ಬೆಂಗಳೂರಿನಿಂದ ಅಯೋಧ್ಯೆಗೆ ನೇರ ವಿಮಾನ ಸೇವೆ ಪ್ರಾರಂಭ

By Kannadaprabha NewsFirst Published Jan 18, 2024, 11:01 AM IST
Highlights

ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ನಡುವೆಯೇ ಬುಧವಾರ ಬೆಂಗಳೂರಿನಿಂದ ಅಯೋಧ್ಯೆಗೆ ಏರ್‌ ಇಂಡಿಯಾ, ನೇರ ವಿಮಾನ ಹಾರಾಟ ಆರಂಭಿಸಿದೆ.

ಲಖನೌ: ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿರುವ ನಡುವೆಯೇ ಬುಧವಾರ ಬೆಂಗಳೂರಿನಿಂದ ಅಯೋಧ್ಯೆಗೆ ಏರ್‌ ಇಂಡಿಯಾ, ನೇರ ವಿಮಾನ ಹಾರಾಟ ಆರಂಭಿಸಿದೆ. ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಾಯುಸೇವೆಗೆ ಹಸಿರು ನಿಶಾನೆ ತೋರಿಸಿದರು.

ಏರ್‌ ಇಂಡಿಯಾ ವಿಮಾನವು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಡಿ.30ರಂದು ಅಯೋಧ್ಯೆಯಲ್ಲಿ ಉದ್ಘಾಟನೆಯಾಗಿದ್ದ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಯೋಧ್ಯಾ ಧಾಮಕ್ಕೆ ಸೇವೆ ಒದಗಿಸಲಿದೆ. ಇದರ ಜೊತೆಗೆ ಅಯೋಧ್ಯೆಯಿಂದ ಕೊಲ್ಕತಾಗೂ ವಿಮಾನ ಸೇವೆ ಬುಧವಾರದಿಂದ ಪ್ರಾರಂಭವಾಗಿದೆ. ಇದಕ್ಕೂ ಮೊದಲು ಅಯೋಧ್ಯೆಯಿಂದ ದೆಹಲಿ, ಮುಂಬೈ ಮತ್ತು ಅಹಮದಾಬಾದ್‌ಗೆ ವಿಮಾನ ಸೇವೆ ಆರಂಭವಾಗಿತ್ತು.

ಅಯೋಧ್ಯೆಯಲ್ಲಿ ಪ್ರಾಣಪ್ರತಿಷ್ಠಾಪನೆಗೆ ಮೋದಿಯೇ ಯಜಮಾನ

ವಾರಾಣಸಿ: ಅಯೋಧ್ಯೆ ರಾಮಮಂದಿರದಲ್ಲಿ ಜ.22ರಂದು ನಡೆಯಲಿರುವ ರಾಮಮಂದಿರದ ಪ್ರಾಣ ಪ್ರತಿಷ್ಠಾಪನೆಯ ಕಾರ್ಯಕ್ರಮದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರೇ ‘ಯಜಮಾನತ್ವ’ ವಹಿಸಿ ಭಾಗಿಯಾಗಲಿದ್ದಾರೆ ಎಂದು ಪೂಜಾವಿಧಿಗಳ ಮುಖ್ಯ ಉಸ್ತುವಾರಿಯಾಗಿರುವ ಪಂಡಿತ್‌ ಲಕ್ಷ್ಮೀಕಾಂತ್‌ ದೀಕ್ಷಿತ್‌ ಸ್ಪಷ್ಟಪಡಿಸಿದ್ದಾರೆ.

