ಸಾರ್ವಜನಿಕ ಸ್ಥಳಗಳಲ್ಲಿ ಎಲ್ಲೆಂದರಲ್ಲಿ ಕಸ ಎಸೆಯುವ ಜನರ ಚಾಳಿಗೆ ಬ್ರೇಕ್ ಹಾಕಲು ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಅತ್ಯಾಧುನಿಕ ‘ಕೃತಕ ಬುದ್ಧಿಮತ್ತೆ’ (AI) ತಂತ್ರಜ್ಞಾನದ ಮೊರೆ ಹೋಗಿದೆ. ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವ ಉದ್ದೇಶದಿಂದ, ಮುಂಬೈನ ಮಾಹಿಮ್ (Mahim) ಪ್ರದೇಶದ ಕಸದ ಹಾಟ್ಸ್ಪಾಟ್ನಲ್ಲಿ ಪ್ರಾಯೋಗಿಕವಾಗಿ ದೇಶದಲ್ಲೇ ಮೊದಲ ಬಾರಿಗೆ ‘ಎಐ-ಚಾಲಿತ ಕ್ಯಾಮೆರಾ’ (AI-Powered Camera) ಅಳವಡಿಸಲಾಗಿದೆ.
ಈ ಹೈಟೆಕ್ ಕ್ಯಾಮೆರಾ ಕಸದ ಸೂಕ್ಷ್ಮ ಪ್ರದೇಶಗಳ ಮೇಲೆ ಸದಾ ಕಣ್ಣಿಟ್ಟಿರುತ್ತದೆ. ಯಾರಾದರೂ ರಸ್ತೆಬದಿ ಅಥವಾ ತೆರೆದ ಜಾಗದಲ್ಲಿ ಕಸದ ಚೀಲಗಳನ್ನು ಎಸೆಯಲು ಮುಂದಾದರೆ, ಈ ಎಐ ಕ್ಯಾಮೆರಾ ಅದನ್ನು ತಕ್ಷಣವೇ ಗುರುತಿಸುತ್ತದೆ. ಕ್ಯಾಮೆರಾ ಡಿಟೆಕ್ಟ್ ಮಾಡಿದ ಮರುಕ್ಷಣವೇ ಅದಕ್ಕೆ ಜೋಡಿಸಲಾದ ಧ್ವನಿವರ್ಧಕದಲ್ಲಿ (Loudspeaker) ಆಡಿಯೋ ಎಚ್ಚರಿಕೆ ಸಂದೇಶ ಮೊಳಗುತ್ತದೆ. "ಇಲ್ಲಿ ಕಸ ಎಸೆಯಬೇಡಿ, ಇದು ಕಾನೂನುಬಾಹಿರ" ಎಂದು ಜೋರಾಗಿ ಎಚ್ಚರಿಕೆ ನೀಡುವ ಮೂಲಕ ಕಸ ಎಸೆಯುವವರನ್ನು ಮುಜುಗರಕ್ಕೀಡುಮಾಡಿ, ಅವರನ್ನು ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ.
ಬಿಎಂಸಿ ಸಮೀಕ್ಷೆಯ ಪ್ರಕಾರ, ಮುಂಬೈ ನಗರದಲ್ಲಿ ಜನರು ಅಕ್ರಮವಾಗಿ ಕಸ ಸುರಿಯುವ ಬರೋಬ್ಬರಿ 286 ಸೂಕ್ಷ್ಮ ತಾಣಗಳನ್ನು (Garbage-vulnerable spots) ಗುರುತಿಸಲಾಗಿದೆ. ಈ ಪೈಕಿ ಕಂದಿವಿಲಿ, ಚಾರ್ಕೋಪ್ ಹಾಗೂ ಮಲಾಡ್ ಭಾಗಗಳನ್ನು ಒಳಗೊಂಡ ‘ಆರ್-ದಕ್ಷಿಣ’ ವಾರ್ಡ್ನಲ್ಲಿ ಅತಿ ಹೆಚ್ಚು (28) ಕಸದ ತಾಣಗಳಿವೆ. ಉಳಿದಂತೆ ಗೋವಂಡಿ, ಚೆಂಬೂರು, ದಾದರ್, ಧಾರಾವಿ ಹಾಗೂ ಮಾಹಿಮ್ ಭಾಗಗಳಲ್ಲಿ ಇಂತಹ ಸಮಸ್ಯೆ ಹೆಚ್ಚಾಗಿದೆ. ಈ ಹಿಂದೆ 130 ಕಡೆ ಸಾಮಾನ್ಯ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ 100ಕ್ಕೂ ಹೆಚ್ಚು ತಾಣಗಳನ್ನು ಸ್ವಚ್ಛಗೊಳಿಸಲಾಗಿತ್ತು.
