* ಅಲ್ವಿ ಸೇರಿ ಇಬ್ಬರು ಉಗ್ರರು ಸೇನೆಯಿಂದ ಫಿನಿಶ್
* ಪುಲ್ವಾಮಾ ದಾಳಿ ಸಂಚುಕೋರನ ಹತ್ಯೆ
* ಜೈಷ್ ಸಂಸ್ಥಾಪಕ ಅಜರ್ ಸಂಬಂಧಿ ಈತ
ಶ್ರೀನಗರ(ಆ.01): 40 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದ 2019ರ ಪುಲ್ವಾಮಾ ದಾಳಿಯ ಸಂಚುಕೋರನಲ್ಲಿ ಒಬ್ಬನಾದ ಮಹಮ್ಮದ್ ಇಸ್ಮಾಲ್ ಅಲ್ವಿ ಅಲಿಯಾಸ್ ಲಂಬೂ ಅಲಿಯಾಸ್ ಅದ್ನಾನ್, ಶನಿವಾರ ಇಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಹತನಾಗಿದ್ದಾನೆ. ಈತನೊಂದಿಗೆ ಇನ್ನೊಬ್ಬ ಉಗ್ರ ಕೂಡಾ ಗುಂಡಿಗೆ ಬಲಿಯಾಗಿದ್ದು, ಆತನ ಗುರುತು ಪತ್ತೆ ಹಚ್ಚಲಾಗುತ್ತಿದೆ.
ಉಗ್ರರು ಅವಿತಿರುವ ಸುಳಿವಿನ ಮೇರೆಗೆ ಭದ್ರತಾ ಪಡೆಗಳು ಸೋಮವಾರ ಬೆಳಗ್ಗೆ ಪುಲ್ವಾಮಾದ ನಂಬಿಯಾನ್, ಮರ್ಸರ್ ಮತ್ತು ದಚಿಂಗಾಮ್ ಪ್ರದೇಶವನ್ನು ಸುತ್ತುವರೆದು ತಪಾಸಣೆ ಆರಂಭಿಸಿದ್ದವು. ಈ ವೇಳೆ ಉಗ್ರರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ಆರಂಭಿಸಿದಾಗ, ಭದ್ರತಾ ಪಡೆಗಳು ತಿರುಗೇಟು ನೀಡಿದ್ದವು. ಈ ವೇಳೆ ಹಲವು ಗಂಟೆಗಳ ಕಾಲ ಗುಂಡಿನ ಚಕಮಕಿ ನಡೆದಿದ್ದು, ಈ ವೇಳೆ ಇಬ್ಬರು ಹತರಾಗಿದ್ದಾರೆ.
undefined
ಬಳಿಕ ತಪಾಸಣೆ ವೇಳೆ ಹತರಾದವಲ್ಲಿ ಓರ್ವನ ಗುರುತು, ಜೈಷ್ ಎ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್‌ನ ಸಂಬಂಧಿ, ಪಾಕಿಸ್ತಾನ ಮೂಲದ ಮಹಮ್ಮದ್ ಇಸ್ಮಾಲ್ ಅಲ್ವಿ ಅಲಿಯಾಸ್ ಲಂಬೂ ಅಲಿಯಾಸ್ ಅದ್ನಾನ್ ಎಂದು ಖಚಿತಪಟ್ಟಿದೆ. ಮತ್ತೋರ್ವ ಉಗ್ರನ ಪತ್ತೆ ಕಾರ್ಯ ನಡೆಸಲಾಗುತ್ತಿದೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.
ಅದ್ನಾನ್ ಪುಲ್ವಾಮಾ ದಾಳಿಯ ಸಂಚುಕೋರರ ಪೈಕಿ ಒಬ್ಬನಾಗಿದ್ದ. ಈ ಕುರಿತು ತನಿಖೆ ನಡೆಸಿದ್ದ ಎನ್‌ಐಎ ಸಲ್ಲಿಸಿದ್ದ ಆರೋಪಪಟ್ಟಿಯಲ್ಲೂ ಅದ್ನಾನ್ ಹೆಸರಿತ್ತು. ಈತನ ಹತ್ಯೆ ಭದ್ರತಾ ಪಡೆಗಳಿಗೆ ದೊಡ್ಡ ಯಶ ಎಂದು ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.