ಇವಿಎಂ ಹ್ಯಾಕ್ ಮಾಡಲು ಯಾರಿಂದಲೂ ಸಾಧ್ಯವಿಲ್ಲ
ಮೂರು ಸ್ತರದ ಭದ್ರತೆಯಲ್ಲಿ ಇವಿಎಂ ಅನ್ನು ಇಡಲಾಗುತ್ತದೆ
ಅಖಿಲೇಶ್ ಯಾದವ್ ಆರೋಪ ತಳ್ಳಿಹಾಕಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ
ನವದೆಹಲಿ (ಮಾ.10): ಉತ್ತರಪ್ರದೇಶದಲ್ಲಿ ಇವಿಎಂ ತಿರುಚಲಾಗಿದೆ ಎಂದು ಸಮಾಜವಾದಿ ಪಕ್ಷ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ, ಭಾರತದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ( Chief Election Commissioner Sushil Chandra ) ಅವರು, ಯಾರಿಂದಲೂ ವಿದ್ಯುದ್ಮಾನ ಮತಯಂತ್ರ(ಇವಿಎಂ)ವನ್ನು (EVM) ಹ್ಯಾಕ್ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
‘ಮತಕೇಂದ್ರದ ಬಳಿ ನಡೆಯುವ ವಿದ್ಯಮಾನಗಳು ಬಿಗಿ ಭದ್ರತೆ ಮಧ್ಯೆ ಸುರಕ್ಷಿತವಾಗಿ, ಪಾರದರ್ಶಕತೆಯಿಂದ ಎಲ್ಲಾ ರಾಜಕೀಯ ಪಕ್ಷಗಳ ಮುಂದೆಯೇ ನಡೆಯುತ್ತದೆ’ ಎಂದು ಹೇಳಿದ್ದಾರೆ. ಅಖಿಲೇಶ್ ಯಾದವ್ ( Akhilesh Yadav ) ಮಾಡಿದ್ದ ಇವಿಎಂ ತಿರುಚಿದ ಆರೋಪ ಕುರಿತು ಪ್ರತಿಕ್ರಿಯಿಸಿ, ‘ಇದು ಕೇವಲ ಮತದಾರರನ್ನು ದಾರಿ ತಪ್ಪಿಸುವ ಪ್ರಯತ್ನ, ವಾರಾಣಸಿಯಲ್ಲಿ (Varanasi) ಇವಿಎಂಗಳು ತರಬೇತಿ ಉದ್ದೇಶಕ್ಕಾಗಿ ಹೊರಗಿವೆ. ಮತದಾನಕ್ಕೆ ಬಳಸುವ ಇವಿಎಂ ಸುರಕ್ಷಿತವಾದ್ದು’ ಎಂದು ಒತ್ತಿ ಹೇಳಿದ್ದಾರೆ.
‘ಇವಿಎಂ ಸಂಪೂರ್ಣ ಸುರಕ್ಷಿತ ಯಂತ್ರ, ಅದನ್ನು ಹ್ಯಾಕ್ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದರು. ಇವಿಎಂ ಬಗ್ಗೆ ಪ್ರತಿಯೊಬ್ಬ ಭಾರತೀಯ ನಾಗರಿಕ ಹೆಮ್ಮೆ ಪಡಬೇಕು’ ಎಂದಿದ್ದಾರೆ.
