ಸುಂಕ ಭಾರಿ ಕಟ್‌ : ಆದ್ರೂ ಪೆಟ್ರೋಲ್‌ ದರ ಇಳಿಯಲ್ಲ- ಏರೋದೂ ಇಲ್ಲ

Kannadaprabha News   | Kannada Prabha
Published : Mar 28, 2026, 02:54 AM IST
 india cuts excise duty on petrol diesel

ಸಾರಾಂಶ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿರುವ ತೈಲ ದರದ ಬಿಸಿ ತೈಲ ಕಂಪನಿಗಳಿಗೆ ತಟ್ಟುವುದನ್ನು ತಡೆಯಲು ಕೇಂದ್ರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಪೆಟ್ರೋಲ್‌, ಡೀಸೆಲ್‌ ಮೇಲೆ ವಿಧಿಸುತ್ತಿರುವ ‘ವಿಶೇಷ ಹೆಚ್ಚುವರಿ ಅಬಕಾರಿ ಸುಂಕ’ವನ್ನ ಲೀಟರ್‌ಗೆ ತಲಾ 10 ರು.ನಷ್ಟು ಕಡಿತಗೊಳಿಸಿದೆ.

ನವದೆಹಲಿ : ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿರುವ ತೈಲ ದರದ ಬಿಸಿ ತೈಲ ಕಂಪನಿಗಳಿಗೆ ತಟ್ಟುವುದನ್ನು ತಡೆಯಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲೆ ವಿಧಿಸುತ್ತಿರುವ ‘ವಿಶೇಷ ಹೆಚ್ಚುವರಿ ಅಬಕಾರಿ ಸುಂಕ’ವನ್ನು ಪ್ರತಿ ಲೀಟರ್‌ಗೆ ತಲಾ 10 ರು.ನಷ್ಟು ಕಡಿತಗೊಳಿಸಿದೆ.

ವಿಶೇಷ ಹೆಚ್ಚುವರಿ ಅಬಕಾರಿ ಸುಂಕ

‘ವಿಶೇಷ ಹೆಚ್ಚುವರಿ ಅಬಕಾರಿ ಸುಂಕ’ವು ತೈಲ ಮಾರುಕಟ್ಟೆ ಕಂಪನಿಗಳು ಸರ್ಕಾರಕ್ಕೆ ಪಾವತಿಸುವ ತೆರಿಗೆಯಾಗಿದೆ. ಆ ದರವು ಈಗ ಇಳಿದಿದೆ. ಹೀಗಾಗಿ ಇದರಿಂದಾಗಿ ಬಂಕ್‌ಗಳಲ್ಲಿನ ದರ ಇಳಿಯುವುದಿಲ್ಲ ಅಥವಾ ಏರುವುದೂ ಇಲ್ಲ. ಇಳಿಕೆಯ ನೇರ ಲಾಭವು ಗ್ರಾಹಕರ ಬದಲು, ತೈಲ ಮಾರಾಟ ಸಂಸ್ಥೆಗಳಿಗೆ ಸಿಗಲಿದೆ. ಅಂದರೆ ಇಳಿಕೆಯಾದ ಸುಂಕದ ಮೊತ್ತವನ್ನು ತೈಲ ಕಂಪನಿಗಳು ಗರಿಷ್ಠ ಮಾರಾಟ ದರದಲ್ಲೇ ಸರಿದೂಗಿಸುತ್ತವೆ.

