Emotional Video: ಕೆಲಸಕ್ಕೆ ಹೋಗುವ ತಾಯಿಯನ್ನು ಕಂಡು ಮಗು ಅಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕೆಲಸ ಬಟ್ಟು ಮಕ್ಕಳನ್ನು ನೋಡಿಕೊಳ್ಳಿ ಅಂದವರಿಗೆ ಮಹಿಳೆಯರು ಚಳಿ ಬಿಡಿಸಿದ್ದಾರೆ.
ಕೆಲಸಕ್ಕೆ ಹೊರಟಿದ್ದ ತಾಯಿಯನ್ನು ಕಂಡು ಅಮ್ಮಾ, ಅಮ್ಮಾ ಎಂದು ಕರೆದು ಕಣ್ಣೀರಿಟ್ಟ ಮಗು
ಮಹಿಳೆಯರು ತಮ್ಮ ಪುಟ್ಟ ಪುಟ್ಟ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಬೇಕಾದ್ರೆ ಅವರ ಹೃದಯ ಭಾರವಾಗಿರುತ್ತದೆ. ಇಂದು ಗಂಡ ಮತ್ತು ಹೆಂಡತಿ ಅನಿವಾರ್ಯವಾಗಿ ಕೆಲಸ ಮಾಡಲೇಬೇಕಾಗುತ್ತದೆ. ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮಗುವಿಗೆ ಆರೇಳು ತಿಂಗಳಿರುವಾಗಲೇ ಕೆಲಸಕ್ಕೆ ಹೋಗುತ್ತಾರೆ. ಇದು ಮಕ್ಕಳ ಮೇಲೆಯೂ ಪರಿಣಾಮ ಬೀರುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಹೃದಯಸ್ಪರ್ಶಿ ವಿಡಿಯೋವೊಂದು ವೈರಲ್ ಆಗುತ್ತಿದೆ. ಕೆಲಸಕ್ಕೆ ಹೋಗುತ್ತಿರುವ ತಾಯಿಯನ್ನು ನೋಡಿ ಪುಟ್ಟ ಕಂದಮ್ಮ ಕಿಟಕಿಯಲ್ಲಿ ನಿಂತು ಅಮ್ಮಾ.. ಅಮ್ಮಾ... ಎಂದು ಕೂಗಿದೆ. ಅಮ್ಮ ಮರೆಯಾಗುತ್ತಿದ್ದಂತೆ ಕಿಟಕಿಯಲ್ಲಿ ಅತ್ತಿಂದಿತ್ತ ನೋಡುತ್ತದೆ.
ತುಂಬಾ ಬಾರಿ ಪೋಷಕರು ಕೆಲಸಕ್ಕೆ ಹೊರಡುವ ಸಮಯದಲ್ಲಿಯೇ ಮಕ್ಕಳು ಅಳಲು ಶುರು ಮಾಡುತ್ತವೆ. ಇಂತಹ ಸಮಯದಲ್ಲಿ ಮಕ್ಕಳ ಕಣ್ತಪ್ಪಿಸಿ ಪೋಷಕರು ಕೆಲಸಕ್ಕೆ ಹೋಗುತ್ತಾರೆ. ಈ ವೇಳೆ ತಾಯಿ ಒಲ್ಲದ ಮನಸ್ಸಿನಿಂದ ಭಾರವಾದ ಮನಸ್ಸಿನಿಂದ ಮನೆಯಿಂದ ಹೊರಗೆ ಹೆಜ್ಜೆ ಇಡುತ್ತಾರೆ. ಮಕ್ಕಳು ಅಳುತ್ತಿದ್ರೂ ಅವರನ್ನು ಎತ್ತಿ ಮುದ್ದಾಡಿ ಸಮಾಧಾನ ಮಾಡುವ ಬದಲು ಹಿಂದಿರುಗಿಯೂ ನೋಡದೇ ಹೋಗುವ ನೋವು ಆ ತಾಯಿಗೆ ಮಾತ್ರ ಗೊತ್ತಿರುತ್ತದೆ. ಭವಿಷ್ಯಕ್ಕಾಗಿ ನಾಲ್ಕು ಕಾಸು ಕೂಡಿಸಲು ತಾಯಂದಿರು ಇಂತಹ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಒಂದು ಕಾರಣದಿಂದ ಎಷ್ಟೋ ಸಂದರ್ಭಗಳಲ್ಲಿ ಅಳುತ್ತಿರುವ ಮಕ್ಕಳನ್ನು ಬಿಟ್ಟು ಕೆಲಸಕ್ಕೆ ಹೋಗುತ್ತಾರೆ.
