ತೀರಾ ಅಪರೂಪದ ಪ್ರಕರಣದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಮಹಿಳೆಗೆ ಚೇಳು ಕಚ್ಚಿದೆ. ಕಳೆದ ತಿಂಗಳು ಈ ಘಟನೆ ನಡೆದಿದ್ದಾಗಿ ಸ್ವತಃ ಏರ್‌ಲೈನ್ಸ್ ಖಚಿತಪಡಿಸಿದ್ದು, ಇದು ಅತ್ಯಂತ ಅಪರೂಪದ ಹಾಗೂ ದುರಾದೃಷ್ಟಕರ ಎಂದು ಹೇಳಿದೆ.
ನವದೆಹಲಿ (ಮೇ.6): ತೀರಾ ಅಪರೂಪದ ಪ್ರಕರಣದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ನಾಗ್ಪುರದಿಂದ ಮುಂಬೈಗೆ ಪ್ರಯಾಣ ಮಾಡುತ್ತಿದ್ದ ಮಹಿಳೆಗೆ ಚೇಳು ಕಚ್ಚಿದೆ. ಈ ಘಟನೆ ಕಳೆದ ತಿಂಗಳು ನಡೆದಿದ್ದು, ಏರ್‌ಪೋರ್ಟ್‌ನಲ್ಲಿ ವಿಮಾನ ಲ್ಯಾಂಡ್ ಆದ ಬಳಿಕ ಮಹಿಳೆಗೆ ಚಿಕಿತ್ಸೆ ನೀಡಲಾಗಿದೆ. ಸ್ವತಃ ವೈದ್ಯರೇ ಆಕೆಯನ್ನು ಪರಿಶೀಲನೆ ಮಾಡಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೂ ದಾಖಲು ಮಾಡಲಾಗಿತ್ತು. ಹೆಚ್ಚೇನೂ ಅಪಾಯವಾಗದ ಕಾರಣ ಅದೇ ದಿನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಏರ್‌ಲೈನ್ ಶನಿವಾರ ನೀಡಿದ ಪ್ರಕಟಣೆಯಲ್ಲಿ ತಿಳಿಸಿದೆ. "2023ರ ಏಪ್ರಿಲ್ 23ರಂದು ನಮ್ಮ ವಿಮಾನ AI 630 ನಲ್ಲಿ ಪ್ರಯಾಣಿಕರಿಗೆ ಚೇಳೊಂದು ಕಚ್ಚಿದ ಅತ್ಯಂತ ಅಪರೂಪದ ಮತ್ತು ದುರದೃಷ್ಟಕರ ಘಟನೆ ನಡೆದಿದೆ" ಎಂದು ಏರ್ ಇಂಡಿಯಾ ಹೇಳಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ವಿಮಾನಯಾನ ಸಂಸ್ಥೆಯು ಅಗತ್ಯವಿರುವ ಪ್ರೋಟೋಕಾಲ್ ಅನ್ನು ಅನುಸರಿಸಿದೆ ಮತ್ತು ವಿಮಾನದ ಸಂಪೂರ್ಣ ತಪಾಸಣೆ ಕೂಡ ನಡೆಸಿತ್ತು. ವಿಮಾನದಲ್ಲಿ ಚೇಳು ಪತ್ತೆಯಾಗಿರುವ ಕಾರಣ ಇಡೀ ವಿಮಾನಕ್ಕೆ ಹೊಗೆಯಾಡಿಸುವ (ಫ್ಯೂಮಿಗೇಷನ್ ಪ್ರಕ್ರಿಯೆ) ಕೂಡ ನಡೆಸಲಾಗಿದೆ ಎಂದು ಏರ್‌ಲೈನ್ಸ್ ತಿಳಿಸಿದೆ.
