ಪ್ರಚಾರಕ್ಕೆ ಧರ್ಮ, ಸೇನೆ ಸಂವಿಧಾನ ಬಳಸಬೇಡಿ: ಆಯೋಗ ಖಡಕ್‌ ನುಡಿ

By Kannadaprabha News  |  First Published May 23, 2024, 4:28 AM IST

ಸ್ಟಾರ್‌ ಪ್ರಚಾರಕರಾದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಳೆದ ತಿಂಗಳು ನೀಡಲಾಗಿದ್ದ ದೂರುಗಳಿಗೆ, ಅವರ ಪರವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಧ್ಯಕ್ಷರು ನೀಡಿದ ಸ್ಪಷ್ಟನೆಯನ್ನೂ ಆಯೋಗ ತಿರಸ್ಕರಿಸಿದೆ.


ನವದೆಹಲಿ(ಮೇ.23):  ‘ಜಾತಿ, ಧರ್ಮ, ಭಾಷೆ, ಸಮುದಾಯಗಳ ಆಧಾರದಲ್ಲಿ ಚುನಾವಣಾ ಪ್ರಚಾರ ಮಾಡಬಾರದು’ ಎಂದು ಕೇಂದ್ರ ಚುನಾವಣಾ ಆಯೋಗವು ಬಿಜೆಪಿ ಮತ್ತು ಕಾಂಗ್ರೆಸ್‌ಗೆ ತಾಕೀತು ಮಾಡಿದೆ. ಅಲ್ಲದೆ, ‘ಚುನಾವಣೆಗಾಗಿ ಭಾರತದ ಸಾಮಾಜಿಕ, ಸಾಂಸ್ಕೃತಿಕ ಪರಿಸರವನ್ನು ಬಲಿಕೊಡಲಾಗದು’ ಎಂದು ಸ್ಪಷ್ಟಪಡಿಸಿದೆ.

ಇದೇ ವೇಳೆ, ಸ್ಟಾರ್‌ ಪ್ರಚಾರಕರಾದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಕಳೆದ ತಿಂಗಳು ನೀಡಲಾಗಿದ್ದ ದೂರುಗಳಿಗೆ, ಅವರ ಪರವಾಗಿ ಬಿಜೆಪಿ ಮತ್ತು ಕಾಂಗ್ರೆಸ್‌ ಅಧ್ಯಕ್ಷರು ನೀಡಿದ ಸ್ಪಷ್ಟನೆಯನ್ನೂ ಆಯೋಗ ತಿರಸ್ಕರಿಸಿದೆ.

Latest Videos

undefined

ಚುನಾವಣೆ ರೇಡ್‌ನಲ್ಲಿ ಸಿಕ್ಕಿದ್ದು ಸಾವಿರಾರು ಕೋಟಿ: ಎಷ್ಟು ಕೆಜಿ ಡ್ರಗ್ಸ್ ಸಿಕ್ಕಿದೆ ಗೊತ್ತಾ..?

ಬಿಜೆಪಿಗೆ ಆಯೋಗ ಸೂಚಿಸಿದ್ದೇನು?:

ಕಳೆದ ತಿಂಗಳು ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಪ್ರಚಾರ ಮಾಡಿದ್ದ ಪ್ರಧಾನಿ ಮೋದಿ, ‘ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜನಸಾಮಾನ್ಯರ ಸಂಪತ್ತು ಲೂಟಿ ಮಾಡಿ ಅದನ್ನು ಒಳನುಸುಳುಕೋರರಿಗೆ ಮತ್ತು ಹೆಚ್ಚಿನ ಮಕ್ಕಳನ್ನು ಹೊಂದಿವವರಿಗೆ ನೀಡುತ್ತಾರೆ’ ಎಂದು ಆರೋಪಿಸಿದ್ದರು. ಈ ಬಗ್ಗೆ ಕಾಂಗ್ರೆಸ್‌ ನೀಡಿದ ದೂರು ಆಧರಿಸಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾಗೆ ಆಯೋಗ ನೋಟಿಸ್‌ ಜಾರಿ ಮಾಡಿತ್ತು.

ನೋಟಿಸ್‌ಗೆ ನಡ್ಡಾ ನೀಡಿದ್ದ ಸ್ಪಷ್ಟನೆ ತಿರಸ್ಕರಿಸಿರುವ ಆಯೋಗ, ‘ಜಾತಿ, ಧರ್ಮ ಮತ್ತು ಕೋಮುಭಾವನೆಯ ಪ್ರಚಾರದಿಂದ ದೂರ ಸ್ಟಾರ್‌ ಪ್ರಚಾರಕರು ದೂರ ಇರಬೇಕು’ ಎಂದು ಸೂಚಿಸಿದೆ. ಜೊತೆಗೆ ಸಮಾಜವನ್ನು ವಿಭಜನೆ ಮಾಡಬಹುದಾದ ಭಾಷಣ ಮಾಡದಂತೆಯೂ ತಾಕೀತು ಮಾಡಿದೆ.

ಮಮತಾ ರೇಟ್‌ ಎಷ್ಟು ಎಂದಿದ್ದ ನಿವೃತ್ತ ಜಡ್ಜ್‌ಗೆ ಚುನಾವಣಾ ಆಯೋಗ ತರಾಟೆ

ಕಾಂಗ್ರೆಸ್‌ಗೆ ಸೂಚನೆ ಏನು?:

ಇನ್ನೊಂದೆಡೆ ರಾಹುಲ್‌ ಗಾಂಧಿ ಮತ್ತು ಖರ್ಗೆ, ‘ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ರದ್ದು ಮಾಡಲಿದೆ. ಸೇನೆಯಲ್ಲಿ ಇದೀಗ ಶ್ರೀಮಂತ ಮತ್ತು ಬಡವ ಎಂಬ ಎರಡು ವರ್ಗ ಸೃಷ್ಟಿಸಲಾಗಿದೆ’ ಎಂದು ಆರೋಪಿಸಿದ್ದರು. ಅಲ್ಲದೆ, ಅಗ್ನಿವೀರ ಯೋಜನೆ ವಿರುದ್ಧ ಕಾಂಗ್ರೆಸ್‌ ನಾಯಕರು ಪದೇ ಹೇಳಿಕೆ ನೀಡುತ್ತಲೇ ಇದ್ದಾರೆ. ಈ ಬಗ್ಗೆ ಬಿಜೆಪಿ ನೀಡಿದ ದೂರು ಆಧರಿಸಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಖರ್ಗೆಗೆ ನೋಟಿಸ್‌ ನೀಡಲಾಗಿತ್ತು.

ಈ ಕುರಿತು ಖರ್ಗೆ ನೀಡಿದ್ದ ಸ್ಪಷ್ಟನೆಯನ್ನೂ ತಿರಸ್ಕರಿಸಿರುವ ಆಯೋಗ, ‘ರಕ್ಷಣಾ ಪಡೆಗಳನ್ನು ರಾಜಕೀಯ ಬಳಸಬಾರದು’ ಎಂದು ಸೂಚಿಸಿದೆ. ಅಲ್ಲದೆ ‘ಸಂವಿಧಾನವನ್ನೇ (ಬಿಜೆಪಿ) ರದ್ದುಪಡಿಸಲಿದೆ ಅಥವಾ ಮಾರಾಟ ಮಾಡಲಿದೆ’ ಎಂಬರ್ಥದ ಭಾಷಣ ಮಾಡದಂತೆ ಕಾಂಗ್ರೆಸ್‌ ಸ್ಟಾರ್‌ ಪ್ರಚಾರಕರಿಗೆ ತಾಕೀತು ಮಾಡಿದೆ.

click me!