ಉತ್ತರದಿಂದ ಕಾಶ್ಮೀರಿ ಉಗ್ರರು ಮತ್ತು ಇತ್ತ ದಕ್ಷಿಣ ಭಾರತದಲ್ಲಿ ನೆಲೆಯೂರುತ್ತಿರುವ ಐಸಿಸ್ ಉಗ್ರರ ದಾಳಿಯ ಆತಂಕ| ಉಗ್ರಾತಂಕ ನಡುವೆಯೇ 71ನೇ ಗಣರಾಜ್ಯೋತ್ಸವ|
ನವದೆಹಲಿ[ಜ.26]: ಅತ್ತ ಉತ್ತರದಿಂದ ಕಾಶ್ಮೀರಿ ಉಗ್ರರು ಮತ್ತು ಇತ್ತ ದಕ್ಷಿಣ ಭಾರತದಲ್ಲಿ ನೆಲೆಯೂರುತ್ತಿರುವ ಐಸಿಸ್ ಉಗ್ರರ ದಾಳಿಯ ಆತಂಕದ ನಡುವೆಯೇ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ರಾಷ್ಟ್ರ ರಾಜಧಾನಿ ದೆಹಲಿ ಸಜ್ಜಾಗಿದೆ. ಈ ತಿಂಗಳೊಂದರಲ್ಲೇ ಕಾಶ್ಮೀರದಲ್ಲಿ 10ಕ್ಕೂ ಹೆಚ್ಚು ಉಗ್ರರ ದಮನ ಮತ್ತು ದೆಹಲಿ, ಕರ್ನಾಟಕ, ತಮಿಳುನಾಡಿನಲ್ಲಿ 20ಕ್ಕೂ ಹೆಚ್ಚು ಶಂಕಿತ ಐಸಿಸ್ ಉಗ್ರರ ವಶದ ಹಿನ್ನೆಲೆಯಲ್ಲಿ, ಈ ಬಾರಿ ದೆಹಲಿ ಗಣರಾಜ್ಯ ಸಂಭ್ರಮಾಚರಣೆಗೆ ಹಿಂದೆಂದಿಗಿಂತಲೂ ಹೆಚ್ಚಿನ ದಾಳಿ ಭೀತಿ ಕಾಡಿದೆ.
ಅಹಿಂಸೆ ಮಾರ್ಗ ಮರೆಯಬೇಡಿ: ಯುವಕರಿಗೆ ಕರೆ ನೀಡಿದ ರಾಷ್ಟ್ರಪತಿ!
ಹೀಗಾಗಿಯೇ ದೆಹಲಿಯಲ್ಲಿ ಎಲ್ಲೆಡೆ ಶಾರ್ಪ್ ಶೂಟರ್ಸ್, ಸ್ನಿಪ್ಪರ್ಸ್ಸ್, ಎನ್‌ಎಸ್‌ಜಿ ಕಮಾಂಡೋ, ಡ್ರೋನ್, ಸಿಸಿಟೀವಿಗಳ ಮೂಲಕ ಭಾರೀ ಭದ್ರತೆ ಒದಗಿಸಲಾಗಿದೆ. ರಾಜಪಥ ಸುತ್ತಮುತ್ತಲ ಪ್ರದೇಶವನ್ನು ವೈಮಾನಿಕ ಹಾರಾಟ ನಿರ್ಬಂಧ ವಲಯವಾಗಿ ಘೋಷಿಸಲಾಗಿದೆ. ಜೊತೆಗೆ ಫೇಸ್ ರೆಕಗ್ನಿಷನ್ ತಂತ್ರಜ್ಞಾನವನ್ನೂ ಬಳಸಿಕೊಂಡು ಯಾವುದೇ ಅಹಿತಕರ ಘಟನೆ ನಡೆದಯಂತೆ ನೋಡಿಕೊಳ್ಳಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. ದೆಹಲಿಯಾದ್ಯಂತ 10000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸುವ ಮೂಲಕ ಅಭೂತಪೂರ್ವ ಬಂದೋಬಸ್ತ್ ಮಾಡಲಾಗಿದೆ.
