'ಇದು ಕೇವಲ ಹಸಿವಿನ ಅಂತ್ಯವಷ್ಟೇ' ಉಪವಾಸ ಸತ್ಯಾಗ್ರಹ ಕೈಬಿಟ್ಟ ಬೆನ್ನಲ್ಲೇ ಸೋನಮ್ ವಾಂಗ್ಚುಕ್ ವಿಡಿಯೋ ರಿಲೀಸ್!

Published : Jul 24, 2026, 08:50 AM IST
Sonam Wangchuk

ಸಾರಾಂಶ

ಖ್ಯಾತ ಪರಿಸರ ತಜ್ಞ ಸೋನಮ್ ವಾಂಗ್ಚುಕ್ ಅವರು ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ನಡೆಸುತ್ತಿದ್ದ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದಾರೆ. ಕೇಂದ್ರ ಸರ್ಕಾರದೊಂದಿಗೆ ನಡೆದ ಮಾತುಕತೆ ಯಶಸ್ವಿಯಾಗಿದ್ದು, ಸಂಸತ್ತಿನಲ್ಲಿ ಚರ್ಚೆ ಮತ್ತು ವಿದ್ಯಾರ್ಥಿಗಳ ಮೇಲಿನ ಪ್ರಕರಣಗಳ ರದ್ದತಿ ಸೇರಿದಂತೆ ಮೂರು ಪ್ರಮುಖ ಲಿಖಿತ ಭರವಸೆಗಳನ್ನು ಪಡೆದ ನಂತರ ಅವರು ತಮ್ಮ ಹೋರಾಟವನ್ನು ಹಿಂಪಡೆದಿದ್ದಾರೆ.

ನವದೆಹಲಿ: ನೀಟ್‌ (NEET-UG 2026) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆಪತ್ರಿಕೆ ಸೋರಿಕೆ ಹಗರಣವನ್ನು ವಿರೋಧಿಸಿ ದೇಶದ ರಾಜಧಾನಿಯಲ್ಲಿ ಭಾರಿ ಸಂಚಲನ ಮೂಡಿಸಿದ್ದ ಖ್ಯಾತ ಪರಿಸರ ತಜ್ಞ , ಶಿಕ್ಷಣ ತಜ್ಞ ಹಾಗೂ ಸಮಾಜ ಸೇವಕ ಸೋನಮ್ ವಾಂಗ್ಚುಕ್ ಅವರ 26 ದಿನಗಳ ಸುದೀರ್ಘ ಉಪವಾಸ ಸತ್ಯಾಗ್ರಹವು ಅಂತಿಮವಾಗಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

ಕೇಂದ್ರ ಸರ್ಕಾರದೊಂದಿಗೆ ಸತತ ಎರಡು ದಿನಗಳ ಕಾಲ ನಡೆಸಿದ ಕಠಿಣ ಹಾಗೂ ಸುದೀರ್ಘ ಮಾತುಕತೆಯ ಬಳಿಕ, ಸರ್ಕಾರದಿಂದ ಮಹತ್ವದ ಲಿಖಿತ ಭರವಸೆಗಳನ್ನು ಪಡೆದ ಅವರು ತಮ್ಮ ಸತ್ಯಾಗ್ರಹವನ್ನು ಕೈಬಿಟ್ಟಿದ್ದಾರೆ. ಈ ಕುರಿತು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ವೀಡಿಯೊ ಸಂದೇಶ ಹಂಚಿಕೊಂಡಿರುವ ಸೋನಮ್ ವಾಂಗ್ಚುಕ್, "ಇದು ಕೇವಲ ಹಸಿವಿನ ಅಂತ್ಯವಷ್ಟೇ, ಇನ್ಮುಂದೆ ಪರೀಕ್ಷಾ ವ್ಯವಸ್ಥೆಯ ಹೊಣೆಗಾರಿಕೆಯ ಆರಂಭ" ಎಂದು ಬರೆದುಕೊಂಡಿದ್ದಾರೆ.

