
ನವದೆಹಲಿ (ಏ.13): ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಸಂಬಂಧಿಸಿದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್‌ಗೆ (ಎಜೆಎಲ್) ಸೇರಿದ 700 ಕೋಟಿ ರು.ಗಳಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ಜಾರಿ ನಿರ್ದೇಶನಾಲಯ (ಇ.ಡಿ.) ಶನಿವಾರ ಪ್ರಕ್ರಿಯೆ ಪ್ರಾರಂಭಿಸಿದೆ. ಈ ಆಸ್ತಿಗಳಲ್ಲಿ ದೆಹಲಿ, ಮುಂಬೈ ಮತ್ತು ಲಖನೌನಲ್ಲಿರುವ ಪ್ರಮುಖ ಆಸ್ತಿಗಳು ಸೇರಿವೆ. ಅವುಗಳಲ್ಲಿ, ರಾಷ್ಟ್ರ ರಾಜಧಾನಿಯ ಬಹದ್ದೂರ್ ಶಾ ಜಾಫರ್ ಮಾರ್ಗದಲ್ಲಿರುವ ಐಕಾನಿಕ್ ಹೆರಾಲ್ಡ್ ಹೌಸ್ ಕೂಡ ಒಂದು. ಇವುಗಳ ಮೇಲೆ ಜಪ್ತಿ ನೋಟಿಸ್‌ಗಳನ್ನು ಈಗ ಇ.ಡಿ. ಅಂಟಿಸಿದೆ. 2002ರ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಸೆಕ್ಷನ್ 8 ಮತ್ತು 2013ರ ಹಣ ವರ್ಗಾವಣೆ ತಡೆ ನಿಯಮಗಳ ಅಡಿಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಇ.ಡಿ. ಮೂಲಗಳು ಹೇಳಿವೆ.
ಏನಿದು ಪ್ರಕರಣ?: ಈ ಪ್ರಕರಣವು ಒಂದು ಕಾಲದಲ್ಲಿ ‘ನ್ಯಾಷನಲ್ ಹೆರಾಲ್ಡ್’ ಪತ್ರಿಕೆಯನ್ನು ಪ್ರಕಟಿಸುತ್ತಿದ್ದ ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಅನ್ನು ಯಂಗ್ ಇಂಡಿಯನ್ ಲಿಮಿಟೆಡ್ (ವೈಐಎಲ್) ಎಂಬ ಅನ್ಯ ಕಂಪನಿ ಸ್ವಾಧೀನ ಮಾಡಿಕೊಂಡಿದ್ದಕ್ಕೆ ಸಂಬಂಧಿಸಿದೆ. ‘ಈ ಸ್ವಾಧೀನ ಅಕ್ರಮವಾಗಿದ್ದು, 2000 ಕೋಟಿ ರು. ಮೌಲ್ಯದ ಆಸ್ತಿ ಮೇಲೆ ಹಿಡಿತ ಸಾಧಿಸಲು ದುರುದ್ದೇಶಪೂರಿತವಾಗಿ ನಡೆಸಲಾಗಿದೆ’ ಎಂದು ರಾಜಕಾರಣಿ ಸುಬ್ರಮಣಿಯನ್ ಸ್ವಾಮಿ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟು ಇ.ಡಿ. ತನಿಖೆಗೆ ಅನುಮತಿಸಿತ್ತು. ಇದರ ಭಾಗವಾಗಿ ಈಗ ಇ.ಡಿ., ಆಸ್ತಿ ಜಪ್ತಿ ಮಾಡಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ಹಿರಿಯ ಕಾಂಗ್ರೆಸ್ ನಾಯಕರು ಯಂಗ್ ಇಂಡಿಯನ್ ಕಂಪನಿಯ ಪದಾಧಿಕಾರಿಗಳಾಗಿದ್ದಾರೆ.
