ದುಬೈನಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಯುವತಿಯನ್ನು ಮದುವೆಯಾಗಲು ಭಾರತಕ್ಕೆ ಬಂದಾಗ ವಂಚನೆಗೆ ಒಳಗಾದ ಘಟನೆ ಪಂಜಾಬ್‌ನಲ್ಲಿ ನಡೆದಿದೆ. ಮದುವೆಗೆಂದು 50,000 ರೂ. ಕಳುಹಿಸಿದ್ದ ಯುವಕ, ಮದುವೆ ದಿನ ಬಂಧುಗಳೊಂದಿಗೆ ನಿಗದಿತ ಸ್ಥಳಕ್ಕೆ ಬಂದಾಗ ಅಲ್ಲಿ ಮದುವೆ ಮಂಟಪವೇ ಇರಲಿಲ್ಲ.
ಪಂಜಾಬ್: ಕಳೆದ ಮೂರು ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಾ ತನ್ನ ಕಾಲ ಮೇಲೆ ನಿಂತುಕೊಂಡ ಯುವಕ ನಾನು ಭಾರತೀಯ ಸುಂದರ ಯುವತಿ ಮದುವೆ ಮಾಡಿಕೊಳ್ಳಬೇಕೆಂದು ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಹುಡುಗಿ ನೋಡಿ ಮೆಚ್ಚಿಕೊಂಡು ಪ್ರೀತಿ ಮಾಡಿದ್ದಾನೆ. ಆ ಯುವತಿಯೂ ನಾನು ನಿನ್ನನ್ನು ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಇದರಿಂದ ಹುಡುಗಿಯ ಖರ್ಚಿಗೆ ಒಂದಷ್ಟು ಹಣವನ್ನು ಕೊಟ್ಟು ನೀನೇ ಮದುವೆ ಸಿದ್ಧತೆ ಮಾಡುವಂತೆ ಹೇಳಿದ್ದಾನೆ. ನಂತರ ತಾನು ದುಬೈನಿಂದ ಬಂದು ಕುಟುಂಬಸ್ಥರನ್ನು ಬಸ್ ಹಾಗೂ ಕಾರಿನಲ್ಲಿ ಕರೆದುಕೊಂಡು ಹುಡುಗಿ ಹೇಳಿದ ವಿಳಾಸಕ್ಕೆ ಹೋಗಿದ್ದಾನೆ. ಆದರೆ, ಮದುವೆ ನಡೆಯಬೇಕಾಗಿದ್ದ ಜಾಗದಲ್ಲಿ ನಡೆದಿದ್ದೇ ಬೇರೆ..
ಇನ್‌ಸ್ಟಾಗ್ರಾಮ್ ಯುವತಿಯನ್ನು ನಂಬಿಕೊಂಡು ಮದುವೆಯಾಗುವುದಕ್ಕೆ ಬಂದ ಯುವಕನ ದೀಪಕ್ ಕುಮಾರ್ (24) ಆಗಿದ್ದಾನೆ. ಈತನಿಗೆ ವಂಚನೆ ಮಾಡಿದ ಯುವತಿ ಮನ್‌ಪ್ರೀತ್ ಕೌರ್ ಆಗಿದ್ದಾಳೆ. ಇನ್ನು ತಾನು ಇನ್‌ಸ್ಟಾಗ್ರಾಮ್‌ನಲ್ಲಿ ನೋಡಿ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ದುಬೈನಿಂದ ಬಂದ ದೀಪಕ್, ತಮ್ಮ ನೂರಾರು ಬಂಧುಗಳೊಂದಿಗೆ ಯುವತಿ ಹೇಳಿದ ಸ್ಥಳಕ್ಕೆ ಬಂದಿದ್ದಾನೆ. ಆಗ, ಹುಡುಗಿ ಹೇಳಿದ ಗ್ರಾಮದಲ್ಲಿ ಮದುವೆ ಮಂಟಪವೇ ಇರಲಿಲ್ಲ. ಅದೊಂದು ಪುಟ್ಟ ಗ್ರಾಮವಾಗಿದ್ದು, ಯಾವುದೇ ಮದುವೆ ಸಿದ್ಧತೆಯೂ ಅಲ್ಲಿ ತಯಾರಾಗಿರಲ್ಲಿ. ಅಲ್ಲಿ ಸ್ಥಳೀಯರನ್ನು ಕೇಳಿದರೆ ನಿಮಗ್ಯಾರೋ ಸುಳ್ಳು ಹೇಳಿದ್ದಾರೆ ಎಂದಾಗಲೇ ತಾನು ವಂಚನೆಗೆ ಒಳಗಾಗಿದ್ದೇನೆ ಎಂದು ಯುವಕ ಎಚ್ಚೆತ್ತುಕೊಂಡಿದ್ದಾನೆ.
