
ಹಣ ಕಂಡ್ರೆ ಹೆಣನೂ ಬಾಯ್ಬಿಡುತ್ತೆ ಎಂಬ ಗಾದೆ ಮಾತು ಕೇಳಿದ್ದೀರಾ ಹಣಕ್ಕೆ ಜನ ಕೊಡುವ ಮೌಲ್ಯ ಅಂತಹದ್ದು, ಹಣ ಆಸ್ತಿಯ ಮುಂದೆ ಎಲ್ಲವೂ ಶೂನ್ಯ, ಅಣ್ಣ ತಮ್ಮಂದಿರ ನಡುವೆ ಅಕ್ಕ ತಂಗಿಯರ ನಡುವೆ ಸ್ನೇಹಿತರ ನಡುವೆ ಈ ಹಣವೆಂಬ ಚಂಚಲೆ ದೊಡ್ಡ ಸಮರವನ್ನೇ ತಂದ ಹಲವು ಉದಾಹರಣೆಗಳಿವೆ. ಕೆಲವು ಕುಟುಂಬಗಳೇ ಹಣದಿಂದ ಒಡೆದು ಹೋಗಿವೆ. ಹಣದ ಮುಂದೆ ಸಂಬಂಧಗಳೆಲ್ಲಾ ಲೆಕ್ಕಕ್ಕೇ ಇಲ್ಲ... ಹೀಗಿರುವಾಗ ವೃದ್ಧ ಬೀದಿ ವ್ಯಾಪಾರಿಯೊಬ್ಬರನ್ನು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ವೊಬ್ಬರು ಟೆಸ್ಟ್ ಮಾಡಿದ್ದಾರೆ. ಅವರು ವೃದ್ಧನ ಮುಂದೆ ಎರಡು ಆಯ್ಕೆಗಳನ್ನು ನೀಡಿದ್ದಾನೆ. ಹಣ ಹಾಗೂ ರಾಷ್ಟ್ರಧ್ವಜ ಈ ಎರಡಲ್ಲಿ ಅವರು ಯಾವುದನ್ನು ಆಯ್ಕೆ ಮಾಡಬಹುದು ಎಂಬ ಕುತೂಹಲ ಯುವಕನದ್ದಾಗಿತ್ತು. ಆದರೆ ತಾತನ ದೇಶಪ್ರೇಮದ ಮುಂದೆ ಹಣ ಲೆಕ್ಕಕ್ಕಿಲ್ಲದಂತಾಗಿದೆ. ಈ ವೀಡಿಯೋ ಈಗ ಇನ್ಸ್ಟಾಗ್ರಾಮ್‌ನಲ್ಲಿ ಭಾರಿ ವೈರಲ್ ಆಗಿದ್ದು, ತಾತನ ದೇಶಪ್ರೇಮಕ್ಕೆ ನೆಟ್ಟಿಗರು ದೊಡ್ಡ ಸಲಾಂ ಹೇಳಿದ್ದಾರೆ.
ವೀಡಿಯೋದಲ್ಲೇನಿದೆ ನೋಡಿ?
ಬೀದಿಯಲ್ಲಿ ಜನರ ದೇಶಪ್ರೇಮ ಹೇಗಿದೆ ಎಂಬುದನ್ನು ನೋಡುವುದಕ್ಕಾಗಿ ಸೋಶಿಯಲ್ ಮಿಡಿಯಾ ಇನ್‌ಫ್ಲುಯೆನ್ಸರ್ ಒಬ್ಬ ಹಣ ಹಾಗೂ ರಾಷ್ಟ್ರಧ್ವಜ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡುವ ಅವಕಾಶ ನೀಡುತ್ತಾನೆ. ಅದೇ ರೀತಿ ಇಲ್ಲಿ ಚೀಲದಲ್ಲಿ ಹಪ್ಪಳವನ್ನು ತುಂಬಿಸಿಕೊಂಡು ಬೀದಿ ಬೀದಿಯಲ್ಲಿ ನಡೆದುಕೊಂಡು ಹೋಗಿ ವ್ಯಾಪಾರ ಮಾಡುತ್ತಿದ್ದ ವೃದ್ಧರೊಬ್ಬರ ಬಳಿ ಇನ್‌ಫ್ಲುಯೆನ್ಸರ್ ಹೋಗಿದ್ದು, ಅವರಿಗೆ ಈ ಆಯ್ಕೆಯನ್ನು ನೀಡಿದ್ದಾನೆ. ಮೊದಲಿಗೆ ಆತ 500 ರೂಪಾಯಿ ಹಾಗೂ ರಾಷ್ಟ್ರಧ್ವಜ ಎರಡರಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಹೇಳಿದ್ದಾನೆ. ಈ ವೇಳೆ ವೃದ್ಧ ರಾಷ್ಟ್ರಧ್ವಜವನ್ನು ಆಯ್ಕೆ ಮಾಡಿದ್ದಾರೆ. ನಂತರ ಇನ್‌ಫ್ಲುಯೆನ್ಸರ್ 1000 ರೂಪಾಯಿ ಹಾಗೂ ರಾಷ್ಟ್ರಧ್ವಜದ ಆಯ್ಕೆ ನೀಡುತ್ತಾನೆ ಆಗಲೂ ವೃದ್ಧ ರಾಷ್ಟ್ರಧ್ವಜವನ್ನೇ ಆಯ್ಕೆ ಮಾಡುತ್ತಾರೆ. ನಂತರ ಇನ್‌ಫ್ಲುಯೆನ್ಸರ್ 2000 ರೂಪಾಯಿ ಹಾಗೂ ರಾಷ್ಟ್ರಧ್ವಜದ ಆಯ್ಕೆ ನೀಡುತ್ತಾನೆ ಆಗಲೂ ವೃದ್ಧ ಆಯ್ಕೆ ಮಾಡಿದ್ದು ರಾಷ್ಟ್ರಧ್ವಜವನ್ನು ಮಾತ್ರ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ವೀಡಿಯೋ ನೋಡಿದ ಅನೇಕರು ವೃದ್ಧನ ರಾಷ್ಟ್ರಪ್ರೇಮಕ್ಕೆ ಶಭಾಷ್ ಎಂದಿದ್ದಾರೆ.
