ಹಾಸ್ಟೆಲ್‌ನಲ್ಲಿ ನಮಾಜ್‌ ವಿಚಾರವಾಗಿ ಗಲಾಟೆ, ಗುಜರಾತ್‌ ವಿವಿಯಲ್ಲಿ ಅಫ್ಘಾನ್‌ ವಿದ್ಯಾರ್ಥಿಗಳ ಮೇಲೆ ಹಲ್ಲೆ!

By Santosh NaikFirst Published Mar 17, 2024, 3:20 PM IST
Highlights


ಹಾಸ್ಟೆಲ್‌ನಲ್ಲಿ ನಮಾಜ್‌ ಮಾಡುತ್ತಿದ್ದ ವಿಚಾರಕ್ಕೆ ಗುಜರಾತ್‌ ವಿವಿಯಲ್ಲಿ ಅಫ್ಘಾನಿಸ್ತಾನದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದ್ದು, ಐವರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ

ನವದೆಹಲಿ (ಮಾ.17): ಅಹಮದಾಬಾದ್‌ನ ಗುಜರಾತ್ ವಿಶ್ವವಿದ್ಯಾನಿಲಯದಲ್ಲಿ ತಡರಾತ್ರಿ, ಅಫ್ಘಾನಿಸ್ತಾನ ವಿದ್ಯಾರ್ಥಿಗಳು ವಾಸ ಮಾಡುತ್ತಿದ್ದ ಹಾಸ್ಟೆಲ್‌ನಲ್ಲಿ ಇತರ ವಿದ್ಯಾರ್ಥಿಗಳ ಗುಂಪು ದಾಳಿ ಮಾಡಿದೆ. ಮುಖಕ್ಕೆ ಟವಲ್‌ ಸುತ್ತಿದ್ದ ಅವರು, ಜೈ ಶ್ರೀರಾಮ್ ಘೋಷಣೆ ಕೂಗುತ್ತಾ, ಹಾಸ್ಟೆಲ್‌ಗೆ ನುಗ್ಗಿ ವಿದ್ಯಾರ್ಥಿಗಳನ್ನು ಥಳಿಸಿದೆ.  ಹಾಸ್ಟೆಲ್‌ನಲ್ಲಿ ಕಲ್ಲು ತೂರಾಟ, ಧ್ವಂಸ ಘಟನೆಯೂ ನಡೆದಿದ್ದು, ಘಟನೆಯಲ್ಲಿ  5 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮಾರ್ಚ್ 16ರ ರಾತ್ರಿ ವಿಶ್ವವಿದ್ಯಾಲಯದ ಹಾಸ್ಟೆಲ್‌ನ ಎ ಬ್ಲಾಕ್‌ನಲ್ಲಿ ಪ್ರಕರಣ ನಡೆದಿದೆ. ರಂಜಾನ್ ರಾತ್ರಿ ಎ ಬ್ಲಾಕ್‌ನಲ್ಲಿ ತಾವು ನಮಾಜ್‌ ಮಾಡುತ್ತಿದ್ದ ವೇಳೆ ಈ ಘಟನೆ ನಡೆದಿದೆ ಎಂದು ಅಫ್ಘನ್‌ ವಿದ್ಯಾರ್ಥಿಗಳು ಹೇಳಿದ್ದಾರೆ. ಈ ವೇಳೆ ಬಿ ಬ್ಲಾಕ್ ನ ಮೂವರು ವಿದ್ಯಾರ್ಥಿಗಳು ಬಂದು ಇದನ್ನು ವಿರೋಧಿಸಿ ಪ್ರತಿಭಟನೆ ನಡೆದಿದ್ದಾರೆ. ಅವರ ನಿರ್ಗಮನದ ನಂತರ, ಸುಮಾರು 200 ಜನರ ಗುಂಪು ಆಗಮಿಸಿ ಜೈ ಶ್ರೀ ರಾಮ್ ಘೋಷಣೆಗಳನ್ನು ಕೂಗುತ್ತಾ ನಮ್ಮ ಮೇಲೆ ದಾಳಿ ಮಾಡಲು ಆರಂಭಿಸಿದರು. ಕೆಲವರು ಹಾಸ್ಟೆಲ್ ಕೊಠಡಿಗಳ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕೆಲವರು ಹಾಸ್ಟೆಲ್‌ಗೆ ನುಗ್ಗಿ ಲ್ಯಾಪ್‌ಟಾಪ್‌, ಎಸಿ, ಬೀರು, ಟೇಬಲ್‌, ಬಾಗಿಲು, ಮ್ಯೂಸಿಕ್‌ ಸಿಸ್ಟಮ್‌ಗಳನ್ನು ಒಡೆದು ಹಾಕಿದ್ದಾರೆ. ಹೊರಗಡೆ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳನ್ನೂ ಧ್ವಂಸಗೊಳಿಸಲಾಗಿದೆ ಎಂದಿದ್ದಾರೆ.

