ಚುನಾವಣೆ ಹೊಸ್ತಿಲಲ್ಲಿ ಮೋದಿ ಸರ್ಕಾರ ಹೊಸ ಘೋಷಣೆ ಮಾಡಿಲ್ಲ ಯಾಕೆ? ಬಜೆಟ್ ವಿಶ್ಲೇಷಣೆ!
ಲೋಕಸಭಾ ಚುನಾವಣಾ ಹೊಸ್ತಿಲಿನಲ್ಲಿ ನಿಂತಿರುವಾಗ ಈ ಬಜೆಟ್ ನಲ್ಲಿ ನರೇಂದ್ರ ಮೋದಿ ಬಿಜೆಪಿ ಸರ್ಕಾರ ಯಾಕೆ ಯಾವುದೇ ಹೊಸ ಘೋಷಣೆಗಳನ್ನು ಮಾಡಲಿಲ್ಲ?. ಜೊತೆಗೆ ಆರ್ಥಿಕ ಗಣತಿಯನ್ನು ಯಾಕೆ ಬಿಡುಗಡೆ ಮಾಡಲಿಲ್ಲ? ಕೇಂದ್ರ ಮಧ್ಯಂತರ ಬಜೆಟ್ ಕುರಿತು ಕಾಂಗ್ರೆಸ್ ವಕ್ತಾರ ಅನಿಲ್ ಕುಮಾರ್ ತಡ್ಕಲ್ ಅವರ ವಿಶ್ಲೇಷಣೆ ಇಲ್ಲಿದೆ.
ಪ್ರತೀ ಬಜೆಟ್ ಗಳು ದೇಶದ ಸಾಮಾನ್ಯ ಪ್ರಜೆಗಳಿಂದ ಹಿಡಿದು, ಸಣ್ಣ ಉದ್ಯಮಿಗಳು, ದೊಡ್ಡ ಉದ್ದಿಮೆದಾರರು, ವರ್ತಕರು, ನೌಕರರು ಎಲ್ಲರಲ್ಲೂ ಕುತೂಹಲ ಮೂಡಿಸುತ್ತದೆಯಾದರೂ, ಚುನಾವಣಾ ಹೊಸ್ತಿಲಿನಲ್ಲಿ ನಿಂತಿರುವಾಗ ಯಾವುದೇ ಸರ್ಕಾರಗಳಿಗೂ ಆ ಕೊನೆಯ ಮಧ್ಯಂತರ ಬಜೆಟ್ ನಲ್ಲಿ ಯಾವುದೇ ಹೊಸ ಸ್ಕೀಮ್ ಗಳಾಗಲಿ, ಹೊಸದೊಂದು ಪ್ರಾಜೆಕ್ಟಿಗೆ ಹಣ ಎತ್ತಿಡುವುದಾಗಲಿ ಅಥವಾ ಯಾವುದೇ ಆಶ್ವಾಸನೆಗಳನ್ನು ನೀಡುವುದಕ್ಕಾಗಲಿ ಚುನಾವಣಾ ನೀತಿ ಸಂಹಿತೆಯ ಪ್ರಕಾರ ಅವಕಾಶವಿರುವುದಿಲ್ಲ. ಈ ಕಾರಣದಿಂದ ಮಧ್ಯಂತರ ಬಜೆಟ್ ಒಂದು ಹಳೆಯ ವರ್ಷದ ಲೆಕ್ಕಾಚಾರಗಳ, ಆಗುಹೋಗುಗಳ ಪಟ್ಟಿ ಬಿಡುಗಡೆಯೆಂದೇ ಪರಿಗಣಿಸಬಹುದು. ಹಾಗೆಂದ ಮಾತ್ರಕ್ಕೆ ಇಲ್ಲಿಯವರೆಗೆ ಮಧ್ಯಂತರ ಬಜೆಟ್ ನಲ್ಲಿ ಯಾವುದೇ ಘೋಷಣೆಗಳಾಗಲಿಲ್ಲವೆಂದಲ್ಲ. ಉದಾಹರಣೆಗೆ, ಕಳೆದ ಚುನಾವಣೆಯ ಮುಂಚಿನ ಬಜೆಟ್ ನಲ್ಲಿ ಸರ್ಕಾರ ರೈತರಿಗೆ ಆರು ಸಾವಿರ ರೂಪಾಯಿ ವಾರ್ಷಿಕ ಧನಸಹಾಯ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈ ಬಾರಿಯ ಬಜೆಟ್ ಅನ್ನು ವಿಶ್ಲೇಷಿಸುವುದಾದರೆ , ಮೊತ್ತ ಮೊದಲನೆಯದಾಗಿ ಕಾಡುವ ಪ್ರಶ್ನೆ ಈ ಸಲವೂ ಚುನಾವಣಾ ಹೊಸ್ತಿಲಿನಲ್ಲಿ ನಿಂತಿರುವಾಗ ಈ ಬಜೆಟ್ ನಲ್ಲಿ ನರೇಂದ್ರ ಮೋದಿಯವರ ಸರ್ಕಾರ ಯಾಕೆ ಯಾವುದೇ ಹೊಸ ಘೋಷಣೆಗಳನ್ನು ಮಾಡಲಿಲ್ಲ ಎನ್ನುವುದಾಗಿದೆ. ಜೊತೆಗೆ ಆರ್ಥಿಕ ಗಣತಿಯನ್ನು ಯಾಕೆ ಬಿಡುಗಡೆ ಮಾಡಲಿಲ್ಲ ಎನ್ನುವುದೂ ಆಗಿದೆ.
ಯಾವುದೇ ಒಂದು ದೇಶ ನಡೆಯಬೇಕಾದರೆ ಆಧಾರವಾಗಿ ಆದಾಯದ ಮೂಲವಿರಬೇಕು. ಹಾಗೆ ದೇಶದ ಮಹತ್ವದ ಆದಾಯದ ಮೂಲವೆಂದರೆ ಮೊದಲನೆಯದಾಗಿ, ನಮ್ಮ ತೆರಿಗೆ. ಅದು ಆದಾಯ ತೆರಿಗೆ, ಜೆಎಸ್ ಟಿ ಮತ್ತು ಕಾರ್ಪೊರೇಟ್ ತೆರಿಗೆ ಯಾವುದೇ ರೂಪದಲ್ಲಾಗಿರಬಹುದು. ಇದನ್ನು ರೆವಿನ್ಯೂ ರಸೀದಿ ಎಂದು ಕರೆಯಲಾಗುತ್ತದೆ. ಎರಡನೆಯದು, ಖಾಸಗೀಕರಣ ಅಥವಾ ಆಸ್ತಿಯ ಮೂಲದಿಂದ ಹುಟ್ಟುವ ಆದಾಯ ಅಂದರೆ ಕ್ಯಾಪಿಟಲ್ ರಸೀದಿ ಅನ್ನುವುದಾಗಿದೆ. ಹೀಗೆ ಬೇರೆ ಬೇರೆ ರೂಪದ ಆದಾಯಗಳಿಂದ ದೇಶದ ಬಂಡಿ ನಡೆಯಲ್ಪಡುತ್ತದೆ.
