15 ಲಕ್ಷ ವೆಚ್ಚದ ಸರ್ಜರಿಯನ್ನು ವೆಲ್ಡರ್‌ನ ಸಹಾಯದಿಂದ 25 ಸಾವಿರದಲ್ಲಿ ಮುಗಿಸಿದ ವೈದ್ಯರು

Published : Aug 26, 2025, 06:41 PM IST
welder

ಸಾರಾಂಶ

20 ಅಡಿ ಎತ್ತರದ ಬಾಲ್ಕನಿಯಿಂದ ಬಿದ್ದ ಮಗುವಿನ ತಲೆಗೆ ಕಬ್ಬಿಣದ ರಾಡ್ ಚುಚ್ಚಿತ್ತು. ಲಕ್ಷಾಂತರ ರೂಪಾಯಿ ವೆಚ್ಚವಾಗಬಹುದೆಂದು ಖಾಸಗಿ ಆಸ್ಪತ್ರೆ ಹೇಳಿದ ಶಸ್ತ್ರಚಿಕಿತ್ಸೆಯನ್ನು ಕೆಜಿಎಂಯು ವೈದ್ಯರು ಕೇವಲ 25 ಸಾವಿರಕ್ಕೆ ಮಾಡಿ ಮಗುವಿನ ಪ್ರಾಣ ಉಳಿಸಿದ್ದಾರೆ.

ಮಗುವೊಂದು ಆಯತಪ್ಪಿ 20 ಅಡಿ ಎತ್ತರದಲ್ಲಿದ್ದ ಬಾಲ್ಕನಿಯಿಂದ ಅಚಾನಕ್ ಆಗಿ ಕೆಳಗೆ ಬಿದ್ದಿದ್ದು ಈ ವೇಳೆ ಗೇಟ್‌ನ ಕಬ್ಬಿಣದ ರಾಡ್ ಮಗುವಿನ ತಲೆ ಹಾಗೂ ಹೆಗಲಿಗೆ ಚುಚ್ಚಿಕೊಂಡಂತಹ ಘಟನೆ ಆಗಸ್ಟ್ 16ರಂದು ನಡೆದಿತ್ತು. ಮಗುವಿನ ತಲೆ ಹಾಗೂ ಹೆಗಲಿಗೆ ಚುಚ್ಚಿದ್ದ ಈ ಕಬ್ಬಿಣದ ರಾಡುಗಳನ್ನು ಹೊರತೆಗೆಯುವುದು ವೈದ್ಯರಿಗೆ ಬಹಳ ಸವಾಲಿನ ಕೆಲಸವಾಗಿತ್ತು. ಕೆಲ ಆಸ್ಪತ್ರೆಗಳ ವೈದ್ಯರು ಈ ಶಸ್ತ್ರಚಿಕಿತ್ಸೆಗೆ 15 ಲಕ್ಷ ವೆಚ್ಚವಾಗುವ ಬಗ್ಗೆ ಆ 3 ವರ್ಷದ ಮಗುವಿನ ಪೋಷಕರಿಗೆ ಹೇಳಿದ್ದರು. ಇದು ಪೋಷಕರಿಗೆ ಸಾಧ್ಯವಾಗದಂತಹ ಮೊತ್ತವಾಗಿತ್ತು. ಆದರೆ ಅತ್ಯಂತ ಸಂಕೀರ್ಣವಾದ ಈ ಸರ್ಜರಿಯನ್ನು ವೈದ್ಯರು, ಒಬ್ಬ ಕಬ್ಬಿಣದ ವೆಲ್ಡರ್‌ನ ಸಹಾಯದಿಂದ ಸುಲಭವಾಗಿಸಿ ಮಗುವನ್ನು ರಕ್ಷಿಸಿದ್ದಾರೆ. ಜೊತೆಗೆ ಈ ಶಸ್ತ್ರಚಿಕಿತ್ಸೆಗೆ ಕೇವಲ 25 ಸಾವಿರ ರೂಪಾಯಿ ವೆಚ್ಚವಾಗಿದೆ ಎಂದು ವರದಿಯಾಗಿದೆ.