752 ಕೋಟಿ ಆಸ್ತಿ ಜಪ್ತಿ: ನ್ಯಾಷನಲ್ ಹೆರಾಲ್ಡ್’ ದಿನಪತ್ರಿಕೆ ಹಾಗೂ ಅದಕ್ಕೆ ಸಂಬಂಧಿಸಿದ ಕಂಪನಿಗಳ ಪರಭಾರೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (ಇ.ಡಿ.) ಕಾಂಗ್ರೆಸ್‌ನ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ನಂಟು ಹೊಂದಿರುವ ಯಂಗ್ ಇಂಡಿಯನ್ ಸಂಸ್ಥೆಗೆ ಸೇರಿದ ₹ 751.9 ಕೋಟಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಜಪ್ತಿ ಮಾಡಲಾದ ಆಸ್ತಿಯಲ್ಲಿ ದೆಹಲಿ ಮತ್ತು ಮುಂಬೈನಲ್ಲಿರುವ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಕಟ್ಟಡಗಳು ಹಾಗೂ ಲಖನೌದ ನೆಹರು ಭವನ ಸೇರಿವೆ. ಪಂಚರಾಜ್ಯ ಚುನಾವಣೆಗಳು ಈಗ ನಡೆಯುತ್ತಿದ್ದು, ಡಿ.3ರಂದು ಮತ ಎಣಿಕೆ ಇದೆ. ಈ ನಡುವೆಯೇ ಇ.ಡಿ. ಈ ಕ್ರಮ ಕೈಗೊಂಡಿದೆ. ಕಾಂಗ್ರೆಸ್ ಈ ಬಗ್ಗೆ ಪ್ರತಿಕ್ರಿಯಿಸಿ, ‘ಸೋಲಿನ ಭೀತಿಯಿಂದ ಬಿಜೆಪಿ ಈ ಸೇಡಿನ ಕ್ರಮ ಕೈಗೊಳ್ಳುತ್ತಿದೆ’ ಎಂದು ಆರೋಪಿಸಿದೆ.
ಗ್ಯಾರಂಟಿ ಹೊಡೆತ: ಮಹಾರಾಷ್ಟ್ರದಲ್ಲಿ ಬಸ್ ನೌಕರರ ವೇತನಕ್ಕೂ ದುಡ್ಡಿಲ್ಲ
ಷೇರುದಾರರಿಗೆ ವಂಚನೆ- ಇ.ಡಿ: ಈ ಬಗ್ಗೆ ಮಂಗಳವಾರ ಹೇಳಿಕೆ ನೀಡಿರುವ ಇ.ಡಿ., ‘ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ದೆಹಲಿ, ಮುಂಬೈ ಮತ್ತು ಲಖನೌನಲ್ಲಿ ಹೊಂದಿದ್ದ 661.69 ಕೋಟಿ ಕೋಟಿ ರು.ಗಳ ಸ್ಥಿರಾಸ್ಥಿಯನ್ನು ಜಪ್ತಿ ಮಾಡಲಾಗಿದೆ. ಇನ್ನು ಯಂಗ್ ಇಂಡಿಯನ್ ಸಂಸ್ಥೆಯು ಷೇರುಗಳ ಮೂಲಕ ಎಜೆಎಲ್‌ನಲ್ಲಿ ಹೂಡಿಕೆ ಮಾಡಿದ್ದ 90.21 ಕೋಟಿ ರು. ಮೌಲ್ಯದ ಈಕ್ವಿಟಿಗಳನ್ನು ಜಪ್ತಿ ಮಾಡಲಾಗಿದೆ. ಒಟ್ಟಾರೆ 751.9 ಕೋಟಿ ಮೌಲ್ಯದ ಆಸ್ತಿಯನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಲು ಆದೇಶವನ್ನು ಹೊರಡಿಸಲಾಗಿದೆ. ಇದು ಅಪರಾಧಕ್ಕೆ ಸಂಬಂಧಿಸಿದ ಆದಾಯವಾಗಿದೆ’ ಎಂದು ಹೇಳಿದೆ. ಅಲ್ಲದೆ, ‘ಎಜೆಎಲ್ ಪದಾಧಿಕಾರಿಗಳು ಹಾಗೂ ಕಾಂಗ್ರೆಸ್ ಪಕ್ಷವು ಈ ವ್ಯವಹಾರ ನಡೆಸಿ ದೇಣಿಗೆದಾರರು ಹಾಗೂ ಷೇರುದಾರರಿಗೆ ವಂಚನೆ ಎಸಗಿದೆ’ ಎಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