ಮತಾಂತರವಾದ ವ್ಯಕ್ತಿ ಸಮಾಧಿ ವಿಚಾರಕ್ಕೆ ಗಲಾಟೆ: ಮತಾಂತರಿಗಳ ಬೆನ್ನಟ್ಟಿ ಚರ್ಚ್‌ಗೆ ಬೆಂಕಿ ಹಚ್ಚಿದ ಬುಡಕಟ್ಟು ಜನ

Published : Dec 19, 2025, 12:29 PM IST
Burial ground Turns Into Battleground

ಸಾರಾಂಶ

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ವ್ಯಕ್ತಿಯ ಅಂತ್ಯಸಂಸ್ಕಾರದ ವಿಚಾರವಾಗಿ ಆದಿವಾಸಿ ಮತ್ತು ಕ್ರಿಶ್ಚಿಯನ್ ಸಮುದಾಯಗಳ ನಡುವೆ ತೀವ್ರ ಹಿಂಸಾಚಾರ ನಡೆದಿದೆ. ಈ ಘರ್ಷಣೆಯಲ್ಲಿ ಚರ್ಚ್‌ಗಳಿಗೆ ಬೆಂಕಿ ಹಚ್ಚಲಾಗಿದ್ದು, ಹಲವರು ಗಾಯಗೊಂಡಿದ್ದಾರೆ ಮತ್ತು ಪರಿಸ್ಥಿತಿ ನಿಯಂತ್ರಿಸಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 

ಕ್ರಿಶ್ಚಿಯನ್‌ಗೆ ಮತಾಂತರವಾದವರು ಹಾಗೂ ಮೂಲ ಆದಿವಾಸಿಗಳ ಮಧ್ಯೆ ಘರ್ಷಣೆ:

ಭೋಪಾಲ್: ಕ್ರೈಸ್ತ ಸಮುದಾಯಕ್ಕೆ ಮತಾಂತರವಾದವರು ಹಾಗೂ ಮೂಲ ಆದಿವಾಸಿಗಳ ಮಧ್ಯೆ ಅಂತ್ಯಸಂಸ್ಕಾರದ ವಿಚಾರಕ್ಕೆ ಗಲಾಟೆಯೊಂದು ಭುಗಿಲೆದ್ದು ಹಿಂಸೆಗೆ ತಿರುಗಿದಂತಹ ಘಟನೆ ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯಲ್ಲಿ ನಡೆದಿದೆ. ಎರಡು ಗುಂಪುಗಳ ನಡುವಿನ ಹಿಂಸಾಚಾರದಲ್ಲಿ ಪೊಲೀಸರು ಪತ್ರಕರ್ತರು ಸೇರಿದಂತೆ ಹಲವರು ಗಾಯಗೊಂಡಿದ್ದು, ಗುಂಪನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ. ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡ ವ್ಯಕ್ತಿಯೊಬ್ಬರ ಅಂತ್ಯಸಂಸ್ಕಾರದ ವೇಳೆ ಆದಿವಾಸಿ ಬುಡಕಟ್ಟು ಸಮುದಾಯದ ಜನರು ಮತ್ತು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡ ಗುಂಪಿನ ಮಧ್ಯೆ ಈ ಗಲಾಟೆ ನಡೆದಿದೆ. ಗಲಾಟೆಯ ಹಿನ್ನೆಲೆ ಕಾಂಕೇರ್‌ನ ಅಮಾಬೇಡಾದ ಬಡೆ ತೆವ್ಡಾ ಗ್ರಾಮದಲ್ಲಿ ನಿಷೇಧಾಜ್ಞೆ ಹೇರಲಾಗಿದೆ.