ಈ ಘಟನೆ ಪಂಜಾಬಿನ ಮೋಗ ಎಂಬ ಪ್ರಾಂತ್ಯದಲ್ಲಿ ನಡೆದಿದೆ. ಕಳೆದ 3 ವರ್ಷಗಳಿಂದ ಇನ್‌ಸ್ಟಾಗ್ರಾಮ್‌ನಲ್ಲಿ ಮಾತನಾಡುತ್ತಿದ್ದ ಮನ್‌ಪ್ರೀತ್ ಕೌರ್‌ಳನ್ನು ಮದುವೆಯಾಗಲು ಒಂದು ತಿಂಗಳ ಹಿಂದೆ ದೀಪಕ್ ಕುಮಾರ್ (24) ದುಬೈನಿಂದ ಜಲಂಧರ್‌ಗೆ ಬಂದಿದ್ದನು. ಇವರಿಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾಗಿ ಆತ್ಮೀಯರಾಗಿದ್ದರೂ, ಮದುವೆಗೂ ಮುನ್ನ ಈವರೆಗೆ ಒಬ್ಬರನ್ನೊಬ್ಬರು ನೇರವಾಗಿ ಭೇಟಿಯಾಗಿರಲಿಲ್ಲ. ಪ್ರೀತಿ ಮಾಡಿದ ಯುವತಿಗೆ ಮದುವೆ ದಿನದ ಬೆಳಗ್ಗೆಯೂ ತಾನು ಕುಟುಂಬದೊಂದಿಗೆ ಮದುವೆ ಮಂಟಪಕ್ಕೆ ಬರುವುದಾಗಿ ತಿಳಿಸಿದ್ದನು.
ಇದನ್ನೂ ಓದಿ: ಹೆಂಡ್ತಿ ಕಂಪ್ಲೇಂಟ್ ಕೊಟ್ಟಿದ್ದಕ್ಕೆ ಮನನೊಂದು ನೇಣಿಗೆ ಶರಣಾದ ಗಂಡ; ಮಗಳಿಗೊಂದು ಗಿಫ್ಟ್ ತಂದಿಟ್ಟ!
ಮದುವೆಯ ದಿನಾಂಕ ನಿಗದಿಯಾದ ದಿನ ಬೆಳಗ್ಗೆ ಯುವತಿ ಕೂಡ ನಾನು ನಮ್ಮ ಕುಟುಂಬದವರೊಂದಿಗೆ ನಮ್ಮೂರಿನಿಂದ ಮೋಗದ ಗ್ರಾಮದಲ್ಲಿರುವ ಮದುವೆ ಮಂಟಪಕ್ಕೆ ಬರುತ್ತಿದ್ದೇನೆ. ನೀವು ಕೂಡ ಎಲ್ಲ ಬಂಧುಗಳನ್ನು ಕರೆದುಕೊಂಡು ಬನ್ನಿ. ನೀವು ಮೋಗ ಗ್ರಾಮಕ್ಕೆ ಬಂದಾಗ, ನಮ್ಮ ಕಡೆಯವರು ಬಂದು ನಿಮ್ಮನ್ನು ಮದುವೆ ಮಂಟಪಕ್ಕೆ ಕರೆದುಕೊಂಡು ಬರುತ್ತಾರೆ ಎಂದು ದೀಪಕ್ ಮತ್ತು ಅವರ ಕುಟುಂಬಕ್ಕೆ ಹೇಳಿದ್ದಳು. ವಧುವಿನ ಮಾತನ್ನು ನಂಬಿಕೊಂಡು ಸಂಜೆ 5 ಗಂಟೆಯವರೆಗೆ ಕಾದರೂ ಯಾರೂ ಬರಲಿಲ್ಲ. ಜೊತೆಗೆ, ಅಲ್ಲಿ ಮದುವೆ ಸಿದ್ಧತೆ ಇರಲಿ, ಅವಳು ಹೇಳಿದ ವಿಳಾಸದಲ್ಲಿ ಮದುವೆ ಮಂಟಪವೇ ಇರಲಿಲ್ಲ.
