ಜಾರ್ಖಂಡ್‌ನಲ್ಲಿ ಆಪರೇಶನ್ ಭೀತಿ, ಜೆಎಂಎಂ-ಕಾಂಗ್ರೆಸ್ ಪಕ್ಷದ 43 ಶಾಸಕರು ಹೈದರಾಬಾದ್ ಶಿಫ್ಟ್!

By Suvarna NewsFirst Published Feb 1, 2024, 9:06 PM IST
Highlights

ಜಾರ್ಖಂಡ್‌ನಲ್ಲಿ ಹೊಸ ಸರ್ಕಾರ ರಚಿಸಲು ಚಂಪಾಯ್ ಸೊರೆನ್ ರಾಜ್ಯಪಾಲರಲ್ಲಿ ಅನುಮತಿ ಕೋರಿದ ಬೆನ್ನಲ್ಲೇ ರಾಜಕೀಯ ತಲ್ಲಣ ಶುರುವಾಗಿದೆ. ಜೆಎಂಎಂ, ಕಾಂಗ್ರೆಸ್ ಸೇರಿದ ಮೈತ್ರಿ ಪಕ್ಷಗಳ 43 ಶಾಸಕರನ್ನು ಇದೀಗ ಹೈದರಾಬಾದ್‌ಗೆ ಶಿಫ್ಟ್ ಮಾಡಲಾಗುತ್ತಿದೆ. ಈ ಮೂಲಕ ಬಿಜೆಪಿ ಆಪರೇಶನ್ ಮಾಡದಂತೆ ಶಾಸಕರನ್ನು ಕಾಪಾಡಲು ರಾಜಕೀಯದ ಜನಪ್ರಿಯ ಪ್ಲಾನ್ ಪ್ರಯೋಗಿಸಿದೆ.

ರಾಂಚಿ(ಫೆ.01) ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಭೂಹಗರಣದಲ್ಲಿ ಜೈಲು ಸೇರಿದ್ದಾರೆ. ಬಂಧನದ ಬೆನ್ನಲ್ಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಹೀಗಾಗಿ ಜಾರ್ಖಂಡ್‌ನಲ್ಲಿ ಸರ್ಕಾರ ರಚಿಸಲು ಹೇಮಂತ್ ಸೊರೆನ್ ಅವರ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಹಿರಿಯ ನಾಯಕ, ಸಾರಿಗೆ ಸಚಿವರಾಗಿದ್ದ ಚಂಪಾಯ್ ಸೊರೆನ್ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಲಾಗಿದೆ. ಚಂಪಾಯ್ ಈಗಾಗಲೇ ರಾಜ್ಯಪಾಲರಲ್ಲಿ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಆದರೆ ರಾಜ್ಯಪಾಲರ ಅನುಮತಿ ವಿಳಂಬವಾಗುತ್ತಿದ್ದಂತೆ ಇತ್ತ ಇಂಡಿಯಾ ಮೈತ್ರಿ ಪಕ್ಷಗಳ ಸರ್ಕಾರಕ್ಕೆ ಆಪರೇಶನ್ ಭೀತಿ ಎದುರಾಗಿದೆ. ಬಿಜೆಪಿ ತಮ್ಮ ನಾಯಕರನ್ನು ಆಪರೇಶನ್ ಮಾಡಲಿದೆ ಎಂದು ಬೆದರಿ ಇದೀಗ 43 ಶಾಸಕರನ್ನು ಹೈದರಾಬಾದ್‌ಗೆ ಸ್ಥಳಾಂತರಿಸುತ್ತಿದೆ.

ಚಂಪಾಯ್ ಸೊರೆನ್ ಸರ್ಕಾರ ರಚಿಸಲು ಜೆಎಂಎಂ ಸೇರಿದಂತೆ ಇತರ ಮೈತ್ರಿ ಪಕ್ಷಗಳ 43 ಶಾಸಕರು ಬೆಂಬಲ ಸೂಚಿಸಿದ್ದರೆ. ಆದರೆ ರಾಜ್ಯಾಪಾಲರು ಸರ್ಕಾರ ರಚಿಸವು ಚಂಪಾಯ್ ಸೊರೆನ್‌ಗೆ ಆಹ್ವಾನ ನೀಡದ ಹಿನ್ನಲೆಯಲ್ಲಿ ಜೆಎಂಎಂ ಪಕ್ಷಕ್ಕೆ ಆತಂಕ ಹೆಚ್ಚಾಗಿದೆ. ಬಿಜೆಪಿ ಶಾಸಕರನ್ನು ಸೆಳೆದು ಹೊಸ ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂದು ಇದೀಗ ರಾಂಚಿಯಿಂದ ಶಾಸಕರನ್ನು ಹೈದರಾಬಾದ್‌ಗೆ ಸ್ಥಳಾಂತರ ಮಾಡಲಾಗುತ್ತಿದೆ.