ಗ್ರಾಮದ ಸರಪಂಚ್ ರಾಜ್ಮಾನ್ ಸಲಾಂ ಅವರ ತಂದೆ ಚಮ್ರಾ ರಾಮ್ ಸಾವಿಗೀಡಾಗಿದ್ದು ಅವರ ಸಮಾಧಿ ನಿರ್ಮಾಣಕ್ಕೆ ಬುಡಕಟ್ಟು ಸಮುದಾಯದ ಸದಸ್ಯರು ವಿರೋಧ ವ್ಯಕ್ತಪಡಿಸಿದಾಗ ಹಿಂಸಾಚಾರ ಭುಗಿಲೆದ್ದಿದೆ. ಚಮ್ರಾ ರಾಮ್ ಅವರ ಕುಟುಂಬವು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿತ್ತು. ಇದೇ ಕಾರಣಕ್ಕೆ ಅವರ ಸಮಾಧಿ ವಿಚಾರಕ್ಕೆ ಬುಡಕಟ್ಟು ಸಮುದಾಯ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದು, ನಂತರ ಇದು ಶೀಘ್ರದಲ್ಲೇ ಹಿಂಸೆಗೆ ತಿರುಗಿದೆ.

ಇದನ್ನೂ ಓದಿ: ಭಾರತ ವಿರೋಧಿ ತೀವ್ರಗಾಮಿ ನಾಯಕನ ಹತ್ಯೆಯ ನಂತರ ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ

ಪ್ರತ್ಯಕ್ಷದರ್ಶಿಗಳು ಹೇಳುವಂತೆ, ಕೋಲುಗಳಿಂದ ಶಸ್ತ್ರಸಜ್ಜಿತವಾಗಿದ್ದ ಆದಿವಾಸಿ ಬುಡಕಟ್ಟು ಸಮುದಾಯದ ಜನರು ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡ ಸಮುದಾಯದ ಸದಸ್ಯರನ್ನು ಬೆನ್ನಟ್ಟಿದ್ದಾರೆ. ಇದಕ್ಕೆ ಪ್ರತೀಕಾರವಾಗಿ, ಕ್ರಿಶ್ಚಿಯನ್ನರು ಬುಡಕಟ್ಟು ಜನಾಂಗದವರನ್ನು ಬೆನ್ನಟ್ಟಿ ಹಲ್ಲೆ ಮಾಡಿದ್ದಾರೆ. ಇದರಿಂದ ಪರಿಸ್ಥಿತಿ ನಂತರ ತೀವ್ರ ವಿಕೋಪಕ್ಕೆ ಹೋಗಿದ್ದು, ಗ್ರಾಮದ ಸರಪಂಚ್ ಮನೆಯನ್ನು ಪ್ರತಿಭಟನಾಕಾರರು ಧ್ವಂಸಗೊಳಿಸಿ ನಂತರ ಗ್ರಾಮದಲ್ಲಿದ್ದ ಚರ್ಚ್‌ಗೆ ಬೆಂಕಿ ಹಚ್ಚಿದ್ದಾರೆ.

ಈ ಹಿಂಸಾಚಾರ ಅಲ್ಲಿಗೆ ನಿಲ್ಲಲಿಲ್ಲ. 3000 ಕ್ಕೂ ಹೆಚ್ಚು ಜನರ ಗುಂಪೊಂದು ಅಮಾಬೇಡಾಗೆ ಮೆರವಣಿಗೆ ನಡೆಸಿ ಅಲ್ಲಿ ಮತ್ತೊಂದು ಚರ್ಚ್‌ಗೆ ಬೆಂಕಿ ಹಚ್ಚಿದ್ದಾರೆ. ನಂತರ ಈ ಆದಿವಾಸಿ ಜನರ ಗುಂಪು ಮೂರನೇ ಚರ್ಚ್ ಕಡೆಗೆ ಚಲಿಸಲು ಪ್ರಾರಂಭಿಸಿದೆ. ಇದನ್ನರಿತ ಪೊಲೀಸರು ಮಧ್ಯಪ್ರವೇಶಿಸಿದ್ದಾರೆ. ಭಾರಿ ಪೊಲೀಸರ ನಿಯೋಜನೆಯ ನಂತರವೂ ಘರ್ಷಣೆಗಳು ಮುಂದುವರಿದಂತೆ ಗುಂಪನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್‌ ಮಾಡಿದ್ದಾರೆ. ಘಟನೆಯಲ್ಲಿ ಈ ಹಿಂಸಾಚಾರದ ಬಗ್ಗೆ ವರದಿ ಮಾಡ್ತಿದ್ದ ಹಲವು ಪತ್ರಕರ್ತರು ಹಾಗೂ ಗ್ರಾಮಸ್ಥರು ಕೂಡ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ಮೋದಿ ಓಮನ್ ಭೇಟಿ.. ಪಾಕ್ ಚೀನಾ ಪತರಗುಟ್ಟಿದ್ದೇಕೆ? ಶತಕೋಟಿ ಒಡೆಯನ ಸಾಮ್ರಾಜ್ಯ ಹೇಗಿದೆ ಗೊತ್ತಾ..!

