
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಚುನಾವಣಾ ಆಯೋಗ ಹೊಸ ರಾಷ್ಟ್ರಪತಿ ಆಯ್ಕೆಗೆ ದಿನಾಂಕ ಘೋಷಿಸಿದೆ. ಜುಲೈ 24ರಂದು ರಾಮನಾಥ್ ಕೋವಿಂದ್ ಅವರ ಅಧಿಕಾರಾವಧಿ ಅಂತ್ಯಗೊಳ್ಳಲಿದೆ. ಸಾಮಾನ್ಯವಾಗಿ ಅಧಿಕಾರಾವಧಿಗಿಂತ ಮುನ್ನವೇ ಚುನಾವಣೆ ನಡೆಯುತ್ತದೆ ಮತ್ತು ಮುಂದಿನ ರಾಷ್ಟ್ರಪತಿಗಳನ್ನು ಹಾಲಿ ರಾಷ್ಟ್ರಪತಿ ಸ್ವಾಗತಿಸಿ ನಂತರ ನಿರ್ಗಮಿಸುತ್ತಾರೆ. ಕಳೆದ ಬಾರಿ ರಾಮನಾಥ್ ಕೋವಿಂದ್ ಅವರು 2017ರ ಜುಲೈ 17ರಂದು ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. ಈ ಬಾರಿ ಚುನಾವಣೆಯನ್ನು ಜುಲೈ 18ರಂದು ಚುನಾವಣಾ ಆಯೋಗ ನಿಗದಿ ಮಾಡಿದೆ.
ಲೋಕಸಭೆ ಮತ್ತು ರಾಜ್ಯಸಭೆ ಸಂಸದರು ರಾಷ್ಟ್ರಪತಿಗಳನ್ನು ಆಯ್ಕೆ ಮಾಡುತ್ತಾರೆ. ಲೋಕಸಭೆ ಮತ್ತು ರಾಜ್ಯಸಭೆ ಸೇರಿ ಒಟ್ಟಾರೆ 776 ಸಂಸದರಿರುತ್ತಾರೆ. ಲೋಕಸಭೆಯಲ್ಲಿ 543 ಮತ್ತು ರಾಜ್ಯಸಭೆಯಲ್ಲಿ 233 ಸಂಸದರು ಇರುತ್ತಾರೆ. ರಾಜ್ಯಸಭೆ ಮತ್ತು ಲೋಕಸಭೆ ಸಂಸದರು ಆಯಾ ರಾಜ್ಯಗಳ ಶಾಸಕರ ಸಂಖ್ಯೆಯ ಮೇಲೆ ನಿರ್ಧರಿತವಾಗುತ್ತದೆ. ಉತ್ತರಪ್ರದೇಶ ಅತಿದೊಡ್ಡ ರಾಜ್ಯವಾಗಿದ್ದು ಅತಿ ಹೆಚ್ಚು ಶಾಸಕರನ್ನು ಹೊಂದಿದೆ. ಅದರ ನಂತರ ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ತಮಿಳುನಾಡು ಹೆಚ್ಚು ಶಾಸಕರನ್ನು ಹೊಂದಿದೆ.
ಇದನ್ನೂ ಓದಿ: ರಾಜ್ಯಸಭೆ ಚುನಾವಣೆ ಕ್ಲೈಮ್ಯಾಕ್ಸ್: ಮೈತ್ರಿಗೆ 'ನೋ' ಎಂದ ಸಿದ್ದರಾಮಯ್ಯ, ಜೆಡಿಎಸ್ ಶಾಸಕರಿಗೆ ಪತ್ರ!
ಇತ್ತೀಚಿನ ಗೋವಾ, ಉತ್ತರ ಪ್ರದೇಶ, ಉತ್ತರಾಖಂಡ್ ಮತ್ತು ಮಣಿಪುರ ಚುನಾವಣೆಯ ಫಲಿತಾಂಶ ಬಿಜೆಪಿಗೆ ಸಂತಸ ತಂದಿದೆ. ಈ ಫಲಿತಾಂಶಗಳಿಂದ ಬಿಜೆಪಿಯ ಸಂಸದೀಯ ಸ್ಥಾನಗಳು ಸಹ ಹೆಚ್ಚಾಗಲಿದ್ದು, ನಾಳೆ ನಡೆಯಲಿರುವ ರಾಜ್ಯಸಭೆ ಚುನಾವಣೆಯ ಮೇಲೆ ಪ್ರಭಾವ ಬೀರಲಿದೆ.
