದು ಎಂದು ಹೇಳಿದರು.

Latest Videos

ಇದನ್ನೂ ಓದಿ: ವಕ್ಫ್ ಆಸ್ತಿ ಧರ್ಮ ವಿರೋಧಿಯಲ್ಲ, ಯಾರ ಆಸ್ತಿಯನ್ನೂ ಕಿತ್ತುಕೊಳ್ಳಲ್ಲ: ಸಚಿವ ಕಿರಣ್‌ ರಿಜಿಜು

ಮಸೂದೆ ವಿರೋಧಿಸಿ ಮಾತನಾಡಿದ ಲೋಕಸಭೆಯಲ್ಲಿನ ಕಾಂಗ್ರೆಸ್‌ನ ಉಪನಾಯಕ ಗೌರವ್‌ ಗೊಗೋಯ್‌, ‘ವಕ್ಫ್‌ ಮಸೂದೆಯು ಸಂವಿಧಾನದ ಮೂಲ ರಚನೆ ಮೇಲಿನ ದಾಳಿಯಾಗಿದ್ದು, ಅದರ ನಿಬಂಧನೆಗಳನ್ನು ದುರ್ಬಲಗೊಳಿಸುವ, ಅಲ್ಪಸಂಖ್ಯಾತರ ಮಾನಹಾನಿ ಮಾಡುವ, ಅವರ ಹಕ್ಕುಗಳನ್ನು ಕಸಿಯುವ ಮತ್ತು ಭಾರತೀಯ ಸಮಾಜವನ್ನು ವಿಭಜಿಸುವ ಗುರಿ ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದರು. 

ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್ ಮಾತನಾಡಿ ಸಮಾಜದ ಧ್ರುವೀಕರಣದ ಗುರಿ ಹೊಂದಿರುವ ಈ ಮಸೂದೆಯು ದೇಶದ ಜಾತ್ಯತೀತ ಚಿತ್ರಣಕ್ಕೆ ಧಕ್ಕೆ ತಂದು, ಜಗತ್ತಿಗೆ ತಪ್ಪು ಸಂದೇಶ ರವಾನಿಸುತ್ತದೆ. ತನ್ನ ಕುಸಿಯುತ್ತಿರುವ ಮತಬ್ಯಾಂಕ್‌ ಉಳಿಸಿಕೊಳ್ಳಲು ಬಿಜೆಪಿ ಈ ಮಸೂದೆ ಮಂಡಿಸುತ್ತಿದೆ ಎಂದು ಆರೋಪಿಸಿದರು. ಇನ್ನೊಂದೆಡೆ ಮಸೂದೆಯಲ್ಲಿರುವ ತಿದ್ದುಪಡಿಗಳು ಪಾಸ್ಮಾಂದಾ (ಹಿಂದುಳಿದ ಮುಸ್ಲಿಮರು) ಸಮುದಾಯ, ಬಡವರು ಮತ್ತು ಮಹಿಳೆಯರ ಪರವಾಗಿದೆ ಎಂದು ಕೇಂದ್ರ ಸಚಿವ, ಜೆಡಿಯುದ ಲಲನ್‌ ಸಿಂಗ್‌ ಮಸೂದೆ ಬೆಂಬಲಿಸಿದರು. ಟಿಡಿಪಿಯ ಸಂಸದ ಕೃಷ್ಣಪ್ರಸಾದ್ ತೆನೆಟ್ಟಿ ಮಾತನಾಡಿ, ವಕ್ಫ್‌ ತಿದ್ದುಪಡಿ ಮಸೂದೆಯ ನಿಯಮಗಳನ್ನು ರೂಪಿಸುವಾಗ ಮಂಡಳಿಯ ಸಂಯೋಜನೆಯಲ್ಲಿ ರಾಜ್ಯಗಳಿಗೆ ಬದಲಾವಣೆ ಮಾಡುವ ಅವಕಾಶವನ್ನು ಕೇಂದ್ರ ಸರ್ಕಾರ ಖಚಿತಪಡಿಸಬೇಕು ಎಂದು ಸಲಹೆ ನೀಡಿದರು.
ಬಳಿಕ ಮಸೂದೆ ಪರವಾಗಿ ವಿಪಕ್ಷಗಳ ಅನುಮಾನ, ಟೀಕೆಗೆ ಎಳೆಎಳೆಯಾಗಿ ತಿರುಗೇಟು ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ‘ಮತ ಬ್ಯಾಂಕ್‌ ರಾಜಕೀಯಕ್ಕಾಗಿ, ವಕ್ಫ್‌ ಮಸೂದೆಯು ಧಾರ್ಮಿಕ ವಿಷಯ ಹಾಗೂ ಆಸ್ತಿಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂಬ ಭಯವನ್ನು ಹಬ್ಬಿಸಲಾಗುತ್ತಿದೆ. ಈ ಮುಲಕ ಮುಸ್ಲಿಂ ಸಮುದಾಯದ ದಾರಿ ತಪ್ಪಿಸಲಾಗುತ್ತಿದೆ’ ಎಂದು ಎಂದು ಕಿಡಿಕಾರಿದರು.

