ತಿರುಪತಿಯೇ ಹನುಮ ಜನ್ಮಸ್ಥಳ: ಮತ್ತಷ್ಟು ಪಂಡಿತರ ವಾದ!

By Suvarna NewsFirst Published Aug 1, 2021, 8:38 AM IST
Highlights

* ಕರ್ನಾಟಕದ ಕಿಷ್ಕಿಂಧೆ ಅಲ್ಲ: ಟಿಟಿಡಿ ಚರ್ಚಾಗೋಷ್ಠಿಯಲ್ಲಿ ಅಭಿಪ್ರಾಯ

* ತಿರುಪತಿಯೇ ಹನುಮ ಜನ್ಮಸ್ಥಳ: ಮತ್ತಷ್ಟು ಪಂಡಿತರ ವಾದ

ತಿರುಮಲಆ.01): ತಿರುಪತಿಯಲ್ಲಿರುವ ಅಂಜನಾದ್ರಿ ಬೆಟ್ಟವೇ ಹನುಮಂತನ ನಿಜವಾದ ಜನ್ಮಸ್ಥಳ ಎಂದು ಇತ್ತೀಚೆಗೆ ಘೋಷಿಸಿದ್ದ ತಿರುಪತಿ ತಿರುಮಲ ದೇವಸ್ಥಾನ (ಟಿಟಿಡಿ) ಸಂಶೋಧನೆಗೆ ಈಗ ಮತ್ತಿಷ್ಟುಪಂಡಿತರು ಬಲ ನೀಡುವ ಯತ್ನ ಮಾಡಿದ್ದಾರೆ.

ಟಿಟಿಡಿಯ (ತಿರುಪತಿ ತಿರುಮಲ ದೇವಸ್ಥಾನ ಸಮಿತಿ) ಶ್ರೀ ವೆಂಕಟೇಶ್ವರ ಇನ್‌ಸ್ಟಿಟ್ಯೂಟ್‌ ಆಫ್‌ ಹೈಯರ್‌ ವೇದಿಕ್‌ ಸ್ಟಡೀಸ್‌ ಮತ್ತು ರಾಷ್ಟ್ರೀಯ ಸಂಸ್ಕೃತ ವಿವಿ ಆಯೋಜಿಸಿದ್ದ ವೆಬಿನಾರ್‌ನಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ತಮಿಳುನಾಡಿನ ಕೋರ್ಟಲ್ಲಂ ಸಿದ್ದೇಶ್ವರ ಪೀಠದ ಶ್ರೀ ಸಿದ್ದೇಶ್ವರಾನಂದ ಭಾರತೀ ಸ್ವಾಮೀಜಿ, ಟಿಟಿಡಿ ಪಂಡಿತ ಪರಿಷತ್‌ ಮುಖ್ಯಸ್ಥ ಆಚಾರ‍್ಯ ವಿ. ಮುರಳೀಧರ ಶರ್ಮ, ಆಚಾರ‍್ಯ ಸಮುದ್ರ ರಂಗ ರಾಮಾನುಚಾರ್ಯರು, ‘ರಾಮಾಯಣ ಹಾಗೂ ಪುರಾಣಗಳು ತಿರುಮಲದ ಅಂಜನಾದ್ರಿ ಬೆಟ್ಟವೇ ಆಂಜನೇಯನ ಜನ್ಮಸ್ಥಳ ಎಂದು ಹೇಳಿವೆ’ ಎಂದು ಸಮರ್ಥಿಸಿಕೊಂಡಿದ್ದಾರೆ.