ವರ್ಷವೊಂದರಲ್ಲಿ ದೇಶದಲ್ಲಿ 17,500 ಕೋಟಿ ಲೀಟರ್‌ ಪೆಟ್ರೋಲ್‌ ಹಾಗೂ ಡೀಸೆಲ್‌ ಮಾರಾಟವಾಗುತ್ತಿದ್ದು, ಈ ಸುಂಕ ಕಡಿತದ ನಿರ್ಧಾರದಿಂದ ಸರ್ಕಾರಕ್ಕೆ ವಾರ್ಷಿಕ 1.75 ಲಕ್ಷ ಕೋಟಿ ರು. ಆದಾಯ ನಷ್ಟ ಆಗಲಿದೆ ಎಂದು ಅಂದಾಜಿಸಲಾಗಿದೆ.ಎಷ್ಟಾಗಲಿದೆ ಸುಂಕ?:ಕೇಂದ್ರದ ಈ ನಿರ್ಧಾರದಿಂದ ಪ್ರತಿ ಲೀಟರ್‌ ಪೆಟ್ರೋಲ್‌ ಮೇಲೆ ಈವರೆಗೆ ವಿಧಿಸಲಾಗುತ್ತಿದ್ದ 13 ರು. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ 3 ರು.ಗೆ ಹಾಗೂ ಡೀಸೆಲ್‌ ಮೇಲೆ ವಿಧಿಸಲಾಗುತ್ತಿದ್ದ 10 ರು. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಇನ್ನು ಶೂನ್ಯಕ್ಕಿಳಿಯಲಿದೆ.ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ 1 ತಿಂಗಳಲ್ಲಿ 30 ಡಾಲರ್‌ನಷ್ಟು ಏರಿಕೆಯಾಗಿದ್ದರೂ ದೇಶದಲ್ಲಿ ಕಡಿಮೆ ದರದಲ್ಲೇ ಪೆಟ್ರೋಲ್‌, ಡೀಸೆಲ್‌ ಅನ್ನು ತೈಲ ಕಂಪನಿಗಳು ಮಾರಾಟ ಮಾಡುತ್ತಿವೆ. ಇದರಿಂದ ತೈಲ ಮಾರುಕಟ್ಟೆ ಕಂಪನಿಗಳಿಗೆ ಭಾರೀ ನಷ್ಟ ಆಗುತ್ತಿತ್ತು. ಈ ನಷ್ಟ ಸರಿದೂಗಿಸಲು ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ.

ಇನ್ನು ಸುಂಕದ ಪ್ರಮಾಣ ಎಷ್ಟು?:

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಪೆಟ್ರೋಲ್‌ ಮೇಲಿನ ಒಟ್ಟಾರೆ ಅಬಕಾರಿ ಸುಂಕ ಈ ಮುಂಚಿನ 21.90 ರು.ನಿಂದ 11.9 ರು.ಗೆ ಇಳಿಯಲಿದೆ. ಇದರಲ್ಲಿ 1.40 ರು. ಮೂಲ ಅಬಕಾರಿ ಸುಂಕ, 3 ರು. ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಮತ್ತು 2.50 ಕೃಷಿ ಮೂಲಸೌಲಭ್ಯ ಮತ್ತು ಅಭಿವೃದ್ಧಿ ಸುಂಕ, 5 ರು. ರಸ್ತೆ ಮತ್ತು ಮೂಲಸೌಲಭ್ಯ ಸುಂಕ ಸೇರಿದೆ.

ಇನ್ನು ಡೀಸೆಲ್‌ ಮೇಲಿನ ಸುಂಕ ಪ್ರತಿ ಲೀಟರ್‌ಗೆ 17.80 ರು.ನಿಂದ 7.80 ರು.ಗೆ ಇಳಿಕೆಯಾಗಲಿದೆ. ಇದರಲ್ಲಿ 1.80 ರು. ಮೂಲ ಅಬಕಾರಿ ಸುಂಕ, 4 ರು. ಕೃಷಿ ಮೂಲಸೌಲಭ್ಯ ಮತ್ತು ಅಭಿವೃದ್ಧಿ ಸುಂಕ ಹಾಗೂ 2 ರು. ರಸ್ತೆ ಮತ್ತು ಮೂಲಸೌಲಭ್ಯ ಸುಂಕ ಇರಲಿದೆ.ಕಾಂಗ್ರೆಸ್ ಕಿಡಿ:

‘ಸರ್ಕಾರದ ಅಬಕಾರಿ ಸುಂಕ ಕಡಿತವು ವಿತರಕರು ಮತ್ತು ಗ್ರಾಹಕರಿಗೆ ಬೆಲೆಗಳನ್ನು ಬದಲಾಯಿಸುವುದಿಲ್ಲ ಮತ್ತು ಪರಿಹಾರವು ನಿರೂಪಣೆಯಲ್ಲಿ ಮಾತ್ರ ಅಸ್ತಿತ್ವದಲ್ಲಿದೆ, ವಾಸ್ತವದಲ್ಲಿ ಅಲ್ಲ’ ಎಂದು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಕಿಡಿಕಾರಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಶ್ರೀನಗರ-ಲೇಹ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ಹಿಮಪಾತಕ್ಕೆ 7 ಬಲಿ: ಹಿಮದಡಿ ಹೂತು ಹೋದ ಡಜನ್‌ಗಟ್ಟಲೇ ವಾಹನಗಳು
ತಂದೆಗೆ ವಿಷದ ಮಿಲ್ಕ್‌ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