ರೈತರ ಜತೆ ಕೇಂದ್ರದ ಸಂಧಾನ ವಿಫಲ!

By Suvarna News  |  First Published Dec 2, 2020, 7:19 AM IST

 ರೈತರ ಜತೆ ಕೇಂದ್ರದ ಸಂಧಾನ ವಿಫಲ| ರೈತರ ಬೇಡಿಕೆ ಪರಿಶೀಲಿಸಲು 5 ಸದಸ್ಯರ ಉನ್ನತ ಸಮಿತಿ ನೇಮಿಸುವುದಾಗಿ ಹೇಳಿದ ಕೇಂದ್ರ| ಸಮಿತಿಗೆ ಒಪ್ಪದ ರೈತರು| ಕೇಂದ್ರದ 3 ಕೃಷಿ ಸುಧಾರಣೆ ಕಾಯ್ದೆ ರದ್ದುಪಡಿಸುವಂತೆ ಬಿಗಿಪಟ್ಟು| ಪ್ರತಿಭಟನೆ ಮುಂದುವರಿಕೆ| ನಾಳೆ ಮತ್ತೊಂದು ಸಭೆ| 3 ಮಂತ್ರಿಗಳಿಂದ ಮನವೊಲಿಕೆ ಕಸರತ್ತು


ನವದೆಹಲಿ(ಡಿ.02): ಕೇಂದ್ರ ಸರ್ಕಾರ ಜಾರಿಗೆ ತಂದಿರುವ 3 ಕೃಷಿ ಸುಧಾರಣೆ ಕಾಯ್ದೆಗಳನ್ನು ರದ್ದುಪಡಿಸುವಂತೆ ಬಿಗಿಪಟ್ಟು ಹಿಡಿದು ಪ್ರತಿಭಟಿಸುತ್ತಿರುವ ರೈತರ ಮನವೊಲಿಸಲು ಕೇಂದ್ರ ಸರ್ಕಾರ ನಡೆಸಿದ ಪ್ರಯತ್ನ ವಿಫಲವಾಗಿದೆ. 35 ರೈತ ಸಂಘಟನೆಗಳ ಪ್ರತಿನಿಧಿಗಳ ಜೊತೆಗೆ ಕೇಂದ್ರದ ಮೂವರು ಸಚಿವರು ಮಂಗಳವಾರ ಸಭೆ ನಡೆಸಿ, ರೈತರ ಬೇಡಿಕೆಗಳ ಪರಿಶೀಲನೆಗೆ 5 ಸದಸ್ಯರ ಉನ್ನತ ಸಮಿತಿ ರಚಿಸುವುದಾಗಿ ಹೇಳಿದರು. ಇದಕ್ಕೆ ಬಗ್ಗದ ರೈತ ಸಂಘಟನೆಗಳು ಪ್ರತಿಭಟನೆ ಮುಂದುವರೆಸುವುದಾಗಿ ಪ್ರಕಟಿಸಿದವು.

ರೈತರ ಮನವೊಲಿಕೆ ಪ್ರಯತ್ನವನ್ನು ಮುಂದುವರೆಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ, ಡಿ.3ರ ಗುರುವಾರ ಮತ್ತೊಂದು ಸುತ್ತಿನ ಸಭೆ ನಡೆಸುವುದಾಗಿ ತಿಳಿಸಿದೆ. ಅದಕ್ಕೆ ರೈತ ಸಂಘಟನೆಗಳೂ ಒಪ್ಪಿಕೊಂಡಿವೆ. ಆದರೆ, ಕೃಷಿ ಸುಧಾರಣೆಗೆ ಸಂಬಂಧಿಸಿದ 3 ವಿವಾದಿತ ಕಾಯ್ದೆಗಳನ್ನು ರದ್ದುಪಡಿಸುವವರೆಗೂ ತಮ್ಮ ಪ್ರತಿಭಟನೆ ಮುಂದುವರೆಯಲಿದೆ ಎಂದು ಪುನರುಚ್ಚಾರ ಮಾಡಿವೆ.

Latest Videos

undefined

ಜಲಫಿರಂಗಿ ಪರಿಣಾಮ ಪ್ರಾಣ ಕಳೆದುಕೊಂಡ ರೈತ, ಹೊಣೆಯಾರು?

