ಹಳೆ ನೋಟಲ್ಲೇ ತಿಮ್ಮಪ್ಪನ ಆಶೀರ್ವಾದ ಕೇಳುತ್ತಿರುವ ಭಕ್ತರು: 50 ಕೋಟಿ ರು. ರದ್ದಾದ ನೋಟು ಸಂಗ್ರಹ!

By Suvarna NewsFirst Published Sep 17, 2020, 8:43 AM IST
Highlights

ಇನ್ನೂ ತಿಮ್ಮಪ್ಪನಿಗೆ ಹಳೆ ನೋಟಲ್ಲೇ ಆಶೀರ್ವಾದ ಕೇಳುತ್ತಿರುವ ಭಕ್ತರು!|  ರದ್ದಾದ 500, 1000 ರು. ನೋಟು ಬಂದು ಬೀಳ್ತಾನೇ ಇವೆ| ಈವರೆಗೂ 50 ಕೋಟಿ ರು. ರದ್ದಾದ ನೋಟು ಸಂಗ್ರಹ

ತಿರುಪತಿ(ಸೆ.17): ಅತಿ ಶ್ರೀಮಂತ ದೇವರು ತಿರುಪತಿ ತಿಮ್ಮಪ್ಪನ ಹುಂಡಿ ಎಂದರೆ ಸಾಮಾನ್ಯವಲ್ಲ. ದುಡ್ಡಿನ ಹೊಳೆಯೇ ಹರಿದುಬರುತ್ತದೆ. ಹಾಗೆಯೇ ಅಮಾನ್ಯಗೊಂಡ 500 ರು. ಹಾಗೂ 1000 ರು. ನೋಟುಗಳೂ ಹರಿದುಬರುತ್ತಿವೆ!

ಅಚ್ಚರಿ ಎನ್ನಿಸಿದರೂ ನಿಜ. ತಿರುಪತಿ ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ) ಅಧಿಕಾರಿಯೇ ಈ ವಿಚಾರ ಖಚಿತಪಡಿಸಿದ್ದಾರೆ. ‘2016ರ ನ.8ರಂದೇ ಕೇಂದ್ರ ಸರ್ಕಾರ 500 ರು. ಹಾಗೂ 1000 ರು. ನೋಟುಗಳನ್ನು ರದ್ದುಗೊಳಿಸಿದ್ದರೂ, ಈವರೆಗೂ ಈ ನೋಟುಗಳು ಹುಂಡಿಯಲ್ಲಿ ಸಂಗ್ರಹ ಆಗುತ್ತಿವೆ. ಈವರೆಗೂ ಸುಮಾರು 50 ಕೋಟಿ ರು. ರದ್ದಾದ ನೋಟುಗಳು ಹುಂಡಿಯಲ್ಲಿ ಸಂಗ್ರಹ ಆಗಿವೆ. ರದ್ದಾದ ನೋಟುಗಳಾದ ಕಾರಣ ಇವುಗಳನ್ನು ಚಲಾಯಿಸಲು ಬರುವುದಿಲ್ಲ’ ಎಂದು ಅವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

1000 ರು. ಮೌಲ್ಯದ 1.8 ಲಕ್ಷ ನೋಟುಗಳು ಹುಂಡಿಗೆ ಬಂದು ಬಿದ್ದಿದ್ದು, ಇವುಗಳ ಒಟ್ಟಾರೆ ಮೌಲ್ಯ 18 ಕೋಟಿ ರುಪಾಯಿ. ಇನ್ನು 500 ರು. ಮೌಲ್ಯದ 6.34 ಲಕ್ಷ ನೋಟುಗಳು ಇವೆ. ಇವುಗಳ ಮೌಲ್ಯ 31.7 ಕೋಟಿ ರುಪಾಯಿ. ಒಟ್ಟಾರೆ ಮೌಲ್ಯ ಸುಮಾರು 50 ಕೋಟಿ ರು. ಆಗುತ್ತದೆ.

‘ರದ್ದಾದ ನೋಟುಗಳ ವಿನಿಯಮ ಅವಧಿಯೂ ಮುಗಿದಿರುವ ಕಾರಣ ಇವನ್ನು ಟಿಟಿಡಿಗೆ ಇವನ್ನು ಇಟ್ಟುಕೊಂಡು ಏನೂ ಮಡಲು ಬರುತ್ತಿಲ್ಲ. ಹೀಗಾಗಿ ಈ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಅಥವಾ ಆರ್‌ಬಿಐನಲ್ಲಿ ಠೇವಣಿ ಇರಿಸಲು ಅವಕಾಶವಿಡಬೇಕು. ಹೊಸ ನೋಟುಗಳೊಂದಿಗೆ ಇವನ್ನು ಬದಲಿಸಿಕೊಡಬೇಕು’ ಎಂದು ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಕೋರಿದ್ದಾರೆ.

‘ಒಮ್ಮೆ ಇವುಗಳನ್ನು ವಿನಿಮಯ ಮಾಡಿಕೊಟ್ಟರೆ ಈ ಹಣವನ್ನು ಜನಕಲ್ಯಾಣ ಹಾಗೂ ಆಧ್ಯಾತ್ಮಿಕ ಕೆಲಸಕ್ಕೆ ಬಳಸಲಾಗುವುದು’ ಎಂದು ಟಿಟಿಡಿ ಅಧಿಕಾರಿಗಳು ಹೇಳಿದ್ದಾರೆ.

‘ಜನರ ಧಾರ್ಮಿಕ ಭಾವನೆಗೆ ಸಂಬಂಧಿಸಿದ ವಿಚಾರ ಆಗಿರುವುದರಿಂದ ಈ ನೋಟುಗಳನ್ನು ಸ್ವೀಕರಿಸಲು ಆಗುವುದಿಲ್ಲ ಎಂದು ಭಕ್ತರಿಗೆ ಹೇಳಲಾಗದು’ ಎಂದು ಟಿಟಿಡಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

click me!