ತವರಿಗೆ ಹೋದ ಹೆಂಡ್ತಿನಾ ಕರೆಸಲು ಆಗ್ರಹ: ಟವರ್ ಏರಿ ಕುಡುಕನ ನಾಟಕ

Published : Jul 22, 2022, 10:45 AM ISTUpdated : Jul 22, 2022, 10:46 AM IST
ತವರಿಗೆ ಹೋದ ಹೆಂಡ್ತಿನಾ ಕರೆಸಲು ಆಗ್ರಹ: ಟವರ್ ಏರಿ ಕುಡುಕನ ನಾಟಕ

ಸಾರಾಂಶ

ಜಲ್ನಾ: ಕುಡುಕ ಗಂಡನ ಕಾಟ ತಾಳಲಾರದೆ ತವರು ಸೇರಿದ್ದ ಹೆಂಡತಿ ವಾಪಸ್ ಬರಬೇಕೆಂದು ಆಗ್ರಹಿಸಿ ಕುಡುಕ ಗಂಡನೋರ್ವ ಟವರ್‌ ಏರಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 

ಜಲ್ನಾ: ಕುಡುಕ ಗಂಡನ ಕಾಟ ತಾಳಲಾರದೆ ತವರು ಸೇರಿದ್ದ ಹೆಂಡತಿ ವಾಪಸ್ ಬರಬೇಕೆಂದು ಆಗ್ರಹಿಸಿ ಕುಡುಕ ಗಂಡನೋರ್ವ ಟವರ್‌ ಏರಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.  ಮಹಾರಾಷ್ಟ್ರದ ಜಲ್ನಾದಲ್ಲಿ ಕುಡುಕ ಗಂಡನೋರ್ವ 100 ಅಡಿ ಎತ್ತರದ ಮೊಬೈಲ್ ಟವರ್ ಅನ್ನು ಏರಿದ್ದಾನೆ. ಬಡ್ನಾಪುರ್‌ ಜಿಲ್ಲೆಯ ದಭಡಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಹೀಗೆ ಟವರ್ ಏರಿ ಕ್ವಾಟ್ಲೆ ನೀಡಿದ ಕುಡುಕನನ್ನು ಗಣಪತ್ ಬಕಲ್ ಎಂದು ಗುರುತಿಸಲಾಗಿದೆ. ಟವರ್‌ ಏರಿದ ಈತ ಗ್ರಾಮಸ್ಥರ ಭರವಸೆ ಬಳಿಕವಷ್ಟೇ ಕೆಳಗೆ ಇಳಿದಿದ್ದಾನೆ.

ಗ್ರಾಮಸ್ಥರು ಈತನಿಗೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಈತನ ಕುಟುಂಬದ ಅಂತರಿಕ ಕಲಹವನ್ನು ಪರಿಹರಿಸುತ್ತಾರೆ ಎಂದು ಭರವಸೆ ನೀಡಿದ್ದರು. ಈತ ಸಂಪೂರ್ಣವಾಗಿ ಮದ್ಯದ ಅಮಲಿನಲ್ಲಿದ್ದು, ನಾಲ್ಕು ಗಂಟೆಗಳ ಬಳಿಕ ಈತ ಟವರ್‌ನಿಂದ ಕೆಳಗೆ ಇಳಿದಿದ್ದಾನೆ. ನಾಲ್ಕು ಗಂಟೆಗಳ ಕಾಲ ಎಲ್ಲರಿಗೂ ಪೀಕಲಾಟ ನೀಡಿ ಬಳಿಕ ಕೆಳಗಿಳಿದ ಈತನನ್ಉ ಪೊಲೀಸರು ಬಂಧಿಸಿ ನಂತರ ಬಿಡುಗಡೆಗೊಳಿಸಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಲು ಟವರ್ ಏರಿದಾಕೆಯ ರಕ್ಷಿಸಿದ ಕಣಜದ ಹುಳುಗಳು

ಈತನ ವರ್ತನೆ ಬಹುತೇಕ 1970ರ ಶೋಲೆ ಸಿನಿಮಾದ ಧರ್ಮೇಂದ್ರರ ಪಾತ್ರದಂತೆ ಕಾಣಿಸಿತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಘಟನೆ ಬಗ್ಗೆ ವಿವರಿಸಿದ್ದಾರೆ. ಶೋಲೆ ಸಿನಿಮಾದಲ್ಲಿ ವೀರು ಪಾತ್ರದಲ್ಲಿದ್ದ ನಟ ಧರ್ಮೇಂದ್ರ, ತನ್ನ ಪ್ರೇಮಿಯ ಮನೆಯವರು ತಮ್ಮ ಮದುವೆಗೆ ಒಪ್ಪಿಗೆ ನೀಡಬೇಕೆಂದು ಇದೇ ರೀತಿ ನಾಟಕವಾಡಿದ್ದ