ಎಎಸ್ಪಿ ಅಂತಘರ್ ಆಶಿಶ್ ಬನ್ಸೋದ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನೆಯಲ್ಲಿ ಗಾಯಗೊಂಡಿದ್ದಾರೆ. ಎರಡು ಸಮುದಾಯಗಳ ನಡುವೆ ಹಿಂಸಾಚಾರ ಭುಗಿಲೆದ್ದ ಹಿನ್ನೆಲೆ ಗ್ರಾಮದಲ್ಲಿ ಆಡಳಿತವು ದೊಡ್ಡ ಸಭೆಗಳನ್ನು ನಿಷೇಧಿಸಿ ಗ್ರಾಮವನ್ನು ಸೀಲ್ ಮಾಡಿದೆ. ಕ್ರಿಶ್ಚಿಯನ್ ಸಮುದಾಯಕ್ಕೆ ಅವರ ಕುಟುಂಬ ಮತಾಂತರಗೊಂಡಿದ್ದರಿಂದ ಸರಪಂಚ್ ಅವರ ತಂದೆಯ ಅಂತ್ಯಕ್ರಿಯೆಯನ್ನು ಅದೇ ಸ್ಥಳದಲ್ಲಿ ನಡೆಸುವುದರಿಂದ ದೀರ್ಘಕಾಲದಿಂದ ಬಂದಿರುವ ಬುಡಕಟ್ಟು ಪದ್ಧತಿಗಳು ಮತ್ತು ಆಡಳಿತಾತ್ಮಕ ಮಾನದಂಡಗಳನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಬುಡಕಟ್ಟು ಸಮುದಾಯದ ಪ್ರಕಾರ ಸಮಾಧಿಗಳು ಗೊತ್ತುಪಡಿಸಿದ ಸ್ಥಳಗಳಲ್ಲಿ ಮತ್ತು ಸಮುದಾಯದ ಒಪ್ಪಿಗೆಯೊಂದಿಗೆ ಮಾತ್ರ ನಡೆಯಬೇಕು.

ಎರಡು ದಿನಗಳ ಕಾಲ ಗ್ರಾಮಸ್ಥರು ಸರಪಂಚ್‌ ಶವವನ್ನು ಹೊರತೆಗೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಹೀಗಾಗಿ ಗುರುವಾರ, ಜಂಟಿ ಪೊಲೀಸ್ ಆಡಳಿತ ತಂಡವು ಬಿಗಿ ಭದ್ರತೆಯಲ್ಲಿ ಶವವನ್ನು ಹೊರತೆಗೆದರು. ನಂತರ ಶವವನ್ನು ಜಿಲ್ಲೆಯಿಂದ ಹೊರಗೆ ತೆಗೆದುಕೊಂಡು ಹೋಗಿ ರಾಯ್‌ಪುರಕ್ಕೆ ಕಳುಹಿಸಲಾಗಿದೆ.