ಇನ್ನು ಯುವತಿ ಹೇಳಿದಂತೆ ಮದುವೆ ಮಂಟಪ ಎಂದು ಹೇಳಲಾದ ರೋಸ್ ಗಾರ್ಡನ್ ಪ್ಯಾಲೇಸ್ ಬಗ್ಗೆ ಸ್ಥಳೀಯರನ್ನು ವಿಚಾರಿಸಿದಾಗ, ಮೋಗದಲ್ಲಿ ಅಂತಹ ಯಾವುದೇ ಸ್ಥಳವಿಲ್ಲ ಎಂದು ಹೇಳಿದ್ದಾರೆ. ಇದರಿಂದ ತಮಗೆ ವಂಚನೆಯಾಗಿದೆ ಎಂದು ದೀಪಕ್‌ಗೆ ಅರಿವಾಯಿತು. ತಾನು 3 ವರ್ಷಗಳಿಂದ ದುಬೈನಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು 3 ವರ್ಷಗಳಿಂದ ಮನ್‌ಪ್ರೀತ್ ಕೌರ್ ಜೊತೆ ಇನ್‌ಸ್ಟಾಗ್ರಾಮ್ ಮೂಲಕ ಸಂಪರ್ಕದಲ್ಲಿದ್ದೇನೆ. ಇನ್ನು ಯುವತಿಯ ಫೋಟೋಗಳನ್ನು ನೋಡಿದ್ದರೂ ಆಕೆಯೊಂದಿಗೆ ನಿರಂತರವಾಗಿ ಮಾತನಾಡುತ್ತಾ ಸಂಪರ್ಕದಲ್ಲಿದ್ದರೂ ಮನ್‌ಪ್ರೀತ್‌ಳನ್ನು ನೇರವಾಗಿ ನೋಡಿರಲಿಲ್ಲ. ಅವರ ಪೋಷಕರು ಕೂಡ ನನ್ನೊಂದಿಗೆ ಫೋನಿನಲ್ಲಿ ಮಾತನಾಡಿ ಮದುವೆ ದಿನಾಂಕವನ್ನು ನಿಶ್ಚಯ ಮಾಡಿದ್ದರು. ಇನ್ನು ಮದುವೆ ಇತರೆ ಕಾರ್ಯಗಳಿಗೆ 50,000 ರೂ.ಗಳನ್ನು ಮನ್‌ಪ್ರೀತ್‌ಗೆ ವರ್ಗಾಯಿಸಿದ್ದೇನೆ ಎಂದು ವಂಚನೆಗೊಳಗಾದ ದೀಪಕ್ ಹೇಳಿದ್ದಾರೆ.
ಇದನ್ನೂ ಓದಿ: ಮೈಸೂರಿನಿಂದ ಕೋಯಿಕ್ಕೋಡಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಂದ ವ್ಯಕ್ತಿಯ ಬಳಿ MDMA ಪತ್ತೆ
ಈ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮನ್‌ಪ್ರೀತ್‌ಳ ಫೋನ್ ಈಗ ಸ್ವಿಚ್ ಆಫ್ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.