
ಚಂಫೈ (ಮಾ.11): ಕಾನೂನಿನ ಪ್ರಕಾರ ಮೊಣಕಾಲಿನ ಕೆಳಗೆ ಮಾತ್ರವೇ ಗುಂಡು ಹೊಡೆಯಬಹುದು, ಅದೂ ಕೂಡಾ ಅತ್ಯಂತ ಗಂಭೀರ ಪರಿಸ್ಥಿತಿಯಲ್ಲಿ. ಆದರೆ ಇದೀಗ ಪರಿಸ್ಥಿತಿಯೇ ಬೇರೆ. ಪ್ರತಿಭಟನಾಕಾರರು ಸಾಯುವವರೆಗೂ ಗುಂಡಿಕ್ಕಿ ಎಂದು ನಮಗೆ ಆದೇಶಿಸಲಾಗಿತ್ತು. ಆದರೆ ನಮ್ಮದೇ ನಾಗರಿಕರು ಶಾಂತಿಯುತ ಪ್ರತಿಭಟನೆ ನಡೆಸುವಾಗ ನಾವು ಅವರ ಮೇಲೆ ಗುಂಡಿಕ್ಕುವುದಾದರೂ ಹೇಗೆ? ನಾವು ಗುಂಡಿನ ದಾಳಿ ಸಾಧ್ಯವಿಲ್ಲ ಎಂದು ಬಿಟ್ಟೆವು.
ಮಾರನೇ ದಿನ ಮತ್ತೆ ನಮ್ಮ ಹಿರಿಯ ಅಧಿಕಾರಿ ಬಂದು, ಗುಂಡಿನ ದಾಳಿ ಮಾಡುವೆಯೋ? ಇಲ್ಲವೋ? ಈ ಎಂದು ಮರುಪ್ರಶ್ನೆ ಹಾಕಿದ್ದ. ಬೇರೆ ದಾರಿ ಕಾಣದೆ ನಾನು ಪೊಲೀಸ್ ಹುದ್ದೆಗೆ ರಾಜೀನಾಮೆ ನೀಡಿದೆ, ಭಾರತಕ್ಕೆ ಪಲಾಯನ ಮಾಡಿದೆ...
ಇದು ನೆರೆಯ ಮ್ಯಾನ್ಮಾರ್‌ನಿಂದ ಇತ್ತೀಚೆಗೆ ಭಾರತಕ್ಕೆ ರಹಸ್ಯವಾಗಿ ಪಲಾಯನ ಮಾಡಿದ ಥಾ ಪೆಂಗ್ ಎಂಬ ಪೊಲೀಸ್ ಅಧಿಕಾರಿಯ ಕಥೆ.
ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಸರ್ಕಾರ ಇತ್ತೀಚೆಗೆ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಬಳಿಕ, ಪ್ರಜಾಪ್ರಭುತ್ವ ಪರ ಹೋರಾಟಗಾರರು ಬೀದಿಗೆ ಬಂದಿದ್ದಾರೆ. ಈ ವೇಳೆ ಪ್ರತಿಭಟನೆ ಹತ್ತಿಕ್ಕಲು ಸೇನೆ ಪೊಲೀಸರನ್ನು ಬಳಸಿಕೊಂಡು ಗುಂಡಿನ ದಾಳಿ ನಡೆಸುತ್ತಿದ್ದೆ. ಇಂಥ ದಾಳಿಯಲ್ಲಿ ಈಗಾಗಲೇ 70ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಆದರೆ ಕೆಲ ಪೊಲೀಸರು ಅಮಾಯಕರ ಮೇಲೆ ದಾಳಿ ನಡೆಸಲು ಒಪ್ಪದೆ, ಹುದ್ದೆಗೆ ರಾಜೀನಾಮೆ ನೀಡುತ್ತಿದ್ದಾರೆ. ಆದರೆ ಹೀಗೆ ರಾಜೀನಾಮೆ ನೀಡಿದವರಿಗೆ ಸೇನೆ ಕಿರುಕುಳ ನೀಡುತ್ತಿರುವ ಕಾರಣ, ಬಹಳಷ್ಟುಜನ ತಲೆ ಮರೆಸಿಕೊಂಡಿದ್ದಾರೆ. ಇನ್ನೊಂದಿಷ್ಟುಜನ ಭಾರತಕ್ಕೆ ಪಲಾಯನ ಮಾಡಿದ್ದಾರೆ. ಅಂಥವರ ಪೈಕಿ ಪೆಂಗ್ ಕೂಡಾ ಒಬ್ಬರು.
ರಾಜೀನಾಮೆ ನೀಡಿದ ಬಳಿಕ, ಆನ್‌ಲೈನ್ ಮೂಲಕವೇ ಪ್ರಜಾಪ್ರಭುತ್ವ ಹೋರಾಟಗಾರರನ್ನು ಸಂಪರ್ಕಿಸಿ ಭಾರತದ ಮಿಜೋರಾಂ ತಲುಪುವ ಬಗ್ಗೆ ಮಾಹಿತಿ ಪಡೆದುಕೊಂಡೆ. ಅದರಂತೆ 3 ದಿನ ಬರಿ ರಾತ್ರಿ ವೇಳೆ ಮಾತ್ರ ಪ್ರಯಾಣಿಸುವ ಮೂಲಕ ರಹಸ್ಯವಾಗಿ ಭಾರತಕ್ಕೆ ಪಲಾಯನ ಮಾಡಿದೆ ಎಂದು ಪೆಂಗ್, ಸುದ್ದಿಸಂಸ್ಥೆಯೊಂದಕ್ಕೆ ಮಾಹಿತಿ ನೀಡಿದ್ದಾರೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