ಆಡಳಿತಾತ್ಮಕ ಅನುಮತಿಯಿಲ್ಲದೆ ಮತಾಂತರಗೊಂಡ ವ್ಯಕ್ತಿಗಳ ಸಮಾಧಿ ಮಾಡಲು ಅವಕಾಶ ನೀಡಬಾರದು ಎಂದು ಹಿಂದೂ ಸಂಘಟನೆಗಳು ಸುತ್ತಮುತ್ತಲಿನ ಹಳ್ಳಿಗಳಿಗೆ ಮನವಿ ಮಾಡಿವೆ. ಕಾಂಕೇರ್ ಗ್ರಾಮದಲ್ಲಿ ನಡೆದ ಈ ಹಿಂಸಾಚಾರವು ಬುಡಕಟ್ಟು ಸಮುದಾಯದೊಳಗೆ ಕೆಲವರು ಕ್ರಿಶ್ಚಿಯನ್‌ ಸಮುದಾಯಕ್ಕೆ ಮತಾಂತರಗೊಳ್ಳುತ್ತಿರುವುದರಿಂದ ಛತ್ತೀಸ್‌ಗಢದ ಬುಡಕಟ್ಟು ಸಮುದಾಯದಲ್ಲಿ ಮೂಲ ಹಾಗೂ ಮತಾಂತರಗೊಂಡವರ ನಡುವೆ ತೆರೆದುಕೊಳ್ಳುತ್ತಿರುವ ವ್ಯಾಪಕ ಬಿಕ್ಕಟ್ಟನ್ನು ಪ್ರತಿಬಿಂಬಿಸುತ್ತಿದೆ.

ಈ ವರ್ಷದ ಆರಂಭದಲ್ಲಿ, ಬಸ್ತಾರ್‌ನ ಪಾದ್ರಿ ಸುಭಾಷ್ ಬಾಘೇಲ್ ಅವರ ಸಮಾಧಿ ವಿಷಯವು ಕೂಡ ತೀವ್ರ ಚರ್ಚೆಗೆ ಕಾರಣವಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಕ್ರಿಶ್ಚಿಯನ್ ಸಮುದಾಯಕ್ಕೆ ಮತಾಂತರಗೊಂಡ ಅವರನ್ನು ಗ್ರಾಮಸ್ಥರು ಪೂರ್ವಜರ ಗ್ರಾಮದ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲು ನಿರಾಕರಿಸಿದ್ದರಿಂದ ಅವರ ದೇಹವನ್ನು ಮೂರು ವಾರಗಳ ಕಾಲ ಫ್ರೀಜರ್‌ನಲ್ಲಿ ಇಡಲಾಗಿತ್ತು. ಆದರೆ ಈ ಪ್ರಕರಣದಲ್ಲಿ ಸ್ವತಃ ಸುಪ್ರೀಂ ಕೋರ್ಟೆ ವಿಭಿನ್ನ ತೀರ್ಪು ನೀಡಿತು. ಒಬ್ಬ ನ್ಯಾಯಾಧೀಶರು ಈ ನಿರ್ಬಂಧವನ್ನು ತಾರತಮ್ಯ ಎಂದು ಕರೆದರೆ, ಇನ್ನೊಬ್ಬ ನ್ಯಾಯಾಧೀಶರು ಸಮಾಧಿ ಸ್ಥಳಗಳನ್ನು ಅನಿಯಂತ್ರಿತವಾಗಿ ಆಯ್ಕೆ ಮಾಡಲು ಸಾಧ್ಯವಿಲ್ಲ ಮತ್ತು ಅದು ಕಾನೂನು ಮತ್ತು ಸಾರ್ವಜನಿಕ ಸುವ್ಯವಸ್ಥೆಯನ್ನು ಅನುಸರಿಸಬೇಕು ಎಂದು ತೀರ್ಪು ನೀಡಿದರು.

