ಮಾ. 26ಕ್ಕೆ ಭಾರತ ಬಂದ್‌ಗೆ ಕರೆ!

By Kannadaprabha NewsFirst Published Mar 11, 2021, 8:10 AM IST
Highlights

ಕೃಷಿ ಕಾಯ್ದೆ ವಿರೋಧಿ ಹೋರಾಟಕ್ಕೆ 4 ತಿಂಗಳು| ಮಾ.26ಕ್ಕೆ ಭಾರತ ಬಂದ್‌| ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರುದ್ಧ ಕೆಲವು ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳ ಮಾ.15ರಂದು ದೇಶವ್ಯಾಪಿ ಪ್ರತಿಭಟನೆ

ನವದೆಹಲಿ(ಮಾ.11): ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ದೆಹಲಿಯ ಗಡಿಗಳಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ 4 ತಿಂಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ರೈತ ಸಂಘಟನೆಗಳು ಮಾ.26ರಂದು ಭಾರತ ಬಂದ್‌ಗೆ ಕರೆ ನೀಡಿವೆ.

ಇದೇ ವೇಳೆ ಪೆಟ್ರೋಲ್‌, ಡೀಸೆಲ್‌ ದರ ಏರಿಕೆ ವಿರುದ್ಧ ಕೆಲವು ಕಾರ್ಮಿಕ ಸಂಘಟನೆಗಳು ಮತ್ತು ರೈತ ಸಂಘಟನೆಗಳು ಮಾ.15ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲಿವೆ ಎಂದು ರೈತ ಸಂಘಟನೆಗಳು ತಿಳಿಸಿವೆ. ಡಿಸೆಂಬರ್‌ 8ರಂದು ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ದೇಶಾದ್ಯಂತ ಪ್ರತಿಭಟನೆಗೆ ಕರೆ ನೀಡಿದ್ದವು.

ಈ ಮುಷ್ಕರಕ್ಕೆ ಕಾಂಗ್ರೆಸ್‌, ಎಡರಂಗ, ತೃಣಮೂಲ ಕಾಂಗ್ರೆಸ್‌ ಸೇರಿದಂತೆ ಹಲವು ರಾಜಕೀಯ ಪಕ್ಷಗಳೂ ಬೆಂಬಲ ಘೋಷಿಸಿದ್ದವು.

ಇನ್ನೂ ಮೂರೂವರೆ ವರ್ಷ ಪ್ರತಿಭಟನೆಗೆ ನಾವು ಸಿದ್ಧ: ರೈತ ನಾಯಕ ಟಿಕಾಯತ್‌

ಕೃಷಿ ಕಾಯ್ದೆ ವಿರೋಧಿಸಿ ಇನ್ನೂ ಮೂರೂವರೆ ವರ್ಷ (ಮೋದಿ 2.0 ಸರ್ಕಾರದ ಉಳಿದ ಅವಧಿ) ದೆಹಲಿ ಗಡಿಗಳಲ್ಲಿ ಕುಳಿತು ಪ್ರತಿಭಟನೆ ನಡೆಸಲು ನಾವು ಸಿದ್ಧ. ಯಾವುದೇ ಕಾರಣಕ್ಕೂ ರೈತ ಚಳವಳಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ರೈತ ನಾಯಕ ನರೇಂದ್ರ ಟಿಕಾಯತ್‌ ಹೇಳಿದ್ದಾರೆ.

ನರೇಂದ್ರ ಟಿಕಾಯತ್‌ ರೈತ ಆಂದೋಲನದಲ್ಲಿ ಮುಂಚೂಣಿ ಪಾತ್ರ ವಹಿಸಿರುವ ರಾಕೇಶ್‌ ಟಿಕಾಯತ್‌ ಅವರ ಕಿರಿಯ ಸಹೋದರ. ರೈತ ಹೋರಾಟದ ಬಗ್ಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ‘ಹಲವು ತಂತ್ರಗಳನ್ನು ಬಳಸಿ ಪ್ರತಿಭಟನೆ ಹತ್ತಿಕ್ಕಬಹುದು ಎಂಬ ತಪ್ಪು ಗ್ರಹಿಕೆಯಲ್ಲಿ ಸರ್ಕಾರ ಇದೆ. ಆದರೆ ಈ ಪ್ರತಿಭಟನೆಯ ದಿಕ್ಕುತಪ್ಪಿಸಲು ಸಾಧ್ಯವೇ ಇಲ್ಲ. ಸರ್ಕಾರ ನಮ್ಮ ಬೇಡಿಕೆ ಈಡೇರಿಸುವವರೆಗೂ ಪ್ರತಿಭಟನೆ ಮುಂದುವರೆಯುತ್ತದೆ.

ಮೋದಿ ಸರ್ಕಾರದ ಈ ಅವಧಿಯು ಇನ್ನು ಮೂರೂವರೆ ವರ್ಷದಲ್ಲಿ ಮುಕ್ತಾಯಗೊಳ್ಳಲಿದೆ. ಅಲ್ಲಿಯವರೆಗೂ ನಾವು ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಹೇಳಿದರು.

click me!