ಬ್ರಾಹ್ಮಣರು ಮಲ ಎತ್ತಿದ್ರೆ ₹50000 ಗಿಫ್ಟ್‌, ಗುಜರಾತ್‌ ಮಾಜಿ ಸಿಎಂ ವಘೇಲಾ, ಪ್ರತ್ಯೇಕ ಭಿಲಿಸ್ತಾನ ಬೆಂಬಲ

Published : Oct 06, 2026, 03:40 PM IST
Shankersinh Vaghela

ಸಾರಾಂಶ

ಗುಜರಾತ್‌ನ ಮಾಜಿ ಸಿಎಂ ಶಂಕರ್‌ಸಿನ್ಹ್ ವಘೇಲಾ ಅವರು ಮೀಸಲಾತಿ ವಿರೋಧಿಸುವ ಮೇಲ್ವರ್ಗದವರು ಮಲ ಎತ್ತಿದರೆ 50,000 ರೂ. ನೀಡುವುದಾಗಿ ಹೇಳಿ ವಿವಾದ ಸೃಷ್ಟಿಸಿದ್ದಾರೆ. ಅಲ್ಲದೆ, ಗಿರಿಜನರಿಗಾಗಿ ಪ್ರತ್ಯೇಕ 'ಭಿಲಿಸ್ತಾನ' ರಾಜ್ಯ ರಚನೆಗೆ ಬೆಂಬಲ ಸೂಚಿಸಿದ್ದಾರೆ. ಅವರ ಈ ಹೇಳಿಕೆಗೆ ಬಿಜೆಪಿ ಮತ್ತು ಪಾಟೀದಾರ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಹಮದಾಬಾದ್: ಗುಜರಾತ್‌ನ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ರಾಜಕಾರಣಿ ಶಂಕರ್‌ಸಿನ್ಹ್ ವಘೇಲಾ ಅವರು ಮತ್ತೊಮ್ಮೆ ಭಾರಿ ರಾಜಕೀಯ ವಿವಾದಕ್ಕೆ ಕಾರಣರಾಗಿದ್ದಾರೆ. ‘ಪಟೇಲ್, ವಣಿಯಾ ಅಥವಾ ಬ್ರಾಹ್ಮಣ ಸಮುದಾಯದವರು ಕೈಯಿಂದ ಮಲ ಎತ್ತಿದರೆ ಅವರಿಗೆ 50,000 ರು. ನೀಡಲು ಸಿದ್ಧನಿದ್ದೇನೆ ಎಂದಿದ್ದು, ಗಿರಿಜನರಿಗಾಗಿ ಪ್ರತ್ಯೇಕ 'ಭಿಲಿಸ್ತಾನ' ರಾಜ್ಯ ರಚನೆಯ ಬೇಡಿಕೆಯನ್ನು ಬೆಂಬಲಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದ್ದಾರೆ.

ಇದು ತೀವ್ರ ವಿವಾದಕ್ಕೆ ಕಾರಣವಾಗಿದೆ. ನರ್ಮದಾ ಜಿಲ್ಲೆಯ ಸಾಗ್ಬರಾದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವಘೇಲಾ, ‘ನೀವು ಪಟೇಲ್‌, ವಣಿಯಾ ಅಥವಾ ಬ್ರಾಹ್ಮಣರಾಗಿದ್ದು, ಮೀಸಲಾತಿಯನ್ನು ವಿರೋಧಿಸುತ್ತಿದ್ದೀರಿ ಎಂದಿಟ್ಟುಕೊಳ್ಳಿ. ನೀವು ಈ ಜನರ (ಬುಡಕಟ್ಟು ಜನರ) ಮಲವನ್ನು ಕೈಯಿಂದ ಸ್ವಚ್ಛಗೊಳಿಸಿದರೆ ನಾನು ನಿಮಗೆ ಮಾಸಿಕ 50,000 ರು. ಸಂಬಳ ಕೊಡುತ್ತೇನೆ. ಬುಡಕಟ್ಟು ಸಮುದಾಯಗಳ ಪರಿಸ್ಥಿತಿಯಲ್ಲಿ ನೀವಿದ್ದರೆ, ಅವರ ಅವಸ್ಥೆ ನಿಜವಾಗಿಯೂ ನಿಮಗೆ ಅರ್ಥವಾಗುತ್ತದೆ’ ಎಂದಿದ್ದಾರೆ. ಅವರ ಈ ಹೇಳಿಕೆ ಜಾತಿವಾದ ಮತ್ತು ಸಾಮಾಜಿಕ ದ್ವೇಷವನ್ನು ಉತ್ತೇಜಿಸುತ್ತದೆ ಎಂದು ಆಡಳಿತಾರೂಢ ಬಿಜೆಪಿ ಆರೋಪಿಸಿದೆ.