ಆ ಪ್ರಕರಣವು PESA (1996ರ ಪರಿಶಿಷ್ಟ ಪ್ರದೇಶಗಳಿಗೆ ಪಂಚಾಯತ್ ವಿಸ್ತರಣೆ ಕಾಯ್ದೆಯ ನಿಬಂಧನೆಗಳು) ಕಾಯ್ದೆಯಿಂದ ನಿಯಂತ್ರಿಸಲ್ಪಡುವ ಪ್ರದೇಶಗಳಲ್ಲಿ ಸಾಂವಿಧಾನಿಕ ಹಕ್ಕುಗಳು ಮತ್ತು ಮೂಲಭೂತ ವಾಸ್ತವಗಳ ನಡುವಿನ ಹೆಚ್ಚುತ್ತಿರುವ ಅಂತರವನ್ನು ಬೆಳಕಿಗೆ ತರುತ್ತಿದೆ. ಅಲ್ಲಿ ಗ್ರಾಮಸಭೆಗಳು ಬುಡಕಟ್ಟು ಸಂಪ್ರದಾಯಗಳನ್ನು ರಕ್ಷಿಸಲು ಗಮನಾರ್ಹ ಅಧಿಕಾರವನ್ನು ಹೊಂದಿವೆ.

ಕಾಂಕೇರ್ ಜಿಲ್ಲೆಯೊಂದರಲ್ಲೇ 14 ಹಳ್ಳಿಗಳಿಗೆ ಪಾದ್ರಿಗಳು ಮತ್ತು ಪುರೋಹಿತರನ್ನು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ, ಅಲ್ಲಿ ಬುಡಕಟ್ಟು ಸಮುದಾಯವನ್ನು ರಕ್ಷಿಸುವ ಐದನೇ ವೇಳಾಪಟ್ಟಿ ಮತ್ತು ಪೆಸಾ ಕಾಯ್ದೆಯನ್ನು ಉಲ್ಲೇಖಿಸುವ ಫಲಕಗಳಿವೆ. ಬುಡಕಟ್ಟು ಗುರುತು ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಇದು ಅಗತ್ಯ ಎಂದು ಗ್ರಾಮಸ್ಥರು ವಾದಿಸುತ್ತಾರೆ. ಆದರೆ ಮತಾಂತರವಾದ ಕ್ರಿಶ್ಚಿಯನ್ ಕುಟುಂಬಗಳು, ತಮ್ಮನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗುತ್ತಿದೆ ಎಂದು ಹೇಳುತ್ತಿದ್ದಾರೆ, ಸಂಬಂಧಿಕರು ಸಹ ಅವರನ್ನು ಭೇಟಿ ಮಾಡಲು ಹೆದರುತ್ತಾರೆ ಎನ್ನುತ್ತಿದ್ದಾರೆ. ಕಳೆದ ಎರಡು ವರ್ಷಗಳಲ್ಲಿ ಛತ್ತೀಸ್‌ಗಢದಲ್ಲಿ ವಿಶೇಷವಾಗಿ ಬಸ್ತಾರ್ ಮತ್ತು ಕಾಂಕೇರ್‌ನಲ್ಲಿ 350 ಕ್ಕೂ ಹೆಚ್ಚು ಸಮಾಧಿ ಸಂಬಂಧಿತ ವಿವಾದಗಳು ವರದಿಯಾಗಿವೆ. ಇದು ಕೇವಲ ಸಮಾಧಿಗೆ ಸಂಬಂಧಿಸಿದ ವಿಚಾರವಲ್ಲ ಎಂಬುದು ಗಮನಿಸಬೇಕಾದ ವಿಚಾರ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಒಡಿಶಾ ಶಾಸಕರ ವೇತನ ಮೂರು ಪಟ್ಟು ಹೆಚ್ಚಳ, ನಿರ್ಧಾರ ಮರುಪರಿಶೀಲಿಸುವಂತೆ ಬಿಜೆಪಿ ಶಾಸಕರಿಂದಲೇ ಆಗ್ರಹ!
ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ: ಶ್ರೀ ಶ್ರೀ ರವಿಶಂಕರ್ ಗುರೂಜಿ