ಎಥೆನಾಲ್ ಹಾಕಿದ್ರೆ ಮೈಲೇಜ್ ಡೌನ್ ಆಗುತ್ತೆ, ಆದ್ರೆ...?: ಕೊನೆಗೂ ಸತ್ಯ ಒಪ್ಪಿಕೊಂಡ ನಿತಿನ್ ಗಡ್ಕರಿ!

Published : Jul 10, 2026, 11:27 AM IST
Nitin Gadkari E20 Petrol

ಸಾರಾಂಶ

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಿಂದ ವಾಹನಗಳ ಮೈಲೇಜ್ ಸ್ವಲ್ಪ ಕಡಿಮೆಯಾಗುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಇದು ಇಂಜಿನ್‌ಗೆ ಹಾನಿ ಮಾಡುತ್ತದೆ ಎಂಬ ವದಂತಿಗಳನ್ನು ತಳ್ಳಿಹಾಕಿದ್ದು, ಫ್ಲೆಕ್ಸ್-ಫ್ಯುಯೆಲ್ ತಂತ್ರಜ್ಞಾನ ಮತ್ತು ಪರ್ಯಾಯ ಇಂಧನಗಳ ಬಳಕೆಯಿಂದ ದೇಶವನ್ನು ಇಂಧನದಲ್ಲಿ ಸ್ವಾವಲಂಬಿಯಾಗಿಸುವ ಗುರಿಯನ್ನು ವಿವರಿಸಿದ್ದಾರೆ.

ನವದೆಹಲಿ: ಪೆಟ್ರೋಲ್ ಜೊತೆ ಎಥೆನಾಲ್ ಬೆರೆಸುವುದರಿಂದ ವಾಹನಗಳ ಮೈಲೇಜ್ ಸ್ವಲ್ಪ ಕಡಿಮೆಯಾಗುತ್ತೆ ಅನ್ನೋ ಸತ್ಯವನ್ನು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಕೊನೆಗೂ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಆದರೆ, ಎಥೆನಾಲ್ ಇಂಧನದಿಂದ ಇಂಜಿನ್ ಹಾಳಾಗುತ್ತೆ, ಗಾಡಿಯ ಪಾರ್ಟ್ಸ್‌ಗೆ ಸಮಸ್ಯೆ ಆಗುತ್ತೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಹಬ್ಬಿರೋ ಸುದ್ದಿಗಳನ್ನು ಅವರು ಪೂರ್ತಿಯಾಗಿ ತಳ್ಳಿಹಾಕಿದ್ದಾರೆ. 'ದಿ ಇಂಡಿಯನ್ ಎಕ್ಸ್‌ಪ್ರೆಸ್‌'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಗಡ್ಕರಿಯವರು ಸರ್ಕಾರದ ಎಥೆನಾಲ್ ನೀತಿಯನ್ನು ಸಮರ್ಥಿಸಿಕೊಂಡು, ಮುಂದಿನ ಯೋಜನೆಗಳ ಬಗ್ಗೆ ವಿವರಿಸಿದ್ದಾರೆ.

ಮೈಲೇಜ್ ಕಡಿಮೆ ಆಗೋಕೆ ಕಾರಣ ಏನು?

ಪೆಟ್ರೋಲ್ ಮತ್ತು ಎಥೆನಾಲ್‌ನ ಕ್ಯಾಲೋರಿಫಿಕ್ ಮೌಲ್ಯದಲ್ಲಿ, ಅಂದ್ರೆ ಅವು ಉರಿದು ಶಕ್ತಿ ಕೊಡುವ ಪ್ರಮಾಣದಲ್ಲಿ ವ್ಯತ್ಯಾಸ ಇರುವುದೇ ಮೈಲೇಜ್ ಕುಸಿತಕ್ಕೆ ಮುಖ್ಯ ಕಾರಣ ಅಂತ ಸಚಿವರು ಹೇಳಿದ್ದಾರೆ. ಜೊತೆಗೆ, ದೆಹಲಿ, ಮುಂಬೈನಂತಹ ನಗರಗಳಲ್ಲಿನ ಟ್ರಾಫಿಕ್ ಜಾಮ್ ಮತ್ತು ಪದೇ ಪದೇ ಬ್ರೇಕ್ ಹಾಕುವುದೂ ಮೈಲೇಜ್ ಮೇಲೆ ಪರಿಣಾಮ ಬೀರುತ್ತೆ. ಆದರೆ, ಪುಣೆ ಮೂಲದ 'ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ' (ARAI) ವರದಿ ಪ್ರಕಾರ, 'ಫ್ಲೆಕ್ಸ್-ಫ್ಯುಯೆಲ್' ಇಂಜಿನ್‌ಗಳಿಗಾಗಿಯೇ ತಯಾರಿಸಿದ ಗಾಡಿಗಳಲ್ಲಿ ಮೈಲೇಜ್ ಕಡಿಮೆ ಆಗುವುದಿಲ್ಲ. ಇದೇ ಕಾರಣಕ್ಕೆ ದೇಶ ಈಗ ಫ್ಲೆಕ್ಸ್-ಇಂಜಿನ್ ತಂತ್ರಜ್ಞಾನದತ್ತ ವೇಗವಾಗಿ ಹೆಜ್ಜೆ ಹಾಕುತ್ತಿದೆ ಅಂತ ಅವರು ಹೇಳಿದ್ದಾರೆ.

