35 ವಾರಗಳ ಗರ್ಭಿಣಿ ಬುಲ್ಧಾನ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ತಪಾಸಣೆಗೆ ಬಂದಾಗ ಭ್ರೂಣದಲ್ಲಿ ಈ ಅಸಹಜತೆ ಕಂಡುಬಂದಿದೆ.
ಮುಂಬೈ (ಜ.30): ಮಹಾರಾಷ್ಟ್ರದ ಬುಲ್ಧಾನದಲ್ಲಿ ಗರ್ಭಿಣಿಯ 'ಭ್ರೂಣದೊಳಗೆ ಭ್ರೂಣ' ಬೆಳೆಯುವ (fetus in fetu) ಸ್ಥಿತಿ ಪತ್ತೆಯಾಗಿದೆ. ತುಂಬಾ ಅಪರೂಪದ ಸ್ಥಿತಿ ಇದಾಗಿದ್ದು, ನಿಜವಾದ ಭ್ರೂಣದೊಳಗೆ ಮತ್ತೊಂದು ಅಪೂರ್ಣ ಭ್ರೂಣ ಇರುವ ಸ್ಥಿತಿ ಇದಾಗಿದೆ. 35 ವಾರಗಳ ಗರ್ಭಿಣಿ ಬುಲ್ಧಾನ ಜಿಲ್ಲಾ ಮಹಿಳಾ ಆಸ್ಪತ್ರೆಯಲ್ಲಿ ತಪಾಸಣೆಗೆ ಬಂದಾಗ ಭ್ರೂಣದಲ್ಲಿ ಈ ಅಸಹಜತೆ ಕಂಡುಬಂದಿದೆ. ಆಸ್ಪತ್ರೆಯಲ್ಲಿ ಗರ್ಭಿಣಿಯ ಸ್ಕ್ಯಾನಿಂಗ್ ಪರೀಕ್ಷೆಯ ಸಮಯದಲ್ಲಿ ವೈದ್ಯರಿಗೆ ಈ ಸ್ಥಿತಿ ತಿಳಿದುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಐದು ಲಕ್ಷದಲ್ಲಿ ಒಬ್ಬರಿಗೆ ಮಾತ್ರ ಕಾಣಿಸಿಕೊಳ್ಳುವ ತುಂಬಾ ಅಪರೂಪದ ಸ್ಥಿತಿ ಇದು ಎಂದು ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಪ್ರಸಾದ್ ಅಗರ್ವಾಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. ದೇಶದಲ್ಲಿ ಇಲ್ಲಿಯವರೆಗೆ ವರದಿಯಾಗಿರುವ 10-15 ಪ್ರಕರಣಗಳನ್ನು ಒಳಗೊಂಡಂತೆ ಜಗತ್ತಿನಾದ್ಯಂತ ಒಟ್ಟು 200 ಪ್ರಕರಣಗಳು ವರದಿಯಾಗಿವೆ ಎಂದು ಅವರು ಹೇಳಿದರು. ಇದಕ್ಕೂ ಮೊದಲು ವರದಿಯಾಗಿರುವ ಎಲ್ಲಾ ಪ್ರಕರಣಗಳು ಹೆರಿಗೆಯ ನಂತರ ಮಾತ್ರವೇ ಇದು ಗೊತ್ತಾಗಿತ್ತು ಎಂದಿದ್ದಾರೆ.
40 ದಿನದ ಶಿಶುವಿನ ಹೊಟ್ಟೆಯಲ್ಲಿ ಭ್ರೂಣ, ವೈದ್ಯಲೋಕಕ್ಕೆ ಅಚ್ಚರಿ!
ಈ ಮಗುವಿನ ವಿಷಯವನ್ನು ತುಂಬಾ ಎಚ್ಚರಿಕೆಯಿಂದ ಪರಿಗಣಿಸಲಾಗುತ್ತಿದೆ ಮತ್ತು 35 ವಾರಗಳ ಭ್ರೂಣದೊಳಗೆ ಕೆಲವು ಮೂಳೆಗಳು ಮತ್ತು ಮತ್ತೊಂದು ಭ್ರೂಣದಂತೆ ಕಾಣುವ ಒಂದು ಭಾಗ ಬೆಳೆದಿದೆ ಎಂದು ವೈದ್ಯರು ಹೇಳಿದರು. ಇದು ಜಗತ್ತಿನಲ್ಲೇ ಅಪರೂಪದ ಪ್ರಕರಣಗಳಲ್ಲಿ ಒಂದಾಗಿರುವುದರಿಂದ ಖಚಿತಪಡಿಸಿಕೊಳ್ಳಲು ಎರಡನೇ ತಜ್ಞರ ಅಭಿಪ್ರಾಯವನ್ನು ಪಡೆಯಲಾಗಿತ್ತು. ರೇಡಿಯಾಲಜಿಸ್ಟ್ ಡಾ. ಶ್ರುತಿ ತೋರಟ್ ಪ್ರಕರಣವನ್ನು ದೃಢಪಡಿಸಿದ್ದಾರೆ ಎಂದು ಡಾ. ಪ್ರಸಾದ್ ಮಾಧ್ಯಮಗಳಿಗೆ ತಿಳಿಸಿದರು. ಅದೇ ಸಮಯದಲ್ಲಿ ಗರ್ಭಿಣಿಯ ಹೆರಿಗೆಯನ್ನು ಸುರಕ್ಷಿತವಾಗಿರಿಸಲು ಮತ್ತು ಮುಂದಿನ ಕ್ರಮಗಳಿಗಾಗಿ ಛತ್ರಪತಿ ಸಂಭಾಜಿನಗರದ ವೈದ್ಯಕೀಯ ಸಂಸ್ಥೆಗೆ ರವಾನಿಸಲಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬ್ಲಾಕ್ ಆದ ಟಾಯ್ಲೆಟ್ ಪೈಪ್ ಒಡೆದ ಮಾಲೀಕರಿಗೆ ಶಾಕ್: ಡಿಎನ್‌ಎ ಪರೀಕ್ಷೆಗೆ ಮುಂದಾದ ಪೊಲೀಸರು