ಅಕ್ಟೋಬರ್ 2 ರಂದು ನರ್ಮದಾ ಜಿಲ್ಲೆಯ ಸಗ್ಬರಾ ತಾಲೂಕಿನ ಖೋಪಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ 'ಅರಣ್ಯ ಹಕ್ಕುಗಳ ಸತ್ಯಾಗ್ರಹ' ಕಾರ್ಯಕ್ರಮದಲ್ಲಿ ಗುಜರಾತ್ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಮಿತ್ ಚಾವ್ಡಾ ಅವರ ಸಮ್ಮುಖದಲ್ಲೇ ವಘೇಲಾ ಈ ಸ್ಫೋಟಕ ಹೇಳಿಕೆಗಳನ್ನು ನೀಡಿದ್ದಾರೆ.

ಮೀಸಲಾತಿ ಔದಾರ್ಯವಲ್ಲ, ಮೇಲ್ವರ್ಗದವರಿಗೆ ₹50,000 ಆಫರ್

ಸಮಾವೇಶದಲ್ಲಿ ಮೀಸಲಾತಿಯನ್ನು ಬಲವಾಗಿ ಸಮರ್ಥಿಸಿಕೊಂಡ ವಘೇಲಾ, "ಮೀಸಲಾತಿ ಎಂಬುದು ಯಾರಿಗೂ ನೀಡಿದ ಔದಾರ್ಯ ಅಥವಾ ಭಿಕ್ಷೆಯಲ್ಲ. ಹಿಂದುಳಿದ ಮತ್ತು ಶೋಷಿತ ಸಮುದಾಯಗಳು ಯುಗಯುಗಗಳಿಂದ ಅನುಭವಿಸಿದ ತಾರತಮ್ಯ, ಅಸಮಾನತೆ ಹಾಗೂ ನೋವಿಗೆ ನೀಡಲಾಗಿರುವ ಸಾಮಾಜಿಕ ಪರಿಹಾರವಿದು. ಮೀಸಲಾತಿಯನ್ನು ವಿರೋಧಿಸುವ ಪಟೇಲ್, ವಣಿಯಾ ಅಥವಾ ಬ್ರಾಹ್ಮಣ ಸಮುದಾಯದ ಮುಖಂಡರಿಗೆ ನಾನು ಸವಾಲು ಹಾಕುತ್ತೇನೆ; ಅವರು ಕೈಯಿಂದ ಮಲ ಹೊರುವ ಹಾಗೂ ಮಾನವ ತ್ಯಾಜ್ಯ ಸ್ವಚ್ಛಗೊಳಿಸುವ ಕೆಲಸವನ್ನು ಕೈಗೆತ್ತಿಕೊಳ್ಳಲು ಸಿದ್ಧರಿದ್ದರೆ, ನಾನು ಅವರಿಗೆ ನನ್ನ ಸ್ವಂತ ವೆಚ್ಚದಲ್ಲಿ ಮಾಸಿಕ ₹50,000 ಸಂಬಳ ನೀಡಲು ಬದ್ಧನಾಗಿದ್ದೇನೆ. ಆ ಜನರ ಕಷ್ಟ ಅನುಭವಿಸಿದಾಗ ಮಾತ್ರ ಮೀಸಲಾತಿಯ ಅಗತ್ಯ ನಿಮಗೂ ಅರ್ಥವಾಗುತ್ತದೆ ಎಂದು ಹೇಳಿಕೆ ನೀಡಿದರು.

ಪ್ರತ್ಯೇಕ 'ಭಿಲಿಸ್ತಾನ' ರಾಜ್ಯಕ್ಕೆ ಬೆಂಬಲ

ಬುಡಕಟ್ಟು ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಘೇಲಾ, ಅರಣ್ಯ ಭೂಮಿಯ ನಿಜವಾದ ಮಾಲೀಕರು ಗಿರಿಜನರು ಎಂದು ಪ್ರತಿಪಾದಿಸಿದರು. ದೆಹಲಿ ಮತ್ತು ಗಾಂಧಿನಗರದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳು ಮೀಸಲಾತಿ ಹಾಗೂ ಗಿರಿಜನರ ಹಿತಾಸಕ್ತಿಗಳ ವಿರುದ್ಧ ಕೆಲಸ ಮಾಡುತ್ತಿವೆ ಎಂದು ವಜ್ರಲೇಪಿತ ವಾಗ್ದಾಳಿ ನಡೆಸಿದರು.

ಮತ್ತೊಂದೆಡೆ, ಬುಡಕಟ್ಟು ಸಮುದಾಯದ ದೀರ್ಘಕಾಲದ ಬೇಡಿಕೆಯಾದ ಪ್ರತ್ಯೇಕ 'ಭಿಲಿಸ್ತಾನ' (Bhilistan) ರಾಜ್ಯ ರಚನೆಯನ್ನು ಸಂಪೂರ್ಣವಾಗಿ ಅನುಮೋದಿಸುವುದಾಗಿ ಪ್ರಕಟಿಸಿದರು. ರೈತರು ಮತ್ತು ಗಿರಿಜನರು ಪದೇ ಪದೇ ಪ್ರತಿಭಟನೆ ನಡೆಸುವ ಬದಲು, ಒಂದಾಗಿ ಗಾಂಧಿನಗರಕ್ಕೆ ಎತ್ತಿನಗಾಡಿ ಮೆರವಣಿಗೆ ನಡೆಸಿ ಈ ವಿಫಲ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದರು.