ಇಂಜಿನ್ ಹಾಳಾಗುತ್ತೆ ಅನ್ನೋದು ಸುಳ್ಳು ಸುದ್ದಿ

E20 (ಅಂದ್ರೆ 20% ಎಥೆನಾಲ್ ಮಿಶ್ರಿತ ಪೆಟ್ರೋಲ್) ಇಂಧನದಿಂದ ದೇಶದಲ್ಲಿ ಒಂದೇ ಒಂದು ಕಾರು ಕೂಡ ಹಾಳಾಗಿಲ್ಲ ಅಂತ ಗಡ್ಕರಿ ಖಡಕ್ಕಾಗಿ ಹೇಳಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹರಡುತ್ತಿರುವುದು ಉದ್ದೇಶಪೂರ್ವಕವಾಗಿ ಹಬ್ಬಿಸುತ್ತಿರುವ ಸುಳ್ಳು ಸುದ್ದಿಗಳು. ಕಳೆದ ವರ್ಷ ದೇಶದಾದ್ಯಂತ E20 ಇಂಧನವನ್ನು ಪರಿಚಯಿಸುವ ಮೊದಲು ಹಲವು ಹಂತಗಳಲ್ಲಿ ಕಠಿಣ ಪರೀಕ್ಷೆಗಳನ್ನು ನಡೆಸಲಾಗಿದೆ.

ಹಳೆಯ ವಾಹನಗಳಲ್ಲಿ ಆಗಬಹುದಾದ ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಲು ವಾಹನ ತಯಾರಕರಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಹಳೆಯ ಕಾರುಗಳ ಸರ್ವಿಸಿಂಗ್ ವೇಳೆ, ಮೆಟಲ್ ವಾಷರ್‌ಗಳ ಬದಲು ಹೊಸ ರಬ್ಬರ್ ವಾಷರ್‌ಗಳನ್ನು ಗ್ರಾಹಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಬದಲಾಯಿಸಿ ಕೊಡಲಾಗುತ್ತಿದೆ. ಅಷ್ಟೇ ಅಲ್ಲ, ಎಥೆನಾಲ್‌ಗೆ ಆ್ಯಂಟಿ-ನಾಕಿಂಗ್ ಗುಣ ಮತ್ತು ಹೆಚ್ಚು ಆಕ್ಟೇನ್ ನಂಬರ್ ಇರುವುದರಿಂದ ಇದು ವಾಹನದ ಪರ್ಫಾಮೆನ್ಸ್ ಅನ್ನು ಇನ್ನಷ್ಟು ಹೆಚ್ಚಿಸುತ್ತದೆ. ಟಾಟಾ, ಮಹೀಂದ್ರಾ, ಹ್ಯುಂಡೈ, ಟೊಯೊಟಾ, ಮಾರುತಿ ಸುಜುಕಿ ಸೇರಿದಂತೆ ಪ್ರಮುಖ ಕಂಪನಿಗಳು ಈಗ ಫ್ಲೆಕ್ಸ್-ಫ್ಯುಯೆಲ್ ಮಾಡೆಲ್‌ಗಳನ್ನು ತಯಾರಿಸುತ್ತಿವೆ ಅಂತ ಸಚಿವರು ಮಾಹಿತಿ ನೀಡಿದರು.

