ಶಾಲೆ ಹೆಸರು ಇಂದಿರಾ ಕಾನ್ವೆಂಟ್, ಇದೇ ಕಾರಣಕ್ಕೆ ಶಾಲೆ ತೊರೆದಿದ್ದ ದೇವೇಂದ್ರ ಫಡ್ನವಿಸ್!

Published : Dec 09, 2024, 05:45 PM ISTUpdated : Dec 09, 2024, 06:19 PM IST
ಶಾಲೆ ಹೆಸರು ಇಂದಿರಾ ಕಾನ್ವೆಂಟ್, ಇದೇ ಕಾರಣಕ್ಕೆ ಶಾಲೆ ತೊರೆದಿದ್ದ ದೇವೇಂದ್ರ ಫಡ್ನವಿಸ್!

ಸಾರಾಂಶ

ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚಿಸಿದ್ದಾರೆ. ತುರ್ತು ಪರಿಸ್ಥಿತಿಯ ವೇಳೆ ತಂದೆಯ ಬಂಧನದಿಂದ ಆಕ್ರೋಶಗೊಂಡ ಫಡ್ನವಿಸ್, ಇಂದಿರಾ ಕಾನ್ವೆಂಟ್ ಶಾಲೆ ತೊರೆದು ಹೋರಾಟಕ್ಕೆ ಧುಮುಕಿದ್ದರು. ಬಾಲ್ಯದಿಂದಲೂ ರಾಜಕೀಯ ಹಿನ್ನೆಲೆಯ ಫಡ್ನವಿಸ್, ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಿದ್ದರು. ಈ ಹೋರಾಟದ ಹಿನ್ನೆಲೆಯೇ ಅವರ ರಾಜಕೀಯ ಏಳಿಗೆಗೆ ಕಾರಣವಾಯಿತು.

ಮುಂಬೈ(ಡಿ.09) ಮಹಾರಾಷ್ಟ್ರದಲ್ಲಿ ಅಭೂತಪೂರ್ವ ಗೆಲುವು, ಸಿಎಂ ಕುರ್ಚಿಗಾಗಿ ಕಸರತ್ತಿನ ಬಳಿಕ ದೇವೇಂದ್ರ ಫಡ್ನವಿಸ್ ಹೊಸ ಸರ್ಕಾರ ರಚಿಸಿದ್ದಾರೆ. ಎನ್‌ಡಿಎ ಮತ್ತೆ ಅಧಿಕಾರಕ್ಕೇರಿದೆ. ದೇವೇಂದ್ರ ಫಡ್ನವಿಸ್ ಮುಖ್ಯಮಂತ್ರಿಯಾಗಿ ಬಳಿಕ ಉಪಮುಖ್ಯಮಂತ್ರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಹೋರಾಟದ ಮೂಲಕವೇ ಫಡ್ನವಿಸ್ ಈ ಪಟ್ಟಕ್ಕೇರಿದ್ದಾರೆ. ವಿಶೇಷ ಅಂದರೆ ಫಡ್ನವಿಸ್ ಹೋರಾಟಕ್ಕೆ ಸುದೀರ್ಘ ಇತಿಹಾಸವಿದೆ. ಬಾಲ್ಯದಲ್ಲೇ ಫಡ್ನವಿಸ್ ಕಾಂಗ್ರೆಸ್, ಇಂದಿರಾ ಗಾಂಧಿ ವಿರುದ್ದ ರೊಚ್ಚಿಗೆದ್ದಿದ್ದರು. ಇದೇ ಕಾರಣಕ್ಕೆ ಶಾಲೆಯನ್ನೂ ತೊರೆದಿದ್ದರು. ಇಂದಿರಾ ಕಾನ್ವೆಂಟ್ ಹೆಸರಿನ ಶಾಲೆಯಲ್ಲಿ ಓದುತ್ತಿದ್ದ ಫಡ್ನವಿಸ್, ಶಾಲೆ ಬಿಟ್ಟು ಹೋರಾಟದಲ್ಲಿ ಧುಮುಕಿದ್ದರು. ಅಷ್ಟಕ್ಕೂ ಫಡ್ನವಿಸ್ ಶಾಲೆ ಬಿಟ್ಟಿದ್ದೇಕೆ?