ಕಳೆದ ವರ್ಷ ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು. ಕಳೆದ ಹಲವಾರು ದಿನಗಳಿಂದ ದುಡಿಮೆ ಇಲ್ಲದೇ ಹಣಕಾಸಿನ ತೊಂದರೆಗೆ ಒಳಗಾಗಿದ್ದ ವ್ಯಕ್ತಿಯೋರ್ವ,  ಸಾರಾಯಿ ಕುಡಿದು ಗ್ರಾಮದ ಮೊಬೈಲ್‌ ಟವರ್‌ ಏರಿ ನಾನು ಸಾಯುತ್ತೇನೆ ಎಂದು ಹೇಳಿ ಕೆಲವು ಗಂಟೆಗಳ ಕಾಲ ಆತಂಕ ಸೃಷ್ಟಿಸಿದ್ದ. ಗ್ರಾಮದ ನೀಲಕಂಠೇಶ್ವರ ದೇವಸ್ಥಾನದ ಹತ್ತಿರದಲ್ಲಿರುವ ಟವರ್‌ ಮೇಲೆ ಹತ್ತಿದ ಹಣಮಂತ ಹೊಟ್ಟೆನವರ ಎಂಬಾತ ಗ್ರಾಮಸ್ಥರನ್ನು ಕೆಲ ಕಾಲ ಚಿಂತಾಗ್ರಸ್ಥರನ್ನಾಗಿ ಮಾಡಿದ್ದ. ಇದೇ ಸಮಯದಲ್ಲಿ ಕೆಲ ಗ್ರಾಮಸ್ಥರು ಅಗ್ನಿಶಾಮಕದಳ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಅಲ್ಲದೇ ಗ್ರಾಮದ ಇಬ್ಬರ ಯುವಕರಾದ ಸೈಯದ್‌ ನಧಾಪ್‌, ಮಲ್ಲಿಕಾರ್ಜುನ ಬಿಲಕೇರಿ ಎಂಬುವವರು ಟವರ್‌ ಹತ್ತಿ ಆತನನ್ನು ಕೆಳಗೆ ತರುವಲ್ಲಿ ಹರಸಾಹಸಪಟ್ಟಿದ್ದಾರೆ. ಆದರೂ ಯಾವುದೇ ಪ್ರಯೋಜನವಾಗದೆ ಇದ್ದಾಗ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ದೌಡಾಯಿಸಿ ವ್ಯಕ್ತಿಯ ಮನವೊಲಿಸಿ ಹಗ್ಗದ ಸಹಾಯದಿಂದ ಟವರ್‌ ಏರಿ ವ್ಯಕ್ತಿಯನ್ನು ರಕ್ಷಣೆ ಮಾಡಿ ಕೆಳಗೆ ತಂದಿದ್ದಾರೆ.

ಬೆಕ್ಕಿನಿಂದಾಗಿ 7 ಗಂಟೆ ಕಾಲ ಕತ್ತಲಲ್ಲಿ ಪರದಾಡುವಂತಾದ 60 ಸಾವಿರ ಜನ

ಅದೇ ರೀತಿ ಕಳೆದ ವರ್ಷ ಜನವರಿಯಲ್ಲಿ ಪತ್ನಿ ಮುನಿಸಿಕೊಂಡು ಹೋಗಿದ್ದಾಳೆಂದು ಮನನೊಂದ ವ್ಯಕ್ತಿಯೊಬ್ಬ ಮೊಬೈಲ್‌ ಟವರ್‌ ಏರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಅರಮನೆ ನಗರಿ ಮೈಸೂರಿನ ವಿದ್ಯಾರಣ್ಯಪುರಂನಲ್ಲಿ ನಡೆದಿತ್ತು. ವಿದ್ಯಾರಣ್ಯಪುರಂ ನಿವಾಸಿ ಗೌರಿಶಂಕರ್‌ ಹಾಗೂ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿದ್ದು, ಇದರಿಂದ ಮನನೊಂದ ಪತ್ನಿ ಮನೆ ಬಿಟ್ಟು ಹೋಗಿದ್ದರು. ಹೀಗಿರುವಾಗ, ನನಗೆ ಪತ್ನಿ ಬೇಕು. ಆಕೆ ಇಲ್ಲವಾದರೆ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಮೊಬೈಲ್‌ ಟವರ್‌ ಏರಿ ಗೌರಿಶಂಕರ್‌ ಬೆದರಿಕೆ ಹಾಕಿದ್ದರು. ಕೊನೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗೌರಿಶಂಕರ್‌ ಮನವೊಲಿಸಿ ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ವಿದ್ಯಾರಣ್ಯಪುರಂ ಠಾಣೆಯ ಪೊಲೀಸರು ಸ್ಪಷ್ಟಪಡಿಸಿದ್ದಾರೆ.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ವಿಮಾನ ರದ್ದತಿ ಕೊಂಚ ಸರಿ ದಾರಿಗೆ
ಹಿಂದಿ ಹೇರಿಕೆ ಬಗ್ಗೆ ನ್ಯಾ। ನಾಗರತ್ನ ಬೇಸರ