ರೈತ ಪ್ರತಿಭಟನೆ ಕರಾಳ ಘಟನೆ ಬೆನ್ನಲ್ಲೇ ಮತ್ತೊಂದು ಟ್ರಾಕ್ಟರ್ ರ‍್ಯಾಲಿ ಘೋಷಿಸಿದ ಟಿಕಾಯತ್!

By Suvarna NewsFirst Published Jun 26, 2021, 7:02 PM IST
Highlights
  • ರೈತ ಪ್ರತಿಭಟನೆಗೆ ಚುರುಕು ನೀಡಲು ಮತ್ತೊಂದು ಟ್ರಾಕ್ಟರ್ ರ‍್ಯಾಲಿ ಘೋಷಣೆ
  • ನಿರ್ಧಾರ ಪ್ರಕಟಿಸಿದ ರೈತ ಪ್ರತಿಭಟನೆ ನೇತೃತ್ವ ವಹಿಸಿರುವ ರಾಕೇಶ್ ಟಿಕಾಯತ್
  • ಗಣರಾಜ್ಯೋತ್ಸವ ದಿನದ ಟ್ರಾಕ್ಟರ್ ರ‍್ಯಾಲಿ ಘಟನೆ ಮಾಸುವ ಮುನ್ನವೆ ಮತ್ತೊಂದು ರ‍್ಯಾಲಿ
     

ನವದೆಹಲಿ(ಜೂ.26); ಕೇಂದ್ರ ಸರ್ಕಾರದ ಕೃಷಿ ಮಸೂದೆ ವಿರೋಧಿ ರೈತರು ನಡೆಸುತ್ತಿರುವ ಪ್ರತಿಭಟನೆ 7 ತಿಂಗಳು ಪೂರೈಸಿದೆ. ಕೊರೋನಾ ವೈರಸ್, ಲಾಕ್‌ಡೌನ್ ಸೇರಿದಂತೆ ಹಲವು ಕಾರಣಗಳಿಂದ ಜನ ರೈತ ಪ್ರತಿಭಟನೆಯನ್ನು ಮರೆತಿದ್ದಾರೆ. ಇದೀಗ ರೈತ ಪ್ರತಿಭಟನೆಗೆ ಚುರುಕು ನೀಡಲು ಪ್ರತಿಭಟನೆ ಮುಂದಾಳತ್ವ ವಹಿಸಿರುವ ಮುಖಂಡ ರಾಕೇಶ್ ಟಿಕಾಯತ್ ಮಹತ್ವದ ಘೋಷಣೆ ಮಾಡಿದ್ದಾರೆ. 

ಕೆಂಪುಕೋಟೆ ವಶಪಡಿಸಲು ಸಂಚು ನಡೆದಿತ್ತು;ಟ್ರಾಕ್ಟರ್ ರ‍್ಯಾಲಿ ಚಾರ್ಜ್‌ಶೀಟ್‌ನಲ್ಲಿ ಸ್ಫೋಟಕ ಮಾಹಿತಿ!.

ಮುಂದಿನ ತಿಂಗಳು ದೆಹಲಿಯಲ್ಲಿ ಮತ್ತೊಂದು ಟ್ರಾಕ್ಟರ್ ರ‍್ಯಾಲಿ ಆಯೋಜಿಸುವುದಾಗಿ ರಾಕೇಶ್ ಟಿಕಾಯತ್ ಘೋಷಿಸಿದ್ದಾರೆ. ಟ್ರಾಕ್ಟರ್ ರ‍್ಯಾಲಿ ದಿನಾಂಕ ಹಾಗೂ ಸಮಯವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಟಿಕಾಯತ್ ಹೇಳಿದ್ದಾರೆ. ರೈತ ಪ್ರತಿಭಟನೆ 7 ತಿಂಗಳು ಪೂರೈಸಿದ ಹಿನ್ನಲೆಯಲ್ಲಿ ಆಯೋಸಿದ ಪ್ರತಿಭಟನಾ ಸಭೆಯಲ್ಲಿ ಟಿಕಾಯತ್ ಈ ಘೋಷಣೆ ಮಾಡಿದ್ದಾರೆ.

