ಕೃಷಿ ಕಾಯ್ದೆಗಳ ವಿರುದ್ಧ ರಾಷ್ಟ್ರಪತಿಗೆ ಕಾಂಗ್ರೆಸ್‌ ದೂರು

By Kannadaprabha NewsFirst Published Dec 25, 2020, 10:57 AM IST
Highlights

ದೇಶದಲ್ಲಿ ಪ್ರಜಾಪ್ರಭುತ್ವವೇ ಇಲ್ಲ, ಅದು ಕೇವಲ ಕಲ್ಪನೆಯಷ್ಟೇ | ರೈತರು, ಕಾರ್ಮಿಕರ ವಿರುದ್ಧ ಯಾವುದೇ ಶಕ್ತಿ ನಿಲ್ಲಲಾಗದು | ಕೇಂದ್ರ ಸರ್ಕಾರದ ವಿರುದ್ಧ ರಾಹುಲ್‌ ಗಾಂಧಿ ತೀವ್ರ ವಾಗ್ದಾಳಿ

ನವದೆಹಲಿ(ಡಿ.25): ಭಾರತದಲ್ಲಿ ಪ್ರಜಾಪ್ರಭುತ್ವ ಎಂಬುದೇ ಇಲ್ಲ. ಒಂದು ವೇಳೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿದ್ದೇವೆ ಎಂದು ಭಾವಿಸಿದ್ದರೆ ಅದು ಕೇವಲ ಕಲ್ಪನೆಯಷ್ಟೇ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹರಿಹಾಯ್ದಿದ್ದಾರೆ.

ಕೃಷಿ ಕಾಯ್ದೆ ಹಿಂಪಡೆಯುವಂತೆ ಒತ್ತಾಯಿಸಿ 2 ಕೋಟಿ ರೈತರು ಸಹಿ ಹಾಕಿರುವ ಪತ್ರವೊಂದನ್ನು ಗುರುವಾರ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರಿಗೆ ಹಸ್ತಾಂತರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಹುಲ್‌ ಗಾಂಧಿ ‘ಹೊಸ ಕೃಷಿ ಕಾಯ್ದೆ ರೈತ ವಿರೋಧಿ. ಇದರಿಂದ ರೈತರು ಮತ್ತು ಕಾರ್ಮಿಕರು ಸಂಕಷ್ಟಕ್ಕೆ ತುತ್ತಾಗಲಿದ್ದಾರೆ ಎಂದು ರಾಷ್ಟ್ರಪತಿಗೆ ತಿಳಿಸಿದ್ದೇವೆ.

ಕೃಷಿ ಕಾಯ್ದೆ ವಿರೋಧಿಸಿ ರೈತರಿಂದ ಉಪವಾಸ, ಒಲೆ ಹಚ್ಚದಂತೆ ಕರೆ!

ಸರ್ಕಾರ ಮಾತ್ರ ಕಾಯ್ದೆ ರೈತ ಪರ ಎನ್ನುತ್ತಿದೆ, ಆದರೆ ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿರುವುದನ್ನು ಇಡೀ ದೇಶ ನೋಡುತ್ತಿದೆ. ಕಾಯ್ದೆ ರದ್ದಾಗುವವರೆಗೂ ರೈತರು ಪ್ರತಿಭಟನಾ ಸ್ಥಳದಿಂದ ಹಿಂದಕ್ಕೆ ಸರಿಯುವುದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣವೇ ಸಂಸತ್ತಿನ ಜಂಟಿ ಅಧಿವೇಶನ ಕರೆದು ಕಾಯ್ದೆ ರದ್ದು ಮಾಡಬೇಕು’ ಎಂದು ಆಗ್ರಹಿಸಿದರು.

ಅಲ್ಲದೆ ರೈತರು ಮತ್ತು ಕಾರ್ಮಿಕರ ವಿರುದ್ಧ ಯಾವುದೇ ಶಕ್ತಿ ಪ್ರತಿರೋಧ ವ್ಯಕ್ತಪಡಿಸಲಾಗದು ಎಂದರು. ಈ ನಿಯೋಗದಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಗುಲಾಂ ನಬಿ ಆಜಾದ್‌, ಕಾಂಗ್ರೆಸ್‌ ಲೋಕಸಭೆ ನಾಯಕ ಅಧೀರ್‌ ರಂಜನ್‌ ಚೌಧರಿ ಸೇರಿದಂತೆ ಇನ್ನಿತರರು ಇದ್ದರು.

click me!