ಪ್ರಾಣಪ್ರತಿಷ್ಠಾಪನೆಯ ಪೂಜಾವಿಧಿಗಳು ಆರಂಭದ ಮೊದಲ ದಿನದ ಪೂಜಾ ಕಾರ್ಯಕ್ರಮಗಳಲ್ಲಿ ರಾಮಮಂದಿರ ನಿರ್ಮಾಣ ಟ್ರಸ್ಟ್‌ನ ಸದಸ್ಯರಾದ ಅನಿಲ್‌ ಮಿಶ್ರಾ ಹಾಗೂ ಅವರ ಪತ್ನಿ ಉಷಾ ಮಿಶ್ರಾ ಅವರು ಯಜಮಾನತ್ವ ವಹಿಸಿದ್ದರು. ಹೀಗಾಗಿ ಜ.22ರ ಕಾರ್ಯಕ್ರಮದ ಯಜಮಾನರ ಕುರಿತು ಪ್ರಶ್ನೆಗಳು ಎದ್ದಿದ್ದವು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿ ಸ್ಪಷ್ಟನೆ ನೀಡಿದ ಪಂ. ಲಕ್ಷ್ಮೀಕಾಂತ್‌ ದೀಕ್ಷಿತ್‌, ಪ್ರಧಾನಿಯವರು ಸುದೀರ್ಘ ಕಾಲ ಆಯೋಧ್ಯೆ ಪೂಜಾ ವಿಧಿಗಳಲ್ಲಿ ಭಾಗಿಯಾಗುವುದು ಸಾಧ್ಯವಿಲ್ಲದ ಕಾರಣ ಆರಂಭಿಕ ದಿನಗಳಲ್ಲಿ ಬೇರೆ ಪ್ರಮುಖರನ್ನು ಯಜಮಾನರಾಗಿ ಕೂರಿಸಲಾಗುತ್ತದೆ. ಆದರೆ ಜ.22ರಂದು ಸ್ವತಃ ಪ್ರಧಾನಿಯವರೇ ಯಜಮಾನರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಶಿಯ ಪಂ.ಲಕ್ಷ್ಮೀಕಾಂತ್‌ ದೀಕ್ಷಿತ್‌ ಹಾಗೂ ಗಣೇಶ್ವರ ಶಾಸ್ತ್ರಿ ದ್ರಾವಿಡ್‌ ಅವರು ಮಂದಿರದ ಪ್ರಾಣಪ್ರತಿಷ್ಠಾಪನೆಗೆ ಮುಹೂರ್ತ ನಿಗದಿ ಮಾಡಿದ್ದಾರೆ. ಜೊತೆಗೆ ಎಲ್ಲಾ ಪೂಜಾ ವಿಧಿವಿಧಾನಗಳು ಅವರ ನೇತೃತ್ವದಲ್ಲೇ ನಡೆಯಲಿವೆ.

22 ಮುಂಜಾನೆ ಬ್ರಹ್ಮ ಮುಹೂರ್ತದಲ್ಲಿ ಸರಯೂ ನದಿಯಲ್ಲಿ ಸ್ನಾನ

ಅಯೊಧ್ಯೆ: ಜ.22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನಾ ಸಮಾರಂಭವನ್ನು ನಡೆಸಿಕೊಡಲಿರುವ ಪ್ರಧಾನಿ ನರೇಂದ್ರ ಮೋದಿ, ಜ.21ರಂದೇ ಅಯೋಧ್ಯೆಗೆ ಆಗಮಿಸಲಿದ್ದಾರೆ. ಈ ಮೊದಲು ಜ.22ರ ಮುಂಜಾನೆ 11 ಗಂಟೆ ವೇಳೆ ಮೋದಿ ಅಯೋಧ್ಯೆಗೆ ಆಗಮಿಸುವ ಕಾರ್ಯಕ್ರಮವನ್ನು ನಿಗದಿ ಮಾಡಲಾಗಿತ್ತು. ಆದರೆ ಉತ್ತರ ಭಾರತದಲ್ಲಿ ಪ್ರತಿಕೂಲ ಹವಾಮಾನ ಇರುವ ಕಾರಣ ವಿಮಾನ ವಿಳಂಬ ಆಗಬಹುದಾಗಿದೆ. ಹೀಗಾಗಿ 1 ದಿನ ಮುಂಚಿತವಾಗಿಯೇ ಮೋದಿ ಆಗಮಿಸಲಿದ್ದು, ಜ.21ರಂದು ಅಯೋಧ್ಯೆಯಲ್ಲಿ ವಾಸ್ತವ್ಯ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜ.22ಕ್ಕೆ ಮೋದಿಯಿಂದ ಪ್ರಾಣ ಪ್ರತಿಷ್ಠಾಪನೆ

ಇನ್ನು ಜ.21ರಂದು ಅಯೋಧ್ಯೆಗೆ ಆಗಮಿಸುವ ಮೋದಿ, ಜ.22ರಂದು ಮುಂಜಾನೆ ಬ್ರಹ್ಮಿ ಮುಹೂರ್ತದಲ್ಲಿ ಅಯೋಧ್ಯೆಯಲ್ಲಿರುವ ಸರಯೂ ನದಿಯಲ್ಲಿ ಪವಿತ್ರ ಸ್ನಾನ ಮಾಡಲಿದ್ದಾರೆ. ಇದಾದ ಬಳಿಕ ಮೋದಿ, ಕಳಸದಲ್ಲಿ ಸರಯೂ ನದಿ ನೀರು ತೆಗೆದುಕೊಂಡು, ಮಂದಿರದ ಗರ್ಭಗುಡಿಗೆ ಹೋಗಲಿದ್ದಾರೆ. ಬಳಿಕ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ಮುಖ್ಯ ಯಜಮಾನರಾಗಿ ಕಾರ್ಯಕ್ರಮ ನೆರವೇರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

click me!