ಅದು 1975. ಈ ಇಸವಿ ಹೇಳುತ್ತಿದ್ದಂತೆ ಥಟ್ಟನೆ ಎಲ್ಲರಿಗೂ ನೆನಪಿಗೆ ಬರುವುದೇ ತುರ್ತು ಪರಿಸ್ಥಿತಿ. ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅಧಿಕಾರ ಉಳಿಸಿಕೊಳ್ಳಲು ಹೇರಿದ ತುರ್ತು ಪರಿಸ್ಥಿತಿ ದೇಶದ ಮಾತ್ರವಲ್ಲ, ವಿಶ್ವದ ಪ್ರಜಾಪ್ರಭುತ್ವದಲ್ಲೇ ಕರಾಳ ದಿನ. ಈ ವೇಳೆ ದೇವೇಂದ್ರ ಫಡ್ನವಿಸ್ ಇಂದಿರಾ ಕಾನ್ವೆಂಟ್ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿದ್ದರು. 

ಊರಲ್ಲೇ ಕುಳಿತು ರಣತಂತ್ರ ಮಾಡಿದ ಏಕನಾಥ್ ಶಿಂಧೆಗೆ ಸಿಎಂ ಸ್ಥಾನ ಕೈತಪ್ಪಿದ್ದು ಹೇಗೆ?

ಇಂದಿರಾ ಗಾಂಧಿಯ ತುರ್ತು ಪರಿಸ್ಥಿತಿ ನಿರ್ಧಾರ ದೇವೇಂದ್ರ ಫಡ್ನವಿಸ್ ಮೇಲೆ ತೀವ್ರ ಪರಿಣಾಮ ಬೀರಿತ್ತು. ಈ ನಿರ್ಧಾರವನ್ನು ಬಾಲ್ಯದಲ್ಲೇ ದೇವೇಂದ್ರ ಫಡ್ನವಿಸ್ ವಿರೋಧಿಸಿದ್ದರು. ಇಷ್ಟೇ ಅಲ್ಲ ಇಂದಿರಾ ಗಾಂಧಿ ಹೆಸರು ಇರುವ ಕಾರಣ ಪ್ರತಿಭಟನಾ ಕಾರಣಕ್ಕೆ ಈ ಶಾಲೆಯನ್ನೇ ತೊರೆದು ಅಂದಿನ ಪ್ರಧಾನಿ ವಿರುದ್ದ ಹೋರಾಟಕ್ಕೆ ಇಳಿದಿದ್ದರು. ಬಾಲ್ಯದಲ್ಲಿ ಸರ್ಕಾರದ ನಿರ್ಧಾರಗಳು, ಅಜೆಂಡಾ, ಕಾಂಗ್ರೆಸ್ ನಿಲುವುಗಳ ಕುರಿತು ಮಕ್ಕಳಲ್ಲಿ ಅಷ್ಟು ತಿಳುವಳಿಕೆ ಇತ್ತಾ ಅನ್ನೋ ಪ್ರಶ್ನೆ ಮೂಡುವುದು ಸಹಜ. ಇಲ್ಲಿ ದೇವೇಂದ್ರ ಫಢ್ನವಿಸ್ ಈ ರೀತಿ ನಿರ್ಧಾರ ತೆಗೆದುಕೊಂಡ ಹಿಂದೆ ಪ್ರಮುಖ ಕಾರಣವಿದೆ.

ತುರ್ತು ಪರಿಸ್ಥಿತಿ ವೇಳೆ ದೇವೇಂದ್ರ ಫಡ್ನವಿಸ್ ತಂದೆ ಗಂಗಾಧರ್ ರಾವ್ ಜನತಾ ಪಾರ್ಟಿಯ ಸಕ್ರಿಯ ಕಾರ್ಯಕರ್ತರರಾಗಿದ್ದರು. ಪಕ್ಷದ ಕಾರ್ಯಕ್ರಮ, ಸಂಘಟನೆ, ಕಾಂಗ್ರೆಸ್ ನಿಲುವುಗಳ ವಿರುದ್ಧ ಭಾರಿ ಆಂದೋಲನ ಸಂಘಟಿಸಿದ ನಾಯಕರಾಗಿದ್ದರು. ತುರ್ತು ಪರಿಸ್ಥಿತಿ ವೇಳೆ ರಾತ್ರೋರಾತ್ರಿ ಗಂಗಾಧರ್ ರಾವ್ ಅವರನ್ನು ಇಂದಿರಾ ಗಾಂಧಿ ಸರ್ಕಾರ ಬಂಧಿಸಿತ್ತು. ತುರ್ತು ಪರಿಸ್ಥಿತಿ ಕಾರಣ ನೀಡಿ ಹೋರಾಟಗಾರರು, ಜನ ನಾಯಕರು ಸೇರಿದಂತೆ ಹಲವರನ್ನು ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂಧಿಸಿತ್ತು.

