
ಭೋಪಾಲ್ (ಜೂ.16): ವಿವಾದಾತ್ಮಕ ಹೇಳಿಕೆಗಳಿಂದ ದೂರವಿರಿ. ಮಾತಿನ ಮೇಲೆ ನಿಗಾ ಕಾಯ್ದುಕೊಳ್ಳಿ, ಕೆಲವೊಮ್ಮೆ ಮೌನವಾಗಿರುವುದೇ ಬುದ್ಧಿವಂತಿಕೆ. ತಪ್ಪುಗಳಾಗುವುದು ಸಹಜ. ಆ ತಪ್ಪುಗಳು ಪುನರಾವರ್ತನೆ ಆಗಬಾರದು ಎಂದು ಬಿಜೆಪಿ ನಾಯಕರಿಗೆ ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಭೂಪೇಂದ್ರ ಯಾದವ್ ಅವರು ಕಿವಿಮಾತು ಹೇಳಿದ್ದಾರೆ.
ಮಧ್ಯಪ್ರದೇಶದ ನರ್ಮಾದಾಪುರಂನ ಪಚ್‌ಮಾರ್ಹಿಯಲ್ಲಿ ನಡೆಯುತ್ತಿರುವ ಮೂರು ದಿನಗಳ ಬಿಜೆಪಿ ತರಬೇತಿ ಶಿಬಿರದಲ್ಲಿ ಶನಿವಾರ ಪಕ್ಷದ ನಾಯಕರಿಗೆ ಶಿಸ್ತಿನ ಪಾಠ ಮಾಡಿದರು.
ಆಪರೇಷನ್ ಸಿಂದೂರದ ಸಂದರ್ಭದಲ್ಲಿ ಕರ್ನಲ್ ಸೋಫಿಯಾ ಖುರೇಶಿ ಕುರಿತ ಮಧ್ಯಪ್ರದೇಶ ಸಚಿವ ವಿಜಯ್ ಶಾ ಅವರ ಹೇಳಿಕೆ ರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಕೊನೆಗೆ ಬಿಜೆಪಿ ನಾಯಕ ಇದಕ್ಕಾಗಿ ಕ್ಷಮೆ ಕೇಳಿದ ಬೆನ್ನಲ್ಲೇ ಬಿಜೆಪಿ ಹಿರಿಯ ಮುಖಂಡರು ಇಂಥದ್ದೊಂದು ಎಚ್ಚರಿಕೆಯ ಕಿವಿಮಾತು ಹೇಳಿದ್ದಾರೆ.
ತಪ್ಪುಗಳು ಆಗುತ್ತವೆ. ಆದರೆ ಅವರು ಪುನರಾವರ್ತನೆ ಆಗಬಾರದು. ನಾವು ಎಷ್ಟೇ ಹಿರಿಯರು, ಅನುಭವಿಗಳೇ ಆಗಿರಬಹುದು. ಆದರೆ ಯಾವತ್ತಿಗೂ ವಿದ್ಯಾರ್ಥಿಯಾಗಿಯೇ ಉಳಿಯಬೇಕು ಎಂದು ಪರೋಕ್ಷವಾಗಿ ವಿಜಯ್ ಶಾ ಅವರ ಪ್ರಕರಣ ಮುಂದಿಟ್ಟುಕೊಂಡು ಅಮಿತ್ ಶಾ ಸಲಹೆ ನೀಡಿದರು.
ಇದೇ ವೇಳೆ ಭುಪೇಂದ್ರ ಯಾದವ್ ಅವರು, ಅಳತೆ ಮೀರಿದ ಪ್ರತಿಕ್ರಿಯೆ ಮತ್ತು ನಿಗಾ ಇಲ್ಲದ ಮಾತು ಪಕ್ಷದ ಘನತೆಗೆ ಗಂಭೀರ ಹಾನಿ ಮಾಡುತ್ತದೆ. ಪ್ರತಿಯೊಂದಕ್ಕೂ ಪ್ರತಿಕ್ರಿಯಿಸುವುದರಿಂದಲೇ ಶೇ.90ರಷ್ಟು ರಾಜಕೀಯ ಹಾನಿಯಾಗುತ್ತದೆ. ಕೆಲವೊಮ್ಮೆ ಸುಮ್ಮನಿರುವುದೇ ಬುದ್ಧಿವಂತಿಕೆ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