ಘಟನೆಯ ವಿಡಿಯೋ ಕೂಡ ಹೊರಬಿದ್ದಿದೆ. ಘಟನೆಯ ನಂತರ ರಾಜ್ಯ ಗೃಹ ಸಚಿವ ಹರ್ಷ ಶಾಂಘ್ವಿ ಪೊಲೀಸ್ ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳ ತುರ್ತು ಸಭೆಯನ್ನು ಕರೆದಿದ್ದಾರೆ. ಇದಕ್ಕೂ ಮುನ್ನ ಕೂಡಲೇ ಕ್ರಮ ಕೈಗೊಳ್ಳುವಂತೆ ಡಿಜಿ ಮತ್ತು ಸಿಪಿಗೆ ಆದೇಶ ನೀಡಿದ್ದಾರೆ. ಘಟನೆ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಅಫ್ಘಾನಿಸ್ತಾನ, ಉಜ್ಬೇಕಿಸ್ತಾನ್, ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್, ಸಿರಿಯಾ ಮತ್ತು ಆಫ್ರಿಕನ್ ದೇಶಗಳ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಲ್ಲಿ ವಾಸಿಸುತ್ತಿದ್ದಾರೆ ಮತ್ತು ಅಧ್ಯಯನ ಮಾಡುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಪರಿಸ್ಥಿತಿ ಹೀಗಿರುತ್ತದೆ ಎಂದಾದಲ್ಲಿ ಸರ್ಕಾರ ನಮಗೇಕೆ ವೀಸಾ ನೀಡಬೇಕು? ನಾವು ಇಲ್ಲಿನ ಹಲವು ಹಬ್ಬಗಳಲ್ಲಿ ಭಾಗವಹಿಸುತ್ತೇವೆ. ಇಲ್ಲಿರುವ ಎಲ್ಲರೂ ನಮ್ಮ ಸಹೋದರರು. ಆದರೆ, ಇದನ್ನು ನಾವು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳಿದ್ದಾರೆ.

ವಿಶ್ವವಿದ್ಯಾನಿಲಯದ ಘಟನೆಯ ಕುರಿತು, ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಟ್ಯಾಗ್ ಮಾಡಿ, ಈ ದೇಶದಲ್ಲಿ ಮುಸ್ಲಿಮರು ಶಾಂತಿಯುತವಾಗಿ ನಮಾಜ್ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಕ್ರಿಶ್ಚಿಯನ್ನರ ಮೇಲೇಕೆ ಪಾಕ್‌ನಲ್ಲಿ ಆಕ್ರೋಶ..? ಹೇಗಿದೆ ಗೊತ್ತಾ ಪಾಕ್‌ನಲ್ಲಿ ಮೈನಾರಿಟಿ ಪರಿಸ್ಥಿತಿ..?

ಅಹಮದಾಬಾದ್ ಪೊಲೀಸ್ ಕಮಿಷನರ್ ಜಿಎಸ್ ಮಲ್ಲಿಕ್ ಈ ಕುರಿತಾಗಿ ಮಾತನಾಡಿದ್ದು, ಗುಜರಾತ್ ವಿಶ್ವವಿದ್ಯಾಲಯದಲ್ಲಿ ಸುಮಾರು 300 ವಿದೇಶಿ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಾರೆ. ಇವರಲ್ಲಿ ಸುಮಾರು 75 ವಿದ್ಯಾರ್ಥಿಗಳು ಎ ಬ್ಲಾಕ್ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದಾರೆ. ಮಾರ್ಚ್ 16 ರಂದು ರಾತ್ರಿ 10:30 ರ ಸುಮಾರಿಗೆ ವಿದ್ಯಾರ್ಥಿಗಳ ಗುಂಪು ನಮಾಜ್ ಮಾಡುತ್ತಿತ್ತು. ಈ ವೇಳೆ ಹೊರಗಿನಿಂದ 20-25 ಮಂದಿ ಬಂದು ಮಸೀದಿಯಲ್ಲಿ ನಮಾಜ್ ಏಕೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿ ದಾಳಿ ಮಾಡಿದ್ದಾರೆ.

ಪೊಲೀಸರ ಆತಿಥ್ಯಕ್ಕೆ ಕುಂಟುತ್ತಾ ಬಂದ ಕನ್ಹಯ್ಯ ಹಂತಕರ ಮೇಲೆ ಕೋರ್ಟ್ ಆವರಣದಲ್ಲಿ ಹಲ್ಲೆ

ಇದಾದ ನಂತರ ಎರಡೂ ಕಡೆಯಿಂದ ವಾಗ್ವಾದ ನಡೆದಿದೆ.  ಕೆಲವರು ಕಲ್ಲು ತೂರಾಟ ನಡೆಸಿ ಕೊಠಡಿಗಳನ್ನು ಧ್ವಂಸಗೊಳಿಸಿದ್ದಾರೆ. ಪೊಲೀಸರು 20-25 ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಒಬ್ಬ ವ್ಯಕ್ತಿಯನ್ನು ಗುರುತಿಸಲಾಗಿದೆ. ಕಾನೂನು ಸುವ್ಯವಸ್ಥೆ ಈಗ ನಿಯಂತ್ರಣದಲ್ಲಿದೆ. ಶ್ರೀಲಂಕಾ ಮತ್ತು ತಜಕಿಸ್ತಾನದ ಇಬ್ಬರು ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.


 

click me!