ಇಂಧನ ಆಮದಿಗೆ ಅಂತ್ಯ ಹಾಡುವುದೇ ಗುರಿ

ಪಶ್ಚಿಮ ಏಷ್ಯಾದಲ್ಲಿನ ರಾಜಕೀಯ ಅಸ್ಥಿರತೆ ನೋಡಿದರೆ, ವಿದೇಶಿ ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆ ಕಡಿಮೆ ಮಾಡುವುದು ಅತ್ಯಗತ್ಯ ಅಂತ ಸಚಿವರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕಾಗಿ ಸರ್ಕಾರ ದೊಡ್ಡ ಯೋಜನೆಗಳನ್ನೇ ರೂಪಿಸುತ್ತಿದೆ. ಕರ್ನಾಟಕದಲ್ಲಿ ಅಶೋಕ್ ಲೇಲ್ಯಾಂಡ್ ಜೊತೆ ಸೇರಿ 15% ಮೆಥನಾಲ್-ಡೀಸೆಲ್ ಮಿಶ್ರಣ ಬಳಸಿ 25 ಬಸ್‌ಗಳ ಯಶಸ್ವಿ ಪರೀಕ್ಷಾರ್ಥ ಸಂಚಾರ ನಡೆಸಲಾಗಿದೆ. ಡೀಸೆಲ್ ಲೀಟರ್‌ಗೆ 110 ರೂಪಾಯಿ ಇದ್ದರೆ, ಅಸ್ಸಾಂ ಪೆಟ್ರೋ-ಕೆಮಿಕಲ್ಸ್ ಕೇವಲ 20-22 ರೂಪಾಯಿಗೆ ಮೆಥನಾಲ್ ಉತ್ಪಾದಿಸುತ್ತಿದೆ.

ಎಥೆನಾಲ್‌ನಿಂದ ತೆಗೆಯುವ ಐಸೋ-ಬ್ಯೂಟನಾಲ್ ಅನ್ನು ಟ್ರ್ಯಾಕ್ಟರ್, ಕಟಾವು ಯಂತ್ರ ಮತ್ತು ನಿರ್ಮಾಣ ಉಪಕರಣಗಳಲ್ಲಿ ಡೀಸೆಲ್‌ಗೆ ಬದಲಾಗಿ ಬಳಸಬಹುದು (ಎಥೆನಾಲ್ ಅನ್ನು ನೇರವಾಗಿ ಡೀಸೆಲ್ ಇಂಜಿನ್‌ಗಳಲ್ಲಿ ಬಳಸಲು ಸಾಧ್ಯವಿಲ್ಲ). ಜನರೇಟರ್‌ಗಳನ್ನು ಸಿಎನ್‌ಜಿ, ಎಥೆನಾಲ್ ಮತ್ತು ಮೆಥನಾಲ್‌ಗೆ ಬದಲಾಯಿಸಲಾಗುವುದು. ಸದ್ಯ ಭಾರತ ಪ್ರತಿ ವರ್ಷ 2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಪಳೆಯುಳಿಕೆ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದೆ. ದೇಶೀಯ ಇಂಧನಗಳಿಗೆ ಬದಲಾಗುವುದರಿಂದ ಈ ದೊಡ್ಡ ಮೊತ್ತವನ್ನು ಉಳಿಸಬಹುದು ಮತ್ತು ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಬಹುದು. ಭಾರತವನ್ನು ಇಂಧನದಲ್ಲಿ ಸ್ವಾವಲಂಬಿ ಮಾಡುವುದೇ ನಮ್ಮ ಗುರಿ ಅಂತ ಹೇಳಿ ಸಚಿವರು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ ಸೋತಿಲ್ವಾ? ನನ್ನ ತಮ್ಮನಿಗೆ ಯಾಕೆ ಬೈಯ್ತೀರಿ?: Shreyas Iyer ಅಕ್ಕ ವಾಗ್ದಾಳಿ
ಆಫೀಸ್ ಮುಗಿದ ಮೇಲೆ ಬಾಸ್‌ನಿಂದ ಕರೆ ಇಲ್ಲ, ಜಪಾನ್‌ನಲ್ಲಿ 10 ವರ್ಷದ ಕೆಲಸದ ಅನುಭವ ಹಂಚಿಕೊಂಡ ಭಾರತೀಯ