Latest Videos

ದ್ರೌಪದಿ ಮಹಾಭಾರತದ ರಾಷ್ಟ್ರಪತಿ: ಜುಲೈ 25ಕ್ಕೆ ಪ್ರಮಾಣ

By Kannadaprabha NewsFirst Published Jul 22, 2022, 9:57 AM IST
Highlights

ಭಾಋತದ ಮೊದಲ ಬುಡಕಟ್ಟು ಮಹಿಳೆ ರಾಷ್ಟ್ರಪತಿಯಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ಹೌದು, ದ್ರೌಪದಿ ಮುರ್ಮು ಭಾರತದ 15ನೇ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು, ಈ ಸಾಧನೆ ಮಾಡಿದ ಸ್ವಾತಂತ್ರ್ಯದ ನಂತರ ಜನಿಸಿದ ಮೊದಲ ವ್ಯಕ್ತಿ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.

ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮದ ಹೊಸ್ತಿಲ್ಲಲ್ಲಿರುವ ಭಾರತ ಗುರುವಾರ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆ. ದೇಶದ 15ನೇ ರಾಷ್ಟ್ರಪತಿಯಾಗಿ ಬುಡಕಟ್ಟು ಸಮುದಾಯಕ್ಕೆ ಸೇರಿದ ಒಡಿಶಾ ಮೂಲದ ದ್ರೌಪದಿ ಮುರ್ಮು (64) ಆಯ್ಕೆಯಾಗಿದ್ದಾರೆ. ಜುಲೈ 18ರಂದು ರಾಷ್ಟ್ರಪತಿ ಸ್ಥಾನಕ್ಕೆ ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ಗುರುವಾರ ನಡೆದಿದ್ದು ಶೇ.64ರಷ್ಟು ಮತಗಳನ್ನು ಪಡೆಯುವ ಮೂಲಕ, ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ದ್ರೌಪದಿ ಆಯ್ಕೆಯಾಗಿದ್ದಾರೆ. ಇನ್ನು, ವಿಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಯಶವಂತ್‌ ಸಿನ್ಹಾ ಶೇ.36ರಷ್ಟು ಮತಗಳನ್ನು ಪಡೆದು ಸೋಲನ್ನು ಒಪ್ಪಿಕೊಂಡಿದ್ದಾರೆ. 

ಹಾಲಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌ ಅವರ ಅವಧಿ ಜುಲೈ 24ಕ್ಕೆ ಅಂದರೆ ನಾಡಿದ್ದು ಮುಗಿಯಲಿದ್ದು, ನೂತನ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಜುಲೈ 25ರ ಸೋಮವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ರಾಷ್ಟ್ರಪತಿ ಕಿರೀಟ ಮುಡಿಗೇರಿಸಿದ ಭಾರತದ ಮೊದಲ ಆದಿವಾಸಿ ಮಹಿಳೆ, ಸಿನ್ಹ ವಿರುದ್ದ ಭರ್ಜರಿ ಗೆಲುವು!

ನೂತನ ರಾಷ್ಟ್ರಪತಿಗೆ ಹಾಲಿ ರಾಷ್ಟ್ರಪತಿ ರಾಮ್‌ನಾಥ್‌ ಕೋವಿಂದ್‌, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕಾಂಗ್ರೆಸ್‌ ನಾಯಕರಾದ ಸೋನಿಯಾ, ರಾಹುಲ್‌ ಗಾಂಧಿ, ಪರಾಜಿತ ಅಭ್ಯರ್ಥಿ ಯಶವಂತ್‌ ಸಿನ್ಹಾ, ಎಲ್ಲಾ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಜಕೀಯ ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ.

ಮತ ಚಲಾವಣೆ
ಜುಲೈ 18ರಂದು ನಡೆದ ಚುನಾವಣೆಯಲ್ಲಿ 771 ಸಂಸದರು ಹಾಗೂ 4025 ಶಾಸಕರು ಮತ ಚಲಾಯಿಸಿದ್ದು, ಶೇ.99ರಷ್ಟು ಮತದಾನವಾಗಿತ್ತು. ಒಟ್ಟು ಚಲಾವಣೆಯಾದ ಮತಗಳ ಪೈಕಿ ದ್ರೌಪದಿ ಮುರ್ಮು ಅವರು 6,76,803 ಮತ ಪಡೆದರೆ, ಸಿನ್ಹಾ 3,80,177 ಮತಗಳನ್ನು ಪಡೆದಿದ್ದಾರೆ ಎಂದು ರಿಟರ್ನಿಂಗ್‌ ಆಫೀಸರ್‌ ಪಿ.ಸಿ.ಮೋದಿ ಪ್ರಕಟಿಸಿದರು.