ಬಿಜೆಪಿಗೆ ನಿತೀಶ್ ಕುಮಾರ್ ಚಿಂತೆ:
ಈ ಹಿಂದೆ 2012ರಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷ ಬಿಜೆಪಿ ನೇತೃತ್ವದ ಎನ್‌ಡಿಎ ಜೊತೆಗೇ ಇತ್ತು. ಎನ್‌ಡಿಎ ಪಿ.ಎ. ಸಂಗ್ಮಾ ಅವರನ್ನು ರಾಷ್ಟ್ರಪತಿ ಚುನಾವಣೆಗೆ ನಿಲ್ಲಿಸಿತ್ತು ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಪ್ರಣಭ್ ಮುಖರ್ಜಿಯವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿತ್ತು. ಈ ವೇಳೆ ಮೈತ್ರಿಯ ವಿರುದ್ಧ ಹೋದ ನಿತೀಶ್ ಕುಮಾರ್ ಪಕ್ಷ ಪ್ರಣಬ್ ಮುಖರ್ಜಿ ಅವರಿಗೆ ಮತ ಹಾಕಿದ್ದರು. ಈ ಮೂಲಕ ಪ್ರಣಬ್ ಮುಖರ್ಜಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಇದನ್ನೂ ಓದಿ: ಪರಮೇಶ್ವರ ಮುಂದಿನ ಸಿಎಂ ಘೋಷಿಸಿ: ಕಾಂಗ್ರೆಸ್‌ಗೆ ಶೆಟ್ಟರ್ ಸವಾಲ್
ಇದಾದ ನಂತರ 2017ರ ರಾಷ್ಟ್ರಪತಿ ಚುನಾವಣೆಯಲ್ಲಿ ನಿತೀಶ್ ಕುಮಾರ್ ಮತ್ತೊಮ್ಮೆ ಮೈತ್ರಿ ಪಕ್ಷಗಳ ವಿರುದ್ಧವಾಗಿ ಮತ ಹಾಕಿ ಸುದ್ದಿಯಾಗಿದ್ದರು. ಕಳೆದ ರಾಷ್ಟ್ರಪತಿ ಚುನಾವಣೆಯಲ್ಲಿ ಜೆಡಿಯು ಯುಪಿಎ ಜೊತೆಗಿತ್ತು. ಯುಪಿಎ ಮೀರಾ ಕುಮಾರ್ ಅವರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಕಣಕ್ಕಿಳಿಸಿತ್ತು. ಅವರ ವಿರುದ್ಧ ಎನ್‌ಡಿಎ ರಾಮನಾಥ್ ಕೋವಿಂದ್ ಅವರನ್ನು ಕಣಕ್ಕಿಳಿಸಿತ್ತು. ರಾಮನಾಥ್ ಕೋವಿಂದ್ ಈ ಹಿಂದೆ ಬಿಹಾರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. ಅಚ್ಚರಿ ಎಂಬಂತೆ ನಿತೀಶ್ ಕುಮಾರ್ ಅವರ ಜೆಡಿಯು ಯುಪಿಎ ಅಭ್ಯರ್ಥಿಯ ವಿರುದ್ಧ ಮತಹಾಕಿ ರಾಮನಾಥ್ ಕೋವಿಂದ್ ಅವರ ಗೆಲುವಲ್ಲಿ ಪ್ರಮುಖ ಪಾತ್ರ ವಹಿಸಿತ್ತು.
ಇದನ್ನೂ ಓದಿ: ಬಿಜೆಪಿಯಲ್ಲೀಗ ವಿಜಯೇಂದ್ರ ಸಿಎಂ ಕೂಗು, ಪ್ರಮುಖ ನಾಯಕರಿಂದ ಬ್ಯಾಟಿಂಗ್!
ಈ ಬಾರಿಯೂ ಜೆಡಿಯು ಯಾವ ನೀತಿ ಅನುಸರಿಸಲಿದೆ ಎಂಬುದು ಯುಪಿಎ ಮತ್ತು ಎನ್‌ಡಿಎ ಎರಡೂ ರಾಜಕೀಯ ಮೈತ್ರಿ ಪಕ್ಷಗಳಿಗೆ ಸಮಸ್ಯೆಯಾಗಿದೆ. ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ನಿತೀಶ್ ಕುಮಾರ್ ಈಗಾಗಲೇ ಕಡೆಗಣಿಸಿದ್ದಾರೆ. ಇದನ್ನು ಗಮನಿಸಿದರೆ ರಾಷ್ಟ್ರಪತಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರದ ಅವಕಾಶ ಬಿದ್ದರೆ ನಿತೀಶ್ ಕುಮಾರ್ ಪಕ್ಷ ಹೇಗೆ ಬೇಕಾದರೂ ಆಟವನ್ನು ಬದಲಿಸಬಹುದು. ಆದರೆ ಈಗ ಬಿಜೆಪಿ ಅತಿಹೆಚ್ಚು ಸಂಸದರನ್ನು ಹೊಂದಿರುವ ಹಿನ್ನೆಲೆ, ಬಿಜೆಪಿ ನಿಲ್ಲಿಸುವ ಅಭ್ಯರ್ಥಿಯೇ ಮುಂದಿನ ರಾಷ್ಟ್ರಪತಿಯಾಗುವುದು ನಿಶ್ಚಿತ. ರಾಮನಾಥ್ ಕೋವಿಂದ್ ಅವರನ್ನೇ ಮುಂದುವರೆಸುತ್ತಾರ ಅಥವಾ ಬೇರೆ ಅಭ್ಯರ್ಥಿಯನ್ನು ನಿಲ್ಲಿಸುತ್ತಾರ ಎಂಬುದನ್ನು ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