ಯುಪಿಯಲ್ಲಿ ಇವಿಎಂ ಅಕ್ರಮ: 3 ಚುನಾವಣಾಧಿಕಾರಿಗಳ ವಜಾ
ಲಖನೌ: ಇವಿಎಂ ಅಕ್ರಮ ಹಿನ್ನೆಲೆಯಲ್ಲಿ ವಾರಾಣಸಿಯ ಇವಿಎಂಗಳ ನೋಡಲ್ ಅಧಿಕಾರಿ, ಸೋನ್‌ಭದ್ರ ಜಿಲ್ಲೆಯ ಚುನಾವಣಾಧಿಕಾರಿ ಮತ್ತು ಬರೇಲಿ ಜಿಲ್ಲೆಯ ಹೆಚ್ಚುವರಿ ಅಧಿಕಾರಿ ಸೇರಿದಂತೆ ಮೂವರನ್ನು ಬುಧವಾರ ಚುನಾವಣಾ ಆಯೋಗ ಉತ್ತರಪ್ರದೇಶದ ಚುನಾವಣಾ ಕರ್ತವ್ಯದಿಂದ ವಜಾಗೊಳಿಸಿದೆ. ಸಮಾಜವಾದಿ ಪಕ್ಷ ವಾರಾಣಸಿಯಿಂದ ಇವಿಎಂಗಳನ್ನು ಅಕ್ರಮವಾಗಿ ಸಾಗಿಸಲಾಗಿದೆ ಎಂದು ಮಂಗಳವಾರ ಗಂಭೀರ ಆರೋಪ ಮಾಡಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ಚುನಾವಣಾ ಶಿಷ್ಟಾಚಾರ ಉಲ್ಲಂಘನೆ ಕಾರಣಕ್ಕೆ ಮತ ಎಣಿಕೆ ಹಿಂದಿನ ದಿನ ಈ ಮೂವರು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯದಿಂದ ಹಿಂಪಡೆಯಲಾಗಿದೆ. ಬುಧವಾರದ ಬದಲು ಮಂಗಳವಾರವೇ ಇವಿಎಂ ಸ್ಥಳಾಂತರಿದ ಆರೋಪ ಇವರ ಮೇಲಿತ್ತು.
ಎಕ್ಸಿಟ್ ಪೋಲ್ ಗಳಿಗೆ ಹಣ ನೀಡ್ತಿರೋರು ಯಾರು? ಅಖಿಲೇಶ್ ಯಾದವ್ ಪ್ರಶ್ನೆ
ಗೋವಾ: ಮಾಜಿ ಮಿತ್ರ ಎಂಜಿಪಿ ಜತೆ ಮೈತ್ರಿಗೆ ಬಿಜೆಪಿ ಇಂಗಿತ
ಪಣಜಿ: ಗೋವಾದಲ್ಲಿ ಅತಂತ್ರ ವಿಧಾನಸಭೆ ಸೃಷ್ಟಿಯ ಭೀತಿ ಹಿನ್ನೆಲೆಯಲ್ಲಿ ತನ್ನ ಮಾಜಿ ಮಿತ್ರ ಎಂಜಿಪಿಗೆ ಬಿಜೆಪಿ ಗಾಳ ಹಾಕಿದೆ. ‘ನಾವು ತಾತ್ವಿಕವಾಗಿ ಒಂದೇ ಮನಸ್ಸಿನವರು’ ಎಂದು ಹೇಳುವ ಮೂಲಕ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಈ ಸುಳಿವು ನೀಡಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲೇ ಇದ್ದ ಎಂಜಿಪಿಯನ್ನು ಹಾಲಿ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೊರದಬ್ಬಿದ್ದರು. ಹೀಗಾಗಿ ತಾತ್ವಿಕ ಭಿನ್ನಾಭಿಪ್ರಾಯ ಇದ್ದರೂ ತೃಣಮೂಲ ಕಾಂಗ್ರೆಸ್ ಜತೆ ಎಂಜಿಪಿ ಮೈತ್ರಿ ಮಾಡಿಕೊಂಡಿತ್ತು.
ಆದರೆ ಚುನಾವಣೋತ್ತರ ಸಮೀಕ್ಷೆಗಳು ಅತಂತ್ರ ಭವಿಷ್ಯ ನುಡಿಯುತ್ತಿದ್ದಂತೆಯೇ ಬಿಜೆಪಿ ಜತೆ ಮೈತ್ರಿಗೆ ಮುಕ್ತವಾಗಿದ್ದಾಗಿ ಎಂಜಿಪಿ ನಾಯಕ ಸುದಿನ್ ಧಾವಳೀಕರ್ ಹೇಳಿದ್ದಾರೆ. ಇದಕ್ಕೆ ಪೂರಕವಾಗಿ ಫಡ್ನವೀಸ್ ಕೂಡ ಇದೇ ಹೇಳಿಕೆ ನೀಡಿದ್ದಾರೆ. ‘ಎಂಜಿಪಿ ನಮ್ಮ ಸಹಜ ಮಿತ್ರ. ಅವರು ನಮ್ಮ ಜತೆ ಬರುವುದಾದರೆ ಸ್ವಾಗತ’ ಎಂದಿದ್ದಾರೆ.