ಇನ್ನು ಎಂದಿನಂತೆ ರಾಜಪಥದಲ್ಲಿ ಮುಖ್ಯ ಕಾರ್ಯಕ್ರಮ ಆಯೋಜನೆಗೊಂಡಿದೆ. ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಗೇಟ್‌ನಲ್ಲಿರುವ ಅಮರ ಜವಾನ್ ಜ್ಯೋತಿ ಬದಲಿಗೆ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ನಮಿಸಿ ರಾಜಪಥಕ್ಕೆ ಆಗಮಿಸಲಿದ್ದಾರೆ. ತದನಂತರ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಆಗಮನವಾಗಲಿದೆ. ಈ ಬಾರಿಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬ್ರೆಜಿಲ್ ಅಧ್ಯಕ್ಷ ಜಿಯರ್ ಮೆಸ್ಸಿಯಾಸ್ ಬೊಲ್ಸೊನಾರೋ ಅವರು ಭಾಗವಹಿಸಲಿದ್ದಾರೆ. ಈ ವೇಳೆ ಸೇನಾ ಪದಕಗಳನ್ನು ರಾಷ್ಟ್ರಪತಿಗಳು ಪ್ರದಾನ ಮಾಡಲಿದ್ದಾರೆ.
ಭಾರತ-ಬ್ರೆಜಿಲ್ ನಡುವೆ 15 ಪ್ರಮುಖ ಒಪ್ಪಂದಗಳಿಗೆ ಸಹಿ!
ಗಣ್ಯರು ಹಾಗೂ ರಾಜಪಥದ ಎರಡೂ ಬದಿಯಲ್ಲಿ ಜಮಾವಣೆಗೊಳ್ಳುವ ಸಹಸ್ರಾರು ಜನರ ಸಮ್ಮುಖ ದೇಶದ ಸೇನಾ ಸಾಮರ್ಥ್ಯ, ಸಾಂಸ್ಕೃತಿಕ ವೈವಿಧ್ಯತೆ, ಸಾಮಾಜಿಕ- ಆರ್ಥಿಕ ಪ್ರಗತಿಯನ್ನು ಅನಾವರಣ ಮಾಡಲಾಗುತ್ತದೆ. ಸೇನಾಪಡೆಗಳ ಪಥ ಸಂಚಲನ, ಸ್ತಬ್ಧಚಿತ್ರಗಳ ಪ್ರದರ್ಶನ ಕೂಡ ಪ್ರಮುಖ ಆಕರ್ಷಣೆಯಾಗಿರಲಿದೆ. 16 ರಾಜ್ಯ- ಕೇಂದ್ರಾಡಳಿತ ಪ್ರದೇಶಗಳು ಮತ್ತು ಕೇಂದ್ರ ಸರ್ಕಾರದ ಆರು ಸಚಿವಾಲಯ/ಇಲಾಖೆಗಳು ಸ್ತಬ್ಧಚಿತ್ರಗಳನ್ನು ರೂಪಿಸಿವೆ. ಕರ್ನಾಟಕ ಸರ್ಕಾರ ಬಸವಣ್ಣನವರ ಅನುಭವ ಮಂಟಪವನ್ನು ಪ್ರದರ್ಶಿಸಲು ಸಜ್ಜಾಗಿದೆ. ಎನ್‌ಸಿಸಿ ಬಾಲಕರ ಪಡೆಯನ್ನು ದಾವಣಗೆರೆ ಜಿಲ್ಲೆ ಹರಿಹರದ ಶ್ರೀಷ್ಮಾ ಹೆಗಡೆ ಅವರು ಮುನ್ನಡೆಸಲಿದ್ದಾರೆ.