ಜಂತರ್ ಮಂತರ್‌ನಿಂದ ಆಸ್ಪತ್ರೆಯವರೆಗೆ ತಲುಪಿದ್ದ ಹೋರಾಟ

ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಧಕ್ಕೆ ತಂದಿರುವ ನೀಟ್ ಪರೀಕ್ಷಾ ರಿಗ್ಗಿಂಗ್ ವಿರುದ್ಧ ಸೋನಮ್ ವಾಂಗ್ಚುಕ್ ಅವರು ದೆಹಲಿಯ ಜಂತರ್ ಮಂತರ್‌ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ದಿನ ಕಳೆದಂತೆ ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದ್ದ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಅವರನ್ನು ಮೊದಲು ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಿತ್ತು. ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಗುರುಗ್ರಾಮದ ಮೇದಾಂತ (ವೇದಾಂತ) ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು.

ಗುರುವಾರ ಮಧ್ಯರಾತ್ರಿ ಸುಮಾರು 12:30 ರ ವೇಳೆಗೆ ಮೇದಾಂತ ಆಸ್ಪತ್ರೆಗೆ ಭೇಟಿ ನೀಡಿದ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮತ್ತು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರು ವಾಂಗ್ಚುಕ್ ಅವರಿಗೆ ಕಪ್‌ನಿಂದ ಜ್ಯೂಸ್ ಕುಡಿಸುವ ಮೂಲಕ ಉಪವಾಸವನ್ನು ಅಂತ್ಯಗೊಳಿಸಿದರು. ಈ ಸಂದರ್ಭದಲ್ಲಿ ಲಡಾಖ್ ಅಪೆಕ್ಸ್ ಬಾಡಿಯ ಉನ್ನತ ನಾಯಕರು ಉಪಸ್ಥಿತರಿದ್ದರು.

ಕೇಂದ್ರ ಸರ್ಕಾರ ನೀಡಿದ 3 ಪ್ರಮುಖ ಲಿಖಿತ ಭರವಸೆಗಳು

ಕೇಂದ್ರದ ನಿಯೋಗವು ಕೇವಲ ಮೌಖಿಕ ಭರವಸೆ ನೀಡಲು ಮುಂದಾಗಿದ್ದರಿಂದ, ಲಿಖಿತ ಒಪ್ಪಂದಕ್ಕೆ ಪಟ್ಟು ಹಿಡಿದಿದ್ದ ವಾಂಗ್ಚುಕ್ ಅವರು ತಮ್ಮ ಉಪವಾಸವನ್ನು ಹೆಚ್ಚುವರಿ ಎರಡು ದಿನಗಳ ಕಾಲ ವಿಸ್ತರಿಸಿದ್ದರು. ಅಂತಿಮವಾಗಿ ಕೇಂದ್ರ ಸಚಿವ ಜೆ.ಪಿ. ನಡ್ಡಾ ಅವರು ಓದಿ ತಿಳಿಸಿದ ಸರ್ಕಾರದ ಅಧಿಕೃತ ಲಿಖಿತ ಭರವಸೆಗಳು ಹೀಗಿವೆ

1.ಸಂಸತ್ತಿನಲ್ಲಿ ಉತ್ತರದಾಯಿತ್ವದ ಚರ್ಚೆ

ದೇಶದ ಪ್ರಸ್ತುತ ಪರೀಕ್ಷಾ ವ್ಯವಸ್ಥೆಯಲ್ಲಿನ ಲೋಪದೋಷಗಳು, ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಮತ್ತು ಕೈಗೊಳ್ಳಬೇಕಾದ ಶೈಕ್ಷಣಿಕ ಸುಧಾರಣೆಗಳ ಕುರಿತು ಭಾರತೀಯ ಸಂಸತ್ತಿನಲ್ಲಿ ವಿಸ್ತೃತ ಹಾಗೂ ವಿಶೇಷ ಚರ್ಚೆ ನಡೆಸಲು ಸರ್ಕಾರ ಬದ್ಧವಾಗಿದೆ.

2.ನೊಂದ ಕುಟುಂಬಗಳಿಗೆ ಆರ್ಥಿಕ ಪರಿಹಾರ

ಇತ್ತೀಚಿನ ನೀಟ್ ಪತ್ರಿಕೆ ಸೋರಿಕೆ ಮತ್ತು ಪರೀಕ್ಷಾ ಅಕ್ರಮಗಳಿಂದ ತೀವ್ರ ಮನನೊಂದು ಆತ್ಮಹತ್ಯೆಗೆ ಶರಣಾದ ದೇಶದ ಪ್ರತಿಭಾವಂತ ವಿದ್ಯಾರ್ಥಿಗಳ ಕುಟುಂಬಗಳಿಗೆ ಸೂಕ್ತ ಪರಿಹಾರ ಒದಗಿಸುವ ಕುರಿತು ಸರ್ಕಾರ ಸಕಾರಾತ್ಮಕವಾಗಿ ನಿರ್ಧಾರ ಕೈಗೊಳ್ಳಲಿದೆ.