ತಂದೆಯ ಬಂಧನ ದೇವೇಂದ್ರ ಫಡ್ನವಿಸ್ ರೊಚ್ಚಿಗೆಬ್ಬಿಸಿತ್ತು. ಯಾವುದೇ ತಪ್ಪು ಮಾಡದೇ ಇದ್ದರೂ ತಂದೆಯ ಬಂಧನ ಯಾಕಾಯ್ತು ಅನ್ನೋ ಆಕ್ರೋಶ ಮಡುಗಟ್ಟಿತು. ಇಂದಿರಾ ಗಾಂಧಿ ಹೇರಿದ ತುರ್ತು ಪರಿಸ್ಥಿತಿಯಿಂದ ತಂದೆ ಬಂಧನಕ್ಕೊಳಗಾಗಿದ್ದಾರೆ ಅನ್ನೋದು ಬಯಲಾಗಿತ್ತು. ಇದು ಫಡ್ನವಿಸ್ ಆಕ್ರೋಶ ಹೆಚ್ಚಿಸಿತ್ತು. ಇಂದಿರಾ ಹೆಸರನ್ನು ದ್ವೇಷಿಸಲು ಆರಂಭಿಸಿದ್ದರು. ತಾನು ಓದುತ್ತಿದ್ದ ಶಾಲೆ ಇಂದಿರಾ ಗಾಂಧಿ ಕಾನ್ವೆಂಟ್. ಇದು ಇಂದಿರಾ ಗಾಂಧಿ ಹೆಸರಿನಲ್ಲಿರುವ ಈ ಶಾಲೆಯಲ್ಲಿ ತಾನು ಓದುವುದಿಲ್ಲ ಎಂದು ಶಾಲೆ ತೊರೆದಿದ್ದರು. ಬಳಿಕ ತುರ್ತು ಪರಿಸ್ಥಿತಿ ವಿರುದ್ದ ಹೋರಾಟಕ್ಕಿಳಿದಿದ್ದರು.

ಫಡ್ನವಿಸ್ ಇಡೀ ಕುಟುಂಬವೇ ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಸಕ್ರಿಯ ಸದಸ್ಯತ್ವದಲ್ಲಿತ್ತು. ತಂದೆ ವಿಧಾನಪರಿಷತ್ ಸದಸ್ಯರಾಗಿದ್ದರೆ, ಸಂಬಂಧಿಯೊಬ್ಬರು ಬಿಜೆಪಿ ಶಿವಸೇನೆ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಹೀಗಾಗಿ ಫಡ್ನವಿಸ್ ರಾಜಕೀಯ ಪರಿಣಿತರಾಗಿಯೇ ಹೊರಹೊಮ್ಮಿದ್ದಾರೆ. ಏಕನಾಥ್ ಶಿಂಧೆ ಶಿವಸೇನೆ, ಅಜಿತ್ ಪವಾರ್ ಎನ್‌ಸಿಪಿ ಪಕ್ಷಗಳ ಜೊತೆ ಸರ್ಕಾರ ರಚಿಸಿದ್ದಾರೆ. ಮಹಾರಾಷ್ಟ್ರ ಜನತೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಕೊಟ್ಟಿದ್ದರು. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮುಂಬೈ ಇತಿಹಾಸದಲ್ಲಿಯೇ ಮೊಟ್ಟಮೊದಲ ಬಾರಿಗೆ ಬಿಜೆಪಿ ಮೇಯರ್‌? ಕೇಸರಿ ಪಕ್ಷದ ಬಹುದೊಡ್ಡ ಕನಸು ನನಸಾಗುತ್ತಾ..
BMC Exit Poll: ಬಿಜೆಪಿ-ಶಿಂಧೆ ಸೇನೆಗೆ ಮುಂಬೈ ಅಧಿಕಾರ, ಮಣ್ಣುಮುಕ್ಕಿದ ಠಾಕ್ರೆ!