ಛತ್ತೀಸ್‌ಗಢದಲ್ಲಿ ನಕ್ಸಲರ ಬೃಹತ್‌ ಖೋಟಾ ನೋಟು ಫ್ಯಾಕ್ಟರಿ ಪತ್ತೆ!

By Kannadaprabha News  |  First Published Jun 24, 2024, 5:50 AM IST

ಛತ್ತೀಸ್‌ಗಢದ ಅರಣ್ಯದಲ್ಲಿ ಮಾವೋವಾದಿ ನಕ್ಸಲರು ನಡೆಸುತ್ತಿದ್ದ ಖೋಟಾನೋಟು ಫ್ಯಾಕ್ಟರಿಯನ್ನು ಭದ್ರತಾ ಪಡೆಗಳು ಬಯಲಿಗೆ ಎಳೆದಿವೆ. ಈ ವೇಳೆ ನಕ್ಸಲರು ಮುದ್ರಿಸಿಟ್ಟಿದ್ದ ಅಪಾರ ಖೋಟಾನೋಟಿನ ದಾಸ್ತಾನೇ ಪತ್ತೆಯಾಗಿದೆ.


ಸುಕ್ಮಾ(ಛತ್ತೀಸ್‌ಗಢ) (ಜೂ.24): ಛತ್ತೀಸ್‌ಗಢದ ಅರಣ್ಯದಲ್ಲಿ ಮಾವೋವಾದಿ ನಕ್ಸಲರು ನಡೆಸುತ್ತಿದ್ದ ಖೋಟಾನೋಟು ಫ್ಯಾಕ್ಟರಿಯನ್ನು ಭದ್ರತಾ ಪಡೆಗಳು ಬಯಲಿಗೆ ಎಳೆದಿವೆ. ಈ ವೇಳೆ ನಕ್ಸಲರು ಮುದ್ರಿಸಿಟ್ಟಿದ್ದ ಅಪಾರ ಖೋಟಾನೋಟಿನ ದಾಸ್ತಾನೇ ಪತ್ತೆಯಾಗಿದೆ. 3 ದಶಕಗಳಿಂದ ನಕ್ಸಲರ ಉಪಟಳದಿಂದ ತತ್ತರಿಸಿರುವ ಛತ್ತೀಸ್‌ಗಢದಲ್ಲಿ ಮಾವೋವಾದಿಗಳ ಬಳಿ ಇಷ್ಟೊಂದು ನಕಲಿ ಹಣ ಪತ್ತೆಯಾಗುತ್ತಿರುವುದು ಇದೇ ಮೊದಲು.

ಇದರೊಂದಿಗೆ, ಭದ್ರತಾ ವ್ಯವಸ್ಥೆಗೆ ಸವಾಲಾಗಿದ್ದ ನಕ್ಸಲರು ಖೋಟಾನೋಟು ಮುದ್ರಿಸಿ ಚಲಾವಣೆಗೆ ಹರಿಬಿಡುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿರುವ ಸಂಗತಿ ಕೂಡ ಬಯಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.

Tap to resize

Latest Videos

ಬಿಹಾರದಲ್ಲಿ ನೆಟ್‌ ತನಿಖೆಗೆ ತೆರಳಿದ್ದ ಸಿಬಿಐ ಟೀಂ ಮೇಲೇ ಭಾರಿ ದಾಳಿ!