ಭಾರವಾಗುತ್ತೆ ಮನಸ್ಸು!
ಕಳೆದ ಕೆಲವು ದಿನಗಳಿಂದ ಇಂಟರ್‌ನೆಟ್‌ನಲ್ಲಿ ಪುಟ್ಟ ಮಗುವೊಂದು ಕಣ್ಣೀರು ಹಾಕುತ್ತಿರುವ ವಿಡಿಯೋ ವೈರಲ್ ಆಗಿದೆ. ಕಿಟಕಿಯಲ್ಲಿ ಅತ್ತಿಂದಿತ್ತ ನೋಡುತ್ತಾ ಕಣ್ಣೀರು ತುಂಬಿಕೊಂಡ ಕಣ್ಣುಗಳಿಂದ ಮಮ್ಮಾ.. ಮಮ್ಮಾ ಎಂದು ಕೂಗುತ್ತಿದೆ. ಈ ವಿಡಿಯೋ ನೋಡಿದ್ರೆ ಕಲ್ಲುಹೃದಯದಲ್ಲಿಯೂ ಕಣ್ಣೀರು ಜಿನುಗುತ್ತದೆ. ಮಗುವಿನ ದುಃಖ ನಿಮ್ಮ ಮನಸ್ಸನ್ನು ಭಾರವಾಗಿಸುತ್ತದೆ.
ಇದನ್ನೂ ಓದಿ: ವಿದ್ಯಾರ್ಥಿಯ ಹಾಲ್ ಟಿಕೆಟ್ ಕದ್ದೊಯ್ದ ಹದ್ದು: ಆಮೇಲಾಗಿದ್ದು ಪವಾಡ
ತಾಯಿಗೆ ಕೆಲಸ ಬಿಡು ಅಂದವ್ರಿಗೆ ಚಳಿ ಬಿಡಿಸಿದ ಮಹಿಳೆಯರು
ವೈರಲ್ ಆಗಿರುವ ವಿಡಿಯೋವನ್ನು gyanclasss ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಶೇರ್ ಮಾಡಿಕೊಳ್ಳಲಾದ ವಿಡಿಯೋಗೆ 8 ಲಕ್ಷಕ್ಕೂ ಅಧಿಕ ವ್ಯೂವ್ ಬಂದಿದೆ. ಈ ವಿಡಿಯೋ ನೋಡಿದೆ ನೆಟ್ಟಿಗರು ತಮ್ಮ ಭಾವನೆಗಳನ್ನು ಕಮೆಂಟ್ ರೂಪದಲ್ಲಿ ಹಂಚಿಕೊಂಡಿದ್ದಾರೆ. ಈ ಮಗುವಿನಷ್ಟೇ ದುಃಖ ಆ ತಾಯಿಗೂ ಆಗಿರುತ್ತದೆ. ಹಾಗಾಗಿ ನಾವು ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು. ಕುಟುಂಬದ ಒಳಿತಿಗಾಗಿ ಮತ್ತು ಮಕ್ಕಳ ಭವಿಷ್ಯಕ್ಕಾಗಿಯೇ ತಾಯಿ ಹೊರಗಡೆ ಹೋಗಿ ಕೆಲಸ ಮಾಡಲು ಮುಂದಾಗಿರುತ್ತಾರೆ ಎಂದು ನೀತು ಎಂಬವರು ಕಮೆಂಟ್ ಮಾಡಿದ್ದಾರೆ.
ಮಹಿಳೆಗೆ ಕೆಲಸ ಬಿಟ್ಟು ಮಕ್ಕಳನ್ನು ನೋಡಿಕೊಳ್ಳಿ ಎಂದು ಕಮೆಂಟ್ ಮಾಡಿದವರಿಗೆ ಪ್ರೇರಣಾ ಎಂಬವರು ತಿರುಗೇಟು ನೀಡಿದ್ದಾರೆ. ಗಂಡ ಕೆಲಸಕ್ಕೆ ಹೋಗುವಾಗ ನನ್ನ ಮಗ ಇದೇ ರೀತಿಯಲ್ಲಿ ಅಳುತ್ತಾನೆ. ಹಾಗಂತ ಗಂಡನಿಗೆ ಕೆಲಸಕ್ಕೆ ಹೋಗಬೇಡ ಎಂದು ಹೇಳಲು ಆಗುತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ತಿಮಿಂಗಿಲದ ಕಿತಾಪತಿಗೆ ಬೆಸ್ತು ಬಿದ್ದ ಅಗ್ನಿಶಾಮಕ ಸಿಬ್ಬಂದಿ