
ತಿರುವನಂತಪುರಂ (ಮೇ.04) ಕೇರಳ ವಿಧಾನಸಭೆ ಚುನಾವಣೆಯಲ್ಲಿ ಸಿಪಿಎಂ ಲೆಕ್ಕಾಚಾರ ಉಲ್ಟಾ ಆಗಿದೆ. ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದ್ದ ಪಿಣರಾಯಿ ವಿಜಯನ್ ನೇತೃತ್ವದ ಸಿಪಿಐ(ಎಂ) ಹೀನಾಯ ಸೋಲು ಕಂಡಿದೆ. ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭಾರೀ ಮುಖಭಂಗ ಅನುಭವಿಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕಣ್ಣೂರಿನ ತಮ್ಮ ನಿವಾಸದಲ್ಲಿರುವ ಅವರು, ರಾಜಧಾನಿ ತಿರುವನಂತಪುರಂಗೆ ಬಾರದೆ ವಿಶೇಷ ದೂತರ ಮೂಲಕ ರಾಜೀನಾಮೆ ಪತ್ರವನ್ನು ರಾಜಭವನಕ್ಕೆ ರವಾನಿಸಿದ್ದಾರೆ. ಮುಖ್ಯಮಂತ್ರಿಗಳ ರಾಜೀನಾಮೆಯನ್ನು ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅಂಗೀಕರಿಸಿದ್ದಾರೆ. ಅಲ್ಲದೆ, ಹೊಸ ಸರ್ಕಾರ ಅಧಿಕಾರ ವಹಿಸಿಕೊಳ್ಳುವವರೆಗೆ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯುವಂತೆ ಪಿಣರಾಯಿ ವಿಜಯನ್ ಅವರಿಗೆ ಸೂಚಿಸಿದ್ದಾರೆ.
ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ ಪಿಣರಾಯಿ ವಿಜಯನ್ ಮನೆಯಿಂದ ಹೊರಬಂದಿಲ್ಲ ಮತ್ತು ಮಾಧ್ಯಮಗಳನ್ನೂ ಭೇಟಿಯಾಗಿಲ್ಲ. ಅವರು ನಾಳೆ ರಾಜೀನಾಮೆ ನೀಡಬಹುದು ಎಂಬ ಮಾತುಗಳು ಕೇಳಿಬಂದಿತ್ತು. ಇತ್ತ ಪಕ್ಷದ ಕೆಲ ಮೂಲಗಳು ಇದೇ ಮಾತನ್ನು ಹೇಳಿತ್ತು. ಆದರೆ, ಎಲ್ಲರ ನಿರೀಕ್ಷೆಗೂ ಮುನ್ನವೇ ಪಿಣರಾಯಿ ತಮ್ಮ ಸಿಎಂ ಹುದ್ದೆ ತೊರೆದಿದ್ದಾರೆ.
ಮೂರನೇ ಬಾರಿಗೆ ಅಧಿಕಾರಕ್ಕೇರುವ ಕನಸಿನಲ್ಲಿದ್ದ ಪಿಣರಾಯಿ ಸರ್ಕಾರಕ್ಕೆ ಈ ಚುನಾವಣೆಯಲ್ಲಿ ದೊಡ್ಡ ಆಘಾತ ಎದುರಾಗಿದೆ. 10 ವರ್ಷಗಳ ನಂತರ ಯುಡಿಎಫ್ 102 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೇರಿದರೆ, ಎಲ್‌ಡಿಎಫ್ ಕೇವಲ 35 ಸ್ಥಾನಗಳಿಗೆ ಕುಸಿದಿದೆ. ಸ್ವತಃ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಧರ್ಮಡಂ ಕ್ಷೇತ್ರದಲ್ಲಿ ಪ್ರಯಾಸದ ಗೆಲುವು ಸಾಧಿಸಿದರೆ, ಸ್ಪರ್ಧಿಸಿದ್ದ 20 ಸಚಿವರಲ್ಲಿ 13 ಮಂದಿ ಸೋಲು ಕಂಡಿದ್ದಾರೆ.
ಎಲ್‌ಡಿಎಫ್‌ನ ಭದ್ರಕೋಟೆಗಳೆನಿಸಿದ್ದ ಹಲವು ಕ್ಷೇತ್ರಗಳು ಈ ಬಾರಿ ಕೈತಪ್ಪಿವೆ. ಹತ್ತು ವರ್ಷಗಳ ಆಡಳಿತದ ಶಕ್ತಿ, ಸಚಿವರು ಮತ್ತು ಶಾಸಕರೆಲ್ಲರೂ ಇದ್ದರೂ ಗೆಲ್ಲಲು ಇನ್ನೇನು ಬೇಕು ಎಂಬ ಆತ್ಮವಿಶ್ವಾಸಕ್ಕೆ ಜನರು ತಣ್ಣೀರೆರಚಿದ್ದಾರೆ. ಕಾಲು ಶತಮಾನದಿಂದ ಶಾಸಕರಾಗಿದ್ದ ಕೆ.ಬಿ. ಗಣೇಶ್ ಕುಮಾರ್ ಪತ್ತನಾಪುರಂನಲ್ಲಿ ಜ್ಯೋತಿ ಕುಮಾರ್ ಚಾಮಕ್ಕಾಲ ಎದುರು ಸೋತಿದ್ದಾರೆ. ವೀಣಾ ಜಾರ್ಜ್ ಒಂದೇ ಒಂದು ಸುತ್ತಿನಲ್ಲೂ ಮುನ್ನಡೆ ಸಾಧಿಸಲಿಲ್ಲ. ಅಲ್ಲಿ ಅಬಿನ್ ವರ್ಕಿ ಭರ್ಜರಿ ಜಯ ಸಾಧಿಸಿದರು. ಧರ್ಮಡಂನಲ್ಲಿ ಸೋಲಿನಂಚಿಗೆ ತಲುಪಿದ್ದ ಪಿಣರಾಯಿ ವಿಜಯನ್, ಕೊನೆಗೆ ಹೇಗೋ ಗೆದ್ದು ಬಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