
ಗುಜರಾತ್‌ನಲ್ಲಿ ಕಳೆದ 5 ವರ್ಷಗಳಲ್ಲಿ 2.5 ಲಕ್ಷ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸಿಕ್ಕಿಬಿದ್ದಿದೆ ಎಂದು ಕಾಂಗ್ರೆಸ್ ಸೋಮವಾರ ಆರೋಪಿಸಿದೆ. ಅಲ್ಲದೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಅಕ್ರಮ ವ್ಯವಹಾರವನ್ನು ಕೇಂದ್ರ ಏಜೆನ್ಸಿಗಳಿಂದ ತನಿಖೆಗೆ ಒಳಪಡಿಸುವುದಾಗಿ ಕೈ ಪಕ್ಷ ಭರವಸೆ ನೀಡಿದೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್‌ನ ಸಾಮಾಜಿಕ ಮಾಧ್ಯಮ ಕಾರ್ಯಾಚರಣೆಗಳ (Social Media Operations) ಅಧ್ಯಕ್ಷೆ ಸುಪ್ರಿಯಾ ಶ್ರೀನೇಟ್, ಅಕ್ರಮ ವ್ಯಾಪಾರವನ್ನು ತಡೆಯಲು ಮತ್ತು ಭಾಗಿಯಾಗಿರುವ ನಿಜವಾದ ಅಪರಾಧಿಗಳನ್ನು ಬಂಧಿಸುವಲ್ಲಿ ವಿಫಲವಾದ ಆರೋಪಕ್ಕಾಗಿ ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಅವರ ರಾಜೀನಾಮೆ ಪಡೆಯಬೇಕು ಅಥವಾ ಅವರನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದರು.
"ಗುಜರಾತ್‌ನ ಮುಂದ್ರಾ ಮತ್ತು ಪಿಪಾವಾವ್‌ನಂತಹ ಖಾಸಗಿ ಬಂದರುಗಳು ದೇಶಕ್ಕೆ ಡ್ರಗ್ಸ್ ತರುವ ಹೆಬ್ಬಾಗಿಲುಗಳಾಗಿವೆ. ಗುಜರಾತ್‌ನಲ್ಲಿ 2017 ಮತ್ತು 2022 ರ ನಡುವೆ 2,50,000 ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್ ಸಿಕ್ಕಿಬಿದ್ದಿದೆ ಎಂದು ನನಗೆ ಹೇಳಲಾಗಿದೆ. ಇದು ಗುಜರಾತ್‌ನ ಬಜೆಟ್‌ಗಿಂತ ದೊಡ್ಡದಾಗಿದೆ" ಎಂದು ಶ್ರೀನೇಟ್ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಈ ಎರಡು ಖಾಸಗಿ ಬಂದರುಗಳ ಮಾಲೀಕರನ್ನು ಪ್ರಶ್ನಿಸುವ ಮೂಲಕ ಕೇಂದ್ರೀಯ ಸಂಸ್ಥೆಗಳಾದ ಜಾರಿ ನಿರ್ದೇಶನಾಲಯ, ಕೇಂದ್ರೀಯ ತನಿಖಾ ದಳ ಅಥವಾ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಏಕೆ ಸಮಗ್ರ ತನಿಖೆ ನಡೆಸಿಲ್ಲ ಎಂದು ಸಹ ಕಾಂಗ್ರೆಸ್ ನಾಯಕಿ ಪ್ರಶ್ನಿಸಿದ್ದಾರೆ.
ಗುಜರಾತ್‌ನಲ್ಲಿ 1,026 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ ಮುಂಬೈ ಪೊಲೀಸ್
"ಇದಲ್ಲದೆ, ಕಳೆದ ಮೂರು ತಿಂಗಳಲ್ಲಿ ಸಿಂಥೆಟಿಕ್ ಔಷಧಗಳನ್ನು ತಯಾರಿಸುವ 4 ಕಾರ್ಖಾನೆಗಳನ್ನು ಪತ್ತೆ ಹಚ್ಚಲಾಗಿದೆ. ಇದು ಹರ್ಷ ಸಂಘವಿ ಅವರ ಮೂಗಿನ ನೇರಕ್ಕೆ ನಡೆಯುತ್ತಿದೆ, ಇದನ್ನು ತಡೆಯಲು ಏನೂ ಮಾಡುತ್ತಿಲ್ಲ. ಅವರು ನೈತಿಕ ಆಧಾರದ ಮೇಲೆ ರಾಜೀನಾಮೆ ನೀಡಬೇಕು ಎಂದು ನಾವು ಒತ್ತಾಯಿಸುತ್ತೆವೆ. ಮತ್ತು ಅವರು ರಾಜೀನಾಮೆ ನೀಡದಿದ್ದರೆ ಅವರನ್ನು ವಜಾಗೊಳಿಸಬೇಕು,'' ಎಂದೂ ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಇನ್ನು, ತನಿಖಾ ಸಂಸ್ಥೆಗಳ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕಿ ಮತ್ತು ಖಾಸಗಿ ಬಂದರು ಮಾಲೀಕರಿಗೆ ತಮ್ಮ ಬಂದರುಗಳಲ್ಲಿ ಡ್ರಗ್ಸ್ ಏಕೆ ಇಳಿಯುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಕೇಳಿದ್ದಾರೆಯೇ ಎಂದು ಸಹ ಪ್ರಶ್ನೆ ಮಾಡಿದ್ದಾರೆ.