ಬಿಜೆಪಿ ಮತ್ತು ಪಾಟೀದಾರ್ ನಾಯಕರ ತೀವ್ರ ಆಕ್ರೋಶ

ವಘೇಲಾ ಅವರ ಪ್ರಚೋದನಾಕಾರಿ ಹೇಳಿಕೆಗೆ ಬಿಜೆಪಿ ಮತ್ತು ವಿವಿಧ ಸಮುದಾಯಗಳ ನಾಯಕರಿಂದ ತೀವ್ರ ಖಂಡನೆ ವ್ಯಕ್ತವಾಗಿದೆ. ಬಿಜೆಪಿ ನಾಯಕ ಹಾಗೂ ಬ್ರಾಹ್ಮಣ ಮುಖಂಡ ಯಜ್ಞೇಶ್ ದೇವ್ ಅವರು ಮಾತನಾಡಿ, ವಘೇಲಾ ಅವರ ಹೇಳಿಕೆಗೆ ತಿರುಗೇಟು ನೀಡಿದ ದೇವ್, ಶಂಕರ್‌ಸಿನ್ಹ್ ಬಾಪು ಅವರು ಈ ಕಾರ್ಯವನ್ನು ಮೊದಲು ತಮ್ಮ ಮನೆಯಿಂದಲೇ ಪ್ರಾರಂಭಿಸಲಿ. ಅವರು ಬಂದು ನನ್ನ ಮನೆಯ ಶೌಚಾಲಯ ಮತ್ತು ಕೊಳಕನ್ನು ಸ್ವಚ್ಛಗೊಳಿಸಲು ಸಿದ್ಧರಿದ್ದರೆ, ನಾನು ಅವರಿಗೆ ಪ್ರತಿ ತಿಂಗಳು ₹5 ಲಕ್ಷ ಸಂಬಳ ಕೊಡಲು ಸಿದ್ಧನಿದ್ದೇನೆ ಎಂದು ಸವಾಲು ಎಸೆದಿದ್ದಾರೆ.

ಪಾಟೀದಾರ್ ನಾಯಕ ಅಲ್ಪೇಶ್ ಕಥಿರಿಯಾ ವಘೇಲಾ ಅವರು ತಮ್ಮ ಜವಾಬ್ದಾರಿಯುತ ಸ್ಥಾನವನ್ನು ಮರೆತು ಜಾತೀಯ ಧ್ರುವೀಕರಣಕ್ಕೆ ಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. ಒಂದು ನಿರ್ದಿಷ್ಟ ವರ್ಗದ ಮತಗಳನ್ನು ಓಲೈಸಲು ಈ ರೀತಿಯ ಕೀಳುಮಟ್ಟದ ರಾಜಕೀಯ ಹೇಳಿಕೆ ನೀಡುವುದು ಶೋಭೆಯಲ್ಲ. ಅವರು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಬೇಷರತ್ ಕ್ಷಮೆಯಾಚಿಸಬೇಕು ಎಂದು ಕಥಿರಿಯಾ ಒತ್ತಾಯಿಸಿದ್ದಾರೆ.

ವಘೇಲಾ ಅವರು ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಮಾತುಗಳು ವ್ಯಾಪಕವಾಗಿರುವ ಬೆನ್ನಲ್ಲೇ ಈ ವಿವಾದಾತ್ಮಕ ಹೇಳಿಕೆಗಳು ಹೊರಬಿದ್ದಿದ್ದು, ಮುಂಬರುವ ದಿನಗಳಲ್ಲಿ ಗುಜರಾತ್ ರಾಜಕೀಯದಲ್ಲಿ ಮತ್ತಷ್ಟು ಚರ್ಚೆಗೆ ಗ್ರಾಸವಾಗುವ ಲಕ್ಷಣಗಳಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Paris of India: ನಮ್ಮ ದೇಶದ ಯಾವ ನಗರವನ್ನು 'ಮಿನಿ ಪ್ಯಾರಿಸ್' ಅಂತಾರೆ ಗೊತ್ತಾ?
ಆಸ್ಪತ್ರೆಯಲ್ಲಿರುವ ಕ್ಯಾಪ್ಟನ್ ಸ್ಮಿತ್‌ಗೆ ಎಮರ್ಜೆನ್ಸಿ ಸರ್ಜರಿ, ಭಾರತೀಯ ಪೈಲೆಟ್ ಆರೋಗ್ಯ ಹೇಗಿದೆ?