ಇನ್ನು ವಕ್ಫ್‌ ಮಂಡಳಿಯಲ್ಲಿ 12 ಮುಸ್ಲಿಮೇತರ ಸದಸ್ಯರ ಸೇರ್ಪಡೆ ಕುರಿತ ಆತಂಕದ ಬಗ್ಗೆ ಮಾತನಾಡಿದ ಶಾ, ‘ಅವರ ಕೆಲಸ ಕೇವಲ ಆಡಳಿತ ಕಾರ್ಯಗಳಿಗೆ ಸೀಮಿತವಾಗಿರುತ್ತದೆ. ಅವರು ದಾನವಾಗಿ ಬಂದ ವಕ್ಫ್‌ ಆಸ್ತಿಗಳು ಕಾನೂನಿನ ಪ್ರಕಾರ ಸರಿಯಾಗಿವೆಯೇ ಎಂಬುದನ್ನು ನೋಡಿಕೊಳ್ಳುತ್ತಾ ಅದರ ನಿರ್ವಹಣೆ ಮೇಲ್ವಿಚಾರಣೆ ಮಾಡುತ್ತಾರೆ. ಧಾರ್ಮಿಕ ಸಂಸ್ಥೆಗಳನ್ನು ನೋಡಿಕೊಳ್ಳುವವರ ಪೈಕಿ ಮುಸ್ಲಿಮೇತರರು ಇರುವುದಿಲ್ಲ ಹಾಗೂ ಅವರು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವುದಿಲ್ಲ’ ಎಂದು ಸ್ಪಷ್ಟನೆ ನೀಡಿದರು. ಜೊತೆಗೆ ಕಾಯ್ದೆ ಪೂರ್ವಾನ್ವಯವಾಗದು ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಕರ್ನಾಟಕ ವಕ್ಫ್‌ ಗದ್ದಲ ಪ್ರಸ್ತಾಪಿಸಿ ಕಾಂಗ್ರೆಸ್‌ಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ತಿರುಗೇಟು!

ವಕ್ಫ್‌ ಕಾಯ್ದೆ ಎಲ್ಲರೂ ಒಪ್ಪೋದು ಕಡ್ಡಾಯ ಮತ ಬ್ಯಾಂಕ್‌ ರಾಜಕೀಯಕ್ಕಾಗಿ, ವಕ್ಫ್‌ ಮಸೂದೆಯು ಧಾರ್ಮಿಕ ವಿಷಯ ಹಾಗೂ ಆಸ್ತಿಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ ಎಂಬ ಭಯವನ್ನು ಹಬ್ಬಿಸಲಾಗುತ್ತಿದೆ ಇದು ಪೂರ್ಣ ಸುಳ್ಳು. ವಕ್ಫ್‌ ತಿದ್ದುಪಡಿ ಕಾಯ್ದೆ ಭಾರತದ ಮತ್ತು ಸಂಸತ್ತಿನ ಕಾಯ್ದೆ. ಇದನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಲೇಬೇಕು.

- ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಸಂಸತ್‌ ಕಟ್ಡಡ ಕೂಡ ಹೋಗ್ತಿತ್ತು

ವಕ್ಫ್‌ ತಿದ್ದುಪಡಿ ಕಾಯ್ದೆ ಯಾವುದೇ ಧರ್ಮದ ವಿರೋಧಿಯೂ ಅಲ್ಲ, ಯಾರ ಆಸ್ತಿಯನ್ನು ಕಿತ್ತುಕೊಳ್ಳುವುದೂ ಇಲ್ಲ. ಒಂದು ವೇಳೆ ಈ ಕಾಯ್ದೆಗೆ ತಿದ್ದುಪಡಿ ಮಾಡದೆ ಹೋದರೆ ಮುಂದೆ ಸಂಸತ್‌ ಕಟ್ಟಡವನ್ನೂ ವಕ್ಫ್ ತನ್ನದೆಂದು ಹೇಳಿಕೊಳ್ಳುವ ಸಾಧ್ಯತೆ ಇತ್ತು.

- ಕಿರಣ್‌ ರಿಜಿಜು, ಸಂಸದೀಯ ಖಾತೆ ಸಚಿವ

ವಕ್ಫ್‌ ವಿಧೇಯಕ ಸಂವಿಧಾನಬಾಹಿರ

ವಕ್ಫ್‌ ಮಸೂದೆ ಸಂವಿಧಾನಬಾಹಿರ, ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ದುರ್ಬಲಗೊಳಿಸುತ್ತದೆ ಮತ್ತು ವೈಯಕ್ತಿಕ ಕಾನೂನನ್ನು ರಾಜ್ಯದ ನಿಯಂತ್ರಣಕ್ಕೆ ತರಲು ಯತ್ನಿಸುತ್ತದೆ. ದೀರ್ಘಕಾಲದಿಂದ ಮುಸ್ಲಿಮರನ್ನು 2ಣೇ ದರ್ಜೆ ಜನರಂತೆ ಪರಿಗಣಿಸಿರುವ ಬಿಜೆಪಿ, ಈಗ ಈ ಮಸೂದೆ ಮೂಲಕ ಅವರ ಆಸ್ತಿ ಗುರಿಯಾಗಿಸಿಕೊಂಡಿದೆ.

-ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ

ಮುಂದೇನು?

ಲೋಕಸಭೆಯಲ್ಲಿ ಚರ್ಚೆ ನಡೆದಿದ್ದು, ಅಂಗೀಕಾರ ಹಂತದಲ್ಲದೆ. ಅಂಗೀಕಾರದ ಬಳಿಕ ಗುರುವಾರ ರಾಜ್ಯಸಭೆಯಲ್ಲೂ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ ಆಗುವ ನಿರೀಕ್ಷೆ ಇದೆ. 8 ಗಂಟೆಗಳ ಕಾಲ ಚರ್ಚೆಗೆ ಅವಕಾಶ ಇರಲಿದೆ. ಬಳಿಕ ಮತದಾನ ನಡೆಯಲಿದೆ. ಮಸೂದೆ ಅಂಗೀಕಾರವಾದರೆ ಸಂಸತ್ತಿನ ಎರಡೂ ಸದನಗಳ ಅನುಮೋದನೆ ಪಡೆದಂತಾಗಲಿದೆ ಹಾಗೂ ರಾಷ್ಟ್ರಪತಿಗಳ ಸಹಿಗೆ ರವಾನೆ ಆಗಲಿದೆ. ರಾಷ್ಟ್ರಪತಿಗಳು ಸಹಿ ಹಾಕಿದ ಬಳಿಕ ಮಸೂದೆಗೆ ಕಾನೂನಿನ ರೂಪ ಸಿಗಲಿದೆ.

ವಕ್ಫ್‌ ಮಸೂದೆ

ಲೋಕಸಭೆ ಸದನದ ಬಲ 543
ಬಹುಮತಕ್ಕೆ 272 
ಎನ್‌ಡಿಎ 295
ಇಂಡಿಯಾ 234
ಇತರರು 14

ರಾಜ್ಯಸಭೆ ಸದನದ ಬಲ 
245 ಬಹುಮತಕ್ಕೆ 
119ಎನ್‌ಡಿಎ 
125ಇಂಡಿಯಾ+ಇತರ 111
ಖಾಲಿ 9

click me!