"ಮೋದಿಜೀ ಡ್ರಗ್ಸ್ ಆಮದು ನಿಲ್ಲಿಸಲು ಇಂತಹ ಬಂದರುಗಳಿಗೆ ಹೊಸ ಮಾರ್ಗಸೂಚಿಗಳನ್ನು ರೂಪಿಸಿದ್ದಾರೆಯೇ..? ಇಲ್ಲದಿದ್ದರೆ, ಏಕೆ? ಇದು ರಾಷ್ಟ್ರೀಯ ಭದ್ರತೆಯ ವಿಷಯ ಮತ್ತು ಕಾಂಗ್ರೆಸ್ ಈ ವಿಷಯವನ್ನು ಪ್ರಸ್ತಾಪಿಸುತ್ತಲೇ ಇರುತ್ತದೆ. ಕಾಂಗ್ರೆಸ್ ಗುಜರಾತ್‌ನಲ್ಲಿ ಅಧಿಕಾರಕ್ಕೆ ಬಂದರೆ, ಅದು ಇಡಿ, ಸಿಬಿಐ ಮತ್ತು ಇತರ ಏಜೆನ್ಸಿಗಳ ಮೂಲಕ ರಾಜ್ಯದಲ್ಲಿ ಅಕ್ರಮ ಡ್ರಗ್ಸ್ ವ್ಯವಹಾರ ನಡೆಯುತ್ತಿರುವುದನ್ನು ತನಿಖೆ ನಡೆಸುತ್ತದೆ” ಎಂದು ಅವರು ಹೇಳಿದರು.
1,000 ಕೋಟಿ ರೂ. ಮೌಲ್ಯದ ಮಿಯಾಂವ್ ಮಿಯಾಂವ್ ಡ್ರಗ್ಸ್ ವಶಪಡಿಸಿಕೊಂಡ ಗುಜರಾತ್ ಎಟಿಎಸ್
ರಾಹುಲ್ ಗಾಂಧಿಯಿಂದಲೂ ವಾಗ್ದಾಳಿ
ಇನ್ನೊಂದೆಡೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಹ ಗುಜರಾತ್‌ನಿಂದ ಡ್ರಗ್ಸ್ ಸಾಗಾಟಗಳ ಕುರಿತು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು ಮತ್ತು ಈ ವಿಷಯದ ಬಗ್ಗೆ ಅವರು ಎಷ್ಟು ದಿನ ಮೌನವಾಗಿರುತ್ತಾರೆ ಎಂದು ಕೇಳಿದ್ದರು. ಅಲ್ಲದೆ, ಡ್ರಗ್ಸ್ ವ್ಯಾಪಾರವನ್ನು ಸರಳೀಕರಿಸಲಾಗಿದೆ (Ease of Doing Drug Business) ಎಂದೂ ಆರೋಪಿಸಿದ್ದಾರೆ. ಸಾವಿರಾರು ಕೋಟಿ ಡ್ರಗ್ಸ್ ಗುಜರಾತ್ ತಲುಪುತ್ತಿದೆ ಎಂದ ಅವರು, ಮಹಾತ್ಮ ಗಾಂಧಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯಭೂಮಿಯಲ್ಲಿ ಈ ವಿಷವನ್ನು ಹರಡುತ್ತಿರುವವರು ಯಾರು..? ಪದೇ ಪದೇ ಡ್ರಗ್ಸ್ ವಶಪಡಿಸಿಕೊಂಡರೂ ಬಂದರು ಮಾಲೀಕರನ್ನು ಇದುವರೆಗೆ ಏಕೆ ಪ್ರಶ್ನಿಸಿಲ್ಲ ಎಂದು ವಯನಾಡಿನ ಲೋಕಸಭಾ ಸದಸ್ಯ ಪ್ರಶ್ನಿದ್ದಾರೆ.
ಹಾಗೆ, "ಎನ್‌ಸಿಬಿ ಮತ್ತು ಇತರ ಸರ್ಕಾರಿ ಏಜೆನ್ಸಿಗಳು ಗುಜರಾತ್‌ನಲ್ಲಿ ಡ್ರಗ್ ಕಾರ್ಟೆಲ್‌ಗಳನ್ನು (Drug Cartels) ನಡೆಸುತ್ತಿರುವ 'ನಾರ್ಕೋಸ್' ಅನ್ನು ಏಕೆ ಹಿಡಿಯಲು ಸಾಧ್ಯವಾಗುತ್ತಿಲ್ಲ?" ಎಂದು ಸರಣಿ ಟ್ವೀಟ್‌ಗಳ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