ದೇಶದೆಲ್ಲೆಡೆಯಂತೆ ಕರ್ನಾಟಕದಲ್ಲೂ ಕಾಂಗ್ರೆಸ್ ಧೂಳೀಪಟ, ಶ್ರೀರಾಮುಲು ಭವಿಷ್ಯ
ಪಂಜಾಬ್‌ನಲ್ಲಿ ‘ಚುನಾವಣಾ ಸಿಹಿ’ಗೆ ಭಾರೀ ಬೇಡಿಕೆ
ಚಂಡೀಗಢ: ಪಂಜಾಬ್ ಚುನಾವಣಾ ಫಲಿತಾಂಶ ಗುರುವಾರ ಪ್ರಕಟವಾಗುವ ಹಿನ್ನೆಲೆಯಲ್ಲಿ ಪಂಜಾಬ್‌ನ ಸಿಹಿ ಖಾದ್ಯ ತಯಾರಕ ಅಂಗಡಿಗಳು ಲಾಡು ಸೇರಿದಂತೆ ಇತರ ಸಿಹಿ ತಿನಿಸುಗಳನ್ನು ಟನ್‌ಗಟ್ಟಲೇ ತಯಾರು ಮಾಡುತ್ತಿವೆ. ಇದರೊಂದಿಗೆ ಹಲವಾರು ಪಕ್ಷಗಳ ಅಭ್ಯರ್ಥಿಗಳು ಅಂಗಡಿಗಳಿಗೆ ಭೇಟಿ ನೀಡಿ ವಿವಿಧ ಬಗೆಯ ಸಿಹಿ ತಿನಿಸುಗಳಿಗೆ ಆರ್ಡರ್ ಮಾಡುತ್ತಿದ್ದಾರೆ.
ಲೂಧಿಯಾನದಲ್ಲಿರುವ ಅಂಗಡಿಯೊಂದರಲ್ಲಿ ಗೆಲುವಿನ ಲಾಡು ಹೆಸರಿನಲ್ಲಿ ಸುಮಾರು 5 ಕೇಜಿ ತೂಕವಿರುವ ಲಾಡುಗಳನ್ನು ತಯಾರು ಮಾಡಲಾಗುತ್ತಿದೆ. ಇವುಗಳನ್ನು ಆಕರ್ಷಕ ತಟ್ಟೆಗಳಲ್ಲಿಟ್ಟು ಆರ್ಡರ್ ಮಾಡಿದವರಿಗೆ ತಲುಪಿಸಲಾಗುತ್ತಿದೆ. ‘ಈ ವರ್ಷ ನಾವು ಅತಿ ಹೆಚ್ಚು ಪ್ರಮಾಣದಲ್ಲಿ ಲಾಡುಗಾಗಿ ಆರ್ಡರ್ ಪಡೆದುಕೊಳ್ಳುತ್ತಿದ್ದೇವೆ. ಈ ವಿಶೇಷ ಲಾಡುಗಳನ್ನು ತಯಾರು ಮಾಡಲು ನಮ್ಮ ಪರಿಣಿತ ಕೆಲಸಗಾರನ್ನು ನೇಮಕ ಮಾಡಿದ್ದೇವೆ’ ಎಂದು ಪಂಜಾಬ್ ಹಲ್ವಾಯಿ ಅಸೋಸಿಯೇಶನ್ ಅಧ್ಯಕ್ಷ ನಾರಿಂದರ್ ಸಿಂಗ್ ಹೇಳಿದ್ದಾರೆ.