
ನವದೆಹಲಿ[ಫೆ.07]: ದೇಶಾದ್ಯಂತ ನಡೆದ ಪೌರತ್ವ ವಿರೋಧಿ ಪ್ರತಿಭಟನೆಗೆ 120 ಕೋಟಿ ರು. ಹಣ ಸಂಗ್ರಹಿಸಿದ ಆರೋಪ ಹೊತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯು, ದೆಹಲಿಯ ಶಾಹೀನ್ ಬಾಗ್ ಪ್ರತಿಭಟನೆಗೂ ಭಾರೀ ಹಣ ಬೆಂಬಲ ನೀಡುತ್ತಿದೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಇದೇ ವೇಳೆ ಪಿಎಫ್‌ಐ ಸಂಘಟನೆæಯ ಜತೆ ದಿಲ್ಲಿಯ ಆಮ್ ಆದ್ಮಿ ಪಕ್ಷದ (ಆಪ್) ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರ ನಂಟು ಇರುವುದು ಜಾರಿ ನಿರ್ದೆಶನಾಲಯದ (ಇ.ಡಿ) ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಪಿಎಫ್‌ಐನ ಅಕ್ರಮ ಹಣಕಾಸು ವ್ಯವವಾರದ ಬಗ್ಗೆ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಕೇಂದ್ರ ಗೃಹ ಸಚಿವಾಲಯಕ್ಕೆ ಸಲ್ಲಿಸಿರುವ ಹೊಸ ವರದಿಯಲ್ಲಿ ಈ ಅಂಶಗಳಿವೆ ಎಂದು ಮೂಲಗಳು ತಿಳಿಸಿವೆ.
ಸಿಎಎ ಹೋರಾಟಕ್ಕೆ 120 ಕೋಟಿ ಹಣ: PFI ಸದಸ್ಯರು ನಿರುತ್ತರ!
ದೆಹಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ಕಳೆದೊಂದು ತಿಂಗಳಿನಿಂದ ಸಾವಿರಾರು ಜನ ನಿತ್ಯವೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಇಷ್ಟೊಂದು ದೊಡ್ಡ ಮಟ್ಟದ ಪ್ರತಿಭಟನೆ ಶಕ್ತಿಯ ಮೂಲ ಯಾವುದು ಎಂಬ ಮಾಹಿತಿಯ ಬೆನ್ನು ಹತ್ತಿದ್ದ ಜಾರಿ ನಿರ್ದೇಶನಾಲಯಕ್ಕೆ ಸ್ಫೋಟಕ ಮಾಹಿತಿಗಳು ಲಭ್ಯವಾಗಿದೆ. ಅದರನ್ವಯ ಶಾಹೀನ್ ಬಾಗ್ ಹೋರಾಟದಲ್ಲಿ ಸಕ್ರಿಯನಾಗಿರುವ ಪಿಎಫ್‌ಐನ ದೆಹಲಿ ಘಟಕದ ಅಧ್ಯಕ್ಷ ಪರ್ವೇಜ್, ಹೋರಾಟಕ್ಕೂ ಭಾರೀ ಹಣ ಪೂರೈಕೆ ಮಾಡಿರುವುದು ಕಂಡುಬಂದಿದೆ. ಜೊತೆಗೆ ಪ್ರತಿಭಟನೆ ವೇಳೆ ಆತ ದೆಹಲಿಯ ಕಾಂಗ್ರೆಸ್ ಮತ್ತು ಆಪ್ ನಾಯಕರ ಜೊತೆ ನಿಟಕ ನಂಟು ಹೊಂದಿರುವುದು ಕೂಡಾ ಕಂಡುಬಂದಿದೆ.
ಪಿಎಫ್‌ಐ ನಂಟು:
ಆಮ್‌ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಹಾಗೂ ದಿಲ್ಲಿ ಕಾಂಗ್ರೆಸ್ ಮುಖಂಡ ಉದಿತ್ ರಾಜ್‌ಗೆ ದಿಲ್ಲಿ ಪಿಎಫ್‌ಐ ಘಟಕದ ಅಧ್ಯಕ್ಷ ಪರ್ವೇಜ್ ಅಹ್ಮದ್ ಜೊತೆಗೆ ಆಪ್ತ ಸಂಬಂಧವಿದೆ ಎಂಬ ಮಾಹಿತಿಯನ್ನು ಇ.ಡಿ ಕಲೆ ಹಾಕಿದೆ. ಸಂಜಯ ಸಿಂಗ್ ಅವರು ಪರ್ವೇಜ್ ಜತೆ ಫೋನ್ ಕರೆ, ವೈಯಕ್ತಿಕ ಸಭೆಗಳು ಹಾಗೂ ವಾಟ್ಸಾಪ್ ಚಾಟ್ ಮೂಲಕ ಸಂಪರ್ಕದಲ್ಲಿರುತ್ತಾರೆ. ಸಂಜಯ್ ಸಿಂಗ್ ಅವರಲ್ಲದೆ, ಈ ಹಿಂದೆ ಬಿಜೆಪಿಯಲ್ಲಿದ್ದ ಹಾಗೂ ಈಗ ಕಾಂಗ್ರೆಸ್‌ನಲ್ಲಿರುವ ಮಾಜಿ ಸಂಸದ ಉದಿತ್ ರಾಜ್ ಜತೆಗೂ ಪರ್ವೇಜ್ ಸ್ನೇಹ ಹೊಂದಿದ್ದಾರೆ ಎಂದು ತಿಳಿದುಬಂದಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.
ಕೇಜ್ರಿ ಸವಾಲ್:
ಈ ನಡುವೆ ಆಪ್ ಸಂಸದ ಸಂಜಯ್‌ಸಿಂಗ್‌ಗೆ ಪಿಎಫ್‌ಐ ನಂಟಿನ ವರದಿಗಳ ಕುರಿತು ಪ್ರತಿಕ್ರಿಯೆ ನೀಡಿರುವ ಆಪ್ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಬಿಜೆಪಿ ತಾಳಕ್ಕೆ ತಕ್ಕಂತೆ ಇ.ಡಿ ಕುಣಿಯುತ್ತಿದೆ. ಒಂದು ವೇಳೆ ಸಂಜಯ್ ಸಿಂಗ್ ತಪ್ಪು ಮಾಡಿದ್ದಾರೆ ಎಂದಾದಲ್ಲಿ ಅವರನ್ನು ಬಂಧಿಸಲಿ ಎಂದು ಸವಾಲು ಹಾಕಿದ್ದಾರೆ.
ಎಸ್‌ಡಿಪಿಐ ಉಗ್ರ ಸಂಘಟನೆ: ಸ್ವತಃ ಕೇರಳ ಸಿಎಂ ಪಿಣರಾಯಿ ವಿಜಯನ್ ಹೇಳಿಕೆ
ರಾಜಕೀಯ:
ಈ ನಡುವೆ, ತಮ್ಮ ಮೇಲಿನ ಆರೋಪವನ್ನು ಸಂಜಯ್ ಮತ್ತು ಉದಿತ್ ರಾಜ್ ನಿರಾಕರಿಸಿದ್ದಾರೆ. ‘ದಿಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಇಂತಹ ಸಂಚನ್ನು ರೂಪಿಸಿದೆ ಎಂದು ಉಭಯ ನಾಯಕರು ಟೀಕಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