20 ಅಡಿ ಎತ್ತರದ ಬಾಲ್ಕನಿಯಿಂದ ಕೆಳಗೆ ಬಿದ್ದ ಮಗು:

ಉತ್ತರ ಪ್ರದೇಶದ ಲಕ್ನೋದಲ್ಲಿ ಈ ಘಟನೆ ನಡೆದಿದ್ದು, ಲಕ್ನೋದ ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ ವೈದ್ಯರು ಈ ಸಾಧನೆ ಮಾಡಿದ್ದಾರೆ. ಆಗಸ್ಟ್ 16ರ ಶನಿವಾರದಂದು ಲಕ್ನೊದ ಗೋಮ್ತಿನಗರದಲ್ಲಿ 20 ಅಡಿ ಎತ್ತರದಿಂದ ಕಾರ್ತಿಕ್ ಎಂಬ ಮೂರು ವರ್ಷದ ಬಾಲಕನೋರ್ವ ಕೆಳಗೆ ಬಿದ್ದಿದ್ದ, ಈ ವೇಳೆ ಆತನ ತಲೆಗೆ ಹಾಗೂ ಭುಜಕ್ಕೆ ಕಬ್ಬಿಣದ ರಾಡ್ ಚುಚ್ಚಿಕೊಂಡಿತ್ತು. ಆರಂಭದಲ್ಲಿ ಕುಟುಂಬದವರು ಬಾಲಕನನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿ ವೈದ್ಯರು ಈ ಶಸ್ತ್ರಚಿಕಿತ್ಸೆಗೆ 15 ಲಕ್ಷಕ್ಕೂ ಅಧಿಕ ವೆಚ್ಚವಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ಇಷ್ಟೊಂದು ದುಡ್ಡನ್ನು ತಮ್ಮಿಂದ ಹೊಂದಿಸಲು ಸಾಧ್ಯವಿಲ್ಲವೆಂದು ತಿಳಿದ ಪೋಷಕರು ರಾತ್ರಿ 11.45ರ ಸುಮಾರಿಗೆ ರಾಡ್‌ ಚುಚ್ಚಿದ್ದ ಸ್ಥಿತಿಯಲ್ಲೇ ಮಗುವನ್ನು ಕೆಜಿಎಂಯು ಆಸ್ಪತ್ರೆಯ ಟ್ರಮಾ ಸೆಂಟರ್‌ಗೆ ಕರೆದುಕೊಂಡು ಬಂದರು.

ಅತ್ಯಂತ ಕಷ್ಟಕರವಾಗಿದ್ದ ಶಸ್ತ್ರಚಿಕಿತ್ಸೆ:

ಮಗುವನ್ನು ದಾಖಲಿಸಿಕೊಂಡು ಪರೀಕ್ಷಿಸಿದ ವೈದ್ಯರಿಗೆ ಹಲವು ಸವಾಲುಗಳಿರುವುದು ಕಂಡು ಬಂತು. ತಲೆಬುರುಡೆಯ ಸಮೀಪವೇ ಕಬ್ಬಿಣದ ರಾಡ್ ಸಿಲುಕಿಕೊಂಡಿದ್ದರಿಂದ ಈ ಕಬ್ಬಿಣದ ರಾಡನ್ನು ಕತ್ತರಿಸುವುದು ಕಷ್ಟಕರವಾಗಿತ್ತು. ಕಬ್ಬಿಣದ ರಾಡ್ ಇರುವುದರಿಂದ ಸಿಟಿಸ್ಕ್ಯಾನ್ ಮಾಡುವುದು ಕೂಡ ಸಾಧ್ಯವಿರಲಿಲ್ಲ. ಕಬ್ಬಿಣದ ರಾಡ್ ತಲೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ಚುಚ್ಚಲ್ಪಟ್ಟಿದ್ದರಿಂದ ಮಗುವನ್ನು ಶಸ್ತ್ರಚಿಕಿತ್ಸಾ ಮೇಜಿನ ಮೇಲೆ ಇಡುವುದು ಮಲಗಿಸುವುದು ಕೂಡ ಕಷ್ಟಕರವಾಗಿತ್ತು. ಹೀಗಾಗಿ