ಯಾವುದೇ ಒಂದು ಸರ್ಕಾರ ಸುಭದ್ರವಾಗಿರಬೇಕೆಂದರೆ ಆದಾಯಕ್ಕಿಂತ ಕರ್ಚುವೆಚ್ಚ ಕಡಿಮೆಯಿರಬೇಕು. ಆಗಲೇ ದೇಶ ಯಾವುದೇ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಸಾಧ್ಯವಾಗುವುದು. ಇದನ್ನೇ ಹಣಕಾಸಿನ ಭಾಷೆಯಲ್ಲಿ ಹೇಳುವುದಾದರೆ, ರೆವಿನ್ಯೂ ರಸೀದಿ ಯಾವಾಗಲೂ ರೆವಿನ್ಯೂ ಎಕ್ಸ್ ಪೆಂಡಿಚರ್ ಗಿಂತ ಜಾಸ್ತಿಯಿರಬೇಕು. ಈ ರೆವಿನ್ಯೂ ರಸೀದಿ ದೇಶಕ್ಕೆ ತೆರಿಗೆ ರೂಪದಲ್ಲಿ ಸಂದಾಯವಾಗುತ್ತಿರುತ್ತದೆ. ಇನ್ನು ರೆವಿನ್ಯೂ ಎಕ್ಸ್ ಪೆಂಡಿಚರ್ ನ ಪಟ್ಟಿಯಲ್ಲಿ ವೇತನ, ಸಬ್ಸಿಡಿ, ಸಾಲದ ಮೇಲಿನ ತೆರಿಗೆ ಪಾವತಿ ಇತ್ಯಾದಿಗಳು ಸೇರುತ್ತವೆ. ಈಗ ವಾಸ್ತವಕ್ಕೆ ಹತ್ತಿರದ ಮಾತು ಹೇಳಬೇಕೆಂದರೆ, ಯಾವುದೇ ಒಂದು ಸರ್ಕಾರ ಅಥವಾ ಮನೆ ಸಾಲವಿಲ್ಲದೆ ನಡೆಯಲು ಸಾಧ್ಯವಿಲ್ಲ. ಆದರೆ, ಮನೆಯ ಯಜಮಾನ ಅಥವಾ ಸರ್ಕಾರದ ಸೂತ್ರವನ್ನು ಹಿಡಿದವರಿಗೆ ಎಷ್ಟು ಸಾಲ ಯಾವುದಕ್ಕೆ ಮಾಡಬೇಕೆನ್ನುವ ವಿವೇಚನೆ ಇರಬೇಕಾಗುತ್ತದೆ. ಯಾಕೆಂದರೆ ನಮ್ಮ ದೇಶದ ಬಜೆಟ್ ನ ಗಾತ್ರ 45 ಲಕ್ಷ ಕೋಟಿಯಾಗಿದ್ದರೆ, ಈ ದೇಶದ ಸಾಲವಿರುವುದು ಸರಿ ಸುಮಾರು 184ಲಕ್ಷ ಕೋಟಿ. ಹಾಗೆಂದ ಮಾತ್ರಕ್ಕೆ ಹಿಂದಿರುವ ಸರ್ಕಾರಗಳು ಸಾಲವಿಲ್ಲದೆ ಸರ್ಕಾರ ನಡೆಸಿವೆಯೆಂದಲ್ಲ. ಎಲ್ಲ ಸರ್ಕಾರಗಳೂ ಸಾಲ ಮಾಡಿವೆ. ಆದರೆ ಈ ಸರ್ಕಾರದ ಸಾಲದ ಮೊತ್ತ ನೋಡಿದರೆ ಈ ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎನ್ನುವ ಆತಂಕ ಕಾಡುವುದಂತೂ ನಿಜ. 1947ರಿಂದ 2014ರವರೆಗೂ ದೇಶದ ಮೇಲಿದ್ದಂತಹ ಸಾಲ ಸರಿಸುಮಾರು 56ಲಕ್ಷ ಕೋಟಿ. ಆದರೆ, ಇಂಡಿಯಾ ಬಜೆಟ್ ವೆಬ್ ಸೈಟಿನ ಮೂಲದ ಪ್ರಕಾರ 2014-15ರಿಂದ 2024-25ರವರೆಗೆ ದೇಶದ ಸಾಲ ಸರಿಸುಮಾರು 184ಲಕ್ಷ ಕೋಟಿ. ಇದು ನಮ್ಮ ದೇಶದ ಆದಾಯಕ್ಕೆ ನಾಲ್ಕು ಪಟ್ಟು ಹೆಚ್ಚು!
UNION BUDGET 2024: ಮತ್ಸ್ಯಸಂಪದ ಯೋಜನೆಯಿಂದ ಸಮುದ್ರ ಉತ್ಪನ್ನಗಳ ರಫ್ತು ಹೆಚ್ಚಳ,ಭಾರೀ ಉದ್ಯೋಗ ಸೃಷ್ಟಿ ನಿರೀಕ್ಷೆ!
