
ಪೋಷಕರು ತಮ್ಮ ಮಕ್ಕಳು ಉನ್ನತ ಶಿಕ್ಷಣ ಪಡೆದು ಸಮಾಜದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯಬೇಕೆಂದು ಬಯಸುವುದು ಸಹಜ. ಹರಿಯಾಣದ ಮಹೇಂದ್ರಗಢ ಜಿಲ್ಲೆಯ ಬಡ ರೈತ ಕುಟುಂಬವೊಂದರ ಕನಸು ಕೂಡ ಇದೇ ಆಗಿತ್ತು. ಆದರೆ, ಆ ಕನಸು ನನಸಾಗುವಷ್ಟರಲ್ಲೇ ವಿಧಿಯಾಟಕ್ಕೆ ಬಲಿಯಾಗಿದೆ. NET-JRF ಹಾಗೂ CTET ಅಂಥ ಕಠಿಣ ಪರೀಕ್ಷೆಗಳಲ್ಲಿ ಉತ್ತೀರ್ಣಳಾಗಿ, ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಸೂಕ್ಷ್ಮ ಜೀವವಿಜ್ಞಾನ (Microbiology) ವಿಷಯದಲ್ಲಿ ಪಿಎಚ್‌ಡಿ (PhD) ಮಾಡುತ್ತಿದ್ದ 28 ವರ್ಷದ ಪ್ರತಿಭಾವಂತೆ ಜ್ಯೋತಿ, ಕ್ಯಾಂಪಸ್‌ನಲ್ಲೇ ಅನುಮಾನಾಸ್ಪದ ರೀತಿಯಲ್ಲಿ ನಿಧನರಾಗಿದ್ದಾರೆ. ಇನ್ನೇನು ಕೆಲವೇ ತಿಂಗಳುಗಳಲ್ಲಿ ತಮ್ಮ ಕುಟುಂಬದ ಮೊದಲ 'ಡಾಕ್ಟರೇಟ್' ಪದವಿ ಪಡೆದು, ಪ್ರೊಫೆಸರ್ ಆಗಬೇಕಿದ್ದ ಅವರ ಸುಂದರ ಕನಸು ದಾರಿಯಲ್ಲೇ ಕರಗಿಹೋಗಿದೆ.
ಬಾಲಕಿಯರ ಹಾಸ್ಟೆಲ್ 8 ರ ಬಳಿಯ ರಸ್ತೆಬದಿಯ ವಿದ್ಯುತ್ ಕಂಬದ ಬಳಿ ಜ್ಯೋತಿ ಅವರ ಶವ ಪತ್ತೆಯಾಗಿದೆ. ತೆರೆದ ವಿದ್ಯುತ್ ತಂತಿಗಳ ಸಂಪರ್ಕಕ್ಕೆ ಸಿಲುಕಿ ಸಂಭವಿಸಿದ ವಿದ್ಯುತ್ ಆಘಾತದಿಂದಲೇ ಈ ದುರಂತ ನಡೆದಿದೆ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಶಂಕಿಸಿದೆ. ಅಪಘಾತ ಸಂಭವಿಸಿದ ಸಮಯದಲ್ಲಿ ಜ್ಯೋತಿ ಅವರು ತಮ್ಮ ತಾಯಿಯೊಂದಿಗೆ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಸಂಭಾಷಣೆಯ ಮಧ್ಯದಲ್ಲೇ ಜ್ಯೋತಿ ಜೋರಾಗಿ ಕಿರುಚಿದ್ದು, ಕೆಲವೇ ಸೆಕೆಂಡುಗಳಲ್ಲಿ ಫೋನ್ ಸಂಪರ್ಕ ಕಡಿತಗೊಂಡಿದೆ. ತಾಯಿಯೊಂದಿಗೆ ಮಾತನಾಡುತ್ತಿದ್ದಾಗಲೇ ಈ ದುರಂತ ಸಂಭವಿಸಿರುವುದು ಇಡೀ ಕುಟುಂಬವನ್ನು ತೀವ್ರ ಆಘಾತಕ್ಕೆ ತಳ್ಳಿದೆ.