3 ಸಚಿವರಿಂದ ಮನವೊಲಿಕೆ ಕಸರತ್ತು:

ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌, ರೈಲ್ವೆ ಮತ್ತು ವಾಣಿಜ್ಯ ಸಚಿವ ಪೀಯೂಷ್‌ ಗೋಯಲ್‌ ಹಾಗೂ ವಾಣಿಜ್ಯ ಖಾತೆ ರಾಜ್ಯ ಸಚಿವರೂ ಆಗಿರುವ ಪಂಜಾಬ್‌ ಮೂಲದ ಸಂಸದ ಸೋಮ್‌ ಪ್ರಕಾಶ್‌ ಅವರು ವಿಜ್ಞಾನ ಭವನದಲ್ಲಿ ರೈತ ಸಂಘಟನೆಗಳ ಪ್ರತಿನಿಧಿಗಳ ಜೊತೆ ಸತತ ಮೂರು ಗಂಟೆಗಳ ಸಭೆ ನಡೆಸಿ ಮನವೊಲಿಸಲು ಯತ್ನಿಸಿದರು. ಆದರೆ, ರೈತ ಸಂಘಟನೆಗಳ ಪ್ರತಿನಿಧಿಗಳು ಸೊಪ್ಪು ಹಾಕಲಿಲ್ಲ.

ಸಭೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಭಾರತ್‌ ಕಿಸಾನ್‌ ಯೂನಿಯನ್‌ ಅಧ್ಯಕ್ಷ ಜೋಗಿಂದರ್‌ ಸಿಂಗ್‌ ಉಗ್ರಹಾನ್‌, ಸಭೆ ಅಪೂರ್ಣವಾಗಿದೆ. ಡಿ.3ಕ್ಕೆ ಮತ್ತೆ ಸಭೆ ಕರೆದಿದ್ದಾರೆ. ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸಮಿತಿ ರಚಿಸುವ ಸರ್ಕಾರದ ಪ್ರಸ್ತಾಪವನ್ನು ತಿರಸ್ಕರಿಸಿದ್ದೇವೆ ಎಂದು ತಿಳಿಸಿದರು.

ಪ್ರತಿಭಟನಾ ನಿರತ ಭಾರತದ ರೈತರ ಪರ ನಿಂತ ಕೆನಡಾ ಪ್ರಧಾನಿ!

ಶಾ, ರಾಜನಾಥ್‌ ಮ್ಯಾರಥಾನ್‌ ಸಭೆ:

ಇದಕ್ಕೂ ಮುನ್ನ ಕೇಂದ್ರ ಸಚಿವರಾದ ಅಮಿತ್‌ ಶಾ, ರಾಜನಾಥ್‌ ಸಿಂಗ್‌, ತೋಮರ್‌, ಗೋಯಲ್‌ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ರೈತರ ಹೋರಾಟದ ಕುರಿತು ಸುದೀರ್ಘ ಸಭೆ ನಡೆಸಿದ್ದರು. ಆ ಸಭೆಯಲ್ಲಿ ರೈತರ ಮನವೊಲಿಸಲು ಕೇಂದ್ರ ಸರ್ಕಾರ ಅನುಸರಿಸಬೇಕಾದ ನೀತಿಗಳ ಬಗ್ಗೆ ಚರ್ಚಿಸಿದರು ಎಂದು ತಿಳಿದುಬಂದಿದೆ.

ಪ್ರತಿಭಟನೆ ಇನ್ನಷ್ಟು ತೀವ್ರ, ಆದರೆ ಶಾಂತ:

ಈ ನಡುವೆ, ದೆಹಲಿಯ ಸುತ್ತ ಎಲ್ಲಾ ದಿಕ್ಕುಗಳಲ್ಲಿರುವ ಪ್ರಮುಖ ರಸ್ತೆಗಳನ್ನು ಬಂದ್‌ ಮಾಡಿ ರೈತರು ನಡೆಸುತ್ತಿರುವ ಪ್ರತಿಭಟನೆ ಇನ್ನಷ್ಟುತೀವ್ರಗೊಂಡಿದ್ದು, ವಿವಿಧ ರಾಜ್ಯಗಳಿಂದ ಮತ್ತಷ್ಟುರೈತರು ಪ್ರತಿಭಟನೆಯ ಸ್ಥಳಕ್ಕೆ ಆಗಮಿಸುತ್ತಿದ್ದಾರೆ. ಮುಖ್ಯವಾಗಿ ಪಂಜಾಬ್‌ ಹಾಗೂ ಹರ್ಯಾಣ ರಾಜ್ಯಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರತಿಭಟನೆ ಶಾಂತವಾಗಿ ನಡೆಯುತ್ತಿದೆ.