ಜನವರಿ 26 ರಂದು, ಅಂದರೆ ಗಣರಾಜ್ಯೋತ್ಸವ ದಿನ ರೈತ ಸಂಘಟನೆಗಳು ಆಯೋಜಿಸಿದ ಟ್ರಾಕ್ಟರ್ ರ‍್ಯಾಲಿ ಯಾವ ಮಟ್ಟಿಗೆ ಗಲಭೆ ಸೃಷ್ಟಿಸಿತ್ತು ಅನ್ನೋದು ಎಲ್ಲರಿಗೂ ತಿಳಿದಿದೆ. ಐತಿಹಾಸಿಕ ಕೆಂಪು ಕೋಟೆಗೆ ಮುತ್ತಿಗೆ, ರಾಷ್ಟ್ರಧ್ವಜ ಕೆಳಗಿಳಿಸಿ, ಸಿಖ್ ಧ್ವಜ ಹಾರಾಟ, ಪೊಲೀಸರ ಮೇಲೆ ದಾಳಿ, ಸಾರ್ವಜನಿಕ ಆಸ್ತಿ ಪಾಸ್ತಿ ನಾಶ ಸೇರಿದಂತೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಘಟನೆಗಳ ಇನ್ನೂ ಮಾಸಿಲ್ಲ. 

ಇದು ಬೆಂಕಿ ಹಚ್ಚುವ ಸಮಯ: ಕಾಂಗ್ರೆಸ್‌ ಟೂಲ್‌ಕಿಟ್‌ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ವಿಡಿಯೋ!...

ಈ ಕರಾಳ ಟ್ರಾಕ್ಟರ್ ರ‍್ಯಾಲಿ ಬೆನ್ನಲ್ಲೇ ಇದೀಗ 2ನೇ ರ‍್ಯಾಲಿ ಆಯೋಜನೆಗೆ ರೈತ ಸಂಘಟನೆಗಳು ಮುಂದಾಗಿದೆ. ಟಿಕಾಯತ್ ಈ ಘೋಷಣ ಮಾಡುತ್ತಿದ್ದಂತೆ ದೆಹಲಿ ಪೊಲೀಸರ ತಲೆನೋವು ಹೆಚ್ಚಾಗಿದೆ. ಕಾರಣ ಕಳೆದ ಬಾರಿಯ ಟ್ರಾಕ್ಟರ್ ರ‍್ಯಾಲಿಯಿಂದ 500ಕ್ಕೂ ಹೆಚ್ಚು ಪೊಲೀಸರು ತೀವ್ರವಾಗಿ ಗಾಯಗೊಂಡಿದ್ದರು.

ಕೆಂಪುಕೋಟೆ ಹಿಂಸಾಚಾರ: ಪೊಲೀಸರ ಮೇಲೆ ಹಲ್ಲೆ ಮಾಡಿದ್ದ ಇಬ್ಬರ ಬಂಧನ!.

ರೈತ ಪ್ರತಿಭಟನೆ 7 ತಿಂಗಳು ಪೂರೈಸಿದ ಹಿನ್ನಲೆಯಲ್ಲಿ ಎಲ್ಲಾ ರಾಜ್ಯಗಳ ರಾಜಭವನಕ್ಕೆ ತೆರಳಿ ಕೃಷಿ ಮಸೂದೆ ರದ್ದುಗೊಳಿಸಲು ಮನವಿಗೆ ಮುಂದಾಗಿದ್ದರು. ನಿಗದಿತ ಮಾರ್ಗದಲ್ಲಿ ಪೊಲೀಸರು ಬ್ಯಾರಿಕೇಡ್ ಹಾಕಿ ಪ್ರತಿಭಟನೆ ವೇಗಕ್ಕೆ ಬ್ರೇಕ್ ಹಾಕಲು ಪೊಲೀಸರು ಮುಂದಾಗಿದ್ದರು. ಆದರೆ ಬ್ಯಾರಿಕೇಡ್ ಮುರಿದು ಮುನ್ನುಗ್ಗಿದ ರೈತರನ್ನು ತಡೆಯಲು ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ. ಜೊತೆಗೆ ಹಲವು ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.

click me!