
ನವದೆಹಲಿ: ಸಾಮಾನ್ಯವಾಗಿ ಚುನಾವಣೆಗೂ ಮುನ್ನ ಮಂಡಿಸುವ ಬಜೆಟ್‌ನಲ್ಲಿ ಮತದಾರರನ್ನು ಓಲೈಸಲು ಬಂಪರ್ ಕೊಡುಗೆಗಳು, ದೊಡ್ಡ ದೊಡ್ಡ ಯೋಜನೆಗಳು ಹಾಗೂ ತೆರಿಗೆ ವಿನಾಯ್ತಿಗಳು ಇರುತ್ತವೆ. ಆದರೆ, 2024ರ ಲೋಕಸಭೆ ಚುನಾವಣೆಗೂ ಮುನ್ನ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಅಂತಹ ಯಾವುದೇ ಓಲೈಕೆಯ ಸುಳಿವೇ ಇಲ್ಲದಿರುವುದು ರಾಜಕೀಯ ಪಕ್ಷಗಳಿಗೆ ಅಚ್ಚರಿ ಮೂಡಿಸಿದೆ.
ಆದರೆ, ‘ಹೀಗೆ ಮಾಡುವ ಮೂಲಕ ಬಿಜೆಪಿಯು ಮುಂದಿನ ಚುನಾವಣೆಯಲ್ಲಿ ತಾನು ಈವರೆಗೆ ಮಾಡಿದ ಅಭಿವೃದ್ಧಿ ಕಾರ್ಯಗಳಿಂದಲೇ ಗೆಲ್ಲುತ್ತೇನೆ ಎಂಬ ಆತ್ಮವಿಶ್ವಾಸವನ್ನು ತೋರಿಸಿದೆ. ವಿಪಕ್ಷಗಳಿಗೆ ಈ ಆಯವ್ಯಯವೇ ಬಿಜೆಪಿ ತನ್ನ ಗೆಲುವಿನ ಬಗ್ಗೆ ಅದಮ್ಯ ವಿಶ್ವಾಸ ಹೊಂದಿದೆ ಎಂಬ ಸಂದೇಶವನ್ನು ರವಾನಿಸಿದೆ’ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸಿದ್ದಾರೆ.
ಇದನ್ನು ಬಜೆಟ್ ಭಾಷಣದಲ್ಲೇ ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ. ‘ನಾವು ಜುಲೈನಲ್ಲಿ ಮಂಡಿಸಲಿರುವ ಪೂರ್ಣ ಬಜೆಟ್‌ನಲ್ಲಿ ವಿಕಸಿತ ಭಾರತಕ್ಕೆ ಸಂಪೂರ್ಣ ನೀಲನಕ್ಷೆಯನ್ನು ಪ್ರಕಟಿಸುತ್ತೇವೆ’ ಎಂದು ಅವರು ಹೇಳಿದ್ದಾರೆ. ತನ್ಮೂಲಕ, ಚುನಾವಣೆಪೂರ್ವ ಬಜೆಟ್‌ನಲ್ಲಿ ಜನಪ್ರಿಯ ಘೋಷಣೆಗಳಿರಬೇಕು ಮತ್ತು ಅದು ಓಲೈಕೆ ಬಜೆಟ್ ಆಗಿರಬೇಕು ಎಂಬ ರಾಜಕೀಯ ಪಕ್ಷಗಳ ಹಲವಾರು ದಶಕಗಳ ಸಂಪ್ರದಾಯಕ್ಕೆ ತಿಲಾಂಜಲಿ ನೀಡಿದ್ದಾರೆ.
ಚುನಾವಣೆ ಹೊಸ್ತಿಲಲ್ಲಿ ಮೋದಿ ಸರ್ಕಾರ ಹೊಸ ಘೋಷಣೆ ಮಾಡಿಲ್ಲ ಯಾಕೆ? ಬಜೆಟ್ ವಿಶ್ಲೇಷಣೆ!