Latest Videos

ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅರೆಸ್ಟ್, ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ!

ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ ಶಾಸಕರು ರಾಂಚಿ ವಿಮಾನ ನಿಲ್ದಾಣದಿಂದ ಹೈದರಾಬಾದ್‌ಗೆ ಪ್ರಯಾಣ ಬೆಳೆಸಿದ್ದಾರೆ. ಇತ್ತ ಹೈದರಾಬಾದ್ ವಿಮಾನ ನಿಲ್ದಾಣಲ್ಲಿ ಶಾಸಕರನ್ನು ರೆಸಾರ್ಟ್‌ಗೆ ಕರೆದೊಯ್ಯಲು ಬಸ್‌ಗಳು ನಿಂತಿವೆ. ಮೂಲಗಳ ಪ್ರಕಾರ ತೆಲಂಗಾಣ ಕಾಂಗ್ರೆಸ್ ಪಕ್ಷ ರಾಂಚಿಯಿಂದ ಹೈದರಾಬಾದ್‌ಗೆ ಆಗಮಿಸುತ್ತಿರುವ ಶಾಸಕರಿಗೆ ಎಲ್ಲಾ ವ್ಯವಸ್ಥೆ ಮಾಡಿದೆ. ರೆಸಾರ್ಟ್ ಬುಕಿಂಗ್, ತೆರಳಲು ಬಸ್ ಬುಕಿಂಗ್ ಮಾಡಿದೆ.

ಜೆಎಂಎಂ ಶಾಸಕರು ಬಿಜೆಪಿ ಸಂಪರ್ಕಕ್ಕೆ ಬರುವುದನ್ನು ತಡೆಯಲು ಪಕ್ಷವು ಒಂದು 12 ಸೀಟಿನ ಮತ್ತು ಇನ್ನೊಂದು 37 ಸೀಟಿನ ಎರಡು ಚಾರ್ಟಡ್‌ ವಿಮಾನಗಳಲ್ಲಿ ಎಲ್ಲ ಶಾಸಕರನ್ನು ಹೈದರಾಬಾದ್‌ಗೆ ಕರೆದೊಯ್ಯಲು ಸಿದ್ಧತೆ ನಡೆಸಿದೆ. ಒಟ್ಟು 81 ವಿಧಾನಸಭೆ ಬಲ ಹೊಂದಿರುವ ಜಾರ್ಖಂಡ್‌ನಲ್ಲಿ ಸರ್ಕಾರ ರಚನೆಗೆ 41 ಶಾಸಕರ ಬೆಂಬಲ ಬೇಕು. ಜೆಎಂಎಂ-ಕಾಂಗ್ರೆಸ್‌ ಕೂಟಕ್ಕೆ 47 ಸದಸ್ಯರ ಬಲವಿದೆ.

ಇ.ಡಿ. ವಿರುದ್ಧವೇ ಎಸ್ಸಿಎಸ್ಟಿ ಕಾಯ್ದೆ ಅಡಿ ಜಾರ್ಖಂಡ್‌ ನಿರ್ಗಮಿತ ಸಿಎಂ ಹೇಮಂತ್ ಸೊರೇನ್‌ ಕೇಸು

ಇತ್ತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮನ್ನು ಇ.ಡಿ. (ಜಾರಿ ನಿರ್ದೇಶನಾಲಯ) ಬಂಧಿಸಿರುವ ವಿರುದ್ಧ ಜಾರ್ಖಂಡ್‌ನ ನಿರ್ಗಮಿತ ಮುಖ್ಯಮಂತ್ರಿ, ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದಾರೆ.
 

click me!