3.ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಪ್ರಕರಣಗಳ ರದ್ದು

ದೆಹಲಿಯ ಜಂತರ್ ಮಂತರ್‌ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹಾಗೂ ಜುಲೈ 20, 2026 ರಂದು ಸಂಸತ್ತಿಗೆ ನಡೆದ ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದ ಯುವಕರ ವಿರುದ್ಧ ಯಾವುದೇ ರೀತಿಯ ಪೊಲೀಸ್ ಕಾನೂನು ಮೊಕದ್ದಮೆಗಳನ್ನು (FIR) ದಾಖಲಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ದೇಶಾದ್ಯಂತ ವ್ಯಕ್ತವಾದ ಅಭೂತಪೂರ್ವ ಬೆಂಬಲ

ಸೋನಮ್ ವಾಂಗ್ಚುಕ್ ಅವರ ಈ ನಿಸ್ವಾರ್ಥ ಹೋರಾಟಕ್ಕೆ ದೇಶಾದ್ಯಂತ ಭಾರಿ ಜನಬೆಂಬಲ ವ್ಯಕ್ತವಾಗಿತ್ತು. ಇತ್ತೀಚೆಗಷ್ಟೇ ದೇಶದ ವಿವಿಧ ರಾಜಕೀಯ ಪಕ್ಷಗಳ ಸುಮಾರು 65 ಸಂಸತ್ ಸದಸ್ಯರು ಜಂಟಿಯಾಗಿ ಸಹಿ ಮಾಡಿದ ಪತ್ರವನ್ನು ಸಲ್ಲಿಸಿ, ದೇಶದ ಯುವಶಕ್ತಿಗಾಗಿ ವಾಂಗ್ಚುಕ್ ಅವರು ತಮ್ಮ ಉಪವಾಸವನ್ನು ಕೈಬಿಡಬೇಕೆಂದು ವಿನಂತಿಸಿದ್ದರು.

ತಮ್ಮ ಹೋರಾಟದ ಯಶಸ್ಸಿನ ಸಂಪೂರ್ಣ ವೀಡಿಯೊವನ್ನು ಸೋನಮ್ ವಾಂಗ್ಚುಕ್ ಅವರು ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದ್ದು, ಈ ವೀಡಿಯೊಗಳಿಗೆ ಯಾವುದೇ ಹಕ್ಕುಸ್ವಾಮ್ಯ (ಕಾಪಿರೈಟ್) ಇರುವುದಿಲ್ಲ, ಸಾರ್ವಜನಿಕರು ಮತ್ತು ಮಾಧ್ಯಮಗಳು ಇದನ್ನು ಮುಕ್ತವಾಗಿ ಹಂಚಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಒಟ್ಟಾರೆಯಾಗಿ, ವಿದ್ಯಾರ್ಥಿಗಳ ಹಿತರಕ್ಷಣೆಗಾಗಿ ನಡೆದ ಈ ಮಹಾ ಸತ್ಯಾಗ್ರಹವು ಕೇಂದ್ರ ಸರ್ಕಾರವನ್ನು ಮಣಿಸುವಲ್ಲಿ ಯಶಸ್ವಿಯಾಗಿದ್ದು, ದೇಶದ ಶೈಕ್ಷಣಿಕ ಇತಿಹಾಸದಲ್ಲಿ ಒಂದು ಐತಿಹಾಸಿಕ ಜಯವಾಗಿ ದಾಖಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪ್ರಶ್ನೆಯೇ ಇಲ್ಲ, ಕೇಂದ್ರ ಸರ್ಕಾರದ ಮೂಲಗಳ ಸ್ಪಷ್ಟನೆ
ಕುಂಭಮೇಳ ಚೆಲುವೆ ಮೋನಾಲಿಸಾಗೆ ಪೊಲೀಸ್ ರಕ್ಷಣೆಗೆ 'ಒಕೆ' ಎಂದ ಕೋರ್ಟ್; ಎಲ್ಲಿದ್ದಾರೆ ಈಗ ರುದ್ರಾಕ್ಷಿ ಸುಂದರಿ?!