ಜ್ಯೋತಿ ಅವರದು ಅತ್ಯಂತ ಸರಳ ಹಾಗೂ ಬಡ ಕುಟುಂಬ. ಅವರ ತಂದೆ ರವೀಂದ್ರ ಕೃಷಿಯ ಜತೆಗೆ ಕುಟುಂಬವನ್ನು ಪೋಷಿಸಲು ಖಾಸಗಿ ಶಾಲೆಯ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಜ್ಯೋತಿ ಬಾಲ್ಯದಿಂದಲೇ ಅತ್ಯಂತ ಬುದ್ಧಿವಂತ ವಿದ್ಯಾರ್ಥಿನಿಯಾಗಿದ್ದು, 12ನೇ ತರಗತಿ ಪೂರ್ಣಗೊಳಿಸಿ, ಗುರುಗ್ರಾಮದ ಕಾಲೇಜಿನಲ್ಲಿ ಬಿ.ಎಸ್ಸಿ. ಮುಗಿಸಿದರು. ನಂತರ ಹಿಸಾರ್‌ನ ಗುರು ಜಂಭೇಶ್ವರ ವಿಶ್ವವಿದ್ಯಾಲಯದಿಂದ ಎಂ.ಎಸ್ಸಿ. ಪದವಿ ಪಡೆದರು. ಯುಜಿಸಿ ನೆಟ್-ಜೆಆರ್‌ಎಫ್, ಬಿ.ಎಡ್. ಹಾಗೂ ಸಿಟಿಇಟಿ ಪರೀಕ್ಷೆಗಳನ್ನು ಯಶಸ್ವಿಯಾಗಿ ಪಾಸ್ ಮಾಡಿದ್ದರು.ಪ್ರಸ್ತುತ ಜೈವಿಕ ಗೊಬ್ಬರ ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುವ ಕುರಿತು ಮಹತ್ವದ ಸಂಶೋಧನೆ ನಡೆಸುತ್ತಿದ್ದರು. ವಿಭಾಗದ ಮುಖ್ಯಸ್ಥ ಪ್ರೊ. ನವೀನ್ ಗುಪ್ತಾ ಪ್ರಕಾರ, ಜ್ಯೋತಿ ವಿಭಾಗದಲ್ಲೇ ಅತ್ಯಂತ ಪ್ರಭಾವಿ ಮತ್ತು ಪ್ರಖರ ಸಂಶೋಧಕಿಯಾಗಿದ್ದರು ಎನ್ನಲಾಗಿದೆ.
ದೇಶದ ಉನ್ನತ ವಿಶ್ವವಿದ್ಯಾಲಯಗಳಲ್ಲಿ (NIRF 35ನೇ ಶ್ರೇಯಾಂಕ) ಒಂದಾದ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಈ ರೀತಿ ತೆರೆದ ವಿದ್ಯುತ್ ತಂತಿಗಳು ಇರುವುದಕ್ಕೆ ಕುಟುಂಬಸ್ಥರು ಹಾಗೂ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಕ್ಯಾಂಪಸ್‌ನಲ್ಲಿ ವಿದ್ಯುತ್ ತಂತಿಗಳು ಏಕೆ ತೆರೆದಿದ್ದವು? ಸಿಸಿಟಿವಿ ಕ್ಯಾಮೆರಾಗಳು ಏಕೆ ಇರಲಿಲ್ಲ? ಎಂದು ಕುಟುಂಬದವರು ಪ್ರಶ್ನಿಸಿದ್ದಾರೆ.
ಮಗಳ ಸಾವು ಕೇಳಿ ತಂದೆ ಎರಡು ಬಾರಿ ಮೂರ್ಛೆ ಬಿದ್ದು ಬಿದ್ದಿದ್ದಾರೆ. ಇನ್ನೊಂದೆಡೆ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ABVP) ಕಾರ್ಯಕರ್ತರು ಆಡಳಿತ ಮಂಡಳಿಯ ಅಜಾಗರೂಕತೆಯ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ, ತಪ್ಪಿತಸ್ಥರ ವಿರುದ್ಧ ತಕ್ಷಣದ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಾಧ್ಯಾಪಕಿಯಾಗಿ ಕುಟುಂಬದ ಬಡತನ ನೀಗಿಸಬೇಕಿದ್ದ ಪ್ರತಿಭಾವಂತೆಯೊಬ್ಬಳ ಬದುಕು ಹೀಗೆ ಅರ್ಧಕ್ಕೇ ಕೊನೆಗೊಂಡಿರುವುದು ದುರಂತ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