ಈ ಸಾಲದ ಮೊತ್ತದ ವಿಚಾರ ಬಂದಾಗ ಸರ್ಕಾರ ಸಮರ್ಥನೆ ಮಾಡಿಕೊಳ್ಳುವುದೇನೆಂದರೆ ಕೋವಿಡ್ ನ ಕಾರಣದಿಂದ ದೇಶದ ಸಾಲ ಹೆಚ್ಚಾಯಿತು ಎನ್ನುವುದು. ಆದರೆ ಪ್ರಶ್ನೆಯಿರುವುದು, ಸರ್ಕಾರದಲ್ಲಿ ಮೂರು ತರಹದಲ್ಲಿ ಹಣವನ್ನು ಎತ್ತಿಡಲಾಗುತ್ತದೆ. ಕ್ರೋಢೀಕರಿಸಲಾದ ಮೊತ್ತ( Consolidated fund), ಆಕಸ್ಮಿಕ ದುರ್ಘಟನಾ ಮೊತ್ತ (Contengency fund), ಮತ್ತೊಂದು ಸಾರ್ವಜನಿಕ ಖಾತೆಗಳ ಮೊತ್ತ(Public Accounts fund). ಕೋವಿಡ್ ನ ಸಮಯದಲ್ಲಿ ದೇಶದಲ್ಲಿ "ರಾಷ್ಟ್ರೀಯ ದುರಂತ"ವೆಂದು ಘೋಷಿಸಲ್ಪಟ್ಟ ಮೇಲೆ ಆಕಸ್ಮಿಕ ದುರ್ಘಟನಾ ಮೊತ್ತ ಅದಕ್ಕಾಗಿ ವಿನಿಯೋಗಿಸಲ್ಪಡಬೇಕಿತ್ತು. ಪ್ರಶ್ನೆಯಿರುವುದು, ಆ ಮೊತ್ತ ಎಲ್ಲಿ ಹೋಯಿತು? ಒಂದು ವೇಳೆ ಆ ಮೊತ್ತ ವಿನಿಯೋಗಿಸಲ್ಪಟ್ಟಿದ್ದರೆ ದೇಶದ ಆರ್ಥಿಕತೆಯ ಮೇಲೆ ಅದು ಹೇಗೆ ಹೊರೆಯಾಗಲು ಸಾಧ್ಯ ಎನ್ನುವುದಾಗಿದೆ.
ಇನ್ನೊಂದು ಪ್ರಮುಖ ಕಾರಣ ಸರ್ಕಾರ ನೀಡುವುದೆಂದರೆ, ನಾವು ಅಭಿವೃದ್ಧಿಗೆ ಹೂಡಿಕೆ ಮಾಡಿದ್ದೇವೆನ್ನುವುದು. ಅಭಿವೃದ್ಧಿಯ ವಿಚಾರ ಬಂದಾಗ ವಿಮಾನ ನಿಲ್ದಾಣ, ಬಂದರು, ರಸ್ತೆ ಮುಂತಾದವುಗಳು ಬಂಡವಾಳ ರಸೀದಿಯ ಲೆಕ್ಕದಲ್ಲಿ ಪ್ರಮುಖವಾಗಿ ಬರುತ್ತವೆ. ಆದರೆ ಸಮಸ್ಯೆಯಿರುವುದು ಈ ಎಲ್ಲವನ್ನೂ ಖಾಸಗೀಕರಣಗೊಳಿಸಲಾಗಿದೆ ಅಥವಾ ಖಾಸಗೀ ಸಹಭಾಗಿತ್ವದಲ್ಲಿ ಮಾಡಲಾಗಿದೆ. ಹೀಗಿದ್ದ ಮೇಲೆ ಹೂಡಿಕೆಯ ಮಾತೆಲ್ಲಿಂದ ಬಂತು ಅನ್ನುವುದೂ ಕೇಳಬೇಕಾದ ಪ್ರಶ್ನೆಯಾಗಿದೆ.