ಪ್ರಸ್ತುತ ಅಳವಡಿಸಲಾಗಿರುವ ಈ ಎಐ ಕ್ಯಾಮೆರಾ ನಿಯಮ ಉಲ್ಲಂಘಿಸುವವರಿಗೆ ನೇರವಾಗಿ ದಂಡ (Challan) ವಿಧಿಸುವುದಿಲ್ಲ. ಆದರೆ, ಸ್ಥಳದಲ್ಲೇ ಇರುವ ಪಾಲಿಕೆ ಸಿಬ್ಬಂದಿಗೆ ಮಾಹಿತಿ ರವಾನಿಸುತ್ತದೆ ಮತ್ತು ಧ್ವನಿವರ್ಧಕದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತದೆ. ಮಾಹಿಮ್ನಲ್ಲಿ ಕೈಗೊಂಡಿರುವ ಈ ಪ್ರಾಯೋಗಿಕ ಯೋಜನೆ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಮುಂಬೈನ ಉಳಿದ ಎಲ್ಲಾ 286 ಸೂಕ್ಷ್ಮ ಪ್ರದೇಶಗಳಿಗೂ ಈ ಎಐ ಕ್ಯಾಮೆರಾ ವ್ಯವಸ್ಥೆಯನ್ನು ವಿಸ್ತರಿಸಲಾಗುವುದು ಎಂದು ಬಿಎಂಸಿಯ ಘನತ್ಯಾಜ್ಯ ನಿರ್ವಹಣಾ ವಿಭಾಗದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆಗಳು ಹಾಗೂ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ನಾಗರಿಕರಿಗೆ ಪಾಲಿಕೆ ಮನವಿ ಮಾಡಿದೆ.
ಪ್ರಸ್ತುತ ಲೌಡ್ಸ್ಪೀಕರ್ ಮೂಲಕ ವಾರ್ನಿಂಗ್ ಮಾತ್ರ ನೀಡಲಾಗುತ್ತಿದ್ದು, ಮುಂದಿನ ಹಂತದಲ್ಲಿ ಟ್ರಾಫಿಕ್ ಕ್ಯಾಮೆರಾಗಳ ಮಾದರಿಯಲ್ಲೇ ಮುಖ ಗುರುತಿಸುವ ತಂತ್ರಜ್ಞಾನ (Facial Recognition) ಅಥವಾ ವಾಹನದ ನಂಬರ್ ಪ್ಲೇಟ್ ಸ್ಕ್ಯಾನ್ ಮಾಡಿ, ಮನೆಗೇ ನೇರವಾಗಿ ‘ಆಟೋಮ್ಯಾಟಿಕ್ ಇ-ಚಲನ್’ (ದಂಡದ ನೋಟಿಸ್) ಕಳುಹಿಸುವ ವ್ಯವಸ್ಥೆಯನ್ನು ತರಲು ಬಿಎಂಸಿ ಚಿಂತನೆ ನಡೆಸಿದೆ.
ಕೇವಲ ಮುಂಬೈ ಮಾತ್ರವಲ್ಲದೆ, ಇತ್ತ ನಮ್ಮ ಬೆಂಗಳೂರಿನಲ್ಲೂ ರಸ್ತೆಬದಿಯ ‘ಕಸದ ಬ್ಲ್ಯಾಕ್ ಸ್ಪಾಟ್ಗಳು’ (Black spots) ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಬಿಬಿಎಂಪಿ ಮಾರ್ಷಲ್ಗಳು ಕಾವಲು ಕಾಯುತ್ತಿದ್ದರೂ ಕದ್ದುಮುಚ್ಚಿ ಕಸ ಎಸೆಯುವುದು ನಿಂತಿಲ್ಲ. ಹಾಗಾಗಿ, ಮುಂಬೈನ ಈ ಎಐ ಕ್ಯಾಮೆರಾ ಮಾದರಿಯನ್ನು ಬೆಂಗಳೂರಿನಲ್ಲೂ ಜಾರಿಗೆ ತಂದರೆ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಬಹುದು ಎಂಬ ಮಾತುಗಳು ಕೇಳಿಬರುತ್ತಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