* 2 ವಾರದಲ್ಲಿ ಕೇವಲ 7 ಗಂಟೆ ನಡೆದ ಲೋಕಸಭೆ ಕಲಾಪ
* 53 ಗಂಟೆ ನಡೆಯಬೇಕಿದ್ದ ರಾಜ್ಯಸಭೆ ಕಲಾಪ 11 ಗಂಟೆಗೆ ಸೀಮಿತ
* ಉಳಿದ ಕಾಲಾವಧಿ ವಿಪಕ್ಷಗಳ ಗದ್ದಲ-ಕೋಲಾಹಲಕ್ಕೆ ಬಲಿ
ನವದೆಹಲಿ(ಆ.01): ಪೆಗಾಸಸ್ ಬೇಹುಗಾರಿಕೆ ಹಗರಣ, ಕೃಷಿ ಕಾಯ್ದೆಗಳ ರದ್ದತಿ ಮತ್ತು ಬೆಲೆ ಏರಿಕೆ ವಿಚಾರವಾಗಿ ಚರ್ಚೆಗೆ ಆಗ್ರಹಿಸಿ ವಿಪಕ್ಷಗಳ ನಡೆಸಿದ ನಿರಂತರ ಪ್ರತಿಭಟನೆ ಮತ್ತು ಕೋಲಾಹಲಕ್ಕೆ ಸತತ 2ನೇ ವಾರದ ಸಂಸತ್ತಿನ ಉಭಯ ಕಲಾಪಗಳು ಬಲಿಯಾಗಿವೆ. ಇದರಿಂದ ದೇಶದ ಸಾರ್ವಜನಿಕರ 133 ಕೋಟಿ ರು. ನೀರಲ್ಲಿ ಹುಣಸೆ ಹಣ್ಣು ತೊಳೆದಂತೆ ವ್ಯರ್ಥವಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಜು.19ರಂದು ಕಲಾಪ ಆರಂಭವಾದಾಗಿನಿಂದ ಪೆಗಾಸಸ್ ಹಗರಣ, ಕೃಷಿ ಕಾಯ್ದೆಗಳು ಸೇರಿ ಇನ್ನಿತರ ವಿಚಾರಗಳನ್ನು ಮುಂದಿಟ್ಟುಕೊಂಡು ನಿರಂತರ ಪ್ರತಿಭಟನೆ ನಡೆಸುತ್ತಿವೆ. ಇದರ ಪರಿಣಾಮದಿಂದ 54 ಗಂಟೆ ನಡೆಯಬೇಕಿದ್ದ ಲೋಕಸಭೆ ಕಲಾಪ ಕೇವಲ 7 ಗಂಟೆ ಮಾತ್ರವೇ ನಡೆದಿದ್ದು, 53 ಗಂಟೆ ನಡೆಯಬೇಕಿದ್ದ ರಾಜ್ಯಸಭೆ ಕಲಾಪ ಕೇವಲ 11 ಗಂಟೆಗೆ ಸೀಮಿತವಾಗಿದೆ.
ತನ್ಮೂಲಕ ಒಟ್ಟಾರೆ 107 ಗಂಟೆಗಳ ಪೈಕಿ ಸಂಸತ್ತಿನ ಉಭಯ ಕಲಾಪಗಳು 18 ಗಂಟೆ ಮಾತ್ರವೇ ನಡೆದಿವೆ. ಉಳಿದ 89 ಗಂಟೆಗಳು ವ್ಯರ್ಥವಾಗಿದ್ದು, ದೇಶದ ತೆರಿಗೆದಾರರ 133 ಕೋಟಿ ರು. ನಷ್ಟವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