ಯುಪಿಎಸ್‌, ಪ್ರಿಂಟರ್‌ ಬಳಸಿಕೊಂಡು ಖೋಟಾನೋಟುಗಳನ್ನು ಮುದ್ರಿಸಿ ಬಸ್ತರ್‌ ವಲಯದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ವಾರದ ಸಂತೆಗಳಲ್ಲಿ ನಕ್ಸಲರು ಇವನ್ನು ಬಳಕೆ ಮಾಡುತ್ತಿದ್ದರು. ಅಮಾಯಕ ಬುಡಕಟ್ಟು ಜನರಿಂದ ವಸ್ತು ಖರೀದಿಸಿ ಅವರಿಗೆ ಈ ಖೋಟಾನೋಟು ಕೊಟ್ಟು ವಂಚಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪತ್ತೆಯಾಗಿದ್ದು ಹೇಗೆ?:  ಸುಕ್ಮಾ ಜಿಲ್ಲೆಯ ಅರಣ್ಯ ಪ್ರದೇಶಗಳಲ್ಲಿ ನಕ್ಸಲರು ಖೋಟಾನೋಟು ಮುದ್ರಿಸುತ್ತಿದ್ದಾರೆ ಎಂಬ ಖಚಿತ ಮಾಹಿತಿಯ ಮೇರೆಗೆ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ, ಜಿಲ್ಲಾ ಸಶಸ್ತ್ರ ಪಡೆ, ಬಸ್ತರ್‌ ಫೈಟರ್ಸ್‌ ಹಾಗೂ ಜಿಲ್ಲಾ ಪೊಲೀಸರನ್ನು ಒಳಗೊಂಡ ಜಂಟಿ ತಂಡ ಶೋಧ ಕಾರ್ಯ ಆರಂಭಿಸಿತ್ತು. ಸುಕ್ಮಾ ಜಿಲ್ಲೆಯ ಕೋರಜ್‌ಗುಡಾ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳನ್ನು ಕಾಣುತ್ತಿದ್ದಂತೆ ನಕ್ಸಲರು ದಟ್ಟಾರಣ್ಯದೊಳಕ್ಕೆ ಪರಾರಿಯಾದರು. ಈ ವೇಳೆ ಅಪಾರ ಖೋಟಾನೋಟು ದಾಸ್ತಾನನ್ನೇ ಬಿಟ್ಟು ಓಡಿದರು.

ಈ ವೇಳೆ ಭದ್ರತಾ ಪಡೆಗಳಿಗೆ 50, 100, 200 ಹಾಗೂ 200 ರು. ಮುಖಬೆಲೆಯ ಖೋಟಾನೋಟುಗಳು, ಕಲರ್‌ ಪ್ರಿಂಟಿಂಗ್ ಮಷಿನ್‌ಗಳು, ಕಪ್ಪು ಮತ್ತು ಬಿಳುಪು ಪ್ರಿಂಟರ್‌, ವಿದ್ಯುತ್‌ ಪೂರೈಕೆಗೆ ಬಳಸುವ ಇನ್‌ವರ್ಟರ್‌ ಯಂತ್ರ, 200 ಬಾಟಲಿ ಇಂಕು, 9 ಪ್ರಿಂಟರ್‌, 4 ಪ್ರಿಂಟರ್‌ ಕಾಟ್ರಿಜ್‌ಗಳು ಪತ್ತೆಯಾಗಿವೆ. ಜತೆಗೆ ನಾಡ ಬಂದೂಕು, ಸ್ಫೋಟಕ, ಇನ್ನಿತರೆ ವಸ್ತುಗಳು, ನಕ್ಸಲರ ಸಮವಸ್ತ್ರ ಕೂಡ ಸಿಕ್ಕಿವೆ ಎಂದು ಸುಕ್ಮಾ ಎಸ್‌ಪಿ ಕಿರಣ್‌ ಜಿ. ಚವಾಣ್‌ ಅವರು ತಿಳಿಸಿದ್ದಾರೆ.

ಪರೀಕ್ಷೆ ಪಾಸ್‌ಗಾಗಿ ಲಂಚ: ನೀಟ್‌ ಹಗರಣದಲ್ಲಿ ಕನ್ನಡಿಗರೂ ಭಾಗಿ!

ಹಣಕಾಸಿನ ಕೊರತೆ ಹಿನ್ನೆಲೆಯಲ್ಲಿ ನಕ್ಸಲರು ಈ ಖೋಟಾನೋಟುಗಳನ್ನು ಮುದ್ರಣ ಮಾಡುತ್ತಿದ್ದರು. ಪ್ರತಿ ವಲಯವಾರು ಸಮಿತಿಗಳ ಒಬ್ಬರು ಅಥವಾ ಇಬ್ಬರು ಸದಸ್ಯರು ಬೋಗಸ್‌ ನೋಟುಗಳನ್ನು ಮುದ್ರಣ ಮಾಡಲು 2022ರಲ್ಲೇ ನಕ್ಸಲರು ನಿರ್ದೇಶನ ನೀಡಿದ್ದರು. ಈ ಕಾರ್ಯಾಚರಣೆಯೊಂದಿಗೆ ನಕ್ಸಲರ ಹಣಕಾಸು ಮೂಲವನ್ನೇ ಬಂದ್‌ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.

click me!