ಮೊದಲೇ ಸುಳಿವು ನೀಡಿದ್ದ ಮೋದಿ:
ಈ ಬಾರಿಯ ಬಜೆಟ್‌ನಲ್ಲಿ ದೊಡ್ಡ ದೊಡ್ಡ ಘೋಷಣೆಗಳಾಗಲೀ, ಉಚಿತ ಕೊಡುಗೆಗಳಾಗಲೀ ಅಥವಾ ಓಲೈಕೆಯ ಕ್ರಮಗಳಾಗಲೀ ಇರುವುದಿಲ್ಲ ಎಂಬುದರ ಸುಳಿವನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಬುಧವಾರ ಬಜೆಟ್ ಅಧಿವೇಶನದ ಆರಂಭದಲ್ಲಿ ನೀಡಿದ್ದರು. ‘ಚುನಾವಣೆಗೂ ಮುನ್ನ ನಾವು ಪೂರ್ಣ ಬಜೆಟ್ ಮಂಡಿಸುವುದಿಲ್ಲ. ಅದನ್ನು ಹೊಸ ಸರ್ಕಾರ ಬಂದ ನಂತರ ಮಾಡುತ್ತೇವೆ. ಈಗ ಮಂಡಿಸಲಿರುವ ಮಧ್ಯಂತರ ಬಜೆಟ್ ನಮಗೆ ಮಾರ್ಗದರ್ಶಿ ದಾಖಲೆಯಾಗಲಿದೆ. ಖಂಡಿತ ನಮ್ಮ ದೇಶ ಮುಂಬರುವ ವರ್ಷಗಳಲ್ಲಿ ಶ್ರೀಮಂತಿಕೆಯ ಹೊಸ ಎತ್ತರಗಳನ್ನು ತಲುಪಲಿದೆ ಎಂಬ ಆಶಾಭಾವನೆ ನನಗಿದೆ. ಅಭಿವೃದ್ಧಿಯ ಫಲವನ್ನು ಎಲ್ಲರೂ ಉಣ್ಣುತ್ತಿದ್ದಾರೆ. ನಿಮ್ಮ ಆಶೀರ್ವಾದಗಳೊಂದಿಗೆ ಈ ಪ್ರಯಾಣ ಮುಂದುವರೆಯಲಿದೆ. ರಾಮ್ ರಾಮ್’ ಎಂದು ಮೋದಿ ಹೇಳಿದ್ದರು.
ತೆರಿಗೆದಾರರು, ವಿಪಕ್ಷಗಳ ನಿರೀಕ್ಷೆ ಹುಸಿ:
ಆದರೂ ಇದು ಚುನಾವಣೆಗೆ ಮುನ್ನ ಮಂಡಿಸುವ ಬಜೆಟ್ ಆಗಿರುವುದರಿಂದ ತೆರಿಗೆ ಪಾವತಿದಾರರು ಕೆಲ ಕೊಡುಗೆಗಳನ್ನು ನಿರೀಕ್ಷಿಸಿದ್ದರು. ಆದಾಯ ತೆರಿಗೆ ವಿನಾಯ್ತಿ ಮಿತಿ ವಿಸ್ತರಣೆ ಮಾಡಲಾಗುತ್ತದೆ ಎಂದು ವದಂತಿಗಳು ಹರಡಿದ್ದವು. ಕೆಲ ವಿಪಕ್ಷ ನಾಯಕರು ಈ ಬಾರಿ ಕೇಂದ್ರ ಸರ್ಕಾರ ಜನಪ್ರಿಯ ಬಜೆಟ್ ಮಂಡಿಸಲಿದೆ ಎಂದು ನಿರೀಕ್ಷಿಸಿದ್ದರು. ಆದರೆ ಬಜೆಟ್‌ನಲ್ಲಿ ಅವ್ಯಾವುವೂ ಇರಲಿಲ್ಲ. ಬಜೆಟ್ ಕೇವಲ ಆತ್ಮವಿಶ್ವಾಸ ಮತ್ತು ಭವಿಷ್ಯದ ಕುರಿತ ಆಶಾಭಾವನೆಯ ದಾಖಲೆ ಮಾತ್ರ ಆಗಿರುವುದನ್ನು ನೋಡಿ ಅವರು ಅಚ್ಚರಿಗೊಂಡಿದ್ದಾರೆ.
ಸಂಪೂರ್ಣ ಎಲೆಕ್ಟ್ರಿಕ್ ವಾಹನ ಗುರಿ, ಬಜೆಟ್‌ನಲ್ಲಿ ಇವಿ ಉತ್ಪಾದನೆ, ಚಾರ್ಜಿಂಗ್‌ಗೆ ಉತ್ತೇಜನ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