Union Budget 2024:ಬಡವರ ಕಲ್ಯಾಣದಿಂದ ದೇಶದ ಕಲ್ಯಾಣ; ಬಡತನ ನಿರ್ಮೂಲನೆಗೆ ಹಲವು ಕ್ರಮ
2023-24ರ ಬಜೆಟ್ ನಲ್ಲಿ ಸರಿಸುಮಾರು 10ಲಕ್ಷ ಕೋಟಿ ರೂಪಾಯಿಗಳನ್ನು ಉದ್ಯೋಗ ಸೃಷ್ಟಿಗಾಗಿ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ಘೋಷಿಸಲಾಗಿತ್ತು. ಈಗಿಲ್ಲಿ ಜ್ಞಾಪಿಸಬೇಕಾದ ಒಂದು ವಿಷಯವೆಂದರೆ, ಈ ಸರ್ಕಾರದ ರೈಲ್ವೇ ಇಲಾಖೆಯಲ್ಲಿ 35ಸಾವಿರ ಹುದ್ದೆಗಳಿಗಾಗಿ ನೇಮಕಾತಿಗೆ ಕರೆದಾಗ ಒಂದೂಕಾಲು ಕೋಟಿ ಅರ್ಜಿಗಳು ಬಂದಿದ್ದವು. ಇವೆಲ್ಲವನ್ನೂ ಕ್ರೋಢೀಕರಿಸಿ ಸರ್ಕಾರದ ದಾಖಲೆಗಳ ಪ್ರಕಾರ ನೋಡುವುದಾದರೆ ಇವತ್ತಿಗೆ ದೇಶದ ನಿರುದ್ಯೋಗ ಪ್ರಮಾಣ ಕಳೆದ ನಾಲ್ಕು ದಶಕಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚು. ಹಾಗಿದ್ದ ಮೇಲೆ 10ಲಕ್ಷ ಕೋಟಿಯ ಉದ್ಯೋಗ ಸೃಷ್ಟಿಗಾಗಿ ಮಾಡಿದ ಬಂಡವಾಳ ಹೂಡಿಕೆ ಎಲ್ಲಿ ಹೋಯಿತು ಅನ್ನುವುದು ಕೂಡ ಕಾಡುವ ಪ್ರಶ್ನೆ.
ಒಟ್ಟಾರೆಯಾಗಿ, ದೇಶದ ಸಂಪತ್ತನ್ನೂ ಕಳೆದುಕೊಂಡು, ನಿರುದ್ಯೋಗವೂ ಹೆಚ್ಚಾಗಿ, ಮೇಲೆ ಸಾಲವನ್ನೂ ಹೆಚ್ಚಿಸಿಕೊಂಡು ಸರ್ಕಾರ ಯಾವ ದಿಕ್ಕಿನಲ್ಲಿ ಸಾಗುತ್ತಿದೆ? ದೇಶದ ಯುವ ಜನತೆ ಯಾವ ರೂಪದಲ್ಲಿ ಸರ್ಕಾರದ ಆಶ್ವಾಸನೆಗಳನ್ನು ನೋಡಬೇಕಿದೆ ಮತ್ತು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಬೇಕಿದೆ ಅನ್ನುವುದು ಒಂದು ಯಕ್ಷಪ್ರಶ್ನೆಯೇ ಸರಿ. ಹಾಗಾಗಿ ಈ ಮಧ್ಯಂತರ ಬಜೆಟ್ ಒಂದು ಯಾವುದೇ ನಿರೀಕ್ಷೆಗಳಿರದ, ಯಾವುದೇ ಆಶಾವಾದವನ್ನೂ ಇಟ್ಟುಕೊಳ್ಳಬೇಕಿರದ ಆಯವ್ಯಯದ ಲೆಕ್ಕವಾಗಿ ನೋಡಬೇಕಿದೆ ಹೊರತು ಮತ್ತೇನೂ ಇಲ್ಲ.
ಅನಿಲ್ ಕುಮಾರ್ ತಡ್ಕಲ್
ಕಾಂಗ್ರೆಸ್ ವಕ್ತಾರ