ತಮಿಳುನಾಡಿನ ಸಿದ್ದೇಶ್ವರ ಪೀಠದ ಶ್ರೀ ಸಿದ್ದೇಶ್ವರಾನಂದ ಭಾರತೀ ಸ್ವಾಮೀಜಿ ಪ್ರತಿಪಾದಿಸಿದ್ದಾರೆ. ‘ತಿರುಪತಿಯೇ ಜನ್ಮಸ್ಥಳ ಎಂದು ವಾಲ್ಮೀಕಿ ರಾಮಾಯಣದಲ್ಲೂ ಸ್ಪಷ್ಟವಾಗಿ ನಮೂದಿಸಲ್ಪಟ್ಟಿದೆ. ಆಂಜನೇಯ ಹುಟ್ಟಿದ್ದು ಕರ್ನಾಟಕದ ಕಿಷ್ಕಿಂಧೆಯಲ್ಲಿ ಎಂಬ ವಾದಗಳಿಗೆ ಪುರಾಣಗಳು ಮತ್ತು ಇತರೆ ಯಾವುದೇ ಸಾಂಪ್ರದಾಯಿಕ ಸಾಕ್ಷ್ಯಗಳು ಇಲ್ಲ. ಪುರಾಣಗಳ ಜ್ಞಾನ ಇಲ್ಲದವರು ಆಂಜನೇಯನ ಜನ್ಮಸ್ಥಾನದ ಕುರಿತು ಮಾತನಾಡಲು ಅನರ್ಹರು’ ಎಂದು ಹೇಳಿದ್ದಾರೆ.

ಮುರಳೀಧರ ಶರ್ಮ ಮಾತನಾಡಿ, ‘ಪಂಡಿತರ ಪರಿಷತ್ತು ತಿರುಮಲವೇ ಜನ್ಮಸ್ಥಳ ಎಂದು ಪುರಾಣ ಆಧರಿಸಿ ಹೇಳಿದೆ. ಈ ಬಗ್ಗೆ ಶೀಘ್ರ ಪುಸ್ತಕ ಹೊರತರುತ್ತೇವೆ’ ಎಂದರು. ರಾಮಾನುಜ ಆಚಾರ್ಯರು ಮಾತನಾಡಿ, ‘ಪುರಾಣ, ವೆಂಕಟಾಚಲ ಮಹಾತ್ಮೆ, ವೆಂಕಟಾಚಲ ಇತಿಹಾಸಮಾಲಾದಲ್ಲೂ ಆಂಜನೇಯನ ಜನ್ಮಸ್ಥಳದ ಬಗ್ಗೆ ಉಲ್ಲೇಖವಿದೆ’ ಎಂದರು

ಇದೇ ವೇಳೆ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ಎಸ್‌.ಜವಾಹರ್‌ ರೆಡ್ಡಿ ಮಾತನಾಡಿ, ‘ಆಂಜನೇಯನ ಜನ್ಮಸ್ಥಳದ ಕುರಿತು ಪಂಡಿತ ಪರಿಷತ್‌ ಸಮಗ್ರ ಅಧ್ಯಯನ ನಡೆಸಿದ ಬಳಿಕವೇ ತಿರುಪತಿ ಬಳಿ ಇರುವ ಅಂಜನಾದ್ರಿ ಬೆಟ್ಟವೇ ಆಂಜನೇಯನ ಜನ್ಮಸ್ಥಾನ ಎಂಬ ತೀರ್ಮಾನಕ್ಕೆ ಬಂದು ಈ ಕುರಿತ ಪುಸ್ತಕವನ್ನು ಪ್ರಕಟಿಸಿದ್ದು, ಅದರ ಬಗ್ಗೆ ಜನರಿಂದ ಅಭಿಪ್ರಾಯ ಆಹ್ವಾನಿಸಿದೆ. ಈ ಕುರಿತು ಅಗತ್ಯವೆನ್ನಿಸಿದರೆ ಇನ್ನೊಂದು ಸುತ್ತಿನಲ್ಲಿ ಚರ್ಚೆ ನಡೆಸಲೂ ಸಿದ್ಧ’ ಎಂದು ಹೇಳಿದರು.

ಶತಮಾನಗಳಿಂದಲೂ ಕರ್ನಾಟಕದ ಕೊಪ್ಪಳ ಜಿಲ್ಲೆಯಲ್ಲಿರುವ ಅಂಜನಾದ್ರಿ ಬೆಟ್ಟವನ್ನೇ ಆಂಜನೇಯನ ಜನ್ಮಸ್ಥಳ ಎಂದು ಹೇಳಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಟಿಟಿಡಿ ಹೊಸ ವಾದ ಮಂಡಿಸುವ ಮೂಲಕ ವಿವಾದ ಸೃಷ್ಟಿಸಿದೆ.

click me!