ಭಾರಿ ಪ್ರಮಾಣದಲ್ಲಿ ಅಡ್ಡಮತದಾನ
ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಅಧಿಕೃತವಾಗಿ ಆಯ್ಕೆಯಾಗಿರುವುದು ನಿರೀಕ್ಷಿತವೇ ಸರಿ. ಆದರೂ, ರಾಷ್ಟ್ರಪತಿ ಚುನಾವಣೆಯಲ್ಲಿ ಭಾರಿ ಪ್ರಮಾಣದಲ್ಲಿ ಅಡ್ಡ ಮತದಾನ ನಡೆದಿರುವುದು ಗುರುವಾರ ನಡೆದ ಮತ ಎಣಿಕೆಯಲ್ಲಿ ಸಾಬೀತಾಗಿದೆ. ವಿವಿಧ ಪಕ್ಷಗಳಿಗೆ ಸೇರಿದ ಒಟ್ಟು 17 ಸಂಸದರು ಮತ್ತು 104 ಶಾಸಕರು ತಮ್ಮ ಪಕ್ಷಗಳು ಸೂಚಿಸಿದ್ದ ಅಭ್ಯರ್ಥಿಗೆ ಹೊರತಾಗಿ ಮತ್ತೊಂದು ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ದಾರೆ.

ಹಲವು ದಾಖಲೆ ಸೃಷ್ಟಿ
ಈ ನಡುವೆ ದ್ರೌಪದಿ ಮುರ್ಮು ಹಲವು ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ. ಆ ದಾಖಲೆಗಳು ಏನಂತೀರಾ..? ಮುಂದೆ ಓದಿ..
ಇವರು ರಾಷ್ಟ್ರಪತಿ ಹುದ್ದೆಗೆ ಏರಿದ ಬುಡಕಟ್ಟು ಸಮುದಾಯದ ಮೊದಲ ಮಹಿಳೆಯಾಗಿದ್ದಾರೆ. ಅಷ್ಟೇ ಅಲ್ಲದೆ, ಭಾರತದ ರಾಷ್ಟ್ರಪತಿಯಾಗುತ್ತಿರುವ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ ಇದಕ್ಕೂ ಮುನ್ನ ಪ್ರತಿಭಾ ಪಾಟೀಲ್‌ ಮೊದಲ ಮಹಿಳೆಯಾಗಿ ರಾಷ್ಟ್ರಪತಿಯಾಗಿದ್ದರು. 

ಯುಪಿಎ ಸರ್ಕಾರದ ಅಭ್ಯರ್ಥಿಯಾಗಿ ಕಾಂಗ್ರೆಸ್‌ ಪಕ್ಷದಲ್ಲಿದ್ದ ಪ್ರತಿಭಾ ಪಾಟೀಲ್‌ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದರು. ಈ ಮೂಲಕ ಅವರು ಭಾರತದ ರಾಷ್ಟ್ರಪತಿ ಹುದ್ದೆಗೇರಿದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಜುಲೈ 2007 ರಿಂದ ಜುಲೈ 2012ರವರೆಗೆ ಇವರು ರಾಷ್ಟ್ರಪತಿ ಹುದ್ದೆಯಲ್ಲಿದ್ದರು. ಅವರು ರಾಷ್ಟ್ರಪತಿಯಾಗಿ ನಿರ್ಗಮಿಸಿದ 10 ವರ್ಷಗಳ ಬಳಿಕ ಎರಡನೇ ಮಹಿಳಾ ರಾಷ್ಟ್ರಪತಿಯಾಗಿ ದ್ರೌಪದಿ ಮುರ್ಮು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.

ಇನ್ನೊಂದು ಸಾಧನೆ ಏನು ಗೊತ್ತಾ..? 1947ರ ಬಳಿಕ ಅಂದರೆ ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಆಯ್ಕೆಯಾಗುತ್ತಿರುವ ಮೊದಲ ರಾಷ್ಟ್ರಪತಿ ಇವರೇ..! ಇದರ ಜತೆಗೆ, ಭಾರತದ ರಾಷ್ಟ್ರಪತಿ ಹುದ್ದೆಗೆ ಏರಿದ ಅತ್ಯಂತ ಕಿರಿಯ ವಯಸ್ಸಿನ ವ್ಯಕ್ತಿ ಎಂಬ ಹಿರಿಮೆಗೂ ದ್ರೌಪದಿ ಮುರ್ಮು ಪಾತ್ರರಾಗಿದ್ದಾರೆ.

click me!