ಪರಿಸ್ಥಿತಿ ತುಂಬಾ ಜಟಿಲವಾಗಿತ್ತು. ಹೆಚ್ಚಿನ ಗಾಯವಾಗದಂತೆ ನಾವು ಮೊದಲು ಎಂಬೆಡೆಡ್ ರಾಡ್ ಅನ್ನು ನಿರ್ವಹಿಸಬೇಕಾಗಿತ್ತು. ಶಸ್ತ್ರಚಿಕಿತ್ಸೆಗೆ ಮಗುವನ್ನು ಸಿದ್ಧಪಡಿಸುವುದು ಸಹ ಒಂದು ಸವಾಲಾಗಿತ್ತು ಎಂದು ಪ್ರಮುಖ ಶಸ್ತ್ರಚಿಕಿತ್ಸಕ ಡಾ. ಅಂಕುರ್ ಬಜಾಜ್ ಹೇಳಿದ್ದಾರೆ.

ನಂತರ ಕಬ್ಬಿಣವನ್ನು ಕತ್ತರಿಸುವ ವೆಲ್ಡರ್‌ನ್ನು ವೈದ್ಯರು ಸ್ಥಳಕ್ಕೆ ಕರೆಸಿದರು. ಇದಾದ ನಂತರ ಹಿರಿಯ ವೈದ್ಯ ಪ್ರೊಫೆಸರ್ ಬಿ.ಕೆ. ಓಜಾ ಅವರ ಮೇಲ್ವಿಚಾರಣೆಯಲ್ಲಿ ಮತ್ತು ಡಾ. ಬಜಾಜ್ ನೇತೃತ್ವದಲ್ಲಿ ಡಾ. ಸೌರಭ್ ರೈನಾ, ಡಾ. ಜೇಸನ್ ಗೋಲ್ಮಿ ಮತ್ತು ಡಾ. ಅಂಕಿನ್ ಬಸು ಅವರ ನೇತೃತ್ವದಲ್ಲಿ ನರಶಸ್ತ್ರಚಿಕಿತ್ಸಾ ತಂಡವು ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿತು. ಡಾ. ಕುಶ್ವಾಹ ಮತ್ತು ಡಾ. ಮಾಯಾಂಕ್ ಸಚನ್ ನೇತೃತ್ವದ ಅರಿವಳಿಕೆ ತಂಡವು ಈ ವೈದ್ಯರಿಗೆ ನಿರ್ಣಾಯಕ ಬೆಂಬಲವನ್ನು ನೀಡಿತು.