ತಾತನ ದೇಶಪ್ರೇಮಕ್ಕೆ ನೆಟ್ಟಿಗರು ಫಿದಾ
ಅಂದಹಾಗೆ ಈ ವೀಡಿಯೋವನ್ನು Ubaid k ಎಂಬುವವರು ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋ ನೋಡಿದ ಜನ ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಈಗಿನ ಕಾಲದಲ್ಲು ಇಂತಹ ಜನರು ಇದ್ದಾರೆ ಎಂಬುದನ್ನು ತಿಳಿದು ಖುಷಿಯಾಯ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಹಣವಿಲ್ಲದೆಯೂ ಎಷ್ಟು ಖುಷಿಯಾಗಿರಬಹುದು ಎಂಬುದಕ್ಕೆ ಇದೊಂದು ಉದಾಹರಣೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ತ್ರಿವರ್ಣ ಧ್ವಜ ಬರೀ ಧ್ವಜವಲ್ಲ ಇದು ಭಾರತೀಯರ ಹೃದಯ ಬಡಿತ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವರಿಗೆ ಪ್ರತಿ ವಸ್ತುವಿನ ಮೌಲ್ಯ ಗೊತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮನ್ನು ನೋಡಿ ನಮಗೆ ಗೌರವ ಉಕ್ಕುತ್ತಿದೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವರೊಬ್ಬರು ಪರಿಶುದ್ಧ ಆತ್ಮ ನಿಮ್ಮನ್ನು ನಾವು ಪ್ರೀತಿಸುತ್ತೇವೆ ತಾತ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಇವರು ಯಾವಾಗಲೂ ಎರ್ನಾಕುಲಂ ಮಾರುಕಟ್ಟೆಯಲ್ಲಿರುತ್ತಾರೆ. ಅವರು ಹಲವು ವರ್ಷಗಳಿಂದ ಪಪ್ಪಡಂ ವ್ಯಾಪಾರ ಮಾಡುತ್ತಿದ್ದಾರೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ರಾಷ್ಟ್ರದ ಮೇಲಿನ ಸಾಮಾನ್ಯ ವ್ಯಕ್ತಿಯ ಈ ಪ್ರೀತಿಯನ್ನು ಹಣದಿಂದ ಕೊಳ್ಳಲಾಗದು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇವರು ಹೃದಯ ಶ್ರೀಮಂತರು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ವೀಡಿಯೋ ಬಗ್ಗೆ ನಿಮಗೇನನಿಸಿತು ಕಾಮೆಂಟ್ ಮಾಡಿ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