ಘಟನೆಯ ಬೆನ್ನಲ್ಲಿಯೇ ಏರ್ ಇಂಡಿಯಾ ತನ್ನ ಕ್ಯಾಟರಿಂಗ್ ವಿಭಾಗಕ್ಕೆ ಸಲಹೆಯನ್ನು ನೀಡಿದ್ದು, ಇಡೀ ವಿಭಾಗದಲ್ಲಿ ಡ್ರೈಕ್ಲೀನರ್ ವ್ಯವಸ್ಥೆಯನ್ನು ಬಳಸಿಕೊಂಡು, ಸಣ್ಣಪುಟ್ಟ ಕ್ರಿಮಿಗಳಿದ್ದರೆ ಗಮನಿಸುವಂತೆ ಸೂಚಿಸಿದೆ. ಅಗತ್ಯಬಿದ್ದಲ್ಲಿ, ಬೆಡ್ ಬಗ್‌ಗಳ ತೊಂದರೆ ನಿವಾರಿಸಲು ಹೊಗೆಯಾಡಿಸುವ ಪ್ರಕ್ರಿಯೆಯನ್ನೂ ನಡೆಸಿ. ವಿಮಾನಕ್ಕೆ ವಸ್ತುಗಳನ್ನು ಹಾಕುವಾಗ ಬಹಳ ಎಚ್ಚರಿಕೆಯಿಂದ ಇರುವಂತೆ ಏರ್ ಇಂಡಿಯಾ ತಿಳಿಸಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕ್ಯಾಬಿನ್ ಸಿಬ್ಬಂದಿ ಮೇಲೆ ಪ್ರಯಾಣಿಕನ ಹಲ್ಲೆ, ಲಂಡನ್‌ಗೆ ಹೋಗಬೇಕಿದ್ದ ಏರ್‌ಇಂಡಿಯಾ ವಿಮಾನ ದೆಹಲಿಗೆ ವಾಪಸ್!
ಕಳೆದ ವರ್ಷ ಏರ್ ಇಂಡಿಯಾ ವಿಮಾನದಲ್ಲಿ ಹಾವು ಪತ್ತೆಯಾಗಿತ್ತು: ಕಳೆದ ವರ್ಷ ಅಂದರೆ 2022ರಲ್ಲಿ ದುಬೈನಲ್ಲಿ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಹಾವು ಕಾಣಿಸಿಕೊಂಡಿತ್ತು. ಹಾವು ಕಂಡ ತಕ್ಷಣ ವಿಮಾನದಲ್ಲಿ ಗಲಿಬಿಲಿ ಉಮಟಾಗಿತ್ತು. ವಿಮಾನ ನಿಲ್ದಾಣ ಪ್ರಾಧಿಕಾರದ ಅಧಿಕಾರಿಗಳು ವಿಮಾನವನ್ನು ತಲುಪಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರ ಕರೆದುಕೊಂಡು ಬಂದಿದ್ದರು. ಬಳಿಕ ಪ್ರಯಾಣಿಕರನ್ನು ಸಮೀಪದ ಹೋಟೆಲ್‌ಗೆ ಕರೆದೊಯ್ಯಲಾಯಿತು. ದುಬೈನಿಂದ ಕರಿಪುರಕ್ಕೆ ಬರುತ್ತಿದ್ದ ಈ ವಿಮಾನದಿಂದ ಹಾವನ್ನು ಹೊರಹಾಕಲು ಸಾಕಷ್ಟು ಶ್ರಮ ವಹಿಸಲಾಗಿತ್ತು. ಹಾವನ್ನು ಹೊರತೆಗೆಯಲು ವಿಳಂಬವಾದ ಕಾರಣಈ ವಿಮಾನವನ್ನು ರದ್ದುಗೊಳಿಸಲಾಗಿತ್ತು.
Bengaluru: ಪ್ರಾಣಿಗಳನ್ನು ಬಿಟ್ರೂ ಪ್ರೀತಿಯ ಮೀನನ್ನು ಬಿಡದ ಏರ್‌ಇಂಡಿಯಾ ವಿರುದ್ಧ ಪ್ರಯಾಣಿಕ ಕಿಡಿ!