ಭಾಗವತ್‌ ‘ಹಿಂದೂ ಹೇಳಿಕೆ’ಗೆ ಒವೈಸಿ, ದಿಗ್ವಿ, ಮಾಯಾ ಕಿಡಿ!

By Suvarna NewsFirst Published Jul 6, 2021, 7:44 AM IST
Highlights

* ಬಿಜೆಪಿಗರಿಗೆ ಮೊದಲು ಭಾಗವತ್‌ ಬುದ್ಧಿ ಹೇಳಲಿ

* ಅವರ ಮಾತಿನಲ್ಲೂ ಕೃತಿಯಲ್ಲೂ ವ್ಯತ್ಯಾಸ: ಆಕ್ರೋಶ

* ಭಾಗವತ್‌ ‘ಹಿಂದೂ ಹೇಳಿಕೆ’ಗೆ ಒವೈಸಿ, ದಿಗ್ವಿ, ಮಾಯಾ ಕಿಡಿ

 ನವದೆಹಲಿ(ಜು.06): ‘ಹಿಂದೂಗಳಿರಲಿ, ಮುಸ್ಲಿಮರಿರಲಿ ಭಾರತೀಯರ ಎಲ್ಲ ಡಿಎನ್‌ಎ (ವಂಶವಾಹಿ) ಒಂದೇ. ಭಾರತೀಯರಿಗೆಲ್ಲ ಗೋವು ದೇವತಾ ಸ್ವರೂಪಿ. ಹಾಗಂತ ಗೋವು ಸಾಗಣೆ ಮಾಡುವವರನ್ನು ಬಡಿದು ಕೊಲ್ಲುವುದು ತಪ್ಪು. ಆಂಥವರು ಹಿಂದೂ ವಿರೋಧಿಗಳು’ ಎಂದು ನೀಡಿದ ಹೇಳಿಕೆಯು ಕಾಂಗ್ರೆಸ್‌, ಮಜ್ಲಿಸ್‌ ಪಕ್ಷ ಹಾಗೂ ಬಿಎಸ್‌ಪಿಯ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಕಾಂಗ್ರೆಸ್‌ ಮುಖಂಡ ದಿಗ್ವಿಜಯ ಸಿಂಗ್‌ ಮಾತನಾಡಿ, ‘ಭಾಗವತ್‌ ಅವರ ಮಾತು ಹಾಗೂ ಕೃತಿಗಳಲ್ಲಿ ವ್ಯತ್ಯಾಸವಿದೆ. ಮುಗ್ಧ ಮುಸ್ಲಿಮರ ಮೇಲೆ ದೌರ್ಜನ್ಯ ನಡೆಸುವ ಬಿಜೆಪಿ ನಾಯಕರಿಗೆ ಈ ಮಾತನ್ನು ಭಾಗವತ್‌ ಹೇಳಬೇಕು. ನಿಮ್ಮ ಮಾತನ್ನು ಕೃತಿಗೆ ತರಬೇಕು ಎಂದರೆ ದೌರ್ಜನ್ಯ ಎಸಗುವ ಬಿಜೆಪಿಗರನ್ನು ವಜಾ ಮಾಡಬೇಕು’ ಎಂದು ಸವಾಲು ಹಾಕಿದ್ದಾರೆ.

ಮಜ್ಲಿಸ್‌ ಪಕ್ಷದ ನಾಯಕ ಅಸಾದುದ್ದೀನ್‌ ಒವೈಸಿ ಪ್ರತಿಕ್ರಿಯೆ ನೀಡಿ, ‘ಬಡಿದು ಸಾಯಿಸುವವರಿಗೆ ಅದು ಆಕಳೋ ಅಥವಾ ಎಮ್ಮೆಯೋ ಎಂದು ಗೊತ್ತಿರುವುದಿಲ್ಲ. ಬರೀ ಅಖ್ಲಾಕ್‌, ಜುನೈದ್‌, ಅಲೀಮುದ್ದೀನ್‌ ಎಂಬ ಹೆಸರುಗಳು ಮಾತ್ರ ಅರ್ಥವಾಗುತ್ತವೆ. ಮುಸ್ಲಿಮರನ್ನನು ಬಡಿದು ಕೊಲ್ಲುವ ದ್ವೇಷ ಉತ್ಪಾದನೆಯೇ ಗೋಡ್ಸೆ ಹಿಂದುತ್ವ. ಇದಕ್ಕೆ ಸರ್ಕಾರದ ರಕ್ಷಣೆ ಇದೆ’ ಎಂದಿದ್ದಾರೆ.

ಬಿಎಸ್‌ಪಿ ನಾಯಕಿ ಮಾಯಾವತಿ ಮಾತನಾಡಿ, ‘ಭಾಗವತ್‌ ಅವರ ಹೇಳಿಕೆಯು ‘ಕೇವಲ್ಲಿ ಬಾಯಲ್ಲಿ ರಾಮನಾಮ. ಕಂಕುಳಲ್ಲಿ ಚೂರಿ’ ಎಂಬಂತಿದೆ’ ಎಂದು ವ್ಯಂಗ್ಯವಾಡಿದ್ದಾರೆ.

click me!