ನಿಮ್ಮದು ರಾಜಕೀಯ ಹೇಳಿಕೆ, ಅದನ್ನು ತಪ್ಪಿಸಬಹುದಿತ್ತು. ಸ್ಪೀಕರ್‌ರಿಂದ ಸಂಸದೀಯ ಸಂಪ್ರದಾಯದ ಅಣಕ ಮಾಡಲಾಗಿದೆ ಎಂದು ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೆಹಲಿ(ಜೂ.28) ನವದೆಹಲಿತುರ್ತುಪರಿಸ್ಥಿತಿಯನ್ನು ಖಂಡಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಸದನದಲ್ಲಿ ಹೇಳಿಕೆ ನೀಡಿದ್ದ ಹೇಳಿಕೆ ಬಗ್ಗೆ ಕಾಂಗ್ರೆಸ್ ಪಕ್ಷ ಹಾಗೂ ಇಂಡಿಯಾ ಕೂಟದ ಅಂಗಪಕ್ಷಗಳು ಅಸಮಾಧಾನ ಹೊರಹಾಕಿವೆ. ಈ ಬಗ್ಗೆ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಗುರುವಾರ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ನೇರಾನೇರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಹುಲ್ ಹಾಗೂ ಇಂಡಿಯಾ ಕೂಟದ ಸಂಸದರು ಬಿರ್ಲಾ ಅವರನ್ನು ಅವರ ಕಚೇರಿಯಲ್ಲಿ ಭೇಟಿ ಮಾಡಿ, ಸ್ಪೀಕರ್ ಆಗಿ ಆಯ್ಕೆ ಆಗಿದ್ದಕ್ಕೆ ಅಭಿನಂದನೆ ಸಲ್ಲಿಸಿದರು. ಈ ವೇಳೆ, ‘ನೀವು ತುರ್ತುಪರಿಸ್ಥಿತಿಯ ಬಗ್ಗೆ ಮಾಡಿದ್ದ ಉಲ್ಲೇಖ ಸ್ಪಷ್ಟವಾಗಿ ರಾಜಕೀಯ ಉಲ್ಲೇಖವಾಗಿದೆ. ಇದನ್ನು ತಪ್ಪಿಸಬಹುದಿತ್ತು’ ಎಂದು ಹೇಳಿದರು.
ಎಮೆರ್ಜೆನ್ಸಿ ನೆನೆದು 2 ನಿಮಿಷದ ಮೌನ ಪ್ರಾರ್ಥನೆಗೆ ಕರೆಕೊಟ್ಟ ಸ್ಪೀಕರ್: ವಿಪಕ್ಷಗಳ ಗಲಾಟೆ ಕಲಾಪ ಮುಂದೂಡಿಕೆ
ಈ ನಡುವೆ, ಕಾಂಗ್ರೆಸ್ ಪಕ್ಷವು ಗುರುವಾರ ಸಂಸದ ಕೆ.ಸಿ. ವೇಣುಗೋಪಾಲ್ ಅವರ ಮೂಲಕ ಬಿರ್ಲಾ ಅವರಿಗೆ ಪ್ರತ್ಯೇಕ ಔಪಚಾರಿಕ ಆಕ್ಷೇಪಣೆ ಸಲ್ಲಿಸಿದ್ದು , ‘ಅರ್ಧ ಶತಮಾನದ ಹಿಂದಿನ ಘಟನೆಯ ಕುರಿತ ಉಲ್ಲೇಖ ಸಂಸದೀಯ ಸಂಪ್ರದಾಯಗಳ ಅಪಹಾಸ್ಯ ಹಾಗೂ ಆಘಾತಕಾರಿ’ ಎಂದು ಬಣ್ಣಿಸಿದೆ.