ರಾತ್ರಿಯಿಡೀ ಮೂರುವರೆ ಗಂಟೆಗಳ ಕಾಲ, ಮಗುವಿಗೆ ಬದುಕಲು ಮತ್ತೊಂದು ಅವಕಾಶ ನೀಡಲು ವೈದ್ಯರು ಹೆಗಲಿಗೆ ಹೆಗಲು ಕೊಟ್ಟು ಹೋರಾಡಿದರು. ಇದೆಲ್ಲವುಗಳಿಗೆ ಒಟ್ಟು ಕೇವಲ ₹25,000 ವೆಚ್ಚವಾಯಿತು ಎಂದು ವರದಿಯಾಗಿದೆ.ಮೂರುವರೆ ಗಂಟೆಗಳ ಕಾಲ ನಡೆದ ಶಸ್ತ್ರಚಿಕಿತ್ಸೆಯ ನಂತರ, ಕಬ್ಬಿಣದ ರಾಡ್ ಮಗುವಿನ ದೇಹದಿಂದ ಯಶಸ್ವಿಯಾಗಿ ಹೊರತೆಗೆಯಲಾಗಿತ್ತು. ಸದ್ಯ ಬಾಲಕನ ಆರೋಗ್ಯ ಸ್ಥಿರವಾಗಿದ್ದು, ಡಾ. ಸಂಜೀವ್ ವರ್ಮಾ ಅವರ ತಂಡದ ಆರೈಕೆಯಲ್ಲಿ ಮಗು ಕಾರ್ತಿಕ್ ಮಕ್ಕಳ ಐಸಿಯುನಲ್ಲಿ ವೆಂಟಿಲೇಟರ್‌ನಲ್ಲಿದ್ದಾರೆ. ಅವರ ಪ್ರಮುಖ ಅಂಶಗಳು ಸ್ಥಿರವಾಗಿವೆ ಮತ್ತು ಅವರ ಸ್ಥಿತಿ ಕ್ರಮೇಣ ಸುಧಾರಿಸುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಪರಿಸ್ಥಿತಿ ತುಂಬಾ ಗಂಭೀರವಾಗಿದ್ದರಿಂದ ನಾವು ಎಲ್ಲಾ ಭರವಸೆಯನ್ನು ಕಳೆದುಕೊಂಡೆವು. ಆದರೆ ಕೆಜಿಎಂಯು ವೈದ್ಯರು ನನ್ನ ಮಗನ ಜೀವವನ್ನು ಉಳಿಸಲು ಅಸಾಧಾರಣ ಧೈರ್ಯ ಮತ್ತು ಕೌಶಲ್ಯವನ್ನು ತೋರಿಸಿದರು ಎಂದು ಬಾಲಕನ ಕಾರ್ತಿಕ್ ಅವರ ತಂದೆ ರಜನೀಶ್ ಹೇಳಿದ್ದಾರೆ. ಇಂದು ಕೆಜಿಎಂಯು ಉತ್ತರ ಭಾರತದ ಅತಿದೊಡ್ಡ ವೈದ್ಯಕೀಯ ಕೇಂದ್ರ ಎಂದು ಏಕೆ ಕರೆಯಲ್ಪಡುತ್ತದೆ ಎಂಬುದು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ಅವರು ಹೇಳಿದರು. ಬಾಲಕ ಕುಟುಂಬವು ಕೆಜಿಎಂಯು ಆಸ್ಪತ್ರೆಯನ್ನು ದೇವಾಲಯ ಎಂದು ಹಾಗೂ ವೈದ್ಯರನ್ನು ದೇವರೆಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: ಗಂಡನಿಗೆ ಲಿವರ್ ನೀಡಿದ ಹೆಂಡತಿ: ಅಂಗಾಂಗ ಕಸಿ ಬಳಿಕ ಇಬ್ಬರೂ ಸಾವು: ಆಸ್ಪತ್ರೆಗೆ ನೊಟೀಸ್

ಇದನ್ನೂ ಓದಿ: ಸರೋವರಕ್ಕೆ ಅಪ್ಪಳಿಸಿದ ಕಾಡ್ಗಿಚ್ಚು ಆರಿಸುತ್ತಿದ್ದ ಹೆಲಿಕಾಪ್ಟರ್ : ವೀಡಿಯೋ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮನೆ ಮುಂದೆ ದನ ಸೆಗಣಿ ಹಾಕಿದ್ದಕ್ಕೆ ಯುವಕನ ಕೊಲೆ
ಗಂಡ ಉಳಿಯಲಿಲ್ಲ, ಎಗ್ಸಾಂ ಬರೆಯಲಿಲ್ಲ, ಕ್ಯಾನ್ಸಲ್ ಆಗಿದ್ದು ಬರೀ ಫ್ಲೈಟ್ ಅಲ್ಲ ನೂರಾರು ಮಂದಿ ಕನಸು