ರೈತರ ಬೇಡಿಕೆ ಏನು?

ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ 3 ಕೃಷಿ ಸುಧಾರಣೆ ಸಂಬಂಧಿ ಕಾಯ್ದೆಗಳನ್ನು ರದ್ದುಪಡಿಸಬೇಕು. ಈ ಕಾಯ್ದೆಗಳು ಕನಿಷ್ಠ ಬೆಂಬಲ ಬೆಲೆ ಯೋಜನೆಯನ್ನು ಹಂತಹಂತವಾಗಿ ದುರ್ಬಲಗೊಳಿಸಿ ನಿಷ್ಕಿ್ರಯ ಮಾಡುತ್ತವೆ. ನಂತರ ಕೃಷಿ ಕ್ಷೇತ್ರ ಕಾರ್ಪೊರೇಟ್‌ ಕುಳಗಳ ಕೈಗೆ ಸೇರುತ್ತದೆ.

ಕೇಂದ್ರದ ಪ್ರಸ್ತಾಪವೇನು?

ರೈತರ ಬೇಡಿಕೆಗಳನ್ನು ಪರಿಶೀಲಿಸಲು 5 ಮಂದಿ ಸದಸ್ಯರ ಉನ್ನತ ಸಮಿತಿ ರಚಿಸಲಾಗುವುದು. 35ಕ್ಕೂ ಹೆಚ್ಚು ರೈತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿರುವುದರಿಂದ ಎಲ್ಲ ಸಂಘಟನೆಯ ಪ್ರತಿನಿಧಿಗಳ ಜೊತೆ ಮಾತುಕತೆ ನಡೆಸುವುದು ಕಷ್ಟ. ಕೆಲವೇ ರೈತ ಮುಖಂಡರು ಮುಂದೆ ಬರಬೇಕು.

'ದೆಹಲಿ ಬಿಟ್ಟು ಕದಲಲ್ಲ, ನಿರ್ಣಾಯಕ ಸಮರಕ್ಕೆಂದೇ ರಾಜಧಾನಿಗೆ ಬಂದಿದ್ದೇವೆ'

ರೈತ ಸಂಘಟನೆಗಳ ಆತಂಕ

ಸರ್ಕಾರ ಕೆಲವೇ ಮುಖಂಡರನ್ನು ಮಾತುಕತೆಗೆ ಕರೆದು ರೈತ ಸಂಘಟನೆಗಳನ್ನು ಒಡೆಯಲು ಯತ್ನಿಸಬಹುದು ಎಂಬ ಆತಂಕ ರೈತ ಸಂಘಟನೆಗಳಲ್ಲಿ ಮೂಡಿದೆ. ಹೀಗಾಗಿ ಪ್ರತಿಭಟನಾನಿರತ ಎಲ್ಲಾ 35ಕ್ಕೂ ಹೆಚ್ಚು ರೈತ ಸಂಘಟನೆಗಳ ಜೊತೆಗೂ ಸರ್ಕಾರ ಮಾತುಕತೆ ನಡೆಸಬೇಕೆಂದು ಮುಖಂಡರು ಪಟ್ಟು ಹಿಡಿದಿದ್ದಾರೆ.

ನಾವು ಸಮಸ್ಯೆ ಬಗೆಹರಿಸಲು ಮಾತುಕತೆ ನಡೆಸುವುದಕ್ಕೆ ಸಿದ್ಧರಿದ್ದೇವೆ. ಕಾಯ್ದೆಯಲ್ಲಿನ ನಿರ್ದಿಷ್ಟ ಸಮಸ್ಯೆಗಳ ಬಗ್ಗೆ ರೈತರು ಪ್ರಸ್ತಾಪಿಸಿದರೆ ಉತ್ತರಿಸುತ್ತೇವೆ.

- ನರೇಂದ್ರ ಸಿಂಗ್‌ ತೋಮರ್‌, ಕೇಂದ್ರ ಕೃಷಿ ಸಚಿವ

click me!