
ದೆಹಲಿ: ಅತ್ಯಂತ ಕಡಿಮೆ ಅವಧಿಯಲ್ಲಿ ಭಾರತದ ಮೊಬೈಲ್ ಉತ್ಪಾದನಾ ಉದ್ಯಮವು ವೇಗಗತಿಯನ್ನು ಪಡೆದುಕೊಂಡಿದ್ದು, ಇಂದು ದೇಶವು 6.27 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ಉತ್ಪಾದಿಸುತ್ತಿದೆ. ಕಳೆದ 12 ವರ್ಷಗಳಲ್ಲಿ ಭಾರತದ ಮೊಬೈಲ್ ಫೋನ್ ಉತ್ಪಾದನಾ ಪರಿಸರ ವ್ಯವಸ್ಥೆಯು ಕೇವಲ ಎರಡು ಕಂಪನಿಗಳಿಂದ 300 ಕಂಪನಿಗಳಿಗೆ ಬೆಳೆದಿದ್ದು, ಭಾರತದ ಕಣ್ಣು ಇಡೀ ವಿಶ್ವದ ಮೇಲೆ ನೆಟ್ಟಿದೆ. ಭಾರತವು 12 ವರ್ಷಗಳ ಹಿಂದೆ ಮೊಬೈಲ್ ಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು. ನಾವು ಬಳಸುತ್ತಿದ್ದ ಮೊಬೈಲ್ ಫೋನ್‌ಗಳಲ್ಲಿ ಶೇಕಡಾ ತೊಂಬತ್ತೈದು ಆಮದು ಮಾಡಿಕೊಳ್ಳಲಾಗುತ್ತಿತ್ತು. ಆಗ ಭಾರತವು ಸುಮಾರು ₹20,000 ಕೋಟಿ ಮೊಬೈಲ್ ಫೋನ್‌ಗಳನ್ನು ಉತ್ಪಾದಿಸುತ್ತಿತ್ತು. ಅದು ಸರಿಸುಮಾರು $2 ಬಿಲಿಯನ್ ನಿಂದ $2.5 ಬಿಲಿಯನ್. ಆದರೆ ಇಂದು, ಭಾರತವು ₹6.27 ಲಕ್ಷ ಕೋಟಿ ಮೊಬೈಲ್ ಫೋನ್‌ಗಳನ್ನು ಉತ್ಪಾದಿಸುತ್ತಿದೆ, ಅಂದರೆ ಸುಮಾರು $30 ಬಿಲಿಯನ್! ಇದೇ ಕಾರಣಕ್ಕೆ ಇಂದು ಸ್ಮಾರ್ಟ್ಫೋನ್ ಬೆಲೆಯಲ್ಲಿ ಹಿಂದಿಗಿಂತಲೂ ದರವು ಕಡಿಮೆ ಆಗುತ್ತಿರುವುದಕ್ಕೆ ಕಾರಣವಾಗಿದೆ.
ಈ ಕುರಿತು ಕೇಂದ್ರ ಸಂವಹನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮಾಹಿತಿ ನೀಡಿದ್ದಾರೆ. ಇಂಡಿಯನ್ ಫೌಂಡೇಶನ್ ಫಾರ್ ಕ್ವಾಲಿಟಿ ಮ್ಯಾನೇಜ್‌ಮೆಂಟ್'-2026 ಉದ್ದೇಶಿಸಿ ಮಾತನಾಡಿದ ಸಚಿವರು, 2020ರಲ್ಲಿ ಭಾರತದ ಮೊಬೈಲ್ ಉತ್ಪಾದನಾ ಉದ್ಯಮವು ಸುಮಾರು 2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ಗಳನ್ನು ಉತ್ಪಾದಿಸುತ್ತಿತ್ತು, ಆದರೆ ಇಂದು ಅದು ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.
ಇಂದು ದೇಶದಲ್ಲಿ ಬಳಕೆಯಾಗುವ ಎಲ್ಲಾ ಮೊಬೈಲ್ ಫೋನ್‌ಗಳು ನೂರಕ್ಕೆ ನೂರರಷ್ಟು ಭಾರತದಲ್ಲೇ ತಯಾರಾಗುತ್ತಿದ್ದು, 135 ಕೋಟಿ ಮೊಬೈಲ್ ಸಂಪರ್ಕಗಳೊಂದಿಗೆ ಭಾರತವು ಇಂದು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ದೂರಸಂಪರ್ಕ ಮಾರುಕಟ್ಟೆಯಾಗಿದೆ ಎಂದು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದರು.
4G ವಿಷಯದಲ್ಲಿ ಭಾರತವು ಜಗತ್ತನ್ನು ಅನುಸರಿಸಿತ್ತು, 5Gಯಲ್ಲಿ ಜಗತ್ತಿನೊಂದಿಗೆ ಹೆಜ್ಜೆ ಹಾಕಿತು ಮತ್ತು 6Gಯಲ್ಲಿ ಜಗತ್ತಿಗೇ ನಾಯಕತ್ವ ವಹಿಸಲಿದೆ ಎಂದ ಸಚಿವರು, ದೇಶವು ದೂರಸಂಪರ್ಕ ಉಪಕರಣಗಳ ಆಮದುದಾರನ ಸ್ಥಾನದಿಂದ ರಫ್ತುದಾರನ ಸ್ಥಾನಕ್ಕೆ ಏರಿದೆ ಎಂದು ತಿಳಿಸಿದರು. ದೇಶದಲ್ಲಿ ಎಂಟರಿಂದ ಒಂಬತ್ತು ಸೆಮಿಕಂಡಕ್ಟರ್ ಉತ್ಪಾದನಾ ಘಟಕಗಳು ಸ್ಥಾಪನೆಯಾಗುತ್ತಿದ್ದು, ಇದರಲ್ಲಿ ಈಶಾನ್ಯ ರಾಜ್ಯವೊಂದರಲ್ಲಿ ಸ್ಥಾಪನೆಯಾಗಲಿರುವ ಘಟಕವೂ ಸೇರಿದೆ ಎಂದು ಸಚಿವರು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