ಲೋಕಸಭಾ ಸ್ಪೀಕರ್ ಆಗಿ ಆಯ್ಕೆಯಾದ ಕೂಡಲೇ, ಬಿರ್ಲಾ ಅವರು ಬುಧವಾರ ತುರ್ತು ಪರಿಸ್ಥಿತಿ ಬಗ್ಗೆ ಉಲ್ಲೇಖಿಸಿ, ‘ಅದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಸಂವಿಧಾನದ ಮೇಲಿನ ನಡೆಸಿದ್ದ ದಾಳಿ’ ಎಂಬ ನಿರ್ಣಯ ಓದಿದ್ದರು. ಇದು ಕಾಂಗ್ರೆಸ್ ಸದಸ್ಯರಿಂದ ತೀವ್ರ ಪ್ರತಿಭಟನೆಗೆ ಕಾರಣವಾಗಿತ್ತು.
ಬುಧವಾರ ನೂತನ ಸ್ಪೀಕರ್ ಆಗಿ ಆಯ್ಕೆಯಾದ ಬೆನ್ನಲ್ಲೇ 1975ರ ಜು.25ರಂದು ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ದೇಶದಲ್ಲಿ ಜಾರಿಗೊಳಿಸಿದ್ದ ತುರ್ತು ಪರಿಸ್ಥಿತಿಯನ್ನು ಖಂಡಿಸುವ ನಿರ್ಣಯವೊಂದನ್ನು ಮಂಡಿಸಿ ಮಾತನಾಡಿದ ಓಂ ಬಿರ್ಲಾ, ‘1975ರ ಜೂ.25ನ್ನು ಭಾರತ ಇತಿಹಾಸದ ಕರಾಳ ಭಾಗವೆಂದು ನೆನಪಿಸಿಕೊಳ್ಳಲಾಗುತ್ತದೆ. ಈ ದಿನದಂದು ದೇಶದಲ್ಲಿ ತುರ್ತುಸ್ಥಿತಿ ಘೋಷಿಸುವ ಮೂಲಕ ಬಾಬಾಸಾಹೇಬ್ ಅಂಬೆಡ್ಕರ್ ರಚಿಸಿದ ಸಂವಿಧಾನದ ಮೇಲೆ ಇಂದಿರಾ ಗಾಂಧಿ ದಾಳಿ ನಡೆಸಿದರು. ಭಾರತ ಪ್ರಜಾಪ್ರಭುತ್ವದ ತಾಯ್ನಾಡು ಎಂದು ವಿಶ್ವದೆಲ್ಲೆಡೆ ಹಿರಿಮೆ ಹೊಂದಿದೆ. ಆದರೆ ಇಂಥ ಭಾರತದ ಮೇಲೆ ಇಂದಿರಾ ಸರ್ವಾಧಿಕಾರ ಹೇರಿದರು. ಈ ವೇಳೆ ಭಾರತೀಯ ನಾಗರಿಕರ ಹಕ್ಕುಗಳನ್ನು ದಮನ ಮಾಡಲಾಯಿತು ಮತ್ತು ಅಭಿವ್ಯಕ್ತಿ ಸ್ವಾತಂತ್ರವನ್ನು ಹತ್ತಿಕ್ಕಲಾಯಿತು. ವಿಪಕ್ಷ ನಾಯಕರನ್ನು ಜೈಲಿಗೆ ಹಾಕಲಾಯಿತು. ಇಡೀ ದೇಶವನ್ನೇ ಜೈಲಾಗಿ ಪರಿವರ್ತಿಸಲಾಯಿತು. ಪತ್ತ್ಕೆ ಮತ್ತು ನ್ಯಾಯಾಂಗ ಸ್ವಾತಂತ್ರ್ಯದ ಮೇಲೂ ಕಡಿವಾಣ ಹಾಕಲಾಯಿತು’ ಎಂದು ಕಿಡಿಕಾರಿದರು.
ಕಾಂಗ್ರೆಸ್ ಸಂವಿಧಾನ ರಕ್ಷಕ ಎಂಬುದೇ ಹಾಸ್ಯಾಸ್ಪದ: ಅಣ್ಣಾಮಲೈ